Advertisement

ಪತ್ರಕರ್ತರು ಸತ್ಯಶೋಧನೆಗೆ ಒಡ್ಡಿಕೊಳ್ಳಿ

09:39 PM Jul 01, 2019 | Lakshmi GovindaRaj |

ಮೈಸೂರು: ಪತ್ರಕರ್ತರು ಸ್ವಯಂನಿಯಂತ್ರಣ ಹಾಕಿಕೊಂಡು ಸತ್ಯನಿಷ್ಠ ವರದಿಗಳನ್ನು ಕೊಡುವ ಜೊತೆಗೆ ಸತ್ಯಶೋಧನೆಗೆ ಒಡ್ಡಿಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

Advertisement

ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಮೈಸೂರು ಜಿಲ್ಲಾ ಪತ್ರಕರ್ತರ ಸಂಘಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾಲ್ಕು ಪ್ರಮುಖ ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗಗಳು ಸಮನಾಗಿ ಚಲಿಸಿದರೆ ಪ್ರಜಾಪ್ರಭುತ್ವದ ರಥ ಚೆನ್ನಾಗಿ ಚಲಿಸುತ್ತೆ. ಮೊದಲ ಮೂರು ಅಂಗಗಳು ತಪ್ಪು ಮಾಡಿದಾಗ ನಾಲ್ಕನೇ ಅಂಗವಾದ ಪತ್ರಿಕಾ ರಂಗ ತಿದ್ದಬೇಕು ಎಂದರು.

ಪತ್ರಿಕಾ ಕ್ಷೇತ್ರಕ್ಕೆ ವಿಶಿಷ್ಟ ಸ್ಥಾನಮಾನವಿದೆ. ಜೊತೆಗೆ ಸಮಾಜಮುಖೀ ಕೆಲಸ ಮಾಡಬೇಕಾದ ಜವಾಬ್ದಾರಿಯೂ ಇದೆ. ಯಾವುದೇ ಸಂದರ್ಭದಲ್ಲಿ ಪತ್ರಿಕಾ ಸ್ವಾತಂತ್ರ್ಯ ಧಮನ ಮಾಡಬಾರದು. ಮಾಧ್ಯಮಗಳಿಗೆ ಸಂಪೂರ್ಣ ಸ್ವಾತಂತ್ರ್ಯವಿರಬೇಕು.

ಜೊತೆಗೆ ಜವಾಬ್ದಾರಿಯೂ ಇರಬೇಕು. ಹೀಗಾಗಿ ಪತ್ರಕರ್ತರು ಸ್ವಯಂನಿಯಂತ್ರಣ ಹಾಕಿಕೊಂಡು ಸತ್ಯ ವರದಿಗಳನ್ನು ಮಾಡುವ ಮೂಲಕ ಪತ್ರಿಕೆಗಳನ್ನು ಹೆಚ್ಚು ಜನರು ಓದುವಂತೆ ಮಾಡಬೇಕಿದೆ ಎಂದರು. ಸಮಾಜದಲ್ಲಿ ಪತ್ರಿಕೆಗಳನ್ನು ಓದಿ ಅನೇಕರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರುವುದನ್ನು ಕಾಣುತ್ತೇವೆ.

Advertisement

ಕೃಷಿ, ಆರೋಗ್ಯ ಮೊದಲಾದ ಕ್ಷೇತ್ರಗಳ ಕರ್ಮಕಾಂಡಗಳ ಬಗ್ಗೆ ಜನರು ಮತ್ತು ಆಳುವವರ ಗಮನ ಸೆಳೆಯುತ್ತವೆ. ಸಮಾಜವನ್ನು ಕತ್ತಲಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಜವಾಬ್ದಾರಿ ಕೂಡ ಪತ್ರಕರ್ತರ ಮೇಲಿದೆ. ಮಾಧ್ಯಮಗಳು ಸರ್ಕಾರ ಗುರುತಿಸಲಾಗದ ಕ್ಷೇತ್ರಗಳನ್ನೆಲ್ಲಾ ಗುರುತಿಸಿ ಬೆಂಬಲಿಸುತ್ತಾ ಬಂದಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಭ್ರಷ್ಟಾಚಾರ ಒಳ ಹೊಕ್ಕಿದೆ. ಅದನ್ನು ತಡೆಯುವ ಶಕ್ತಿ ಮಾಧ್ಯಮ ರಂಗಕ್ಕಿದೆ. ಆದರೆ, ಸತ್ಯಶೋಧನೆ ಮಾಡದೆ ವರದಿ ಮಾಡುವುದರಿಂದ ದೊಡ್ಡ ದ್ರೋಹ ಮಾಡಿದಂತೆ ಹೀಗಾಗಿ ಸತ್ಯವಾದ ಸುದ್ದಿಯನ್ನಷ್ಟೆ ಪ್ರಕಟಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಬೇಕಿದೆ ಎಂದರು.

