ಮುಂದೆ ಕುಳಿತವರು ಜಾಗ್ರತೆಯಿಂದ ಬಾಗಿಲಿನ ಕಡೆಗೆ ನೋಡುತ್ತ ಮೇಷ್ಟ್ರು ಬಂದರೆ ಸೂಚನೆ ಕೊಡಬೇಕಿತ್ತು. ಆದರೆ ಅವತ್ತು ಅವರೂ ಮೈಮರೆತು ಹರಟೆಗೆ ಕುಳಿತಿದ್ದರು. ಹೀಗಿದ್ದಾಗಲೇ ದೂರ್ವಾಸ ಮುನಿ ಎಂದೇ ಹೆಸರಾಗಿದ್ದ ಎಚ್.ಓ.ಡಿ ತರಗತಿಗೆ ಬಂದುಬಿಟ್ಟರು!
ಈ ಘಟನೆ ನಡೆದು, ಇಲ್ಲಿಗೆ ಸುಮಾರು ಒಂದು ತಿಂಗಳು ಕಳೆಯಿತೋ ಏನೋ: ಅಂದೂ ಎಂದಿನಂತೆ ತರಗತಿಗಳು ಪ್ರಾರಂಭವಾದವು. ತರಗತಿ ಅಂದ ಮೇಲೆ ಗಲಾಟೆಯಾಗುವುದು ಸಹಜ. ಆದರೆ ನಾವು ಒಂದು ಮಿತಿಯನ್ನು ಮೀರಿ ತುಸು ಜೋರಾಗಿಯೇ ಗಲಾಟೆ ಮಾಡುತ್ತಿದ್ದೆವು. ಯಾರಾದರೂ ಶಿಕ್ಷಕರು ಬಂದರೆ ಥಟ್ಟನೆ ಒಬ್ಬರಿಂದೊಬ್ಬರಿಗೆ ಸಿಗ್ನಲ್‌ಗಳು ತಲುಪಿ ಗಲಾಟೆಯು ಏಕ್‌ದಂ ನಿಂತು ಹೋಗುತ್ತಿತ್ತು. ಎಲ್ಲಾ ಶಿಕ್ಷಕರಂತೆ ನಮ್ಮ ಶಿಕ್ಷಕರೂ ಕೂಡ ವೇಳಾಪಟ್ಟಿಯ ಪ್ರಕಾರವೇ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ಅಂದು ಒಬ್ಬ ಶಿಕ್ಷಕರು ಗೈರು ಹಾಜರಿದ್ದರಿಂದ ನಮ್ಮ ಹೆಚ್.ಒ.ಡಿ ಸರ್ ಕ್ಲಾಸ್ ಮಾಡಲು ಬಂದರು.
ಹೆಚ್.ಓ.ಡಿ ಸರ್ ಎಂದರೆ ನಮಗೆ ತುಂಬಾನೆ ಭಯ, ಭಯ ಎನ್ನುವುದಕ್ಕಿಂತ ಇವರ ಮೇಲಿರುವ ಅತಿಯಾದ ಗೌರವ ಎಂದರೆ ತಪ್ಪಾಗಲಾರದು. ಇವರ ಕೆಲವು ಪಾಲಿಸಿಗಳಿವೆ, ತರಗತಿಗೆ ಐದು ಸೆಕೆಂಡ್ ತಡವಾಗಿ ಬಂದರೂ ಕ್ಲಾಸಿಗೆ ಸೇರಿಸುವುದಿಲ್ಲ, ತರಗತಿಯಲ್ಲಿ ಗುಸುಗುಸು ಪಿಸುಪಿಸು ಮಾಡಿದರೆ ಸಹಿಸುವುದಿಲ್ಲ. ಇನ್ನೊಂದು ಪಾಲಿಸಿ ಎಂದರೆ ತರಗತಿಯ ಮೊದಲನೆ ಡೆಸ್ಕ್ ಖಾಲಿ ಬಿಟ್ಟು ಕೂರುವಂತಿಲ್ಲ. ಬಹುಶಃ ಅಂದು ನಮ್ಮ ಗ್ರಹಚಾರ ಸರಿ ಇರಲಿಲ್ಲ ಎನಿಸುತ್ತದೆ. ಏಕೆಂದರೆ, ಅಧ್ಯಾಪಕರು