Advertisement

2ನೇ ಕಂತಿನ ಹಣ ಪಡೆದು, ಮನೆ ನಿರ್ಮಿಸಿಕೊಳ್ಳಿ

11:12 PM Jan 29, 2020 | Lakshmi GovindaRaj |

ಬೆಂಗಳೂರು: ನೆರೆ ಸಂತ್ರಸ್ತರು ತ್ವರಿತವಾಗಿ ಎರಡನೇ ಕಂತಿನ ಹಣವನ್ನು ಪಡೆದು ಮನೆಗಳನ್ನು ಮೂರು ತಿಂಗಳಲ್ಲಿ ನಿರ್ಮಿಸಿಕೊಳ್ಳಬೇಕು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಮನವಿ ಮಾಡಿದ್ದಾರೆ. ಅಲ್ಲದೆ, ತಮ್ಮ ಕಾರ್ಯವ್ಯಾಪ್ತಿಯಲ್ಲಿ ಮನೆ ನಿರ್ಮಾಣ ಕಾರ್ಯದಲ್ಲಿ ಪ್ರಗತಿ ಸಾಧಿಸದ ಪಿಡಿಒಗಳನ್ನು ತಕ್ಷಣವೇ ಅಮಾನತುಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವಿಧಾನಸೌಧದಲ್ಲಿ ಬುಧವಾರ ವೀಡಿಯೋ ಸಂವಾದ ನಡೆಸಿದ ಬಳಿಕ ಸಚಿವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನೆರೆ ಸಂತ್ರಸ್ತರು ಮನೆ ನಿರ್ಮಿಸಿಕೊಳ್ಳುವ ಕಾರ್ಯವನ್ನು ತ್ವರಿತಗೊಳಿಸಬೇಕು. ಮೂರು ತಿಂಗಳಲ್ಲಿ ಮನೆ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಗಡುವು ನೀಡಲಾಗಿದೆ. ನೆರೆಯಿಂದ ಸಂಪೂರ್ಣ ಮನೆ ನಾಶ, ಹಾನಿಗೆ ಸಂಬಂಧಪಟ್ಟಂತೆ ವರ್ಗೀಕರಿಸಿ ಎ, ಬಿ, ಸಿ ಶ್ರೇಣಿಯಡಿ 9,009 ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಈಗಾಗಲೇ ಮೊದಲ ಕಂತಿನ ಹಣ ಒಂದು ಲಕ್ಷ ರೂ. ಬಿಡುಗಡೆಯಾಗಿದೆ.

ನಾನಾ ಕಾರಣಗಳಿಗೆ ಹಲವರು ಮನೆಗೆ ಅಡಿಪಾಯವನ್ನೂ ಹಾಕಿಲ್ಲ. ಇನ್ನು 15 ದಿನದಲ್ಲಿ ಶೇ.50ರಷ್ಟಾದರೂ ಪ್ರಗತಿ ಸಾಧಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ನೆರೆ ಪರಿಹಾರ ಕಾರ್ಯಕ್ಕೆ ಹಣಕಾಸಿನ ಕೊರತೆಯಿಲ್ಲ. ಎಲ್ಲಾ ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಯಲ್ಲಿ ಕನಿಷ್ಠ ಮೊತ್ತ ಐದು ಕೋಟಿ ರೂ.ಗಿಂತ ಕಡಿಮೆಯಾಗದಂತೆ ನೋಡಿ ಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಹಣ ಪಡೆಯಲು ಮನವಿ: ಮನೆ ಕಳೆದುಕೊಂಡವರು ಎರಡನೇ ಕಂತಿನ ಹಣವನ್ನು ತ್ವರಿತವಾಗಿ ಪಡೆದು, ಮನೆ ನಿರ್ಮಾಣ ಕಾರ್ಯವನ್ನು ಚುರುಕುಗೊಳಿಸಬೇಕು. ಬೆರಳೆಣಿಕೆ ಮಂದಿಯಷ್ಟೇ ಎರಡನೇ ಕಂತಿನ ಹಣ ಪಡೆದು ಮನೆ ನಿರ್ಮಾಣ ಕಾಮಗಾರಿ ಮುಂದುವರಿಸಿದ್ದಾರೆ. ಮನೆಯ ಸ್ವಲ್ಪ ಭಾಗ ಹಾನಿಯಾಗಿರುವ ಕಡೆ ಪೂರ್ಣ ಮನೆ ಕೆಡವಿ ಹೊಸದಾಗಿ ನಿರ್ಮಿಸಲು 5 ಲಕ್ಷ ರೂ. ನೀಡಲಾಗುತ್ತಿದೆ. ಆದರೆ, ಬಹಳಷ್ಟು ಮಂದಿ ರಿಪೇರಿ ಮಾಡಿಕೊಂಡು ಅದೇ ಮನೆ ಬಳಸಲು ನಿರ್ಧರಿಸಿದ್ದಾರೆ. ದುರಸ್ತಿ ಕಾರ್ಯಕ್ಕೆ 3 ಲಕ್ಷ ರೂ., ಹೊಸದಾಗಿ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ ಎಂದು ಹೇಳಿದರು.

