Advertisement

ಹುಲಿಗೆಮ್ಮದೇವಿ ಜಾತ್ರೆ ಸಿದ್ಧತೆ ಕೈಗೊಳ್ಳಿ

03:53 PM May 16, 2019 | Team Udayavani |

ಕೊಪ್ಪಳ: ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಹುಲಿಗೆಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಲಿದ್ದು, ಭಕ್ತರಿಗೆ ಯಾವುದೇ ಅನಾನುಕೂಲವಾಗದಂತೆ ಸೌಲಭ್ಯ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್‌ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಾತ್ರಾ ಮಹೋತ್ಸವದ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಾತ್ರಾ ಕಾರ್ಯಕ್ರಮ ಮೇ 19ರಿಂದ ಆರಂಭವಾಗಲಿದೆ. ಮೇ 27ರಂದು ಸಂಜೆ 7ಕ್ಕೆ ಉತ್ಸವ, ಮೇ 28ರಂದು ಸಂಜೆ 5:30ಕ್ಕೆ ಮಹಾರಥೋತ್ಸವ ನಡೆಯಲಿದೆ. ಮೇ 29ರಂದು ಬಾಳೆದಂಡಿಗೆ ಹಾಗೂ ಮೇ 30ರಂದು ಪಾಯಸ ಅಗ್ನಿಕುಂಡ ಹಾಗೂ ಮೇ 31ರಂದು ಬೆಳಗ್ಗೆ 6:30ಕ್ಕೆ ಅಗ್ನಿಕುಂಡ ನಡೆಯಲಿದೆ. ಜೂ. 18ರಂದು ರಾತ್ರಿ 8ಕ್ಕೆ ಶ್ರೀದೇವಿ ಕಂಕಣ ವಿಸರ್ಜನೆ ಮಾಡುವ ಮೂಲಕ ಜಾತ್ರಾ ಕಾರ್ಯಕ್ರಮ ಸಮಾರೊಪನಗೊಳ್ಳಲಿದೆ.

ಅನ್ಯ ರಾಜ್ಯಗಳ ಭಕ್ತರು: ಜಾತ್ರೆಗೆ ಹೊರರಾಜ್ಯ ಸೇರಿದಂತೆ ಅಕ್ಕ, ಪಕ್ಕದ ಜಿಲ್ಲೆಗಳಿಂದ ಭಕ್ತರು ಆಗಮಿಸುವುದರಿಂದ ಅವರಿಗೆ ಕುಡಿಯುವ ನೀರು ರಾತ್ರಿ ವಿದ್ಯುತ್‌ ದೀಪಾಲಂಕಾರ ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಬೇಸಿಗೆಯಾಗಿರುವುದರಿಂದ ಯಾವುದೇ ಸಾಂಕ್ರಾಮಿಕ ರೋಗಗಳು ಹರಡದಂತೆ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲು ಸೂಚಿಸಿ ಪೌರಕಾರ್ಮಿಕರು, ಸ್ವಯಂ ಸೇವಕರ ಬಳಕೆ ಹಾಗೂ ದೇವಸ್ಥಾನ ಸಮಿತಿ ಹಾಗೂ ಗ್ರಾಪಂನಿಂದ ಅಗತ್ಯ ಕ್ರಮಕ್ಕೆ ಸಿದ್ಧತೆ ನಡೆಸಲು ಸೂಚನೆ ನೀಡಿದರು.

ಕುಡಿಯುವ ನೀರು: ಕುಡಿಯುವ ನೀರಿಗಾಗಿ ತುಂಗಭದ್ರಾ ಜಲಾಶಯದಿಂದ ನದಿಗೆ ಮತ್ತು ನಾಲೆಗೆ ನೀರು ಬಿಡಲು ಕಾಡಾ ಅಧಿಕಾರಿಗಳಿಗೆ ಸೂಚನೆ ನೀಡಿ ದೇವಸ್ಥಾನ ಸಮಿತಿಯಿಂದ ದೇವಸ್ಥಾನದ ಬಳಿ ವ್ಯವಸ್ಥೆ ಹಾಗೂ ಹೊರಗೆ ಪಂಚಾಯಿತಿಯಿಂದ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

