Advertisement

ಕರಾವಳಿಯಲ್ಲಿ ಮತ್ತೂಂದು ಹೋರಾಟಕ್ಕೆ ಕಿಚ್ಚು

08:20 AM Aug 09, 2017 | Team Udayavani |

ಮಂಗಳೂರು: ಎತ್ತಿನಹೊಳೆ ಯೋಜನೆಗೆ ಕರಾವಳಿಯಾದ್ಯಂತ ವಿರೋಧ ವ್ಯಕ್ತ ವಾಗುತ್ತಿರುವಾಗಲೇ ಕರಾವಳಿಯ ಜೀವನದಿ ನೇತ್ರಾವತಿಯ ಮೇಲೆಯೇ ಕಣ್ಣಿಟ್ಟು ಸಮುದ್ರಕ್ಕೆ ಸೇರುವ ನೀರನ್ನು ಬೆಂಗಳೂರಿಗೆ ಕುಡಿಯುವ ಉದ್ದೇಶಕ್ಕೆ ಬಳಸುವ ಪ್ರಸ್ತಾವನೆಯ ಸಾಧ್ಯತಾ ವರದಿಯನ್ನು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯ ವಿಜ್ಞಾನಿಗಳು ಸೋಮವಾರ ಸರಕಾರಕ್ಕೆ ಸಲ್ಲಿಸಿದ ಬೆನ್ನಲ್ಲೇ ಕರಾವಳಿಯಲ್ಲಿ ಮತ್ತೂಮ್ಮೆ ಜೀವ-ಜಲ ಹೋರಾಟದ ಕಿಚ್ಚು ಹಚ್ಚುವಂತೆ ಮಾಡಿದೆ. 

Advertisement

ಕರಾವಳಿಯ ಜಲಮೂಲಕ್ಕೆ ಧಕ್ಕೆ ಉಂಟು ಮಾಡ ಬಹುದಾದ ನೇತ್ರಾವತಿ ನದಿ ಆಶ್ರಿತ ಈ ಸಾಧ್ಯತಾ ವರದಿಯನ್ನು ಯಾವುದೇ ಕಾರಣಕ್ಕೂ ಒಪ್ಪ ಬಾರದು ಹಾಗೂ ಈಗಾಗಲೇ ಕೈಗೊಂಡಿ ರುವ ಎತ್ತಿನಹೊಳೆ ಯೋಜನೆಯನ್ನು ಕೈಬಿಡ ಬೇಕು ಎಂಬ ಕೂಗು ಕೇಳಿಬಂದಿದೆ. ಆ ಮೂಲಕ, ಶೀಘ್ರದಲ್ಲೇ ಕರಾವಳಿ ಭಾಗದಲ್ಲಿ ಮತ್ತೂಂದು ಸುತ್ತಿನ ಬೃಹತ್‌ ಹೋರಾಟಕ್ಕೆ ಈಗ ವೇದಿಕೆ ಸಿದ್ಧವಾಗುತ್ತಿದೆ. ಸರಕಾರಿ ಮಟ್ಟದಲ್ಲಿ ವರದಿ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಜಲ ತಜ್ಞರು, ಹೋರಾಟಗಾರರ ನೇತೃತ್ವದಲ್ಲಿ ಸಭೆ ನಡೆಸಿ ಯೋಜನೆಯನ್ನು ವಿರೋಧಿಸುವ ಸಂಬಂಧ ಕೈಗೊಳ್ಳ ಬೇಕಾದ ಕಾರ್ಯ ತಂತ್ರಗಳನ್ನು ಚರ್ಚಿಸಲು ನೇತ್ರಾವತಿ ನದಿ ಸಂರಕ್ಷಣಾ ಹೋರಾಟಗಾರರು ಮುಂದಾಗಿದ್ದಾರೆ.