ಪ್ರಗತಿ ಪರಿಶೀಲನೆ ನಡೆಸಿ: ನೆರೆ ಪ್ರದೇಶದಲ್ಲಿ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) 10ರಿಂದ 20 ಮನೆಗಳ ನಿರ್ಮಾಣದ ಮೇಲ್ವಿಚಾರಣೆ ವಹಿಸಲಾಗಿದೆ. ತಕ್ಷಣವೇ ಪ್ರಗತಿ ಪರಿಶೀಲನೆ ನಡೆಸಿ, ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದ ಪಿಡಿಒಗಳನ್ನು ಕೂಡಲೇ ಅಮಾನತುಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶೇ.90ರಷ್ಟು ಶಾಲೆಗಳ ದುರಸ್ತಿ ಕಾರ್ಯ ಆರಂಭವಾಗಿದ್ದು, ಬಾಕಿಯಿರುವ ಶೇ.10ರಷ್ಟು ಶಾಲೆಗಳ ದುರಸ್ತಿ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

Advertisement

ಉಡುಪಿಯಲ್ಲಿ ಚಾಲನೆ: ಆಧಾರ್‌ ಕಾರ್ಡ್‌ ಆಧರಿಸಿ ವೃದ್ಧಾಪ್ಯ ವೇತನವನ್ನು ಫ‌ಲಾನುಭವಿಗಳ ಮನೆ ಬಾಗಿಲಿಗೆ ನೇರವಾಗಿ ತಲುಪಿಸುವ ವ್ಯವಸ್ಥೆ ಜಾರಿಗೆ ಸಿದ್ಧತೆ ನಡೆದಿದೆ. ವೃದ್ದಾಪ್ಯ ವೇತನ ಪಡೆಯಲು ಹಿರಿಯ ನಾಗರಿಕರು ಕಚೇರಿಯಿಂದ ಕಚೇರಿಗೆ ಅಲೆದಾಡಬೇಕಾದ ಅಗತ್ಯವಿಲ್ಲ. 60 ವರ್ಷ ಪೂರ್ಣಗೊಂಡವರ ಮಾಹಿತಿಯನ್ನು ಆಧಾರ್‌ ಕಾರ್ಡ್‌ ಆಧರಿಸಿ, ಗುರುತಿಸಿ, ಅವರಿಗೆ ನಮ್ಮಿಂದಲೇ ಪತ್ರ ಬರೆದು ಮಾಹಿತಿ ನೀಡುವ ವ್ಯವಸ್ಥೆ ರೂಪಿಸಲಾಗುವುದು. ಹಾಗಾಗಿ, ವೃದ್ಧಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ. ಉಡುಪಿಯಲ್ಲಿ ಪ್ರಾಯೋಗಿಕವಾಗಿ ಯೋಜನೆಗೆ ಚಾಲನೆ ನೀಡಲಾಗುವುದು. 3,000 ಅರ್ಹ ಫ‌ಲಾನುಭವಿಗಳಿಗೆ ವೃದ್ಧಾಪ್ಯ ವೇತನ ಸೌಲಭ್ಯ ಕಲ್ಪಿಸುವ ಪತ್ರವನ್ನು ಅಂಚೆ ಪಟ್ಟಿಗೆ ಹಾಕುವ ಮೂಲಕ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳೇ, ಹಳ್ಳಿಗಳಿಗೆ ನಡೆಯಿರಿ…: ಜಿಲ್ಲಾಧಿಕಾರಿಗಳಾದವರು ಬೆಳಗ್ಗೆಯಿಂದ ಸಂಜೆವರೆಗೆ ಕಚೇರಿಯಲ್ಲಿರುತ್ತಾರೆ. ಬೆಳಗ್ಗೆ ಕಚೇರಿಗೆ ಹೋಗುವಾಗ ಸಂಜೆ ಕಚೇರಿಯಿಂದ ಹೊರಡುವಾಗಷ್ಟೇ ಜಿಲ್ಲಾಧಿಕಾರಿಗಳ ದರ್ಶನ ಎಂಬಂತಾಗಿದೆ. ಹಾಗಾಗಿ, “ಜಿಲ್ಲಾಧಿಕಾರಿಗಳೇ, ಹಳ್ಳಿಗಳಿಗೆ ನಡೆಯಿರಿ’ ಕಾರ್ಯಕ್ರಮ ಜಾರಿಗೆ ಚಿಂತನೆ ನಡೆಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದದಲ್ಲೂ ಚರ್ಚಿಸಲಾಗಿದೆ. ಹಲವರು ಮೂರನೇ ಶನಿವಾರ ಕಾರ್ಯಕ್ರಮ ನಡೆಸುವುದು ಸೂಕ್ತ ಎಂದು ಹೇಳಿದ್ದಾರೆ. ಕೆಲವರು ಗ್ರಾಮದಲ್ಲೇ ವಾಸ್ತವ್ಯ ಹೂಡುವುದಾಗಿಯೂ ತಿಳಿಸಿದ್ದಾರೆ ಎಂದು ಸಚಿವರು ಹೇಳಿದರು.

