ಲಕ್ಷ್ಮೇಶ್ವರ: ಶ್ರೀಗುರುವಿನಿಂದ ಶಿವದೀಕ್ಷಾ ಸಂಪನ್ನರಾಗಿ ಇಷ್ಟಲಿಂಗ ದೀಕ್ಷೆ ಪಡೆದು ಭಗವಂತನನ್ನು ಪೂಜಿಸಿದರೆ ಜನ್ಮ ಸಾರ್ಥಕವಾಗುತ್ತದೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹೇಳಿದರು.
ಅವರು ಮಂಗಳವಾರ ಮುಕ್ತಿಮಂದಿರ ಧರ್ಮ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಶಿವಲಿಂಗ ಪೂಜೆ, ಜಂಗಮ ವಟುಗಳಿಗೆ ಅಯ್ನಾಚಾರ-ಲಿಂಗದೀಕ್ಷೆ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿ ಆಶೀರ್ವಚನ ನೀಡಿದರು. ಮಹಾಶಿವರಾತ್ರಿಯ ಉಪವಾಸ ವೃತಾಚರಣೆಯು ಆತ್ಮ ಸಾಕ್ಷಾತ್ಕಾರದ ಹಬ್ಬವಾಗಿದೆ.
ಅಜ್ಞಾನದ ಅಂಧಕಾರ ಕಳೆದು ಜಗತ್ತಿಗೆ ಸುಜ್ಞಾನ ದಯಪಾಲಿಸಲು ಸಾಕ್ಷಾತ್ ಶಿವನೇ ಧರೆಗಿಳಿದ ಪುಣ್ಯದಿನವಾಗಿದೆ. ಶಿವನೆಂದರೆ ಮುಕ್ತಿಪ್ರಾಪ್ತಿ, ಪಾಪನಾಶ, ಮಂಗಳಕರ, ಪರಿಪೂರ್ಣ ಪ್ರಾಪ್ತ ಎಂಬುದಾಗಿದೆ. ಶಿವರಾತ್ರಿಯಂದು ಕೈಗೊಳ್ಳುವ ಉಪವಾಸ ವೃತಾಚರಣೆಯಿಂದ ದೇಹ, ಬುದ್ದಿ, ಮನಸ್ಸು ಪ್ರಸನ್ನ ಚಿತ್ತವಾಗಿಸಿ ಸುಜ್ಞಾನದ ಬೆಳಕಿನತ್ತ ಸಾಗಿಸುತ್ತದೆ. ವೀರಶೈವ ಧರ್ಮದವರು ಅಯ್ನಾಚಾರ ಮತ್ತು ಶಿವದೀಕ್ಷೆ ಸಂಸ್ಕಾರ ಪಡೆಯುವುದು ಪ್ರಮುಖವಾಗಿದೆ. ವೀರಶೈವ ಪರಂಪರೆಯಲ್ಲಿ ದೀಕ್ಷೆ ಪಡೆಯುವುದು ಮಹತ್ವದ್ದಾಗಿದೆ. ಶಿವ ದೀಕ್ಷೆಯಿಂದ ಶಿವಜ್ಞಾನ ಲಭಿಸಿ ಪಾಶಬಂಧನಗಳು ಮರೆಯಾಗುವುವು.
ಲಿಂಗಧಾರಣೆ, ಶಿವಪೂಜೆಯಿಂದ ಆತ್ಮಬಲ ಹೆಚ್ಚುತ್ತದೆ. ಸಮಾಜದಲ್ಲಿನ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಹಕ್ಕು ಪ್ರಾಪ್ತವಾಗುತ್ತದೆ. ವಿಭೂತಿ, ಲಿಂಗ, ಜೋಳಿಗೆ, ದಂಡ ಇವು ಸಂಸ್ಕಾರದ ಸಂಕೇತಗಳಾಗಿವೆ. ವೀರಶೈವ ಲಿಂಗಾಯತ ಸಮಾಜದವರೆಲ್ಲರೂ ನಿತ್ಯ “ಓಂ ನಮಃ ಶಿವಾಯ’ ಶ್ರೇಷ್ಠ ಮಂತ್ರ ಪಠಣ ಮಾಡಬೇಕು. ಲಿಂ. ಗಂಗಾಧರ ಶ್ರೀಗಳು ಮಹಾಶಿವರಾತ್ರಿಗೆ ಮಾಡುತ್ತಿದ್ದ ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಲಿಂ. ಗಂಗಾಧರ ಜಗದ್ಗುರುಗಳ ಸಂಕಲ್ಪದಂತೆ ಕ್ಷೇತ್ರದಲ್ಲಿ ತ್ರಿಕೋಟಿಲಿಂಗ ಸ್ಥಾಪನೆ ಕಾರ್ಯ ನಡೆದಿದ್ದು, ಈ ಭಾಗದ ಶಿವಭಕ್ತರಿಗೆ ಕಾಶಿ ಕ್ಷೇತ್ರ ದರ್ಶನವಾದಂತೆ ಎಂದು ಹೇಳಿದರು.
ಲಕ್ಷ್ಮೇಶ್ವರ, ಶಿರಹಟ್ಟಿ, ಕುಂದಗೋಳ, ಶಿಗ್ಗಾಂವಿ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಆಗಮಿಸಿದ್ದರು. ಅನೇಕ ಜಂಗಮ ವಟುಗಳಿಗೆ ಲಿಂಗದೀಕ್ಷೆ, ಮಂತ್ರಬೋಧನೆ ಕಾರ್ಯ ನೆರವೇರಿಸಲಾಯಿತು.