Advertisement

ತುರ್ತು ಸ್ಪಂದನೆ-ಚಿಕಿತ್ಸೆಗೆ ಸಿದ್ಧರಾಗಿ

11:55 AM Jan 22, 2020 | Suhan S |

ಕಲಬುರಗಿ: 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಬರುವ ಗಣ್ಯರು, ಸಾಹಿತಿಗಳು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳ ಹಾಗೂ ಎಲ್ಲ ಪ್ರತಿನಿಧಿಗಳ ಆರೋಗ್ಯದ ದೊಡ್ಡ ಜವಾಬ್ದಾರಿ ನಮ್ಮ ಸಮಿತಿ ಮೇಲಿದ್ದು, ಯಾವುದೇ ರೀತಿಯ ಆರೋಗ್ಯದಲ್ಲಿ ಏರುಪೇರು ಆದಲ್ಲಿ ತುರ್ತು ಸ್ಪಂದನೆ ಮತ್ತು ಚಿಕಿತ್ಸೆ ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸಮ್ಮೇಳನದ ಆರೋಗ್ಯ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಆಳಂದ ಶಾಸಕ ಸುಭಾಷ ಗುತ್ತೇದಾರ ತಿಳಿಸಿದರು.

Advertisement

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ಜಿಲ್ಲಾ ಸಮೀಕ್ಷಾ ಘಟಕದ ಸಭಾ ಭವನದಲ್ಲಿ ಜರುಗಿದ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆರೋಗ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮ್ಮೇಳನಕ್ಕೆ ಬರುವ ಎಲ್ಲರಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಸಮಿತಿಯ ಮುಖ್ಯ ಜವಾಬ್ದಾರಿ. ಕಾರ್ಯಾಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಎಲ್ಲ ಸದಸ್ಯರು ತಮಗೆ ನೀಡಲಾದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು ಎಂದರು.

ಆರೋಗ್ಯ ಚಿಕಿತ್ಸೆಗೆ ಜಿಮ್ಸ್‌ ವೈದ್ಯಕೀಯ ಕಾಲೇಜು, ಖಾಸಗಿ ಆಸ್ಪತ್ರೆಗಳಾದ ಬಸವೇಶ್ವರ ಆಸ್ಪತ್ರೆ,\ಕೆ.ಬಿ.ಎನ್‌ ಆಸ್ಪತ್ರೆ, ಯುನೈಟೆಡ್‌, ವಾತ್ಸಲ್ಯ, ಚಿರಾಯು ಮತ್ತು ಮೆಡಿಕೇರ್‌ ಆಸ್ಪತ್ರೆಗಳು ಮುಂದೆ ಬಂದಿರುವುದು ಸ್ವಾಗತಾರ್ಹವಾಗಿದೆ. ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು ಇದಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಐ.ಎಂ.ಎ ಅಧ್ಯಕ್ಷ ಅಮೂಲ ಪತಂಗೆ ಮಾತನಾಡಿ, ಸಮ್ಮೇಳನದಲ್ಲಿ ಬರುವ ಜನರಿಗೆ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ತೊಂದರೆಯಾದಾಗ ಜಿಲ್ಲೆಯ ಎಲ್ಲಖಾಸಗಿ ವೈದ್ಯರುಗಳು ಸಹಕಾರ ನೀಡಬೇಕೆಂದರು.

ಸಹಾಯಕ ಔಷಧ ನಿಯಂತ್ರಣ ಅಧಿಕಾರಿ ಕರುಣಾದೇವಿ ಮಾತನಾಡಿ ಸಮ್ಮೇಳನಕ್ಕೆ ಬೇಕಾದ ಅವಶ್ಯಕ ಔಷಧ ದಾಸ್ತಾನು ಮಾಡಿಕೊಳ್ಳಲು ಎಲ್ಲ ಔಷಧ ವಿತರಕರೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕಿ ಕವಿತಾ ಪಾಟೀಲ ಮಾತನಾಡಿ, ಮೂರು ದಿನಗಳ ನುಡಿ ಸಮ್ಮೇಳನ ಸಂದರ್ಭದಲ್ಲಿ ವೈದ್ಯರ ತಂಡ ಸೂಕ್ತ ಚಿಕಿತ್ಸೆ ನೀಡಲು ಸನ್ನದ್ಧವಾಗಲಿದೆ ಎಂದರು.

ಸಮ್ಮೇಳನ ನಡೆಯುವ ಸ್ಥಳದ ಪಕ್ಕದಲ್ಲಿಯೇ ಇರುವ ಇಎಸ್‌ಐಸಿ ಅಸ್ಪತ್ರೆಯಲ್ಲಿ ಒಂದು ಐ.ಸಿ.ಯು ಹಾಗೂ ಜನರಲ್‌ ವಾರ್ಡನ್ನು ವಿಶೇಷವಾಗಿ ಸಮ್ಮೇಳನಕ್ಕಾಗಿಯೇ ಕಾಯ್ದಿರಿಸಲಾಗಿದೆಎಂದು ಡಾ| ಪರನಾಕರ ಮತ್ತು ಅವರ ತಂಡ ಸಭೆಗೆ ಮಾಹಿತಿ ನೀಡಿದರು. ಜಿಲ್ಲಾ ಆಸ್ಪತ್ರೆ ಶಸ್ತ್ರಜ್ಞ ಡಾ| ಅಂಬಾರಾಯ ರುದ್ರವಾಡಿ ಮಾತನಾಡಿ, ಜಿಲ್ಲಾ ಆಸ್ಪತ್ರೆಯು ಅಗತ್ಯ ಔಷಧಿಗಳೊಂದಿಗೆ ಎಡಿಎಲ್‌ಎಸ್‌ ಅಂಬ್ಯೂಲೆನ್ಸ್‌ ಮೂರು ಹಾಗೂ ಬೈಕ್‌ ಅಂಬ್ಯೂಲೆನ್ಸ್‌ ವ್ಯವಸ್ಥೆ ಮಾಡಲಾಗಿದೆ ಎಂದರು.

