ನಾಗರಿಕ ಸೇವೆಗಳ ಪರೀಕ್ಷೆಗಳನ್ನು ಬರೆಯುವುದು ಎಂದರೆ ಕಬ್ಬಿಣದ ಕಡಲೆ ಎಂಬ ತಿಳುವಳಿಕೆ ಎಲ್ಲರಲ್ಲೂ ಇದೆ. ಆದರೆ ಕಷ್ಟ ಪಟ್ಟು ಓದಿದರೆ ಪರೀಕ್ಷೆ ಎದುರಿಸುವುದು ದೊಡ್ಡ ವಿಚಾರವಲ್ಲ ಎಂಬುದನ್ನು ಪರೀಕ್ಷೆಯಲ್ಲಿ ಉತ್ತೀರ್ಣರಾದ ಅನೇಕ ಮಂದಿ ಹೇಳುತ್ತಾರೆ.
ಕೇಂದ್ರ ಲೋಕ ಸೇವಾ ಆಯೋಗದ ನಾಗರಿಕ ಸೇವೆಗಳ ಪರೀಕ್ಷೆ (ಯುಪಿಎಸ್‌ಸಿ) ಪರೀಕ್ಷೆ ಎದುರಿಸಲು ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗುತ್ತದೆ. ಮೊದಲ ಬಾರಿಗೆ ಪೂರ್ವ ಭಾವಿ ಪರೀಕ್ಷೆ ಇರುತ್ತದೆ. ತಲಾ 200 ಅಂಕಗಳ ಎರಡು ಸಾಮಾನ್ಯ ಅಧ್ಯಯನ ಪ್ರಶ್ನೆ ಪತ್ರಿಕೆಗಳು ಇರುತ್ತದೆ. ಇವು ಬಹು ಆಯ್ಕೆ ವಸ್ತು ನಿಷ್ಠತೆಯ ಪ್ರಶ್ನೆಗಳು. ಸರಿಯಾದ ಉತ್ತರವನ್ನು ಪ್ರತ್ಯೇಕ ಹಾಳೆಯೊಂದರಲ್ಲಿ ಕೇವಲ ಗುರುತಿಸಬೇಕಾಗುತ್ತದೆ. ಇದು ಅರ್ಹತೆಯ ಪರೀಕ್ಷೆಯಾಗಿರುತ್ತದೆ. ಇಲ್ಲಿನ ಅಂಕಗಳನ್ನು ಅಂತಿಮ ರ್‍ಯಾಂಕ್ ನಿರ್ಧರಿಸಲು ಪರಿಗಣಿಸುವುದಿಲ್ಲ. ಬಳಿಕ ಮುಖ್ಯ ಪರೀಕ್ಷೆ ಇರುತ್ತದೆ. ಇದರಲ್ಲಿ ಐಚ್ಛಿಕ ವಿಷಯ ಹಾಗೂ ಸಾಮಾನ್ಯ ಅಧ್ಯಯನಕ್ಕೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ. ಕೊನೆಯದಾಗಿ ಸಂದರ್ಶನ ಇರುತ್ತದೆ.
