ಸ್ಮಾರ್ಟ್‌ಸಿಟಿ ನಗರವಾಗಿ ಹೊಳೆಯಲು ಸಿದ್ಧತೆ ನಡೆಸುತ್ತಿರುವ ನಗರ ಚರಂಡಿ, ಒಳಚರಂಡಿ ಸಮಸ್ಯೆಗಳಿಂದ ತತ್ತರಿಸುತ್ತಿದೆ. ನಗರದ ಬಹುತೇಕ ಭಾಗಗಳಲ್ಲಿ ಇದೀಗ ಮ್ಯಾನ್‌ಹೋಲ್ ಸೋರಿಕೆ ಸಮಸ್ಯೆ ಕಾಡುತ್ತಿದೆ.
ಮಳೆಗಾಲ ಬರುವ ಮುನ್ನ ಸಿದ್ಧತೆ ನಡೆಸಬೇಕಾದ ಅಧಿಕಾರಿಗಳು ಜನರ ಕಣ್ಣೊರೆಸುವ ಸಲುವಾಗಿ ಸಣ್ಣಪುಟ್ಟ ಕಾಮಗಾರಿಗಳನ್ನು ಮಾಡಿ ಮುಗಿಸುತ್ತಾರೆ. ಆದರೆ ಮಳೆಗಾಲ ಆರಂಭವಾದ ತತ್‌ಕ್ಷಣ ಮಳೆ ನೀರು ರಸ್ತೆಯಲ್ಲಿ ಹರಿಯುವುದು, ಮ್ಯಾನ್ ಹೋಲ್ ಸೋರಿಕೆ ಸಮಸ್ಯೆ ಉಲ್ಭಣಿಸುತ್ತಿದೆ. ಇದರಿಂದ ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದೆ.
ಪ್ರಸ್ತುತ ಕೊಡಿಯಾಲ್ಬೈಲ್ನ ಶಾರದಾ ವಿದ್ಯಾಸಂಸ್ಥೆಯ ಮುಂಭಾಗ, ಸ್ಟೇಟ್ಬ್ಯಾಂಕ್ ಹಾಗೂ ಬಂದರು ರಸ್ತೆಯ ವಿವಿಧ ಭಾಗ, ಲಾಲ್ಬಾಗ್, ಕೊಟ್ಟಾರ ಮೊದಲಾದ ಭಾಗಗಳಲ್ಲಿ ಮ್ಯಾನ್‌ಹೋಲ್ ಸೋರಿಕೆ ಸಮಸ್ಯೆ ಹೆಚ್ಚಾಗಿದೆ.
ವಾಹನ ಸವಾರರು ಅದರ ಮೇಲೆ ಹೋಗುತ್ತಾರೆ. ಅವರಿಗೆ ಅದರ ಪರಿಣಾಮ ಅಷ್ಟಾಗಿ ತಿಳಿಯುವುದಿಲ್ಲ. ಆದರೆ ಪಾದಚಾರಿಗಳು ಆ ಕೊಳಜೆ ನೀರ ಮೇಲೆಯೇ ನಡೆದು ಹೋಗಬೇಕಾಗಿರುವುದರಿಂದ ಸಮಸ್ಯೆಯಾಗುತ್ತಿದೆ. ಈ ನಡುವೆ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಕೊಳಚೆ ನೀರು ಸೋರಿಕೆ ಸಮಸ್ಯೆ ಉದ್ಭವವಾಗುತ್ತಿರುವುದರಿಂದ ಜನರಿಗೆ ಇನ್ನಷ್ಟು ಭಯ ಆರಂಭವಾಗಿದೆ. ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಜತೆಗೆ ಇಂತಹ ಸಮಸ್ಯೆಗಳ ಕಡೆಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂಬುದು ಸಾರ್ವಜನಿಕರ ಅಳಲು.
•ಪ್ರಜ್ಞಾ ಶೆಟ್ಟಿ