Advertisement

ಕೋವಿಡ್‌ ತಡೆಗೆ ಮತ್ತಷ್ಟು ಕಾರ್ಯಪ್ರವೃತ್ತರಾಗಿ

04:27 PM Sep 05, 2020 | Suhan S |

ಬೆಳಗಾವಿ: ಜುಲೈ ಹಾಗೂ ಆಗಸ್ಟ್‌ ತಿಂಗಳಿಗೆ ಹೋಲಿಸಿದರೆ ಕೋವಿಡ್‌-19 ಸ್ವಲ್ಪ ಪ್ರಮಾಣದಲ್ಲಿ ಹತೋಟಿಗೆ ಬಂದಿದೆ. ಜನರು ಕೊರೊನಾ ಎದುರಿಸಲು ಮಾನಸಿಕವಾಗಿ ಸಿದ್ಧರಾಗಿದ್ದು, ಹೆದರುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

Advertisement

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಕೋವಿಡ್‌-19 ಹಾಗೂ ಅತಿವೃಷ್ಟಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮತ್ತು ಬೆಳಗಾವಿ ನಗರದಲ್ಲಿ ಕೈಗೊಂಡಿರುವ ತುರ್ತು ಕ್ರಮಗಳ ಕುರಿತ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿ ಮೂರ್‍ನಾಲ್ಕು ವರ್ಷಗಳಲ್ಲಿ ಹೊಸ ಹೊಸ ರೋಗಗಳು ಹರಡುತ್ತದೆ. ಆದರೆ ಆ ರೋಗಗಳಿಗೆ ಹೋಲಿಸಿದರೆ ಕೋವಿಡ್‌-19 ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ. ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮ ಮಟ್ಟದಲ್ಲಿ ಕೋವಿಡ್‌ ಹರಡುವ ಪ್ರಮಾಣ ಕಡಿಮೆ ಆಗುತ್ತಿದೆ. ಸೋಂಕು ತಡೆಗೆ ಗ್ರಾಮೀಣ ಮಟ್ಟದಲ್ಲಿ ಜನರು ಸಹಕರಿಸುತ್ತಿದ್ದಾರೆ. ವಲಸೆ ಕಾರ್ಮಿಕರು ಬಂದ ಮೇಲೆ ಗ್ರಾಮೀಣ ಮಟ್ಟದಲ್ಲಿ ಸೋಂಕು ಹರಡಿದೆ ಎಂದು ಅಭಿಪ್ರಾಯಪಟ್ಟರು.

ಪ್ರತಿ ತಾಲೂಕುಗಳಲ್ಲಿರುವ ಕೋವಿಡ್‌ ಸೆಂಟರ್‌ ಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ವರದಿ ಪರಿಶೀಲಿಸಿದ ಬಳಿಕ ಮುಂದಿನ ಕ್ರಮಗಳ ಬಗ್ಗೆ ಚರ್ಚೆ ಮಾಡೋಣ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪೊಲೀಸರು-ಸಾರ್ವಜನಿಕರಿಗೆ ಸೋಂಕು ದೃಢಪಟ್ಟರೆ ಮನೆಯಲ್ಲಿ ಚಿಕಿತ್ಸೆ ನೀಡುವುದು ಉತ್ತಮ. ಮನೆಯಲ್ಲಿ ಚಿಕಿತ್ಸೆ ನೀಡುವುದರಿಂದ ಅವರಿಗೆ ಒಳ್ಳೆಯ ಆಹಾರದ ಜೊತೆಗೆ ಕುಟುಂಬ ಸದಸ್ಯರಿಂದ ಧೈರ್ಯ ಸಿಗುತ್ತದೆ. ಇದರಿಂದ ರೋಗಿ ಮಾನಸಿಕವಾಗಿ ಬೇಗ ಗುಣಮುಖರಾಗಿ ಕೋವಿಡ್‌ದಿಂದ ಮುಕ್ತರಾಗಬಹುದು ಎಂದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ 700 ಬೆಡ್‌ಗಳಿದ್ದು, ಆಕ್ಸಿಜನ್‌ ವ್ಯವಸ್ಥೆ ಕೂಡ ಇದೆ. ಜಿಲ್ಲೆಗೆ 54 ವೆಂಟಿಲೇಟರ್‌ ಬಂದಿದ್ದು, ಅದರಲ್ಲಿ 20 ವೆಂಟಿಲೇಟರ್‌ ಜಿಲ್ಲಾಸ್ಪತ್ರೆಗೆ ನೀಡಲಾಗಿದೆ. ಉಳಿದ ವೆಂಟಿಲೇಟರ್‌ ತಾಲೂಕುಗಳಿಗೆ ನೀಡಲಾಗಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು. ಬೆಳಗಾವಿ ಜಿಲ್ಲೆ ಹಾಗೂ ಉಳಿದ ಜಿಲ್ಲೆಯ ಸಾವಿನ ಸರಾಸರಿ ನೋಡಿದರೆ ಬೆಳಗಾವಿಯಲ್ಲಿ ಸಾವಿನ ಸಂಖ್ಯೆ ಕಡಿಮೆ ಇದೆ. ಸೋಂಕಿತರು ಬಯಸಿದಲ್ಲಿ ಚಿಕಿತ್ಸೆ ಪಡೆಯಬಹುದು. ಇದರಿಂದ ಸರ್ಕಾರಿ ಆಸ್ಪತ್ರೆಗೆ ಕಡಿಮೆ ಹೊರೆ ಆಗತ್ತದೆ ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಸ್‌.ವಿ. ಮುನ್ಯಾಳ ತಾಲೂಕು ಹಾಗೂ ಜಿಲ್ಲೆಯಲ್ಲಿ ಕೋವಿಡ್‌ ಸ್ಥಿತಿಗತಿ ಬಗ್ಗೆ ವಿವರಣೆ ನೀಡಿದರು. ಸೋಂಕಿನಿಂದ ಬಳಲುತ್ತಿದ್ದ 140 ಗರ್ಭಿಣಿಯರಿಗೆ ಸುರಕ್ಷಿತ ಹೆರಿಗೆ ಮಾಡಿಸಲಾಗಿದೆ. ಈ ಸಂದರ್ಭದಲ್ಲಿ ಮಕ್ಕಳ ಕೋವಿಡ್‌ ವರದಿ ನೆಗೆಟಿವ್‌ ಬಂದಿರುತ್ತದೆ ಎಂದು ಹೇಳಿದರು.

