Advertisement

ಮಳೆ ಅನಾಹುತ ಎದುರಿಸಲು ಸಿದ್ಧರಾಗಿ

12:06 PM Jun 02, 2018 | Team Udayavani |

ಬೆಂಗಳೂರು: ಮುಂಗಾರು ಪ್ರವೇಶಿಸಿದೆ. ಮಳೆಗಾಲವೂ ಆರಂಭವಾಗಿದೆ. ಮುಂಗಾರಿಗೂ ಮೊದಲೇ ಆರ್ಭಟಿಸಿರುವ ವರುಣ, ಸಮೃದ್ಧ ಮಳೆಗಾಲದ ಮುನ್ಸೂಚನೆ ನೀಡಿದ್ದಾನೆ. ಮಳೆಯೇನೋ ಎಲ್ಲ ಸಿದ್ಧತೆ ಮಾಡಿಕೊಂಡೇ ಸುರಿಯಲು ತಯಾರಾಗಿದೆ. ಆದರೆ ಮಳೆಯಿಂದಾಗಬಹುದಾದ ಅನಾಹುತಗಳನ್ನು ತಡೆಯಲು ಪಾಲಿಕೆ ಅಧಿಕಾರಿಗಳು ಮಾತ್ರ ಸಿದ್ಧವಾಗಿಲ್ಲ.

Advertisement

ಇದೇನು ಹೊಸ ವಿಯವಲ್ಲ. ಪ್ರತಿ ವರ್ಷ ಮಳೆಗಾಲದಲ್ಲೂ ನಗರದ ನೂರಾರು ಜನವಸತಿ ಪ್ರದೇಶಗಳಿಗೆ, ಮನೆಗಳಿಗೆ ಮಳೆ ನೀರು ನುಗ್ಗುವುದು, ವಾರಗಟ್ಟಲೆ ಜನ ಪರದಾಡುವುದು ಮಾಮೂಲಿ. ಮಳೆ ನಿಂತ ನಂತರ ನೆಪಮಾತ್ರಕ್ಕೆ ಕಾಮಗಾರಿ ಆರಂಭಿಸುವ ಪಾಲಿಕೆ ಅಧಿಕಾರಿಗಳು, ಆ ಕಾಮಗಾರಿ ಮುಗಿಸುವ ಗೊಡವೆಗೇ ಹೋಗುವುದಿಲ್ಲ.

ಅಧಿಕಾರಿಗಳ ಈ ಬೇಜವಾಬ್ದಾರಿಗೆ ನಿದರ್ಶನವೆಂಬಂತೆ ನಗರದಲ್ಲಿ ಮಳೆ ಅನಾಹುತ ತಡೆಯಲು ಸುಮಾರು 200 ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಆರಂಭಿಸಿದ್ದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಈ ಬಾರಿ ಕೂಡ ಮಳೆಗಾಲದ ಅನಾಹುತ ಎದುರಿಸಲು, ಪರದಾಡಲು ಪ್ರವಾಹಪೀಡಿತ ಪ್ರದೇಶಗಳ ನಿವಾಸಿಗಳು ಸಿದ್ಧರಾಗಬೇಕಿದೆ. 

ನಗರದಲ್ಲಿ ಕಳೆದ ಎರಡು ವರ್ಷಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸಾವು-ನೋವು ಸಂಭವಿಸಿವೆ. ಅದರ ನಂತರವೂ ಪಾಲಿಕೆಯ ಅಧಿಕಾರಿಗಳು ಅಗತ್ಯ ಪರಿಹಾರ ಕ್ರಮಗಳಿಗೆ ಮುಂದಾಗದ ಪರಿಣಾಮ, ಮಳೆಗಾಲದಲ್ಲಿ ನೂರಾರು ಬಡಾವಣೆಗಳು ಪ್ರವಾಹ ಭೀತಿ ಎದುರಿಸುತ್ತಿದ್ದು, ಪ್ರವಾಹ ಪೀಡಿತ ಬಡಾವಣೆಯ ನಾಗರಿಕರು ಪಾಲಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ನಗರದ 339 ಭಾಗಗಳು ಮಳೆಯಿಂದ ಅನಾಹುತಕ್ಕೆ ಒಳಗಾಗಿ ಜನರು ತೀವ್ರ ತೊಂದರೆ ಅನುಭವಿಸಿದ್ದಾರೆ.