ಸ್ವಚ್ಛತೆ, ಆರೋಗ್ಯ: ಜಾತ್ರೆಯಲ್ಲಿ ಲಕ್ಷಾಂತರ ಜನರು ಭಾಗವಹಿಸುವುದರಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ಸ್ವಚ್ಛತೆಗೆ ಆದ್ಯತೆ ನೀಡಿ ಕಸ ವಿಲೇವಾರಿ ಮಾಡುವ ಮೂಲಕ ಪಾಳಿಯಲ್ಲಿ ಸಿಬ್ಬಂದಿ ನೇಮಕ ಮಾಡಿ ಸ್ವಚ್ಛತೆಗೊಳಿಸಬೇಕು. ನಗರಸಭೆಯಿಂದಲೂ ಕಸ ವಿಲೇವಾರಿಗೆ ವಾಹನ ಕಳುಹಿಸಿಕೊಡಬೇಕು. ಜನರ ಆರೋಗ್ಯ ರಕ್ಷಣೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಜೊತೆ 12 ವೈದ್ಯರ ತಂಡವನ್ನು ಜಾತ್ರೆಗಾಗಿ ನಿಯೋಜಿಸಿ ವೈದ್ಯೋಪಚಾರಕ್ಕೆ ಬೇಕಾದ ಔಷಧವನ್ನು ದಾಸ್ತಾನಿಟ್ಟುಕೊಳ್ಳಲು ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು.

Advertisement

ವಾಹನದ ಸೌಲಭ್ಯ: ಭಕ್ತರ ಅನುಕೂಲಕ್ಕಾಗಿ ಗಂಗಾವತಿ, ಕೊಪ್ಪಳ, ಹೊಸಪೇಟೆ ಕಡೆಯಿಂದ ಬಸ್‌ ವ್ಯವಸ್ಥೆ ಕಲ್ಪಿಸಿದ್ದು, 300 ಬಸ್‌ಗಳು ಜಾತ್ರಾ ವಿಶೇಷವಾಗಿ ಬೀಡಲಾಗುತ್ತದೆ. ಪ್ರಯಾಣ ಒತ್ತಡಕ್ಕೆ ತಕ್ಕಂತೆ ಇನ್ನು ಹೆಚ್ಚಿನ ಬಸ್‌ಗಳನ್ನು ಸಾರಿಗೆ ಸಂಸ್ಥೆಯಿಂದ ನೀಡಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ತಿಳಿಸಿ ತುಂಗಭದ್ರಾ ಶಾಲೆಯವರೆಗೆ ಬಸ್‌ಗಳು ಸಂಚರಿಸಲಿವೆ ಎಂದರು.

ರಸ್ತೆ ಒತ್ತುವರಿ ತೆರವಿಗೆ ಸೂಚನೆ: ದೇವಸ್ಥಾನ ಮುಂಭಾಗದಲ್ಲಿ ರಸ್ತೆಯ ಎರಡು ಬದಿ ಅಂಗಡಿ, ಮುಂಗಟ್ಟುಗಳನ್ನು ಹಾಕಿದ್ದು, ಭಕ್ತರಿಗೆ ತೊಂದರೆಯಾಗಲಿದೆ. ಆದ್ದರಿಂದ ಯಾರು ರಸ್ತೆಯ ಮೇಲೆ ಅಂಗಡಿಗಳನ್ನು ಇಟ್ಟುಕೊಳ್ಳವರು, ಮೊದಲು ತಿಳಿಸಿ ನಂತರ ಸೀಜ್‌ ಮಾಡಿಕೊಳ್ಳಲು ತಿಳಿಸಿ ಪರಿಶೀಲನೆಗಾಗಿ ಭೇಟಿ ನೀಡಲು ಉಪವಿಭಾಗಾಧಿಕಾರಿಗೆ ಸೂಚನೆ ನೀಡಿದರು.

ಪೊಲೀಸ್‌ ಬಂದೋಬಸ್ತ್: ಜಾತ್ರೆ ವೇಳೆ ಸುಗಮ ಸಾರಿಗೆ ವ್ಯವಸ್ಥೆಗೆ ಸಂಚಾರ ನಿಯಂತ್ರಣ ಹಾಗೂ ಜೇಬುಕಳ್ಳರ ಹಾವಳಿ ಹೆಚ್ಚಿರುತ್ತವೆ. ಆದ್ದರಿಂದ ಅಗತ್ಯವಿರುವ ಎಲ್ಲಾ ಕಡೆ ಸಿಸಿ ಕ್ಯಾಮೆರಾ ಅಳವಡಿಸಬೇಕು. ಇದನ್ನು ದೇವಸ್ಥಾನ ಸಮಿತಿಯಿಂದ ವ್ಯವಸ್ಥೆಗೊಳಿಸಬೇಕು ಮತ್ತು ನದಿ ದಂಡೆ ಕಡೆ ಬ್ಯಾರಿಕೇಡ್‌ ನಿರ್ಮಾಣ ಮಾಡಲು ತಿಳಿಸಿ ತುರ್ತು ವೇಳೆ ಅಗ್ನಿಶಾಮಕ ವಾಹನ ಮತ್ತು ಅಗ್ನಿಶಾಮಕ ಬೈಕ್‌ನ್ನು ಸಿದ್ಧತೆಯಲ್ಲಿಟ್ಟುಕೊಳ್ಳಲು ಅಗ್ನಿಶಾಮಕ ಅಧಿಕಾರಿಗೆ ಸೂಚಿಸಿದರು.