ಐಎಎಸ್, ಐಪಿಎಸ್ ಪರೀಕ್ಷೆಗಳ ಬಗ್ಗೆ ಎಲ್ಲರಿಗೂ ತಿಳಿದಿದ್ದು, ಐಇಎಸ್ ಹಾಗೂ ಐಎಸ್‌ಎಸ್ ಪರೀಕ್ಷೆಗಳ ಬಗ್ಗೆ ಹೆಚ್ಚು ಜನರಿಗೆ ಮಾಹಿತಿ ಇಲ್ಲ. ಇಂಡಿಯನ್ ಎಕಾನಾಮಿಕ್ ಸರ್ವಿಸ್ (ಐಇಎಸ್) ಪರೀಕ್ಷೆ ಬರೆದು ಉತ್ತೀರ್ಣರಾದಲ್ಲಿ ಆರ್ಥಿಕ ವಿಶ್ಲೇಷಣೆಗಳನ್ನು ನೀಡುವ ಕೆಲಸವನ್ನು ಮಾಡಲಾಗುತ್ತದೆ. ಯಾವುದೇ ಸರಕಾರಕ್ಕೆ ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದ ಸಲಹೆ ಸೂಚನೆಗಳನ್ನು ನೀಡುವ ಹಾಗೂ ಆಡಳಿತವನ್ನು ಬಲಿಷ್ಠಗೊಳಿಸಲು ಬೇಕಾದ ಸೂಚನೆಗಳನ್ನು ನೀಡುವ ಜವಾಬ್ದಾರಿ ಇವರಿಗೆ ಇರುತ್ತದೆ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಐಇಎಸ್ ಹಾಗೂ ಐಎಸ್‌ಎಸ್ (ಇಂಡಿಯನ್ ಸ್ಟಟಿಕಲ್ ಸರ್ವಿಸ್) ಪರೀಕ್ಷೆಗಳನ್ನು ಆಯೋಜಿಸುತ್ತದೆ. ಮೊದಲು ಲಿಖಿತ ಪರೀಕ್ಷೆ ಬಳಿಕ ಸಂದರ್ಶನ ಇರುತ್ತದೆ. ಎರಡರಲ್ಲೂ ಉತ್ತೀರ್ಣರಾದವರು ಉದ್ಯೋಗಕ್ಕೆ ಅರ್ಹರಾಗಿರುತ್ತಾರೆ.
ಹೆಚ್ಚಾಗಿ ಒಂದು ಸಲ ಪರೀಕ್ಷೆ ಬರೆದು ಉತ್ತೀರ್ಣರಾಗಿಲ್ಲ ಎಂದು ಕೈ ಚೆಲ್ಲುವವರು ಅನೇಕರಿರುತ್ತಾರೆ. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿರಂತರ ಬರೆಯುತ್ತಿದ್ದರೆ ಮಾತ್ರ ನಮ್ಮ ಅನುಭವ ಹೆಚ್ಚಾಗುವುದು. ಜತೆಗೆ ಪರೀಕ್ಷೆ ಎದುರಿಸುವ ಕಲೆ ತಿಳಿಯುವುದು. ಹೀಗಾಗಿ ಕೇಂದ್ರ ಲೋಕ ಸೇವಾ ಆಯೋಗ ನಡೆಸುವ ಪರೀಕ್ಷೆಗಳನ್ನು ನಿರಂತರ ಎದುರಿಸುತ್ತಿದ್ದರೆ ಮಾತ್ರ ಉತ್ತಮ ಅಂಕ ಗಳಿಕೆ ಸಾಧ್ಯವಾಗುತ್ತದೆ.
ನಿರ್ದಿಷ್ಟ ಗುರಿ ಇರಲಿ
ಸತತ ಪ್ರಯತ್ನ, ನಿಖರತೆ, ನಿರ್ದಿಷ್ಟ ಗುರಿ ಇದ್ದರೆ ಇಂತಹ ಪರೀಕ್ಷೆಗಳನ್ನು ಎದುರಿಸಬಹುದು. ಯುಪಿಎಸ್‌ಸಿ, ಐಎಸ್‌ಎಸ್, ಐಇಎಸ್ ಪರೀಕ್ಷೆಗಳನ್ನು ಎದುರಿಸಲು ಕೋಚಿಂಗ್ ಗೆ ಹೋಗಬೇಕು ಎಂದೆನಿಲ್ಲ. ಕೋಚಿಂಗ್‌ನಲ್ಲಿ ಟಿಪ್ಸ್ ಗಳು ಮಾತ್ರ ಸಿಗುತ್ತವೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾದವರು ಕಷ್ಟ ಪಟ್ಟು ಪರೀಕ್ಷೆ ಎದುರಿಸಬೇಕು.
– ವಿಕ್ರಮ್ ರೈ, ಸ್ಪರ್ಧಾತ್ಮಕ
ಪರೀಕ್ಷೆ ತರಬೇತುದಾರ
ಪ್ರಜ್ಞಾ ಶೆಟ್ಟಿ