ಬಯಲು ಸೀಮೆಯ ಜನರಿಗೆ ಕುಡಿಯುವ ನೀರು ಕಲ್ಪಿಸುವ ಇರಾದೆಯಿಂದ ನೇತ್ರಾವತಿ ನದಿ ತಿರುವು ಯೋಜನೆ ಕೈಗೊಳ್ಳಲು ಸರಕಾರ ಮುಂದಾಗಿತ್ತು. ಈ ವೇಳೆ ಕರಾವಳಿಯಲ್ಲಿ ಆಕ್ರೋಶ ಸ್ಫೋಟ ಗೊಂಡಾಗ ಯೋಜನೆಯ ಹೆಸರನ್ನೇ “ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆ’ ಎಂದು ಬದಲಿಸಿ ಕಾಮಗಾರಿ ನಡೆಸಲಾಗಿತ್ತು. ಎತ್ತಿನಹೊಳೆ ಯೋಜನೆಯ ಮೂಲಕ ನೀರು ದೊರಕಲಾರದು ಎಂದು ಎಲ್ಲೆಡೆ ಆಕ್ರೋಶ ವ್ಯಕ್ತವಾದರೂ ಕೇಳದ ಸರಕಾರ ಯೋಜನೆಗೆ ವೇಗ ನೀಡಿತು. ಆದರೆ ಪ್ರಸ್ತುತ ಯೋಜನೆಯಿಂದ ನೀರು ಸಿಗುವುದಿಲ್ಲ ಎಂಬುದು ಮನವರಿಕೆಯಾಗುತ್ತಿದ್ದಂತೆ ವರಸೆ ಬದಲಾಯಿಸಲು ಮುಂದಾಗಿದೆ. 

ನೇತ್ರಾವತಿ ನದಿಯಿಂದ ಸುಮಾರು 350 ಟಿಎಂಸಿಯಷ್ಟು ಮಳೆ ನೀರು ದೊರೆಯಲಿದ್ದು, ಈ ನೀರು ಪ್ರಸ್ತುತ ಸಮುದ್ರ ಸೇರುತ್ತಿದೆ. ಈ ನೀರನ್ನು ಜಲಾಶಯದ ಮೂಲಕ ಸಂಗ್ರಹಿಸಿ ಬೆಂಗಳೂರಿಗೆ 40 ಟಿಎಂಸಿ ನೀರು ತರಬಹುದು ಎನ್ನುವುದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಸಲ್ಲಿಸಿದ ವರದಿಯಲ್ಲಿ ಉಲ್ಲೇಖೀಸಲಾಗಿದೆ. ನೇತ್ರಾವತಿ ನದಿಗೆ ಅಡ್ಡಲಾಗಿ ಸಮುದ್ರದ ಸಮೀಪವೇ ಜಲಾಶಯ ನಿರ್ಮಿಸಲು ಸಾವಿರಾರು ಎಕರೆ ಯಷ್ಟು ಜಾಗವನ್ನು ಸ್ವಾಧೀನ ಮಾಡ ಬೇಕಾಗಿದೆ. ಇವೆರಡು ಸಂಗತಿಗಳು ಕರಾವಳಿ ಯಲ್ಲಿ ಸಂಚಲನ ಸೃಷ್ಟಿಸಿದ್ದು, ವರದಿಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಎತ್ತಿನಹೊಳೆಯಲ್ಲಿ 24 ಟಿಎಂಸಿ ನೀರು ಲಭ್ಯ ವಿಲ್ಲ ವೆಂದು ಸರಕಾರಕ್ಕೆ ವೈಜ್ಞಾನಿಕ ವರದಿ ನೀಡಿದ್ದರೂ ದ.ಕ. ಜಿಲ್ಲೆಯಲ್ಲಿ ಈ ಯೋಜನೆಯ ವಿರುದ್ಧ ನಿರಂತರ ಹೋರಾಟ ನಡೆಯುತ್ತಿದ್ದರೂ ಅದೆಲ್ಲವನ್ನು ತಿರಸ್ಕರಿಸಿ ಎತ್ತಿನಹೊಳೆ ಯೋಜನೆಯ ಕಾಮಗಾರಿ ಮಾಡಿ ಸರಕಾರ ಇಲ್ಲಿಯವರೆಗೆ ಸಾಧಿಸಿದ್ದಾದರೂ ಏನು? ಈಗ ಎತ್ತಿನಹೊಳೆಯಲ್ಲಿ ನೀರಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಕರಾ ವಳಿಯ ಇಡೀ ನೇತ್ರಾವತಿಯನ್ನೇ ತಿರುವು ಮಾಡುವುದು ಸಮಂಜಸವೇ? ಈಗಾಗಲೇ ಮಳೆ ಕಡಿಮೆಯಾಗಿ ರಾಜ್ಯದ ಬರಪೀಡಿತ ಪಟ್ಟಿಗೆ ಸೇರಿದ ಮಂಗಳೂರಿನ ನದಿಯ ದಿಕ್ಕನ್ನೇ ತಿರುಗಿಸುವುದು ಕರಾವಳಿ ಜನರ ಮೇಲೆ ನೀಡುವ ಹೊಡೆತವಲ್ಲವೇ? ಇಂತಹ ಸಾಮಾನ್ಯ ಸಂಗತಿಗಳ ಬಗ್ಗೆಯೇ ಉತ್ತರ ನೀಡದ ವಿಜ್ಞಾನಿಗಳ ಸಮೂಹ ಕೇವಲ ಕಣ್ಣಿಗೆ ಕಾಣುವ ನೀರನ್ನು ಕೊಂಡೊಯ್ಯುವ ಬಗ್ಗೆ ಮಾತ್ರ ಯೋಚಿಸುವುದು ಸರಿಯಲ್ಲ. ಇದರ ವಿರುದ್ಧ ಹೋರಾಟ ನಡೆಸಲಿದ್ದೇವೆ ಎನ್ನುತ್ತಾರೆ ಹೋರಾಟಗಾರ ಸಹ್ಯಾದ್ರಿ ಸಂಚಯ ಸಂಘಟನೆ.

