ಸಿಂಧನೂರು: ಲಿಂಗಾಯತ ಸಮುದಾಯದ ಎಲ್ಲ ಉಪಜಾತಿಗಳು ಜಾತಿ ಪಟ್ಟಿಯಲ್ಲಿದ್ದರೂ ಲಾಳಗೊಂಡ ಸಮಾಜಕ್ಕೆ ನ್ಯಾಯ ದೊರಕಿಲ್ಲ. ನಮ್ಮ ಜಾತಿಯನ್ನು ಕೂಡ ಪಟ್ಟಿಯಲ್ಲಿ ಸೇರಿಸಲು ಒತ್ತಾಯಿಸಿ ಕೆಲವೇ ದಿನಗಳಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ಅಖೀಲ ಕರ್ನಾಟಕ ಲಾಳಗೊಂಡ ಸಮಾಜದ ರಾಜ್ಯಾಧ್ಯಕ್ಷ ಹರವಿ ಬಸನಗೌಡ ಕಂಪ್ಲಿ ಹೇಳಿದರು.
ನಗರದ ಗಂಗಾವತಿ ರಸ್ತೆಯ ದುದ್ದುಪುಡಿ ಮಹಿಳಾ ಮಹಾವಿದ್ಯಾಲಯದಲ್ಲಿ ಭಾನುವಾರ ತಾಲೂಕು ಲಾಳಗೊಂಡ ಸಮಾಜದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯದ 14 ಜಿಲ್ಲೆಗಳಲ್ಲಿ ಲಾಳಗೊಂಡ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲೂ ಅತ್ಯಧಿಕ ಜನಸಂಖ್ಯೆಯಿದೆ. ಆದರೂ, ಸಮಾಜಕ್ಕೆ ಹೆಚ್ಚಿನ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂದರು.
ಜಾತಿ ಪಟ್ಟಿಯಲ್ಲಿ ಲಾಳಗೊಂಡ ಸೇರಿಸುವಂತೆ ಮೊದಲ ಬಾರಿಗೆ ಯಡಿಯೂರಪ್ಪ ಅವರನ್ನು ಭೇಟಿ ಯಾಗಿ ಮನವಿ ಸಲ್ಲಿಸಲಾಗಿತ್ತು. ಅವರು ಹಿಂದುಳಿದ ವರ್ಗಕ್ಕೆ ಬರೆದಿದ್ದರು. ಕಾಂತರಾಜ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಸಮಿತಿ ಲಾಳಗೊಂಡ ಜಾತಿ ಪಟ್ಟಿಯಲ್ಲಿ ಸೇರಿಸಲು ಶಿಫಾರಸು ಮಾಡಿತ್ತು. ಎರಡನೇ ಬಾರಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮತ್ತೊಮ್ಮೆ ಭೇಟಿಯಾಗಿ ಒತ್ತಡ ಹಾಕಲಾಗಿತ್ತು. ಅದನ್ನು ಸಚಿವ ಸಂಪುಟ ಸಭೆಗೆ ಶಿಫಾರಸು ಮಾಡಿದ್ದರು. ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಕಲುಬರಗಿಯಲ್ಲಿ ನಡೆದ ಸಂಪುಟ ಸಭೆಗೆ ಈ ವಿಷಯ ಬಂದಿತು. ಸಿ.ಎಂ. ಉದಾಸಿ ನೇತೃತ್ವದ ಉಪ ಸಮಿತಿಗೆ ವಹಿಸಲಾಗಿತ್ತು. ಉಪ ಸಮಿತಿಯೂ ವರದಿ ನೀಡಿದೆ. ಸರಕಾರದ ಮೇಲೆ ಒತ್ತಡ ಹಾಕಿ ಈ ಸೌಲಭ್ಯವನ್ನು ಪಡೆಯಲು ನಾವು ಹೋರಾಟ ನಡೆಸಬೇಕಿದೆ ಎಂದರು.
ನಾವು ಯಾವುದೇ ಲಿಂಗಾಯತ ಉಪಜಾತಿಗಳನ್ನು ವಿರೋಧ ಮಾಡುವುದಿಲ್ಲ. ನಮಗೆ ಸಿಗಬೇಕಾದ ಸೌಲಭ್ಯಗಳನ್ನು ಕೊಡಿ ಎಂದು ಒತ್ತಾಯಿಸುವುದು ನಮ್ಮ ಉದ್ದೇಶ. ಈಗ ಎಲ್ಲ ಉಪಜಾತಿ ಸೌಲಭ್ಯ ಪಡೆಯುತ್ತಿವೆ. ನಮ್ಮ ಮುಂದಿನ ಪೀಳಿಗೆ ಭವಿಷ್ಯಕ್ಕಾಗಿ ಜಾತಿ ಪಟ್ಟಿಯಲ್ಲಿ ಸೇರುವುದು ಅನಿವಾರ್ಯವಾಗಿದೆ. ಯಾರು ಯಾವ ಪಕ್ಷದಲ್ಲಿ ಗುರುತಿಸಿಕೊಂಡಿದ್ದರೂ ಸಮಾಜದ ವಿಷಯ ಬಂದಾಗ ಎಲ್ಲರೂ ಒಗ್ಗಟ್ಟಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮಾಜದ ತಾಲೂಕಾಧ್ಯಕ್ಷ ಶರಣಬಸವ ವಕೀಲರು ವಲ್ಕಂದಿನ್ನಿ ಮಾತನಾಡಿ, ನಮ್ಮ ಸಮಾಜ ರಾಜಕೀಯವಾಗಿ ಬಲಿಷ್ಠರಾಗಲು ಸಂಘಟನೆ ಅನಿವಾರ್ಯವಾಗಿದೆ. ಸಂಘಟನೆಯಿದ್ದರೆ ರಾಜಕೀಯವಾಗಿ ನಾವು ಗುರುತಿಸಿಕೊಳ್ಳಬಹುದು ಎಂದರು.
ಮಾನವಿ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನಗೌಡ ಪೋತ್ನಾಳ, ಸಿರುಗುಪ್ಪ ತಾಲೂಕಾಧ್ಯಕ್ಷ ಪಂಪನಗೌಡ ಮಾತನಾಡಿ, ಸಮಾಜದಲ್ಲಿ ಒಗ್ಗಟ್ಟಿನ ಕೊರತೆ ಹಿನ್ನಡೆಗೆ ಕಾರಣ ಎಂದರು.
ಅಖೀಲ ಕರ್ನಾಟಕ ಲಾಳಗೊಂಡ ಸಮಾಜದ ಗೌರವಾಧ್ಯಕ್ಷ ಬಸವರಾಜ ಪಾಟೀಲ್ ಅತ್ತನೂರು, ಪ್ರಧಾನ ಕಾರ್ಯದರ್ಶಿ ಪಂಪಾಪತಿ ವಕೀಲರು, ಉಪಾಧ್ಯಕ್ಷ ಮಹಾಂತಪ್ಪಗೌಡ ಭೋಗಾವತಿ, ಎಚ್.ಕೆ. ಬಸವರಾಜ ಸೇರಿದಂತೆ ತಾಲೂಕು ಘಟಕದ ಪದಾಧಿಕಾರಿಗಳು, ಸಮಾಜದ ಮುಖಂಡರು ಪಾಲ್ಗೊಂಡಿದ್ದರು. ಚಂದ್ರೇಗೌಡ ಹರೇಟನೂರು ನಿರೂಪಿಸಿದರು.