ಬೀಳಗಿ: ಕೋವಿಡ್-19 ತಾರ್ಕಿಕ ಅಂತ್ಯ ಕಾಣುವವರೆಗೆ ಕೋವಿಡ್ ಸೋಂಕು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮಾನಸಿಕವಾಗಿ ಸಿದ್ಧರಾಗಬೇಕಿರುವುದು ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಕ್ಯಾ.ಡಾ| ರಾಜೇಂದ್ರ ಹೇಳಿದರು.
ಪಟ್ಟಣದ ಕೊರ್ತಿ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆಶಾ, ಅಂಗನವಾಡಿ ಕಾರ್ಯರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಗ್ರಾಪಂ ಪಿಡಿಒ, ಬಿಲ್ ಕಲೆಕ್ಟರ್‌ಗಳಿಗಾಗಿ ಕೋವಿಡ್-19 ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೋವಿಡ್ ಸೇನಾನಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಜಾಗರೂಕತೆಯಿಂದ ಮತ್ತು ನಿರ್ಭೀತಿಯಿಂದ ಕೆಲಸ ನಿರ್ವಹಿಸಿ. ಕರ್ತವ್ಯಕ್ಕೆ ಯಾವುದೆ ತೊಂದರೆ ಎದುರಾದರೆ ಜಿಲ್ಲಾಡಳಿತ ನಿಮ್ಮ ಬೆನ್ನಿಗೆ ನಿಂತು ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು.
ಜಾಗೂರಕತೆಯಿಂದ ಒಂದೇ ಒಂದು ಸಾವು ಸಂಭವಿಸಕೂಡದು. ಈ ನಿಟ್ಟಿನಲ್ಲಿ ಸ್ಥಳೀಯ ಎಲ್ಲ ಕೋವಿಡ್ ಸೇನಾನಿಗಳು ಪ್ರಾಮಾಣಿಕ ಸೇವೆಗೆ ಪಣ ತೊಡಬೇಕಿರುವುದು ಅವಶ್ಯ. ಆಶಾ, ಅಂಗನವಾಡಿ ಕಾರ್ಯಕರ್ತೆಯರ ಶ್ರಮ ಶ್ಲಾಘನೀಯ. ಎಲ್ಲ ಸಿಬ್ಬಂದಿಯ ಪರಿಶ್ರಮ ಫಲವಾಗಿಯೇ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಬಹಳಷ್ಟು ಪ್ರಮಾಣದಲ್ಲಿ ತಡೆಯಲು ಸಾಧ್ಯವಾಗಿದೆ ಎಂದರು.
ಮಹಾರಾಷ್ಟ್ರ, ದೆಹಲಿ, ತಮಿಳನಾಡು ರಾಜ್ಯಗಳಿಂದ ಆಗಮಿಸುವವರಿಗೆ ಸಾಂಸ್ಥಿಕ ಕ್ವಾರಂಟೈನ್ ಹಾಗೂ ಇತರೆ ರಾಜ್ಯಗಳಿಂದ ಬಂದವರಿಗೆ ಹೋಂ ಕ್ವಾರಂಟೈನ್ ಕಡ್ಡಾಯ. ಕ್ವಾರಂಟೈನ್ ಉಲ್ಲಂಘಿಸುವವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು. ಪ್ರತಿ ಮನೆ-ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸುವುದರ ಜತೆಗೆ ಕೊರೊನಾ ಜಾಗೃತಿ ಮೂಡಿಸಬೇಕು. 60 ವರ್ಷ ಮೇಲ್ಪಟ್ಟ ವೃದ್ಧರ, ಗರ್ಭಿಣಿಯರ, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಎಚ್‌ಐವಿ ಸೋಂಕು ಇರುವವರ ಕುರಿತು ಅಗತ್ಯ ಮಾಹಿತಿ ಕಲೆ ಹಾಕಬೇಕು. ಇನ್ನೆರಡು ತಿಂಗಳು ಕಾಲ ನಿಮ್ಮ ಮೇಲೆ ಜವಾಬ್ದಾರಿ ಹೆಚ್ಚಿಗಿದೆ. ಇಲ್ಲಿ ನೀವೇ ಡಿಸಿ, ಎಸ್ಪಿಯಂತೆ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಎಂದು ಕೊರೊನಾ ವಾರಿಯರ್ಸ್ ಗಳಿಗೆ ಮನವಿ ಮಾಡಿದರು. ಡಿಎಚ್‌ಒ ಡಾ| ಅನಿಲ ದೇಸಾಯಿ ಮಾತನಾಡಿ, ಮದುವೆ, ಇತರೆ ಸಮಾರಂಭಗಳಿಗೆ 50ಕ್ಕೂ ಹೆಚ್ಚು ಜನ ಸೇರುವಂತಿಲ್ಲ. ಅಂತ್ಯಸಂಸ್ಕಾರದಲ್ಲಿ 20ಕ್ಕೂ ಹೆಚ್ಚು ಜನ ಭಾಗವಹಿಸುವಂತಿಲ್ಲ. ಕಾನೂನು ಉಲ್ಲಂಘಿಸಿದರೆ ಕ್ರಮ ಖಂಡಿತ ಎಂದರು.
ಎನ್‌ಐಸಿ ಜಿಲ್ಲಾ ಸಮನ್ವಯಾಧಿಕಾರಿ ಗಿರಿಯಾಚಾರ್ಯ, ಎಸಿ ಡಾ| ಸಿದ್ದು ಹುಲ್ಲಳ್ಳಿ, ತಹಶೀಲ್ದಾರ್ ಭೀಮಪ್ಪ ಅಜೂರ, ತಾಪಂ ಇಒ ಎಂ.ಕೆ.ತೊದಲಬಾಗಿ, ತಾಲೂಕು ಆರೋಗ್ಯಾಧಿಕಾರಿ ಡಾ| ದಯಾನಂದ ಕರೆಣ್ಣವರ, ಪಪಂ ಮುಖ್ಯಾಧಿಕಾರಿ ದೇವೀಂದ್ರ ಧನಪಾಲ, ಸಿಪಿಐ ಸಂಜೀವ ಬಳೆಗಾರ ಇದ್ದರು. ಗುರುರಾಜ ಲೂತಿ ನಿರೂಪಿಸಿದರು.