Advertisement

– ನದಿಯ ಉಗಮ/ಸಂಗಮದ ಮೇಲೆ ಪ್ರಹಾರ
ನದಿಯ ಉಗಮ ಹಾಗೂ ಸಂಗಮ ಎರಡೂ ಕೂಡ ಪ್ರಾಕೃತಿಕ ನೆಲೆಯಲ್ಲಿ ಅತ್ಯಂತ ಮಹತ್ವಪೂರ್ಣ. ಇವೆರಡು ಸ್ಥಳದಲ್ಲಿಯೇ ನದಿಯ ಜೀವಂತಿಕೆ ಇರುತ್ತದೆ. ಆದರೆ, ಕರಾವಳಿಯ ಜೀವನದಿ ನೇತ್ರಾವತಿಯ ಉಗಮ ಸ್ಥಳದಲ್ಲಿ ನೀರಿನ ಸರಾಗ ಹರಿವನ್ನು ಸರಕಾರವೇ ತಡೆದು ಎತ್ತಿನಹೊಳೆ ಯೋಜನೆ ಮಾಡುವ ಮೂಲಕ ಕರಾವಳಿಯನ್ನು ಬರಡು ಮಾಡುವ ಹಂತದಲ್ಲಿದ್ದಾರೆ. ಈಗ ಮತ್ತೆ ನದಿಯ ಸಂಗಮ ಸ್ಥಳಕ್ಕೆ ಕಣ್ಣು ಹಾಕಿರುವ ವ್ಯವಸ್ಥೆಗಳು ಸಮುದ್ರಕ್ಕೆ ಸೇರುವ ನದಿಯ ನೀರನ್ನು ಕಿತ್ತುಕೊಳ್ಳುವ ದುಸ್ಸಾಹಸಕ್ಕೆ ಮುಂದಾಗುತ್ತಿದ್ದಾರೆ. ಆದರೆ ಎತ್ತಿನಹೊಳೆಗಾಗಿ ಪಶ್ಚಿಮಘಟ್ಟದಲ್ಲಿ ಆದ ಅರಣ್ಯ ನಾಶದಂತಹ ದಯನೀಯ ಪರಿಸ್ಥಿತಿ ಮಂಗಳೂರಿನಲ್ಲೂ ನಡೆಯಲಿದೆ. ಈಗಲೇ ಈ ಬಗ್ಗೆ ಎಚ್ಚೆತ್ತುಕೊಂಡರೆ ನಮ್ಮ ನಾಳೆಗೆ ಉತ್ತಮ.
– ದಿನೇಶ್‌ ಹೊಳ್ಳ , ಎತ್ತಿನಹೊಳೆ ಯೋಜನೆ ಹೋರಾಟ ಸಮಿತಿ ಪ್ರಮುಖರು

