Advertisement

ಜಿಪಂ-ತಾಪಂ ಚುನಾವಣೆಗೆ ಈಗಲೇ ತಾಲೀಮು ಶುರು

07:56 PM Aug 20, 2021 | Team Udayavani |

ದೇವದುರ್ಗ: 7 ಜಿಪಂ, 19 ತಾಪಂ ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟಗೊಂಡ ಬೆನ್ನಲ್ಲೇ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಪಕ್ಷಗಳ ಮುಖಂಡರುಗಳು ಸಭೆಗಳ ಮೇಲೆ ಸಭೆಗಳನ್ನು ನಡೆಸುವ ಮೂಲಕ ಚುನಾವಣೆ ಪೂರ್ವ ಸಿದ್ಧತೆ ನಡೆಸಿದ್ದಾರೆ.

Advertisement

ಜೆಡಿಎಸ್‌ ಪಕ್ಷದ ವತಿಯಿಂದ ಗಬ್ಬೂರು ಗ್ರಾಮದಲ್ಲಿ ಸಭೆ ನಡೆಸಲಾಗಿದ್ದರೆ, ಮಾನಸಗಲ್‌ ರಂಗನಾಥ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್‌ ಮುಖಂಡರ-ಕಾರ್ಯಕರ್ತರ ಸಭೆ ನಡೆಸಲಾಗಿದೆ. ಕಾಂಗ್ರೆಸ್‌, ಬಿಜೆಪಿ ಪಕ್ಷದಿಂದ ಜಿಪಂ ಚುನಾವಣೆ ಸ್ಪರ್ಧಿಸಲು ಆಕಾಂಕ್ಷಿಗಳ ಬೇಡಿಕೆ ಹೆಚ್ಚಿದ್ದು, ಪೂರ್ವಭಾವಿ ಸಭೆಗಳನ್ನು ಮಾಡುವ ಮೂಲಕ ಪಕ್ಷ ಸಂಘಟನೆ ಚುರುಕುಗೊಳಿಸಲಾಗುತ್ತಿದೆ.

ಕಾಂಗ್ರೆಸ್‌ ಪಕ್ಷದ ಜಿಲ್ಲಾಧ್ಯಕ್ಷ ಮಾಜಿ ಸಂಸದ ಬಿ.ವಿ.ನಾಯಕ ಈಗಾಗಲೇ ನೂತನ ಪದಾಧಿಕಾರಿಗಳನ್ನು ನೇಮಿಸಿ ತಳಮಟ್ಟದಿಂದಲೇ ಪಕ್ಷ
ಸಂಘಟಿಸುವಂತೆ ಸೂಚನೆ ನೀಡಿದ್ದಾರೆ. ಲೋಕಲ್‌ ಫೈಟ್‌ಗೆ ಈಗಿನಿಂದಲೇ ತಾಲೀಮು ಶುರುವಾಗಿದೆ. ಆದರೆ ಬಿಜೆಪಿ ಮಾತ್ರ ಯಾವುದೇ ಪೂರ್ವಭಾವಿ ಸಭೆ ಮಾಡದೇ ಕಾದು ನೋಡುವ ತಂತ್ರ ಹೆಣೆದಿದೆ. ಕಾಂಗ್ರೆಸ್‌-ಬಿಜೆಪಿ ಪಕ್ಷದಲ್ಲಿ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆದಿದೆ. ಜೆಡಿಎಸ್‌ ಮಾತ್ರ ಮಸರಕಲ್‌, ಗಬ್ಬೂರು ಕ್ಷೇತ್ರ ಬಿಟ್ಟರೆ ಇನ್ನುಳಿದ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಹುಡುಕಾಟ ನಡೆಸಿದ್ದಾರೆ. ಶಾಸಕ ಕೆ.ಶಿವನಗೌಡ ನಾಯಕ ತಾಲೂಕಿನಲ್ಲಿ ನಡೆದ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತ ಭೇಟಿ ನಡೆಸಲಿದ್ದಾರೆ. ವಿಪಕ್ಷದಲ್ಲಿರುವ ಕಾಂಗ್ರೆಸ್‌, ಜೆಡಿಎಸ್‌ ಹಳ್ಳಿಗಳಲ್ಲಿರುವ ಜ್ವಲಂತ ಸಮಸ್ಯೆ ಕುರಿತು ಮತ ಭೇಟಿ ಆರಂಭಿಸಲು ಈಗಾಗಲೇ ಪೂರ್ವಭಾವಿ ಸಭೆಯಲ್ಲಿ ಚರ್ಚೆ ನಡೆಸಿದೆ.

