Advertisement

ಹೊರಗುತ್ತಿಗೆ ನೌಕರರನ್ನು ನೇರ ವೇತನಕ್ಕೆ ಒಳಪಡಿಸಿ

07:12 PM Sep 30, 2020 | Suhan S |

ಚಿತ್ರದುರ್ಗ: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಸ ಸಾಗಿಸುವ ವಾಹನ ಚಾಲಕರು ಹಾಗೂ ವಾಟರ್‌ವೆುನ್‌ಗಳನ್ನು ನೇರ ವೇತನಕ್ಕೆ ಒಳಪಡಿಸಬೇಕೆಂದು ಒತ್ತಾಯಿಸಿ ಹೊರಗುತ್ತಿಗೆ ವಾಹನ ಚಾಲಕರ ಸಂಘದಿಂದ ಮಂಗಳವಾರ ನಗರಸಭೆ ಎದುರು ಧರಣಿ ನಡೆಸಲಾಯಿತು.

Advertisement

ರಾಜ್ಯದ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸುಮಾರು ಹತ್ತು ಸಾವಿರ ಜನ ತ್ಯಾಜ್ಯ ಸಾಗಿಸುವ ವಾಹನ ಚಾಲಕರು ಹಾಗೂ ವಾಟರ್‌ವೆುನ್‌ಗಳು ಹೊರಗುತ್ತಿಗೆಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದಾರೆ. ನಗರಗಳ ಸ್ವತ್ಛತೆಯಲ್ಲಿ ಕಸ ಸಾಗಿಸುವ ವಾಹನ ಚಾಲಕರ ಪಾತ್ರ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪೌರ ಕಾರ್ಮಿಕರ ಮಾದರಿಯಲ್ಲಿ ನಮಗೂ ಗುತ್ತಿಗೆ ಬಿಟ್ಟು ನೇರವಾಗಿ ವೇತನ ಪಾವತಿ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಈ ರೀತಿ ನೇರವಾಗಿ ವೇತನ ಪಾವತಿಸುವುದರಿಂದ ಜಿಎಸ್‌ಟಿ ಹೆಸರಿನಲ್ಲಿ ಕೇಂದ್ರ ಸರ್ಕಾರಕ್ಕೆ ಪಾವತಿಸುವ ಸುಮಾರು 100 ಕೋಟಿ ರೂ. ಹಣ ಉಳಿಯುತ್ತದೆ. ಗುತ್ತಿಗೆ ಏಜೆನ್ಸಿಗಳಿಗೆ ನೀಡುವ ಸೇವಾ ಶುಲ್ಕ ಕೂಡ ಉಳಿಯಲಿದೆ ಎಂದು ಗಮನ ಸೆಳೆದರು. ಧರಣಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಶಿವರಾಜ್‌, ನರಸಿಂಗ, ಶ್ರೀನಿವಾಸ್‌ ಮತ್ತಿತರರು ಭಾಗವಹಿಸಿದ್ದರು.

ಹೊರಗುತ್ತಿಗೆ ಪದ್ಧತಿ ರದ್ದುಗೊಳಿಸಲು ಆಗ್ರಹ :

 ಹಿರಿಯೂರು: ರಾಜ್ಯದ ಪಟ್ಟಣ ಪಂಚಾಯಿತಿ, ನಗರಸಭೆ ಹಾಗೂ ಪಾಲಿಕೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ತ್ಯಾಜ್ಯ ಸಾಗಿಸುವ ವಾಹನ ಚಾಲಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೊರಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ ನೇರವೇತನ ಜಾರಿ ಮಾಡುವಂತೆ ಒತ್ತಾಯಿಸಿ ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ವಾಹನ ಚಾಲಕರ ಸಂಘದ ತಾಲೂಕು ಅಧ್ಯಕ್ಷ ಬಿ. ದಿವಾಕರ ನೇತೃತ್ವದಲ್ಲಿ ಧರಣಿ ನಡೆಸಲಾಯಿತು. ಪೌರಾಯುಕ್ತರಾದ ಲೀಲಾವತಿ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ದಿವಾಕರ, ಈ ವಿಭಾಗದಲ್ಲಿ ಐದು ಸಾವಿರಕ್ಕೂ ಹೆಚ್ಚು ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಗರಗಳ ಸ್ವಚ್ಛತೆ ನಿರ್ವಹಣೆಯಲ್ಲಿ ತ್ಯಾಜ್ಯ ಸಾಗಾಣಿಕೆಯ ಚಾಲಕರ ಪಾತ್ರ ದೊಡ್ಡದು. ಪೌರಕಾರ್ಮಿಕರಿಗೆ ಸಮನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಆದರೂ ನಮಗೆ ಯಾವುದೇ ಸೇವಾ ಭದ್ರತೆ ಇಲ್ಲದೆ ಕನಿಷ್ಠ ವೇತನದಲ್ಲಿ ಕೆಲಸ ಮಾಡುತ್ತಿದ್ದೇವೆ. ಆದ್ದರಿಂದ ನಗರ ಸ್ಥಳೀಯ ಸಂಸ್ಥೆಗಳ ಹೊರ ಗುತ್ತಿಗೆ ಆಧಾರಿತ ನೌಕರರನ್ನು ನೇರ ವೇತನಕ್ಕೆ ಒಳಪಡಿಸುವ ಅಗತ್ಯವಿದೆ ಎಂದು  ಒತ್ತಾಯಿಸಿದರು.