– ಮತ್ತೂಂದು ಹೋರಾಟ; ಶೀಘ್ರ ಸಭೆ 
ಮೊದಲಿಗೆ ನೇತ್ರಾವತಿ ನದಿ ತಿರುವು ಎಂದು, ಬಳಿಕ ಎತ್ತಿನಹೊಳೆ ಯೋಜನೆ ಎಂದು ನಾಮಕರಣ ಮಾಡಿದಾಗಲೇ ನೇತ್ರಾವತಿಗೆ ಅಪಾಯ ಬರಲಿದೆ ಎಂದು ಕರಾವಳಿಯಲ್ಲಿ ವಿರೋಧ ವ್ಯಕ್ತವಾಗಿತ್ತು. ಬೆಂಗಳೂರಿಗೆ ನೀರು ಕೊಂಡೊಯ್ಯುವ ಸರಕಾರದ ಮೂಲ ಉದ್ದೇಶವನ್ನು ಮರೆಮಾಚಿ ತುಮಕೂರು, ಕೋಲಾರದ ಹೆಸರನ್ನು ಸರಕಾರ ಹೇಳುತ್ತಿತ್ತು. ಆದರೆ ಈಗ ಬೆಂಗಳೂರಿಗೆ ನೀರು ಎನ್ನುತ್ತ ನೇತ್ರಾವತಿಯ ಸಂಗಮ ಸ್ಥಳದಲ್ಲಿ ಅಪಾಯದ ಘಂಟೆಯನ್ನು ಬಾರಿಸಿದಂತಿದೆ. ಎತ್ತಿನಹೊಳೆಯಲ್ಲಿ ನೀರಿಲ್ಲ ಎಂಬುದನ್ನು ಸರಕಾರವೇ ಈ ಮೂಲಕ ಒಪ್ಪಿಕೊಂಡಂತಾಗಿದೆ. ಇದೆಲ್ಲದಕ್ಕೆ ನಮ್ಮ ಈ ಭಾಗದ ಜನಪ್ರತಿನಿಧಿಗಳೇ ನೇರ ಹೊಣೆಗಾರರಾಗಿದ್ದಾರೆ. ಇದರ ವಿರುದ್ಧ ಮತ್ತೆ ಹೋರಾಟ ಜಾಗೃತಿಯಾಗಬೇಕಿದೆ. ಇದಕ್ಕಾಗಿ ಶೀಘ್ರ ಸಭೆ ನಡೆಸಿ ಅಂತಿಮ ತೀರ್ಮಾನ ಪ್ರಕಟಿಸಲಾಗುವುದು.
– ನಿರಂಜನ್‌ ರೈ, ಸಂಚಾಲಕರು, ನೇತ್ರಾವತಿ ನದಿ ತಿರುವು ವಿರೋಧಿ ಹೋರಾಟ ಸಮಿತಿ

– ಕರಾವಳಿ ತಜ್ಞರ ಅಭಿಪ್ರಾಯ ಸಂಗ್ರಹವಾಗಲಿ
ಸಮುದ್ರದ ನೀರು ಬೆಂಗಳೂರಿಗೆ ಕೊಂಡೊಯ್ಯುವುದು ಹೇಳಿದಷ್ಟು ಸುಲಭದ ವಿಧಾನ ವಲ್ಲ. ಇದರ ಸಾಧ್ಯತೆ ಬಹಳಷ್ಟು ಕಡಿಮೆ. ಅದೆಲ್ಲದಕ್ಕೂ ಮುನ್ನ ಕರಾವಳಿ ಯಲ್ಲಿ ಈ ಬಗ್ಗೆ ಸುದೀರ್ಘ‌ ಚರ್ಚೆ ನಡೆಯಬೇಕು. ಗಂಭೀರ ಸಂವಾದ ಆಗಬೇಕು. ಸಾರ್ವ ಜನಿಕರ ಅಭಿಪ್ರಾಯವನ್ನೂ ಪಡೆದುಕೊಳ್ಳಬೇಕು. ಕರಾವಳಿ ಭಾಗದ ತಜ್ಞರು ನೀಡುವ ವರದಿ ಯನ್ನು ವಿಶೇಷವಾಗಿ ಪರಿಗಣಿಸಬೇಕು. ಎಲ್ಲವನ್ನೂ ನ್ಯಾಯಯುತ ವಾಗಿ ಮಾಡ ಬೇಕು. ಕರಾವಳಿ ಭಾಗಕ್ಕೆ ಬಂದು ಇಲ್ಲಿನ ಜನರ ಜತೆಗೆ ಸರಕಾರ ಮುಕ್ತ ಮಾತುಕತೆ ನಡೆಸಬೇಕು. ಆ ಬಳಿಕ ತೀರ್ಮಾನ ಕೈಗೊಳ್ಳಬೇಕು.   

 – ಕೆ. ವಿಜಯ್‌ ಕುಮಾರ್‌ ಶೆಟ್ಟಿ ,ಮಾಜಿ ಶಾಸಕರು ಹಾಗೂ ಎತ್ತಿನಹೊಳೆ ಯೋಜನೆ ವಿರುದ್ಧದ ಹೋರಾಟಗಾರ

Advertisement

Udayavani is now on Telegram. Click here to join our channel and stay updated with the latest news.

Next