ನಗರದ ಹೊರ ವಲಯಗಳಲ್ಲಿಯೇ ಅತಿಹೆಚ್ಚು ಪ್ರವಾಹದ ಭೀತಿಯಿದ್ದು, ಮಹದೇವಪುರ ವಲಯದ 78 ಬಡಾವಣೆಗಳ ಜನತೆ ಕಳೆದ 3 ವರ್ಷಗಳಿಂದ ಮಳೆ ಅನಾಹುತಗಳ ಸಂಕಷ್ಟ ಎದುರಿಸುತ್ತಿದ್ದಾರೆ. ಇದರೊಂದಿಗೆ ಬೊಮ್ಮನಹಳ್ಳಿ, ಕೋರಮಂಗಲ ಕಣಿವೆ ಭಾಗದ 50ಕ್ಕೂ ಹೆಚ್ಚಿನ ಭಾಗಗಳ ಜನ ಪ್ರವಾಹ ಭೀತಿಯಲ್ಲಿದ್ದಾರೆ ಎಂಬುದು ಪಾಲಿಕೆ ಅಂಕಿ-ಅಂಶಗಳಿಂದ ತಿಳಿದುಬಂದಿದೆ.

Advertisement

ಅಪಾಯದ ಸೂಚನೆ: ಪಾಲಿಕೆಯ ವ್ಯಾಪ್ತಿಯ ಸುಮಾರು 25 ಕೆರೆಗಳಲ್ಲಿ ಹೂಳು ತೆಗೆಯದ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಉಕ್ಕುವ ಆತಂಕ ಸೃಷ್ಟಿಯಾಗಿದೆ. ಮುಂಗಾರು ಪೂರ್ವದಲ್ಲಿ ಕೆರೆಯಲ್ಲಿನ ಹೂಳು ತೆಗೆಯಲು ಅಧಿಕಾರಿಗಳು ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಜನರು ತೊಂದರೆ ಅನುಭವಿಸುವಂತಾಗಿದೆ. ಜತೆಗೆ ಕೆರೆಯಿಂದ ನೀರು ಹೊರಗೆ ಹೋಗಲು ಹಾಗೂ ಒಳ ಪ್ರವೇಶಿಸಲು ಅಳವಡಿಸಲಾಗಿರುವ ತೂಬುಗಳು ಹಾಳಾಗಿದ್ದು, ಪಾಲಿಕೆಯಿಂದ ತಾತ್ಕಾಲಿಕ ಪರಿಹಾರ ಕ್ರಮಗಳನ್ನು ಕೈಗೊಂಡರೂ, ಸುತ್ತಮುತ್ತಲಿನ ಬಡಾವಣೆಗಳ ಜನರಲ್ಲಿ ಆತಂಕ ಮರೆಯಾಗಿಲ್ಲ. 

ತೆರವಾಗದ ರಾಜಕಾಲುವೆ ಒತ್ತವರಿ: ರಾಜಕಾಲುವೆ ಒತ್ತುವರಿಯು ನಗರದ ನಾನಾ ಬಡಾವಣೆಗಳಲ್ಲಿನ ಪ್ರವಾಹಕ್ಕೆ ಕಾರಣವಾಗಿದೆ. ಆದರೆ, ಪಾಲಿಕೆಯ ಅಧಿಕಾರಿಗಳು ಕಳೆದ ಎರಡು ವರ್ಷಗಳಿಂದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾಗಲಿಲ್ಲ.

ಕಳೆದ ಬಾರಿ ಮಳೆಯಿಂದ ಅನಾಹುತ ಸಂಭವಿಸಿದ ಕಡೆಗಳಲ್ಲಿ ಆದ್ಯತೆ ಮೇರೆಗೆ ಪರಿಹಾರ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಪಾಲಿಕೆಯಿಂದ ಗುರುತಿಸಿರುವ ಪ್ರವಾಹ ಪೀಡಿತ ಪ್ರದೇಶಗಳಲ್ಲೂ ಕಾಮಗಾರಿ ನಡೆದಿದೆ. ಯಾವುದೇ ಅನಾಹುತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
-ಬೆಟ್ಟೇಗೌಡ, ಬೃಹತ್‌ ಮಳೆನೀರು ಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ 

ಸಂಭವ್ಯ ಪ್ರವಾಹ ಪೀಡಿತ ಪ್ರದೇಶಗಳು
ವಲಯ    ಪ್ರದೇಶಗಳ ಸಂಖ್ಯೆ

-ಪೂರ್ವ    47
-ದಕ್ಷಿಣ    26
-ಮಹದೇವಪುರ    78
-ಆರ್‌.ಆರ್‌.ನಗರ    32
-ಪಶ್ಚಿಮ    27
-ಬೊಮ್ಮನಹಳ್ಳಿ    55
-ಯಲಹಂಕ    23
-ಕೋರಮಂಗಲ    51
-ಒಟ್ಟು    339

Advertisement

Udayavani is now on Telegram. Click here to join our channel and stay updated with the latest news.

Next