ಇದನ್ನೂ ಓದಿ:ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಜೊತೆಗೆ ಅಧಿಕಾರ ವಿಕೇಂದ್ರೀಕರಣಕ್ಕೆ ಚಿಂತನೆ :ಅಶ್ವತ್ಥನಾರಾಯಣ

ಮೂರೂ ಪ್ರಮುಖ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹಳ್ಳಿಗಳಲ್ಲಿ ಈಗಲೇ ಸುತ್ತು ಹಾಕತೊಡಗಿದ್ದಾರೆ. ಜಿಪಂ-ತಾಪಂ ಚುನಾವಣೆಯಲ್ಲಿ ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷಕ್ಕೆ ಹೂವಿನ ಹಾರ ಬೀಳಬಹುದೇ ಅಥವಾ ಹಿನ್ನಡೆ ಆಗಬಹುದೇ ಎಂಬ ಚರ್ಚೆ ಈಗಿನಿಂದಲೇ ಶುರುವಾಗಿದೆ. ಹಳ್ಳಿಗಳಲ್ಲಿ ಈಗಾಗಲೇ ಕಾರ್ಯಕರ್ತರನ್ನು ಒಗ್ಗೂಡಿಸಿ ಉತ್ಸಾಹ ತುಂಬಿದ್ದಾರೆ. ಮೂರೂ ಪಕ್ಷಗಳು ಕ್ಷೇತ್ರದಲ್ಲಿ ಹಳ್ಳಿಗಳ ಸುತ್ತಾಟ ನಡೆಸಿ ಜನಸಂಪರ್ಕ ಸಭೆ, ಕಾರ್ಯಕರ್ತರ ಸಭೆ ಆರಂಭಿಸಿದ್ದಾರೆ. ಆಕಾಂಕ್ಷಿಗಳು ಟಿಕೇಟ್‌ಗಾಗಿ ಜಾತಿ ಲೆಕ್ಕಾಚಾರ ಮೇಲೆ ಮುಖಂಡರ ಬೆನ್ನು ಬಿದ್ದಿದ್ದಾರೆ.

Advertisement

ಅಖಾಡಕ್ಕಿಳಿಯಲು ಕಸರತ್ತು 7ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಮೀಸಲು ಪ್ರಕಟವಾದ ಬೆನ್ನಲ್ಲೇ ಚುನಾವಣೆ ಅಖಾಡಕ್ಕಿಳಿಯಲು ಕಾಂಗ್ರೆಸ್‌, ಬಿಜೆಪಿ
ಪಕ್ಷದಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಬುಂಕಲದೊಡ್ಡಿ ಕರಡಿಗುಡ್ಡ ಎಸ್‌ಸಿ ಮಹಿಳೆ, ಕ್ಯಾದಿಗೇರಾ ಎಸ್‌ಸಿ ಮಹಿಳೆ, ಕೊಪ್ಪರು, ಗಬ್ಬೂರು ಎಸ್‌ಟಿ ಮಹಿಳೆ, ಮಸರಕಲ್‌, ಗಲಗ ಸಾಮಾನ್ಯ, ಹನುಮಂತ್ರಾಯನಗರ ಅರಕೇರಾ ಬಿಸಿಎಂ ಮೀಸಲು ಪ್ರಕಟವಾಗಿದೆ. ಕಾಂಗ್ರೆಸ್‌-ಬಿಜೆಪಿ ಪಕ್ಷದಲ್ಲಿ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳ ಮಧ್ಯೆ ಪೈಪೋಟಿ ಶುರುವಾಗಿದೆ.

-ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next