Advertisement

ದುರಹಂಕಾರ ಹುತ್ತದಿಂದ ಹೊರ ಬನ್ನಿ

01:19 PM Oct 25, 2018 | Team Udayavani |

ಕಲಬುರಗಿ: ಜಗತ್ತಿನಲ್ಲಿ ಭಾರತವನ್ನು ರಾಮಾಯಣ ಹಾಗೂ ಮಹಾಭಾರತ ಮಹಾಕಾವ್ಯಗಳಿಂದಲೇ ಇಂದಿಗೂ ಗುರುತಿಸಲಾಗುತ್ತಿದ್ದು, ಮಹರ್ಷಿ ವಾಲ್ಮೀಕಿ ರಾಮಾಯಣ ರಚಿಸದೆ ಹೋಗಿದ್ದರೆ ದೇಶದಲ್ಲಿ ರಾಮರಾಜ್ಯ ಹಾಗೂ ಬಂಧುತ್ವದ ಪರಿಕಲ್ಪನೆಯೇ ಇರುತ್ತಿರಲಿಲ್ಲ ಎಂದು ರಾಷ್ಟ್ರೋತ್ಥಾನ ಶಾಲೆ ಆಡಳಿತಾಧಿಕಾರಿ ಕೃಷ್ಣ ಜೋಷಿ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ನಗರದ ಡಾ| ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಬುಧವಾರ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. 

ರತ್ನಾಕರನಾಗಿದ್ದ ವಾಲ್ಮೀಕಿ ಜ್ಞಾನ ಸಂಪಾದನೆಗಾಗಿ ತಪಸ್ಸು ಕುಳಿತಾಗ ವಾಲ್ಮೀಕ (ಹುತ್ತ)ಬೆಳೆಯಿತು. ಆದ್ದರಿಂದ ಆತನ ಹೆಸರು ವಾಲ್ಮೀಕಿ ಆಯಿತು. ನಂತರ ಹುತ್ತದಿಂದ ಹೊರಬಂದ ವಾಲ್ಮೀಕಿ ನಾರದ ಮುನಿಯಿಂದ ಜ್ಞಾನ ಪಡೆದು 24 ಸಾವಿರ ಶ್ಲೋಕಗಳನ್ನು ಹೊಂದಿರುವ ರಾಮಾಯಣ
ಮಹಾಕಾವ್ಯ ರಚಿಸಿದ ಎಂದರು.

ರಾಮಾಯಣದ ಮೂಲಕ ಸಮಾಜಕ್ಕೆ ಸಭ್ಯ ಸಂಸ್ಕಾರವನ್ನು ವಾಲ್ಮೀಕಿ ನೀಡಿದ್ದು, ಸ್ವಾರ್ಥ, ದುರಹಂಕಾರವೆಂಬ ಹುತ್ತದಿಂದ ಜನತೆ ಹೊರ ಬರಬೇಕು. ಕೊಲೆ, ದೌರ್ಜನ್ಯ, ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚಾದ ಇಂತಹ ಪರಿಸ್ಥಿತಿಯಲ್ಲಿ ರಾಮಯಾಣವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.

ದೇಶದಲ್ಲಿ ಮಾತ್ರವಲ್ಲದೇ ರಾಜ್ಯದಲ್ಲೂ ವಾಲ್ಮೀಕಿ ಸಮುದಾಯದ ವೀರರು, ರಾಜ, ಮಹಾರಾಜರು ಆಳ್ವಿಕೆ ಮಾಡಿರುವ ಉದಾಹರಣೆಗಳಿವೆ. ಸ್ವಾತಂತ್ರ್ಯ ಹೋರಾಟದಲ್ಲೂ ವಾಲ್ಮೀಕಿ ಸಮುದಾಯ ಮಹತ್ವದ ಪಾತ್ರ ವಹಿಸಿದೆ. ವಾಲ್ಮೀಕಿ ಜನಾಂಗದ ವಂಶಾವಳಿಯಲ್ಲಿಯೆ ವೀರತ್ವ, ಶೂರತ್ವವಿದೆ. ದೇಶ ಸೇವೆಯಲ್ಲಿ ಸಮುದಾಯದ ಯುವಕರು ತೊಡಗಿಕೊಳ್ಳಲು ವಿಶೇಷ ಅವಕಾಶ ಮಾಡಿಕೊಡಬೇಕು ಹಾಗೂ ಸೇನೆಯಲ್ಲಿ ಸಿಖ್‌ ರೆಜಿಮೆಂಟ್‌ನಂತೆ ನಾಯಕ ರೆಜಿಮೆಂಟ್‌ ಸ್ಥಾಪಿಸಬೇಕೆಂದು ಸಲಹೆ ನೀಡಿದರು.