Advertisement

ಈ ಬಾರಿ ಪ್ರವಾಹದಿಂದ ಸಮಸ್ಯೆ ಇಲ್ಲ: ಪ್ರವಾಹದಿಂದ ಈ ಬಾರಿ ಸಮಸ್ಯೆ ಆಗಿಲ್ಲ. ಆದರೂ ರೈತರಿಗೆ ಬೆಳೆ ಪರಿಹಾರ ನೀಡಲು ಜಂಟಿಯಾಗಿ ಬೆಳೆ ಸಮೀಕ್ಷೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು. ಜಿಲ್ಲೆಯಲ್ಲಿ ಪ್ರವಾಹದಿಂದ 1,160 ಕೋಟಿ ರೂ. ನಷ್ಟ ಆಗಿದ್ದು, ಪ್ರವಾಹದ ಸಮೀಕ್ಷೆಗೆ ಕೇಂದ್ರ ತಂಡ ಭೇಟಿ ನೀಡಲಿದೆ. ಸದ್ಯದ ಮಟ್ಟಿಗೆ ಪ್ರವಾಹ ನಿಯಂತ್ರಣದಲ್ಲಿದೆ. ರೈತರಿಂದ ಬೆಳೆ ಸಮೀಕ್ಷೆ ನಡೆಯುತ್ತಿದ್ದು, ರಾಜ್ಯದಲ್ಲಿ ಜಿಲ್ಲೆಯ ರೈತರು ಹೆಚ್ಚು ಸಮೀಕ್ಷೆ ಮಾಡಿದ್ದಾರೆ ಎಂದು ಜಿಲ್ಲಾ ಧಿಕಾರಿ ಹಿರೇಮಠ ಅವರು ಸಚಿವರಿಗೆ ತಿಳಿಸಿದರು.

ಈ ವೇಳೆ ಮಹಾನಗರ ಪೊಲೀಸ್‌ ಆಯುಕ್ತ ಡಾ. ತ್ಯಾಗರಾಜನ್‌, ಜಿಲ್ಲಾ ಪೊಲೀಸ್‌ ವರಿಷ್ಠಾ ಕಾರಿ ಲಕ್ಷ್ಮಣ ನಿಂಬರಗಿ, ಜಿಪಂ ಸಿಇಒ ದರ್ಶನ ಎಚ್‌.ವಿ., ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಬಿಮ್ಸ್‌ ನಿರ್ದೇಶಕ ಡಾ. ವಿನಯ ದಾಸ್ತಿಕೊಪ್ಪ, ಮಹಾನಗರ ಪಾಲಿಕೆ ಆಯುಕ್ತ ಜಗದೀಶ ಕೆ.ಎಚ್‌. ಇತರರು ಇದ್ದರು.

ಶೇ.60 ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವರಿಗೆ ಸರಿಯಾದ ಆಹಾರ ನೀಡಬೇಕು. ಕೊರೊನಾ ಹತೋಟಿಗೆ ಬಂದಿದೆ. ಆದರೂ ಅಧಿ ಕಾರಿಗಳು ಇನ್ನೂ ಹೆಚ್ಚು ಕೆಲಸ ಮಾಡಬೇಕು. 15 ದಿನಗಳ ನಂತರ ಜಿಲ್ಲಾಸ್ಪತ್ರೆಯಲ್ಲಿ ಬೇರೆ ಬೇರೆ ರೋಗಿಗಳಿಗೆ ಚಿಕಿತ್ಸೆ ನೀಡವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. – ರಮೇಶ ಜಾರಕಿಹೊಳಿ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next