ರಜೆ ಇರುವುದರಿಂದ ತರಗತಿಯನ್ನು ಯಾರೂ ತೆಗೆದುಕೊಳ್ಳುವುದಿಲ್ಲ ಎಂದು ತಿಳಿದು ಮೊದಲನೆ ಬೆಂಚ್ ಖಾಲಿ ಬಿಟ್ಟು ನಮ್ಮ ಲೋಕದಲ್ಲಿ ನಾವು ತೇಲುತ್ತ ಜೋರಾಗಿ ಕಿರುಚುತ್ತಿದ್ದೆವು. ಯಾವುದೇ ಮುನ್ಸೂಚನೆಯನ್ನು ಕೊಡದೆ ಬರುವ ಸುನಾಮಿ, ಭೂಕಂಪಗಳಂತೆ ನಮ್ಮ ಹೆಚ್.ಓ.ಡಿ ಸರ್ ಬಂದರು. ಮುನ್ಸೂಚನೆ ಕೊಡುತ್ತಿದ್ದ ನಮ್ಮ ಎಲ್ಲಾ ಗೆಳೆಯರು ಮೈಮರೆತು ಹರಟೆಯ ಕಾರ್ಯದಲ್ಲಿ ನಿರತರಾಗಿದ್ದರಿಂದ ನಮಗೆ ಸರ್ ಬಂದರೆಂಬ ಸಿಗ್ನಲ್ ಸಿಗಲೇ ಇಲ್ಲ.
ತರಗತಿಗೆ ಬಂದ ಗುರುಗಳು ಮುಖದಲ್ಲಿ ಬೆಟ್ಟದಷ್ಟು ಜಾÌಲಾಮುಖೀಯೆಂಬ ಕೋಪವನ್ನು ತುಂಬಿಕೊಂಡು, “ಆಲ್ ಲಾಸ್ಟ್ ಬೆಂಚ್ ಸ್ಟೂಡೆಂಟ್ಸ್ ಗೆಟ್ ಔಟ್ ಫÅಮ್ ಮೈ ಕ್ಲಾಸ್’ ಎಂದರು. ಕೊನೆ ಬೆಂಚಿನಲ್ಲಿದ್ದ ನಾನು ಮತ್ತು ನನ್ನಿಬ್ಬರು ಸ್ನೇಹಿತರು ಮರು ಮಾತನಾಡದೆ ಇಂಗು ತಿಂದ ಮಂಗನಂತೆ ಪೆಚ್ಚು ಮೋರೆಯನ್ನು ಹೊತ್ತು ತರಗತಿಯಿಂದ ಹೊರ ನಡೆದೆವು. ನಮಗೆ ಹೊರಗೆ ಹೋಗಿದ್ದಕ್ಕಾಗಲಿ, ಗೆಟ್‌ಔಟ್ ಅನ್ನಿಸಿಕೊಂಡದ್ದಕ್ಕಾಗಲಿ ಅಷ್ಟೇನೂ ದುಃಖವಾಗಲಿಲ್ಲ. ಆದರೆ ಅಂದು ನಮ್ಮಿಬ್ಬರು ಗೆಳೆಯರು ಕಲ್ಚರಲ್ ಡೇ ಎಂದು ಹೊಸದಾದ ಪಂಚೆ ಮತ್ತು ಅಂಗಿಯನ್ನು ಧರಿಸಿ ವಿಶೇಷವಾಗಿ ಅಲಂಕಾರ ಮಾಡಿಕೊಂಡು ಬಂದಿದ್ದರು. ಅವರೂ ಕೂಡ ನನ್ನ ಜೊತೆ ತರಗತಿಯಿಂದ ಹೊರ ನಡೆಯುವಾಗ ಅವರ ಮುಖ ಪಾಪ ಜೋತು ಬಿದ್ದದ್ದನ್ನು ನೆನೆದರೆ ಈಗಲೂ ನಗು ಬರುತ್ತದೆ. ನನ್ನ ತರ್ಲೆ ಗೆಳೆಯರು ಒಟ್ಟಾಗಿ ಸೇರಿಕೊಂಡಾಗ ಈ ಘಟನೆಯನ್ನು ನೆನೆದು ಪಂಚೆ ಗೆಳೆಯರನ್ನು ಅಣಕಿಸುತ್ತ ನಗುವುದುಂಟು.
– ಗಿರೀಶ ಜಿ. ಆರ್., ಶಿವಮೊಗ್ಗ