ವಾಡಿ: ಬಯಲು ಶೌಚಾಲಯ ಬಳಕೆ ನಿಲ್ಲಿಸಿ, ವೈಯಕ್ತಿಕ ಶೌಚಾಲಯಕ್ಕೆ ಆದ್ಯತೆ ಕೊಡಿ. ಪ್ಲಾಸ್ಟಿಕ್ ಬಳಕೆ ನಿಷೇಧಿಸಿ, ಹೊಲಸಿನಿಂದ ಹೊರ ಬನ್ನಿ ಎಂದು ಹೇಳಿ ಹೇಳಿ ಸಾಕಾಗಿದೆ. ನನ್ನ ಮಾತೇ ಕೇಳುತ್ತಿಲ್ಲ. ಅಲ್ಲೇ ಹೊಲಸಿನ್ಯಾಗೆ ಇರ್ತೀನಿ ಅಂತೀರಿ, ಇರ್ರಿ ನನಗೇನು. ನೋಡಿ ಪ್ರಾಮಾಣಿಕವಾಗಿ ಕೆಲಸ ಮಾಡೋದಿದ್ರೆ ಮಾಡ್ರಿ, ಇಲ್ಲದಿದ್ದರೆ ಮನೆಗೆ ಹೋಗ್ರಿ ಎಂದು ಶಾಸಕ, ಐಟಿಬಿಟಿ ಹಾಗೂ ಪ್ರವಾಸೋಧ್ಯಮ ಸಚಿವ ಪ್ರಿಯಾಂಕ್ ಖರ್ಗೆ ಪುರಸಭೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಪುರಸಭೆಯಲ್ಲಿ ಶನಿವಾರ ಸಂಜೆ ಸುಮಾರು ಮೂರು ತಾಸು ವಾರ್ಡ್ ಸದಸ್ಯರ ಹಾಗೂ ಅಧಿಕಾರಿಗಳ ಸಭೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದ ಅವರು, ನೀರು ಮತ್ತು ಮನೆಗಳ ಕರ ವಸೂಲಿ ಲೆಕ್ಕಪತ್ರ ಸರಿಯಾಗಿಲ್ಲ. ವಿವಿಧ ಅಭಿವೃದ್ಧಿಗಳಿಗಾಗಿ ರೂಪಿಸಲಾಗಿರುವ ಕ್ರಿಯಾಯೋಜನೆ ಪಟ್ಟಿ ವಿಶ್ವಾಸಾರ್ಹವಾಗಿಲ್ಲ. ವಸ್ತುಗಳ ಮಾರ್ಕೇಟ್ ಬೆಲೆ ತಿಳಿಯದೆ ಮೂತ್ರಾಲಯ, ಕುಂದನೂರ ಜಾಕ್‌ವೆಲ್ ಮತ್ತು ಪೈಪ್ ದುರಸ್ತಿಗೆ ಬೇಕಾಬಿಟ್ಟಿ ಅಂದಾಜು ವೆಚ್ಚ ಬರೆಯಲಾಗಿದೆ. ಇದರಿಂದ 28 ಲಕ್ಷ ರೂ. ಚರಂಡಿಗೆ ಚೆಲ್ಲಿದಂತಾಗಿದೆ ಎಂದು ಮುಖ್ಯಾಧಿಕಾರಿ ಶಂಕರ ಕಾಳೆ ಹಾಗೂ ಕಿರಿಯ ಅಭಿಯಂತರ ಅಶೋಕ ಪುಟ್‌ಫಾಕ್ ಅವರನ್ನು ತರಾಟೆಗೆ ತೆಗೆದುಕೊಂಡರು.
ನಗರದಲ್ಲಿ ಹಂದಿ ಸಾಕಾಣಿಕೆ ಕೂಡಲೇ ಬಂದ್ ಮಾಡಿ. ಸಾರ್ವಜನಿಕ ಶೌಚಾಲಯ, ರಸ್ತೆ, ಚರಂಡಿ, ಸಮುದಾಯ ಭವನಗಳ ಕಾಮಗಾರಿಗಳ ದೀರ್ಘ ವಿಳಂಬಕ್ಕೆ ಕಾರಣವಾದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಮರು ಟೆಂಡರ್ ಕರೆಯಿರಿ. ಆ ಪಟ್ಟಿಯನ್ನು ಸೋಮವಾರ ಫಲಕಕ್ಕೆ ಅಂಟಿಸಬೇಕು. ಅನಧಿಕೃತ ನಳ ಸಂಪರ್ಕ ಕಡಿತಗೊಳಿಸಿ ಹಾಗೂ ನಗರೋತ್ಥಾನದ ಕೆಲಸ ಎಲ್ಲೆಲ್ಲಿ ಎಷ್ಟೆಷ್ಟಾಗಿದೆ ಎಂಬುದರ ಬಗ್ಗೆ ನನಗೆ ವರದಿ ಕೊಡಿ. ಜನರಲ್ಲಿ ಶೌಚಾಲಯ ಜಾಗೃತಿ ಮೂಡಿಸಲು ಎಲ್ಲಾ ಪ್ರಚಾರ ಕ್ರಮಗಳನ್ನು ಕೈಗೊಳ್ಳಿ. ಹೊರಗಿನಿಂದ ಬರುವವರಿಗಾಗಿ ಸುಲಭ ಶೌಚಾಲಯ ನಿರ್ಮಿಸಲು ಸ್ಥಳ ನಿಗದಿ ಮಾಡಿರಿ ಎಂದು ಆದೇಶಿಸಿದರು.
ಯಾವ ವಾರ್ಡ್‌ನಲ್ಲಿ ಹೆಚ್ಚು ವೈಯಕ್ತಿಕ ಶೌಚಾಲಯ ನಿರ್ಮಿಸಲಾಗುತ್ತದೋ ಆ ವಾರ್ಡ್‌ಗೆ ಶಾಸಕರ ನಿಧಿಯಿಂದ ಹೆಚ್ಚಿನ ಅನುದಾನ ನೀಡಲಾಗುವುದು. ಅಧಿಕಾರಿಗಳ ತಪ್ಪನ್ನು ಗುರುತಿಸಲು ಸದಸ್ಯರಾದವರು ಹೋಂ ವರ್ಕ್ ಮಾಡಿಕೊಂಡು ಬರಬೇಕು ಎಂದು ಸಲಹೆ ನೀಡಿದರಲ್ಲದೇ, ಮುಖ್ಯ ರಸ್ತೆ ಮೇಲೆ ಭಾರಿ ವಾಹನಗಳು ನಿಲ್ಲದಂತೆ ಎಚ್ಚರವಹಿಸಲು ಪೊಲೀಸರಿಗೆ ಸೂಚಿಸಿದರು.
ಪುರಸಭೆ ಅಧಿಕಾರಿಗಳು ಸೇರಿದಂತೆ ಅಧ್ಯಕ್ಷೆ ಮೈನಾಬಾಯಿ ರಾಠೊಡ, ಉಪಾಧ್ಯಕ್ಷ ಮಲ್ಲಯ್ಯ ಗುತ್ತೇದಾರ ಹಾಗೂ ಚುನಾಯಿತ ಸದಸ್ಯರು ಪಾಲ್ಗೊಂಡಿದ್ದರು. ಕೆಲ ಸದಸ್ಯರು ಅಭಿವೃದ್ಧಿ ಕುರಿತು ಸಚಿವರಿಗೆ ದೂರುಗಳನ್ನು ನೀಡಿದರು