ಮೈಸೂರು: ಜಾತಿಗಳೆಂಬುದು ಭಯಾನಕ. ಮೊದಲು ಅಂತಹ ವಾತಾವರಣದಿಂದ ಹೊರಬರಬೇಕು ಎಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಾಗೂ ವಿಜಯಲಕ್ಷ್ಮೀ ಪ್ರಕಾಶನ ಹಾಗೂ ಬಳಗ ಮೈಸೂರು ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ನೀಲಗಿರಿ ತಳವಾರ ಹಾಗೂ ಡಾ.ಯೋಗೇಶ್ ಸಂಪಾದಿಸಿರುವ ಬಸವರಾಜು ಕುಕ್ಕರಹಳ್ಳಿ ಕಥಾಲೋಕ ಪುಸ್ತಕ ಲೋಕಾರ್ಪಣೆ ಮತ್ತು ಕಥಾಸಂಭ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮಲ್ಲಿ 1200ಕ್ಕೂ ಹೆಚ್ಚು ಜಾತಿಗಳು ಸೃಷ್ಟಿಯಾಗಿವೆ. ಈ ಜಾತಿಗಳ ಹೆಸರು ಕೇಳಿದರೆ ಭಯವಾಗುತ್ತದೆ. ಕಲ್ಲು, ಮಣ್ಣು, ಮರ-ಗಿಡಗಳು ಪವಿತ್ರ. ಆದರೆ, ಮನುಷ್ಯ ಪವಿತ್ರ ಅಲ್ಲ ಎಂಬಂತಹ ವಾತಾವರಣ ಸೃಷ್ಟಿಯಾಗಿದೆ. ಇಂತಹವುಗಳಿಂದ ಮೊದಲು ಹೊರ ಬರಬೇಕು. ಇನ್ನೊಬ್ಬರ ಜೀವನ ಸುಖದಾಯಕಗೊಳಿಸುವುದೇ ಸಾಹಿತ್ಯ. ಅದರಲ್ಲೂ ಕಥಾ ಸಾಹಿತ್ಯಗಳು ಎಲ್ಲರನ್ನೂ ಸಂತೋಷವಾಗಿಯೇ ಇಡುತ್ತವೇ ಎಂದರು.
ನಮ್ಮ ಮನಸ್ಸನ್ನು ಸಂತೋಷಗೊಳಿಸಿಕೊಳ್ಳಲು ಕಥೆಗಳನ್ನು ಬರೆಯುತ್ತೇವೆ. ಕುಕ್ಕರಹಳ್ಳಿ ಬಸವರಾಜು ನನ್ನ ಹಳೇ ಸ್ನೇಹಿತರು. ಅವರ ಕಥೆಗಳನ್ನು ಓದಿದ್ದೇನೆ. ಟೀಕೆ ಇಲ್ಲದೇ ತಮ್ಮ ಕೃತಿಗಳ ಮೂಲಕ ಮನೆ ಮಾತಾಗಿದ್ದಾರೆ. ವಾಗ್ವಾದ ಸೃಷ್ಟಿಸದಂತೆ ಕೃತಿಗಳನ್ನು ರಚಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಕನ್ನಡ ಸಾಹಿತ್ಯ ಅಂತಃಕರಣಕ್ಕೆ ಹೆಸರು ವಾಸಿಯಾಗಿದೆ. ಕುವೆಂಪು ಕನ್ನಡ ಸಾಹಿತ್ಯವನ್ನು ದಿಗಂತಕ್ಕೇರಿಸಿದರು. ಅದರಲ್ಲೂ ಗ್ರಾಮೀಣ ಲೇಖಕರು ಕನ್ನಡಕ್ಕೆ ಶಕ್ತಿ ತುಂಬಿದ್ದಾರೆ. ಗ್ರಾಮೀಣ ಲೇಖಕರಿಂದಲೇ ಕನ್ನಡ ಉಳಿದಿದೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದರು.
ವಿಮರ್ಶಕ ಡಾ.ಎಚ್.ಎಸ್.ರಾಘವೇಂದ್ರ ರಾವ್ ಕೃತಿ ಬಿಡುಗಡೆ ಮಾಡಿದರು. ಮೈಸೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಅಬ್ದುಲ್ ರಶೀದ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಡಾ.ಪ್ರೀತಿ ಶ್ರೀಮಂಧರಕುಮಾರ್, ಲೇಖಕ ಬಸವರಾಜು ಕುಕ್ಕರಹಳ್ಳಿ, ಡಾ.ನೀಲಗಿರಿ ತಳವಾರ, ಡಾ.ಎನ್. ಯೋಗೇಶ್, ಭವಾನಿ ಸಂಜಯ್ ಇನ್ನಿತರರು ಇದ್ದರು.