Advertisement

ಯೋಗ ದಿನಾಚರಣೆಗೆ ಸಿದ್ಧತೆ ಕೈಗೊಳ್ಳಿ

02:34 PM Jun 15, 2019 | Team Udayavani |

ಕೊಪ್ಪಳ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ. 21ರಂದು ಆಚರಿಸಲಾಗುತ್ತಿದ್ದು, ಕಾರ್ಯಕ್ರಮ ಅಚ್ಚುಕಟ್ಟಾಗಿ ಆಚರಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಎಡಿಸಿ ಸೈಯದಾ ಅಯಿಷಾ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ. 21ರಂದು ಬೆಳಗ್ಗೆ 7ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು, ಕ್ರೀಡಾಂಗಣವನ್ನು ನಗರಸಭೆಯಿಂದ ಸ್ವಚ್ಛಗೊಳಿಸಿ, ಕಾರ್ಯಕ್ರಮದಲ್ಲಿ ಪ್ರೌಢಶಾಲೆ ಹಾಗೂ ಪಪೂ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುವಂತೆ ಸಾರ್ವಜನಿಕ ಮತ್ತು ಪಪೂ ಶಿಕ್ಷಣ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು. ಎಲ್ಲಾ ಮಕ್ಕಳು ಕಾರ್ಯಕ್ರಮದ ದಿನದಂದು ಬೆಳಗ್ಗೆ 6ಗಂಟೆಗೆ ಹಾಜರಾಗಬೇಕಾಗಿದ್ದು, ಸೂಕ್ತ ವಾಹನದ ವ್ಯವಸ್ಥೆ ಕಲ್ಪಿಸಬೇಕು. ವಸತಿ ನಿಲಯಗಳ ಪ್ರೌಢ ಹಾಗೂ ಪಿಯುಸಿ ವಿದ್ಯಾರ್ಥಿಗಳ ಸಹ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕ್ರಮ ವಹಿಸಬೇಕೆಂದರು.

ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆರೋಗ್ಯ ಇಲಾಖೆ ಕ್ರಮ ವಹಿಸಬೇಕು. ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವ ಮತ್ತು ವಾಪಸ್‌ ಬರುವ ವ್ಯವಸ್ಥೆಯ ಕುರಿತು ಶಿಕ್ಷಣ ಇಲಾಖೆ ವಹಿಸಿಕೊಳ್ಳಬೇಕು. ಕಾರ್ಯಕ್ರಮದ ದಿನದಂದು ಆಯುಷ ಇಲಾಖೆ ಬೆಳಗ್ಗೆಯ ಉಪಹಾರ ವ್ಯವಸ್ಥೆ ಮಾಡಬೇಕು. ಆಹಾರವನ್ನು ಕಡ್ಡಾಯವಾಗಿ ಪರೀಕ್ಷಿಸಬೇಕು. ಅಗತ್ಯ ಕುಡಿಯುವ ನೀರಿನ ವ್ಯವಸ್ಥೆ ನಗರಸಭೆಯಿಂದ ಮಾಡಬೇಕು. ಕ್ರೀಡಾಂಗಣದ ಸ್ವಚ್ಛತೆಯ ಬಗ್ಗೆ ಕ್ರೀಡಾ ಇಲಾಖೆ ನಿಗಾವಹಿಸಬೇಕು. ಯಾವುದೇ ಲೋಪ ದೋಷಗಳಿಲ್ಲದೇ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿ ಯಶಸ್ವಿಗೊಳಿಸುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಬಸವರಾಜ ಕುಂಬಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಆರ್‌.ಜಿ. ನಾಡಗೀರ್‌, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ. ಬಸವರಾಜ, ಹಿರಿಯ ವೈದ್ಯಾಧಿಕಾರಿ ಡಾ| ಬಿ.ಜಿ. ಪಾಟೀಲ್, ವೈದ್ಯಾಧಿಕಾರಿ ಡಾ| ಗುರುರಾಜ ಉಮಚಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next