ಚಾಮರಾಜನಗರ: ಸಮುದಾಯಗಳಲ್ಲಿ ಹಿಂದುಳಿದ ಜನತೆಯನ್ನು ಆರ್ಥಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ದಿ ಪಡಿಸಲು ನಿಗಮಗಳನ್ನು ಸ್ಥಾಪಿಸಲಾಗಿದ್ದು, ಇಂತಹ ನಿಗಮಗಳ ಮೂಲಕ ಸರ್ಕಾರಿ ಸೌಲಭ್ಯ ಬಳಸಿಕೊಂಡು ಪ್ರಗತಿ ಹೊಂದಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್ ಸಲಹೆ ಮಾಡಿದರು.
ನಗರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಸಂತ ಸೇವಾಲಾಲ್ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಸಣ್ಣ ಪ್ರಮಾಣದ ಜನಸಂಖ್ಯೆವುಳ್ಳ ಸಮುದಾಯಗಳ ಜಯಂತಿಗಳನ್ನು ಗಣನೆಗೆ ತೆಗೆದುಕೊಂಡು ಪ್ರತಿವರ್ಷವೂ ಆಚರಿಸುತ್ತಾ ಬರುತ್ತಿದೆ.
ಇದರ ಉದ್ದೇಶ ಸಮುದಾಯದ ಜನರನ್ನು ಒಗ್ಗೂಡಿಸಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವುದರ ಜೊತೆಗೆ ಅಭಿವೃದ್ಧಿ ಪಡಿಸುವುದಾಗಿದೆ. ಸಮುದಾಯದ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ನೀಡಬೇಕೆಂದರು. ಬಂಜಾರ ಸಮುದಾಯ ಐತಿಹಾಸಿಕ ಸಮುದಾಯವಾಗಿದೆ ಆ ಕಾಲದ ಆಂಗ್ಲೋ ಮೈಸೂರು ಯುದ್ಧªದಲ್ಲೂ ಸಹ ಈ ಸಮುದಾಯದ ಜನರು ಭಾಗಿಯಾಗಿ ನಾಡು, ನುಡಿಗೆ ಹೋರಾಟಮಾಡಿದ್ದಾರೆ ಎಂದು ಸ್ಮರಿಸಿದರು.
ರಾಷ್ಟ್ರೀಯ ಬಂಜಾರ ಜಾನಪದದ ಗಾಯಕ ಆರ್.ವಿ ನಾಯಕ್ ಮಾತನಾಡಿ, ಸಂತ ಸೇವಾಲಾಲ್ ಅವರು ಧಾರ್ಮಿಕ ಸುಧಾರಕರು ಹಾಗೂ ಪವಾಡ ಪುರುಷರಾಗಿದ್ದರು. ಇಂತಹ ಮಹಾನ್ ವ್ಯಕ್ತಿಯ ಜೀವನವು ಎಲ್ಲರಿಗೂ ಆದರ್ಶ ಮತ್ತು ಮಾದರಿ ಎಂದು ತಿಳಿಸಿದರು.
ಸೇವಾಲಾಲ್ ಅವರ ಕುಟುಂಬದವರು ದೇವಿಯ ಆರಾಧಕರಾಗಿದ್ದರು. ಸೇವಾಲಾಲ್ ಅವರು ಜನಿಸಿರುವುದು ಸಪ್ತ ದೇವತೆಗಳ ಆಶೀರ್ವಾದದಿಂದ ಎಂದು ಹೇಳಲಾಗಿದೆ. ಜೀವನದುದ್ದಕ್ಕೂ ಅವರು ಅನೇಕ ಪವಾಡಗಳನ್ನು ಮಾಡುತ್ತ ಬಂದಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಪುರಂದರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಚ್.ಚೆನ್ನಪ್ಪ, ಬಂಜಾರ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಮಾದಪ್ಪ ನಾಯಕ್, ಸಮುದಾಯದ ಮುಖಂಡರಾದ ಮಾದಪ್ಪನ್, ಚಂದ್ರಕಲಾಬಾಯಿ, ಕೃಷ್ಣನಾಯಕ್, ಕುಮಾರ್‌ನಾಯಕ್, ಮಣಿನಾಯಕ್ ಇತರರಿದ್ದರು.
ಸಮಾರಂಭಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಸಂತ ಸೇವಾಲಾಲ್ ಭಾವಚಿತ್ರದ ಮೆರವಣಿಗೆ ನಡೆಯಿತು. ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಮೆರವಣಿಗೆಯನ್ನು ಆಕರ್ಷಕಗೊಳಿಸಿದವು.