Advertisement

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಎಂ.ಎ. ಜಬ್ಟಾರ್‌ ಮಾತನಾಡಿ, ಸಮ್ಮೇಳನ ಸಂದರ್ಭದಲ್ಲಿ ಬೇಕಾಗುವ ಅಗತ್ಯ ಔಷಧಿಗಳನ್ನು ಪೂರೈಸಲಾಗುವುದು. ಸಮ್ಮೇಳನ ನಡೆಯುವ ಸ್ಥಳದಲ್ಲಿ ಮೆಡಿಕಲ್‌ ಕಾಲೇಜುಗಳ 4 ಸ್ಟಾಲ್‌, ಖಾಸಗಿ ಆಸ್ಪತ್ರೆಯ 4 ಸ್ಟಾಲ್‌ಗ‌ಳನ್ನು ಸ್ಥಾಪಿಸಿ 24/7 ಕಾಲ ಸಮ್ಮೇಳನಕ್ಕೆ ಬರುವವರಿಗೆ ಆರೋಗ್ಯ ಸೇವೆ ನೀಡಲಾಗುವುದು. ಹಾಲುಣಿಸುವ ತಾಯಂದಿಯರಿಗೆ ವಿಶೇಷ ಕೌಂಟರ್‌ಗಳ ವ್ಯವಸ್ಥೆ ಸಹ ಮಾಡಲಾಗುವುದು ಎಂದರು.

ಫಾರ್ಮಾಸಿಸ್ಟ್‌ ಸಂಘದ ಅಧ್ಯಕ್ಷ ಡಾ| ಬಿ.ಎಸ್‌.ದೇಸಾಯಿ ಇವರು 25,000 ರೂ. ಔಷ ಧಿಗಳನ್ನು ಸಮಿತಿಗೆ ನೀಡುವುದಾಗಿ ತಿಳಿಸಿದರು. ಕಸಾಪ ಕಾರ್ಯದರ್ಶಿ ಮಡಿವಾಳಪ್ಪ, ಜಿಲ್ಲಾ ಕೀಟಶಾಸ್ತ್ರಜ್ಞರಾದ ಚಾಮರಾಜ ದೊಡಮನಿ ಮಾತನಾಡಿದರು. ಜಿಲ್ಲಾ ಪಂಚಾಯತಿ ಸದಸ್ಯರಾದ ಆರ್‌.ಆರ್‌. ಕಲ್ಲೂರ, ಅನ್ನಪೂರ್ಣ ಹೀರಾಪುರ ಹಾಗೂ ನರ್ಸಿಂಗ್‌ ಶಾಲೆಯ ಪ್ರಾಂಶುಪಾಲರು, ವಿವಿಧ ಸಂಘಟನೆಗಳ ಸದಸ್ಯರು ಹಾಜರಿದ್ದರು.

ರಿಯಾಯ್ತಿ ದರದಲ್ಲಿ ಪುಸ್ತಕ: ನುಡಿ ಹಬ್ಬದ ಮೂರು ದಿನಗಳ ಜಾತ್ರೆಯಲ್ಲಿ ವಿವಿಧ ವಿಶ್ವವಿದ್ಯಾಲಯಗಳ ಪ್ರಸಾರಾಂಗಗಳು, ಅಕಾಡೆಮಿ– ಪ್ರಾಧಿಕರಗಳ ಪುಸ್ತಕ ಪ್ರಕಾಶನಗಳು ಸಾಹಿತ್ಯ, ಕಥೆ, ಕಾದಂಬರಿ, ಕ್ರೀಡೆ, ಆರೋಗ್ಯ, ಮಕ್ಕಳ ಪುಸ್ತಕಗಳು, ವಿಜ್ಞಾನ, ಕೃಷಿ, ಶಿಕ್ಷಣ, ಸಂಸ್ಕೃತಿ ಹೀಗೆ ವಿಭಿನ್ನ ಅಭಿರುಚಿಯ ಪುಸ್ತಕಗಳನ್ನು ರಿಯಾಯ್ತಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ಕೇಂದ್ರ ಗ್ರಂಥಾಲಯದಲ್ಲಿ ನಡೆದ ಪುಸ್ತಕ ಪ್ರದರ್ಶನ ಮತ್ತು ವಾಣಿಜ್ಯ ಮಳಿಗೆಗಳ ಸಮಿತಿ ಸಭೆಯಲ್ಲಿ ಸಮಿತಿ ಅಧ್ಯಕ್ಷ ಡಾ| ಅಜಯಸಿಂಗ್‌ ತಿಳಿಸಿದರು. ಸಮ್ಮೇಳನದಲ್ಲಿ 500 ಪುಸ್ತಕ ಮತ್ತು 300 ವಾಣಿಜ್ಯ ಸೇರಿ ಒಟ್ಟಾರೆ 800 ಮಳಿಗೆ ಸ್ಥಾಪನೆಗೆ ಅಂದಾಜಿಸಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next