Advertisement

ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ರಾಮಾಯಾಣ ಮಹಾಕಾವ್ಯದ ಮೂಲಕ ಶ್ರೀರಾಮನ ದರ್ಶನ ಮಾಡಿಸಿದ ಹಾಗೂ ರಾಮರಾಜ್ಯದ ಕಲ್ಪನೆ ನೀಡಿದ ಕೀರ್ತಿ ಮಹರ್ಷಿ ವಾಲ್ಮೀಕಿಗೆ ಸಲ್ಲುತ್ತದೆ. ಮಹರ್ಷಿ ವಾಲ್ಮೀಕಿ ಚಿಂತನೆಗಳನ್ನು ಎಲ್ಲರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.

ವಾಲ್ಮೀಕಿ ಸಮಾಜದ ಬೇಡಿಕೆಯಾದ ಮೀಸಲಾತಿ ಹೆಚ್ಚಿಸುವ ಕುರಿತು ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ನಗರದಲ್ಲಿ ವಾಲ್ಮೀಕಿ ಪ್ರತಿಮೆ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು. ಇದಕ್ಕೆ ಬೇಕಾದ ಸಹಕಾರವನ್ನು ನೀಡುತ್ತೇನೆ ಎಂದು ಹೇಳಿದರು.

ಮಹಾನಗರ ಪಾಲಿಕೆ ಮೇಯರ್‌ ಮಲ್ಲಮ್ಮ ಸಿದ್ರಾಮಪ್ಪ ವಳಕೇರಿ ಉದ್ಘಾಟಿಸಿದರು. ಇದೇ ವೇಳೆ ಲೇಖಕ ಡಾ| ಎಚ್‌.ಕೆ. ನರಸಿಂಹಮೂರ್ತಿ ಅವರ “ಕುವೆಂಪು ಕಂಡ ವಾಲ್ಮೀಕಿ’ ಪುಸ್ತಕವನ್ನು ಗಣ್ಯರು ಬಿಡುಗಡೆಗೊಳಿಸಿದರು. ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ, ಪಾಲಿಕೆ ಆಯುಕ್ತ ಪೆದ್ದಪ್ಪಯ್ಯ ಆರ್‌. ಎಸ್‌., ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಪಿ.ರಾಜಾ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಕಲಬುರಗಿ ಜಿಲ್ಲಾ ವಾಲ್ಮೀಕಿ ನೌಕಕರ ಸಂಘದ ಗೌರವಾಧ್ಯಕ್ಷ ಅಮರೇಶ ಜಾಗಿರದಾರ, ಹೈ.ಕ ವಾಲ್ಮೀಕಿ ಸಮಾಜದ ಅಧ್ಯಕ್ಷ ನಂದಕುಮಾರ ಮಾಲಿಪಾಟೀಲ ಹಾಜರಿದ್ದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್‌. ಸತೀಶ ಸ್ವಾಗತಿಸಿದರು, ರಾಜಶೇಖರ ನಿರೂಪಿಸಿದರು. ಇದಕ್ಕೂ ಮುನ್ನ ಸರ್ದಾರ ವಲ್ಲಭಭಾಯಿ ಪಟೇಲ್‌ ವೃತ್ತದಿಂದ ರಂಗಮಂದಿರದವರೆಗೆ ಜರುಗಿದ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಭವ್ಯ ಮೆರವಣಿಗೆಗೆ ಜಿಪಂ ಅಧ್ಯಕ್ಷೆ ಸುವರ್ಣಾ
ಹಣಮಂತರಾಯ ಮಲಾಜಿ ಚಾಲನೆ ನೀಡಿದರು.  

Advertisement

Udayavani is now on Telegram. Click here to join our channel and stay updated with the latest news.

Next