ರಾಜ್ಯದಲ್ಲಿ 30,000 ಹಳ್ಳಿಗಳಿವೆ. ಜಿಲ್ಲಾಧಿಕಾರಿಗಳು ತಿಂಗಳಲ್ಲಿ ಒಂದು ದಿನ ಬೆಳಗ್ಗೆಯಿಂದ ಸಂಜೆವರೆಗೆ ಹಳ್ಳಿಯಲ್ಲಿ ಗ್ರಾಮಸ್ಥರ ಅಹವಾಲು ಆಲಿಸಿ, ಪರಿಹರಿಸಲು ಪ್ರಯತ್ನಿಸಲಿದ್ದಾರೆ. ಸರ್ಕಾರಿ ಭೂಮಿ ಒತ್ತುವರಿ ತೆರವು, ಶಾಲೆಗಳ ಸ್ಥಿತಿಗತಿ ಪರಿಶೀಲನೆ, ಶಾಲೆಯಿಂದ ಹೊರಗುಳಿದ ಮಕ್ಕಳ ದಾಖಲೀಕರಣ ಪ್ರಯತ್ನ, ಸ್ಮಶಾನಕ್ಕೆ ಜಾಗ ಮೀಸಲಿಡುವುದು, ಬಾಲ್ಯ ವಿವಾಹ ತಡೆ ಬಗ್ಗೆ ಜಾಗೃತಿ, ಪೌತಿ ಖಾತೆ, ಪಹಣಿಯಲ್ಲಿನ ವ್ಯತ್ಯಾಸ ಸರಿಪಡಿಸುವುದು, ಜಾತಿ ಪ್ರಮಾಣ ಪತ್ರ ವಿತರಣೆ, ಪಡಿತರ ವಿತರಣಾ ವ್ಯವಸ್ಥೆ, ಗುಣಮಟ್ಟದ ಬಗ್ಗೆಯೂ ಪರಿಶೀಲನೆ ನಡೆಸಲಿದ್ದಾರೆ. ಮೂರ್‍ನಾಲ್ಕು ವರ್ಷದಲ್ಲಿ ಎಲ್ಲ ಹಳ್ಳಿಗಳನ್ನು ತಲುಪುವ ಗುರಿ ಇದೆ ಎಂದರು.

ಅದೇ ರೀತಿ, ಉಪವಿಭಾಗಾಧಿಕಾರಿಗಳು ತಿಂಗಳಲ್ಲಿ ಎರಡು ದಿನ, ತಹಸೀಲ್ದಾರರು ತಿಂಗಳಲ್ಲಿ ನಾಲ್ಕು ದಿನ ಹಳ್ಳಿಗಳಿಗೆ ತೆರಳಿ, ಗ್ರಾಮಸ್ಥರ ಅಹವಾಲುಗಳಿಗೆ ಸ್ಪಂದಿಸುವ ವ್ಯವಸ್ಥೆ ಜಾರಿಗೆ ಚಿಂತಿಸಲಾಗಿದೆ. ಪೌತಿ ಖಾತೆಗಾಗಿ 10 ಲಕ್ಷಕ್ಕೂ ಹೆಚ್ಚು ಅರ್ಜಿಗಳಿದ್ದು, ತ್ವರಿತ ವಿಲೇವಾರಿಗೆ ಸೂಚನೆ ನೀಡಲಾಗಿದೆ. ಕಂದಾಯ ಇಲಾಖೆಯನ್ನು ಜನಸ್ನೇಹಿಯಾಗಿಸಲು ಈ ಕಾರ್ಯಕ್ರಮ ರೂಪಿಸಲಾಗುತ್ತಿದ್ದು, ನಾನು ಒಂದು ಜಿಲ್ಲೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಹೇಳಿದರು.

ನಗರ ಪ್ರದೇಶಗಳಲ್ಲಿ 94ಸಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ 94ಸಿಸಿ ಅಡಿ ಕಂದಾಯ ಭೂಮಿಯಲ್ಲಿ ನಿರ್ಮಿಸಿಕೊಂಡ ಮನೆಗಳ ಸಕ್ರಮಕ್ಕೆ ಕೋರಿ ಸಲ್ಲಿಕೆಯಾದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಹಕ್ಕುಪತ್ರ ವಿತರಿಸುವಂತೆಯೂ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ್‌ ಪ್ರಸಾದ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next