Advertisement

ನೈಜ ಫಲಾನುಭವಿಗಳಿಗೆ ನ್ಯಾಯ ದೊರಕಿಸಿ

11:58 AM Aug 23, 2019 | Suhan S |

ಹಾವೇರಿ: ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ನೆರೆಯಿಂದ ಆಗಿರುವ ಹಾನಿ ಕುರಿತು ಗುರುವಾರ ಸಂಜೆ ಜಿಪಂ ಸಭಾಭವನದಲ್ಲಿ ಅಧಿಕಾರಿಗಳ ಸಭೆ ನಡೆಸಿದ ನೂತನ ಸಚಿವ ಬಸವರಾಜ ಬೊಮ್ಮಾಯಿ ಅಧಿಕಾರಿಗಳನ್ನು ತೀವ್ರ ತರಾಟೆ ತೆಗೆದುಕೊಂಡು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಪ್ರಯತ್ನ ಮಾಡಿದರು.

Advertisement

ನೆರೆ ಹಾಗೂ ಅತಿವೃಷ್ಟಿಯಿಂದ ತೊಂದರೆಗೊಳದವರಿಗೆ ಪರಿಹಾರ ಒದಗಿಸುವುದು ಬಹುದೊಡ್ಡ ಸವಾಲಾಗಿದ್ದು, ಈ ವಿಚಾರದಲ್ಲಿ ಅಧಿಕಾರಿಗಳ ಮನೋಭಾವ ಬದಲಾಗಬೇಕು. ಅಧಿಕಾರಿಗಳ ನಿಲುವು ಬಡವರಪರ, ರೈತರಪರ, ಹಾನಿಗೊಳಗಾದವರ ಪರವಾಗಿ ಸಹಾನುಭೂತಿ, ಮಾನವೀಯತೆ ಹಾಗೂ ಕಳಕಳಿ ತೋರುವ ರೀತಿಯಲ್ಲಿರಬೇಕು. ಜನಪರ ನಿಲುವು ರೂಢಿಸಿಕೊಳ್ಳಬೇಕು ಎಂದು ಸೂಚಿಸಿದರು.

ಅಧಿಕಾರಿಗಳು ಕಚೇರಿಯಲ್ಲಿಯೇ ಕುಳಿತು ಅಂಕಿಗಳನ್ನು ಜೋಡಿಸಿ, ನಮೂದಿಸಿದರೆ ಆಗದು. ಕ್ಷೇತ್ರ ಭೇಟಿ ನೀಡಿ ವಾಸ್ತವ ಅರಿಯಬೇಕು. ತಹಸೀಲ್ದಾರರು, ಗ್ರಾಪಂ ಕಾರ್ಯದರ್ಶಿಯಗಳ ಅಂಕಿಗಳನ್ನು ನಂಬಿದರೆ ತೊಂದರೆಗೊಳಗಾದ ನೈಜ ಫಲಾನುಭವಿಗಳಿಗೆ ನ್ಯಾಯ ದೊರಕಿಸಿ ಕೊಡಲು ಆಗದು ಎಂದು ಶಿಸ್ತಿನ ಪಾಠ ಮಾಡಿದರು.

ನೆರೆಯಿಂದ ಸಂಕಷ್ಟಕ್ಕೊಳಗಾದ ಜನರಿಗೆ ‘ನಮ್ಮ ಪಾಲಿಗೆ ಸರ್ಕಾರ ಇದೆ’ ಎಂಬ ಭಾವನೆ ಮೂಡುವ ರೀತಿಯಲ್ಲಿ ಕೆಲಸ ಮಾಡಬೇಕು. ಅಧಿಕಾರಿಗಳು ಕ್ರಿಯಾಶೀಲವಾಗಿ, ಮಾನವೀಯತೆಯೊಂದಿಗೆ ಕೆಲಸ ಮಾಡಿದಾಗ ಜನರಲ್ಲಿ ಸರ್ಕಾರದ ಬಗ್ಗೆ ಒಳ್ಳೆಯ ಭಾವನೆ ಮೂಡಲು ಸಾಧ್ಯ ಎಂದರು.

ನಿರ್ದಾಕ್ಷಿಣ್ಯ ಕ್ರಮ: ನನಗೆ ಅಧಿಕಾರಿಗಳ ಹೇಳಿಕೆ, ವರದಿ ಮುಖ್ಯವಲ್ಲ. ಉತ್ತಮ ಫಲಿತಾಂಶ ಬರುವ ರೀತಿಯಲ್ಲಿ ಕೆಲಸ ಮಾಡುವುದು ಮುಖ್ಯ. ಪರಿಣಾಮಕಾರಿಯಾಗಿ ಕೆಲಸ ಮಾಡದಿದ್ದರೆ ಅಂಥ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ. ಇನ್ನು ನೆರೆ ಪರಿಹಾರ, ಸೌಲಭ್ಯ ಒದಗಿಸುವ ವಿಚಾರದಲ್ಲಿ ತಮ್ಮ ಪಾಲು ಪಡೆಯಲು ಹವಣಿಸಿದರೆ, ಭ್ರಷ್ಟಾಚಾರಕ್ಕೆ ಇಳಿದರೆ ಅದನ್ನು ಯಾವ ಕಾರಣಕ್ಕೂ ಕ್ಷಮಿಸುವುದಿಲ್ಲ. ಅರ್ಹರನ್ನು ಸೌಲಭ್ಯವಂಚಿತರನ್ನಾಗಿ ಮಾಡಿದರೆ ಅಧಿಕಾರಿಗಳಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು. ಹಾನಿ ಸಮೀಕ್ಷೆಯನ್ನು ಹೋಬಳಿವಾರು ವರದಿ ನೀಡಬೇಕು ಹಾಗೂ ವರದಿಯಲ್ಲಿ ಸಮೀಕ್ಷೆ ನಡೆಸಿದವರ ಹೆಸರು ನಮೂದಿಸಬೇಕು ಎಂದರು.