ನೇರ ವೇತನಕ್ಕೆ ಒಳಪಡಿಸುವುದರಿಂದ ಸರ್ಕಾರ ಅನಗತ್ಯವಾಗಿ ಜಿಎಸ್‌ಟಿ ಹೆಸರಿನಲ್ಲಿ ಕೇಂದ್ರ ಸರ್ಕಾರಕ್ಕೆ ಕೊಡುತ್ತಿರುವ 100 ಕೋಟಿಗೂ ಹೆಚ್ಚಿನ ಹಣ ಉಳಿತಾಯವಾಗಲಿದೆ. ಅಲ್ಲದೆ ಗುತ್ತಿಗೆ ಏಜೆನ್ಸಿಗಳಿಗೆ ನೀಡುವ ಸೇವಾ ಶುಲ್ಕವೂ ಉಳಿಯಲಿದೆ ಎಂಬುದನ್ನು ಸರ್ಕಾರ ಮನಗಾಣಬೇಕೆಂದರು.

Advertisement

ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಆರ್‌.ಎಲ್‌. ರಾಜಶೇಖರ್‌, ಖಜಾಂಚಿ ವೈ. ಆರ್‌. ರಂಗನಾಥ್‌, ಪ್ರಧಾನ ಕಾರ್ಯದರ್ಶಿ ಪಿ. ವೀರೇಂದ್ರ, ಸದಸ್ಯರಾದ ದ್ಯಾಮಣ್ಣ, ಶ್ರೀನಿವಾಸ್‌, ಹನುಮಂತ, ಸಿದ್ದೇಶ್‌, ಚಂದ್ರಶೇಖರ್‌, ಕಾರ್ತಿಕ್‌, ಫಯಾಜ್‌ ಅಹಮ್ಮದ್‌, ಮಂಜುನಾಥ್‌ ಆರ್‌., ಮಂಜುನಾಥ್‌ ಡಿ., ನರಸಿಂಹಮೂರ್ತಿ, ಅಭಿಷೇಕ್‌ ಭಾಗವಹಿಸಿದ್ದರು. ಅಂಬೇಡ್ಕರ್‌ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಕೆ. ರಾಮಚಂದ್ರ, ಕಾರ್ಯಾಧ್ಯಕ್ಷ ಚಂದ್ರಪ್ಪ ಘಾಟ್‌, ತಾಲೂಕು ಅಧ್ಯಕ್ಷ ಶಿವಕುಮಾರ್‌, ನಗರಾಧ್ಯಕ್ಷ ಸಾದಿಕ್‌, ತಾಲೂಕು ಕಾರ್ಯದರ್ಶಿ ಶಿವರಾಜ್‌, ದಲಿತ ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಘಾಟ್‌ ರವಿ ಬೆಂಬಲ ವ್ಯಕ್ತಪಡಿಸಿದರು. ನಗರಸಭೆ ಸದಸ್ಯರಾದ ಎಂ.ಡಿ. ಸಣ್ಣಪ್ಪ, ಬಿ.ಎನ್‌. ಪ್ರಕಾಶ್‌, ಎಸ್‌. ಅನಿಲ್‌ಕುಮಾರ್‌, ಪರಿಸರ ಅಭಿಯಂತರರಾದ ಎಂ.ಡಿ. ಫೈರೋಜ್‌, ಆರೋಗ್ಯ ನಿರೀಕ್ಷಕ ಸುನೀಲ್‌, ಅಂಜನಪ್ಪ, ಪಿಎಸ್‌ಐ ಅನಸೂಯಮ್ಮ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next