ರಕ್ಷಣೆಗೆ ಕ್ರಮ: ಕೆಲವೊಂದು ವರದಿಗಳು ಪ್ರಕಟಗೊಂಡಾಗ ಪತ್ರಕರ್ತರ ವಿರುದ್ಧ ಮೃಗಗಳ ರೀತಿ ನಡೆದುಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ವರದಿಗಾರರಿಗೆ ರಕ್ಷಣೆ ಬೇಕಾಗುತ್ತದೆ. ಅದಕ್ಕಾಗಿ ವರದಿಗಾರರು ಲಿಖೀತವಾಗಿ ದೂರು ಕೊಟ್ಟಲ್ಲಿ ರಕ್ಷಣೆ ಕೊಡಿಸುವುದಾಗಿ ಹೇಳಿದರು.

ವಿಧಾನಪರಿಷತ್‌ ಸದಸ್ಯ ಆರ್‌.ಧರ್ಮಸೇನ ಮಾತನಾಡಿ, ಯಾವುದೇ ಕ್ಷೇತ್ರಗಳಲ್ಲೂ ಆಪಾದನೆ ಬರುವುದು ಸಹಜ. ಅದನ್ನೇ ದೊಡ್ಡದು ಮಾಡದೆ ಸಮಾಜಮುಖೀ ಕೆಲಸಗಳನ್ನು ಮುಂದುವರಿಸಿ ಎಂದ ಅವರು, ವಿಧಾನಮಂಡಲವನ್ನು ಕಾಗದ ರಹಿತಗೊಳಿಸಬೇಕು ಎಂದು ಎರಡು ವರ್ಷಗಳಿಂದ ಚರ್ಚೆ ನಡೆಯುತ್ತಿದೆ.

ಹೀಗಾಗಿ ಮುದ್ರಣ ಮಾಧ್ಯಮದಲ್ಲಿ ಕೆಲಸ ಮಾಡುವವರೂ ಸಹ ಡಿಜಿಟಲ್‌ ಮಾಧ್ಯಮಕ್ಕೆ ತೆರೆದುಕೊಳ್ಳಬೇಕಿದೆ ಎಂದರು. ಮಾಧ್ಯಮ ಅಕಾಡೆಮಿ ಅಧ್ಯಕ್ಷ ಪದ್ಮರಾಜ ದಂಡಾವತಿ ಮಾತನಾಡಿ, ಹಣವನ್ನು ಬೆನ್ನತ್ತುವ ಕಾಲದಿಂದಾಗಿ ಮಾಧ್ಯಮ ಇಂದು ಆದರ್ಶ ವೃತ್ತಿಯಾಗಿ ಉಳಿದಿಲ್ಲ.

ಅನೈತಿಕ ಕಾರ್ಯಗಳಿಗೆ ಕೈ ಹಾಕಿ, ರೋಚಕತೆಯ ಬೆನ್ನು ಹತ್ತಿರುವ ಟಿವಿ ಮಾಧ್ಯಮಗಳು ತಾನೇ ಹೆಣೆದುಕೊಂಡ ಬಲೆಯಲ್ಲಿ ಸಿಕ್ಕು ಒದ್ದಾಡುತ್ತಿವೆ. ಇಂತಹ ಸಂದರ್ಭದಲ್ಲಿ ಮಾಧ್ಯಮಗಳು ಮತ್ತೆ ಮತ್ತೆ ಆತ್ಮಶೋಧನೆ ಮಾಡಿಕೊಳ್ಳಬೇಕಿದೆ ಎಂದರು.

ಮಾನಸ ಗಂಗೋತ್ರಿಯ ಹಿರಿಯ ಪ್ರಾಧ್ಯಾಪಕಿ ಡಾ.ಉಷಾರಾಣಿ ಪ್ರಧಾನ ಭಾಷಣ ಮಾಡಿದರು. ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಆರ್‌.ರಾಜು, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್‌ ಬಾಬು ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಾಧ್ಯಮಗಳು ಟಿಆರ್‌ಪಿಗಾಗಿ ಸುದ್ದಿಗೆ ಉಪ್ಪು-ಖಾರ ಹಾಕಬೇಡಿ. ನಿಮ್ಮ ಕೆಲಸದ ಒತ್ತಡ ಎಷ್ಟೇ ಇದ್ದರೂ ಸುದ್ದಿಯ ಗುಣಮಟ್ಟ ಕಾಯ್ದುಕೊಳ್ಳಿ. ರಾಜಕಾರಣಿಗಳು ಮೂರು ಹೊತ್ತೂ ಕಿತ್ತಾಡಿದರೂ ಸರಿಪಡಿಸಿಕೊಳ್ಳುತ್ತೇವೆ. ಮಾಧ್ಯಮಗಳು ಹಾಗಾಗಬಾರದು.
-ಬಿ.ಹರ್ಷವರ್ಧನ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next