Advertisement

ಪ್ರಕೃತಿ ವಿಕೋಪದಿಂದ ನಷ್ಟವಾದವರಿಗೆ ಹಣ ಕೊಡಲು ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌. ಮತ್ತು ರಾಜ್ಯ ಸರ್ಕಾರ ಇದೆ. ಮಧ್ಯದಲ್ಲಿ ನೀವು ಈ ರೀತಿಯ ಕೆಲಸ ಮಾಡಿದರೆ ಹೇಗೆ? ಅದಕ್ಕಾಗಿಯೇ ಅಧಿಕಾರಿಗಳು ಈ ಮನೋಭಾವವನ್ನು ಮೊದಲು ಬದಲಾಯಿಸಿಕೊಂಡು ತೊಂದರೆಗೊಳಗಾದವರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಕಳಕಳಿ ತೋರಬೇಕು. ಕೂಡಲೇ ಇನ್ನೊಮ್ಮೆ ಸಮೀಕ್ಷೆ ಮಾಡಿ ಮೂರು ದಿನಗಳಲ್ಲಿ ವರದಿ ನೀಡಬೇಕು ಎಂದು ಆದೇಶಿಸಿದರು.

ವರದಿ ಸತ್ಯಕ್ಕೆ ದೂರ: ಜಿಲ್ಲೆಯಲ್ಲಿ ಕೇವಲ 49 ಮನೆಗಳು ಮಾತ್ರ ಪೂರ್ಣ ಪ್ರಮಾಣದಲ್ಲಿ ಬಿದ್ದಿವೆ ಎಂಬ ವರದಿ ನೋಡಿ ಅಧಿಕಾರಿಗಳನ್ನು ತೀವ್ರ ತರಾಟೆ ತೆಗೆದುಕೊಂಡ ಸಚಿವ ಬೊಮ್ಮಾಯಿ, ಈ ವರದಿ ಸತ್ಯಕ್ಕೆ ದೂರವಾಗಿದೆ. ಮೇಲ್ಛಾವಣಿ, ಎರಡು ಗೋಡೆ ಬಿದ್ದರೆ ಅದರಲ್ಲಿ ವಾಸಿಸಲು ಸಾಧ್ಯವೆ? ಹಲವು ಕಡೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಮನೆ ಬಿದ್ದಿದ್ದರೂ ಅಲ್ಲಿ ಶೇ. 25-30ರಷ್ಟು ಬಿದ್ದಿದೆ ಎಂದು ವರದಿ ನೀಡಿದ್ದೀರಿ. ಅಧಿಕಾರಿಗಳು ಕೇವಲ ಪುಸ್ತಕ ನೋಡಿ ಕೆಲಸ ಮಾಡಿದರೆ ಆಗದು. ಮಾನವೀಯತೆ ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಪುನರುಚ್ಛರಿಸಿದರು.

ಕೃಷಿ ಭೂಮಿಯ ಮಣ್ಣು ಹಾನಿಗೆ ಸಂಬಂಧಿಸಿ ಸಹ ಸಚಿವರು, ಕೃಷಿ ಇಲಾಖೆ ಜಂಟಿ ನಿರ್ದೇಶಕರನ್ನು ಸಹ ತೀವ್ರ ತರಾಟೆ ತೆಗೆದುಕೊಂಡು ನದಿ ಪಾತ್ರ ಬದಲಾಯಿಸಿದ್ದರಿಂದ ಆಗಿರುವ ಮಣ್ಣಿನ ಹಾನಿ ಬಗ್ಗೆಯೂ ಸಮರ್ಪಕ ವರದಿ ತಯಾರಿಸಿ ನೀಡಬೇಕು. ಒಂದು ವಾರದಲ್ಲಿ ವರದಿ ತಯಾರಿಸಿಕೊಡಬೇಕು. ಈ ವರದಿ ಕೊಡಲು ವಿಳಂಬ ಮಾಡಿದರೆ ಇದರಲ್ಲಿ ಅಧಿಕಾರಿಗಳ ಭ್ರಷ್ಟಾಚಾರ ಅಡಗಿದೆ ಎಂದು ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next