ಉಡುಪಿ: ನರ್ಸಿಂಗ್ ಓದುತ್ತಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಜತೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಆವಶ್ಯಕತೆಯಿದೆ ಎಂದು ವಿಶೇಷ ಜಂಟಿ ಸದನ ಸಮಿತಿ, ಉಪ ಸಮಿತಿಯ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ನರ್ಸಿಂಗ್ ಹಾಗೂ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜಿಗೆ ಮೂಲಸೌಕರ್ಯ ಕಲ್ಪಿಸುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂಡಿಯನ್ ನರ್ಸಿಂಗ್ ಕೌನ್ಸಿಲ್ ವಿಧಿಸಿರುವ ನಿಯಮಗಳ ಅನುಸಾರ ನರ್ಸಿಂಗ್ ಮತ್ತು ಅಲೈಡ್‌ಹೆಲ್ತ್ ಸೈನ್ಸಸ್ ಕಾಲೇಜುಗಳನ್ನು ನಡೆಸ ಬೇಕು. ಆದರೆ ಬಹಳಷ್ಟು ಕಾಲೇಜುಗಳಲ್ಲಿ ಬೋಧಕರ ಕೊರತೆ, ಪ್ರಯೋಗಾಲಯಗಳು ವ್ಯವಸ್ಥಿತವಾಗಿಲ್ಲ. ಕಾಲೇಜುಗಳ ವಾಸ್ತವಿಕತೆ ಪರಿಶೀಲಿಸಿ, ವರದಿಯನ್ನು ಸದನಕ್ಕೆ ನೀಡಲಾಗುವುದು ಎಂದರು.
ನರ್ಸಿಂಗ್ ಕಾಲೇಜುಗಳಿಗೆ ಹೆಚ್ಚಾಗಿ ಹೊರರಾಜ್ಯದ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಕೆಲವು ವಿದ್ಯಾರ್ಥಿಗಳು ತರಗತಿಗೆ ಹಾಜರಾಗದೇ ನೇರವಾಗಿ ಪರೀಕ್ಷೆ ಬರೆದು ಪ್ರಮಾಣಪತ್ರ ಪಡೆಯುತ್ತಿದ್ದಾರೆ ಎಂಬ ದೂರುಗಳು ಇವೆ. ಇದಕ್ಕೆ ಈಗಿಂದಲೇ ಕಡಿವಾಣ ಹಾಕಬೇಕು ಎಂದರು.
ಸಮಿತಿ ಸದಸ್ಯ ಎಸ್.ವಿ ಸಂಕ ನೂರ ಮಾತನಾಡಿ, ಹೊಸ ನರ್ಸಿಂಗ್ ಕಾಲೇಜು ಪ್ರಾರಂಭಿಸುವ ಸಂದರ್ಭ ನಿಯಮಾವಳಿ ಪಾಲಿಸದಿರುವುದು ಗಮನಕ್ಕೆ ಬಂದಿದೆ ಎಂದರು.
ನರ್ಸಿಂಗ್ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸಮಿತಿಯ ಸಲಹೆಗಳನ್ನು ಅನುಷ್ಠಾನ ಮಾಡಲಾಗುವುದು ಎಂದು ಡಿ.ಸಿ. ಕೂರ್ಮಾ ರಾವ್ ಹೇಳಿದರು.
ಸಮಿತಿ ಸದಸ್ಯರಾದ ಮುನಿರಾಜು ಗೌಡ, ಡಾ| ಅವಿನಾಶ್ ಉಮೇಶ್ ಜಾಧವ್, ಅಪರ ಕಾರ್ಯದರ್ಶಿ ಎಸ್. ನಿರ್ಮಲಾ, ಎಡಿಸಿ ವೀಣಾ ಬಿ.ಎನ್., ಡಿಎಚ್‌ಒ ಡಾ| ನಾಗಭೂಷಣ ಉಡುಪ, ಜಿಲ್ಲಾ ಸರ್ಜನ್ ಡಾ| ಮಧುಸೂದನ ನಾಯಕ್, ವಿವಿಧ ನರ್ಸಿಂಗ್ ಕಾಲೇಜುಗಳು ಪ್ರತಿನಿಧಿಗಳು ಉಪಸ್ಥಿತರಿದ್ದರು.