ಸಭೆಯಲ್ಲಿ ಜಿಪಂ ಸಿಇಒ ಆರ್‌.ಎಸ್‌. ಪೆದ್ದಪ್ಪಯ್ಯ, ಎಸಿ ಸಿ.ಡಿ. ಗೀತಾ, ಹುಲಿಗಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಸ್‌. ಚಂದ್ರಮೌಳಿ, ತಹಶೀಲ್ದಾರ್‌ ಜೆ.ಬಿ. ಮಜ್ಜಿಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

ಜಾತ್ರೆಗೆ ಆಗಮಿಸುವ ಭಕ್ತರಿಗೆ ಅಗತ್ಯವಿರುವಷ್ಟು ಶೌಚಾಲಯಗಳನ್ನು ನಿರ್ಮಾಣ ಮಾಡಲು ತಿಳಿಸಿ ಗ್ರಾಪಂ ಮತ್ತು ದೇವಸ್ಥಾನ ಸಮಿತಿಯಿಂದ ಮೊಬೈಲ್ ಶೌಚಾಲಯ ಮತ್ತು ತಾತ್ಕಾಲಿಕ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಭಕ್ತರು ತಂಗುವುದರಿಂದ ರಾತ್ರಿಯ ವೇಳೆ ವಿದ್ಯುತ್‌ ಕಡಿತವಾಗದಂತೆ ನಿರಂತರವಾಗಿ ವಿದ್ಯುತ್‌ ಪೂರೈಕೆ ಮಾಡಬೇಕು. ಇದಕ್ಕಾಗಿ ಎಕ್ಸ್‌ಪ್ರೆಸ್‌ ಫೀಡರ್‌ ಮೂಲಕ ಪೂರೈಕೆ ಮಾಡಿ ಅಗತ್ಯ ಲೋಡ್‌ಗೆ ತಕ್ಕಂತೆ ಟಿಸಿಗಳನ್ನು ಅಳವಡಿಸಲು ಜೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಾತ್ರೆ ವೇಳೆ ಯಾವುದೇ ಪ್ರಾಣಿ ಬಲಿ ನೀಡುವಂತಿಲ್ಲ. ಪ್ರಾಣಿಬಲಿ ಮಾಡುವುದು ಕಾನೂನಿಗೆ ವಿರುದ್ಧವಾಗಿದ್ದು, ಯಾವುದೇ ಪ್ರಾಣಿಗಳನ್ನು ಜಾತ್ರೆಗೆ ತೆಗೆದುಕೊಂಡು ಹೋಗದಂತೆ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಮಾಡಬೇಕು ಮತ್ತು ಜಾತ್ರೆ ವೇಳೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮದ್ಯ ಮಾರಾಟ ನಿಷೇಧಿಸಿ ಆದೇಶಿಸಲಾಗುತ್ತದೆ ಎಂದರು.
ಜಾತ್ರೆಯಲ್ಲಿ ಸಾಕಷ್ಟು ಭಕ್ತರು ಬರುವುದರಿಂದ ಬಾಲ್ಯವಿವಾಹ, ದೇವದಾಸಿ ಪದ್ಧತಿ ನಿಷೇಧದ ಕುರಿತಂತೆ ಜಾಗೃತಿ ಮೂಡಿಸಲು ಆಯಾ ಇಲಾಖೆಯಿಂದ ಸಿದ್ಧತೆ ಮಾಡಿಕೊಳ್ಳಬೇಕು. ಇದಕ್ಕಾಗಿ ಸೂಕ್ತ ಸ್ಥಳವನ್ನು ಗುರುತಿಸಿ ಇತರೆ ಇಲಾಖೆಗಳಿಂದಲೂ ಜನರಿಗೆ ಅರಿವು ಮೂಡಿಸಲು ಸೂಚಿಸಿ ಜಾತ್ರೆಯಲ್ಲಿ ಮಕ್ಕಳ ಬಗ್ಗೆ ಸಹಾಯವಾಣಿ ಸ್ಥಾಪಿಸಲು ಸೂಚನೆ ನೀಡಿದರು.
Advertisement

Udayavani is now on Telegram. Click here to join our channel and stay updated with the latest news.

Next