ಹಿರೇಬಾಗೇವಾಡಿ: ಇವತ್ತಿನ ಬಿಡುವಿಲ್ಲದ ಜೀವನದಲ್ಲಿ ಎಲ್ಲರೂ ಜಂಕ್ ಮತ್ತು ಫಾಸ್ಟ್ ಫುಡ್‌ಗಳಿಗೆ ಆಕರ್ಷಿತರಾಗಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆಂದು ಬೆಳಗಾವಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಬಿ.ಎನ್.ತುಕ್ಕಾರ ಕಳವಳ ವ್ಯಕ್ತಪಡಿಸಿದರು.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ ವಿಶ್ವ ಕ್ಯಾನ್ಸರ್ ದಿನಾಚರಣೆಯನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಅವರು ಮಾತನಾಡದರು.
ಧೂಮಪಾನ, ಅಲ್ಕೋಹಾಲ್, ತಂಬಾಕು ಕ್ಯಾನ್ಸರ್ ರೋಗಕ್ಕೆ ಮುಖ್ಯ ಕಾರಣವಾಗಿದ್ದು ವರ್ಷಕ್ಕೆ ಅಂದಾಜು1.77 ಲಕ್ಷ ಮಹಿಳೆಯರು ಗರ್ಭಾಶಯ ಕ್ಯಾನ್ಸರ್‌ಗೆ ಒಳಗಾಗುತ್ತಿದ್ದಾರೆ. ಅದೇ ರೀತಿ ಸ್ತನ ಹಾಗೂ ಬಾಯಿ ಕ್ಯಾನ್ಸರ್‌ಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಪ್ರತಿಯೊಬ್ಬರೂ ತಮ್ಮ ದೇಹದಲ್ಲಿ ಏನಾದರೂ ಬದಲಾವಣೆ ಕಂಡರ ತಕ್ಷಣ ವೈದ್ಯರನ್ನು ಭೇಟಿಯಾಗಿ ಪ್ರಥಮ ಹಂತದಲ್ಲಿ ಚಿಕಿತ್ಸೆ ತೆಗೆದುಕೊಂಡರೆ ಸಾವಿನ ಸಂಖ್ಯೆ ಕಡಿಮೆಯಾಗಬಹುದು ಎಂದರು.
ಇತ್ತೀಚೆಗಷ್ಟೆ ಚೀನಾದಿಂದ ಬಂದ ಕರೋನಾ ವೈರಸ್ ಬಗ್ಗೆ ವಿವರಿಸಿದ ಅವರು, ಸಂಶಯಾಸ್ಪದ ಹಂತದಲ್ಲಿ ತಕ್ಷಣ ವೈದ್ಯರನ್ನು ಭೇಟಿ ಮಾಡಿ ವೈಯಕ್ತಿಕ ಆರೋಗ್ಯಕ್ಕಾಗಿ ದುಶ್ಚಟ ತ್ಯಜಿಸಿ ಕ್ಯಾನ್ಸರ್‌ನಂತಹ ಮಾರಕ ರೋಗಗಳಿಂದ ರಕ್ಷಿಸಿಕೊಳ್ಳುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಎನ್.ಸಿ.ಡಿ ಕಾರ್ಯಕ್ರಮದ ಸಂಯೋಜಕರಾದ ಡಾ. ನಿತಿನ ಎಚ್ ಮಾತನಾಡಿ, ಕ್ಯಾನ್ಸರ್ ವಾಸಿಯಾಗದಂತಹ ರೋಗ. ಆದರೆ ಇದು ಒಬ್ಬರಿಂದ ಒಬ್ಬರಿಗೆ ಹರಡಲಾರದು. ಸಾತ್ವಿಕ ಆಹಾರ ಪದ್ಧತಿ, ವೈಯಕ್ತಿಕ ಸ್ವತ್ಛತೆ, ಹಣ್ಣು ಹಂಪಲುಗಳ ಸೇವನೆ, ನಿಯಮಿತ ದೈಹಿಕ ವ್ಯಾಯಾಮದಿಂದಾಗಿ ಕ್ಯಾನ್ಸರ್‌ನಿಂದ ರಕ್ಷಿಸಿಕೊಳ್ಳಬಹುದಾಗಿದೆ ಎಂದರು. ಹೆಣ್ಣು ಮಕ್ಕಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಿ ತಮ್ಮ ದೇಹದಲ್ಲಿ ಏನಾದರೂ ಬದಲಾವಣೆ ಗಮನಿಸಿದರೆ ನಾಚದೇ ತಕ್ಷಣ ಸಮೀಪದ ವೈದ್ಯರನ್ನು ಭೇಟಿ ಮಾಡಿ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು. ಪ್ರತಿಯೊಬ್ಬರೂ ಕ್ಯಾನ್ಸರ್ ರೋಗ ತಡೆಗಟ್ಟುತ್ತೇವೆ ಮತ್ತು ಅದಕ್ಕಾಗಿ ಪ್ರಯತ್ತಿಸುತ್ತೇವೆ ಎಂಬ ದೃಢ ಸಂಕಲ್ಪ ಮಾಡುವಂತೆ ಕರೆ ನೀಡಿದರು.
ದಂತ ಆರೋಗ್ಯಾಧಿಕಾರಿ ಡಾ. ದೀಪಾ ಮಗದುಮ್ ಬಾಯಿ ಕ್ಯಾನ್ಸರ್ ಲಕ್ಷಣಗಳನ್ನು ವಿವರಿಸಿ, ತಂಬಾಕು ಪದಾರ್ಥಗಳಿಂದ ದೂರವಿರುವಂತೆ ಸಲಹೆ ನೀಡಿದರು. ನಿಯಮಿತವಾಗಿ ಬಾಯಿ ಮತ್ತು ಹಲ್ಲುಗಳ ಆರೋಗ್ಯ ಕಾಪಾಡಿಕೊಂಡಾಗ ಮಾತ್ರ ಕ್ಯಾನ್ಸರ್‌ದಿಂದ ಪಾರಾಗಬಹುದೆಂದು ಹೇಳಿದರು. ಆಸ್ಪತ್ರೆಯಲ್ಲಿ ಉಚಿತವಾಗಿ ಬಾಯಿ, ಸ್ತನ, ಮತ್ತುಗರ್ಭಾಶಯ ಕ್ಯಾನ್ಸರ್ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಅಧ್ಯಕ್ಷತೆಯನ್ನು ಸ್ತ್ರೀರೋಗ ತಜ್ಞಾ ಡಾ. ನೀತಾ ಚವ್ವಾಣ ವಹಿಸಿದ್ದರು.
ಈ ವೇಳೆ ಎನ್.ಸಿ.ಡಿ.ಘಟಕದ ಶಶೀಧರ ಕಡೇಮನಿ. ಪ್ರತಿಭಾ ಕದಮ್, ಭಾರತಿ ತಲ್ಲೂರ, ವಾಣಿಶ್ರೀ ಕೊಂಕಣಿ, ಕಿರಿಯ ಆರೋಗ್ಯ ಸಹಾಯಕಿ ಗೀತಾ ಈಳೀಗೇರ, ಆಶಾಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಡಾ. ದೀಪಾ ಮಗದುಮ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಎಸ್.ಬಿ. ಮೇಳೆದ ವಂದಿಸಿದರು. ಆಕಾಶ್ ಥಬಾಜ ನಿರೂಪಿಸಿದರು.