ಭಾಲ್ಕಿ: ಎಲ್ಲರೂ ದೇವರ ಸಾನ್ನಿಧ್ಯದಲ್ಲಿರುವ ಅನುಭಾವ ಪಡೆಯುಂತಾಗಬೇಕು ಎಂದು ತೆಲಂಗಾಣ ರಾಜ್ಯದ ಜಹಿರಾಬಾದ ತಾಲೂಕಿನ ಮಲ್ಲಯ್ಯಗಿರಿಯ ಡಾ| ಬಸವಲಿಂಗ ಅವಧೂತರು ಹೇಳಿದರು.
ನಾವದಗಿ ಗ್ರಾಮದ ಸದ್ಗುರು ರೇವಪ್ಪಯ್ನಾ ಮಹಾಶಿವಶರಣರ ದೇವಸ್ಥಾನದಲ್ಲಿ ಸದ್ಗುರು ರೇವಪ್ಪಯ್ನಾ ಸ್ವಾಮಿಗಳ ಜಾತ್ರೋತ್ಸವ ನಿಮಿತ್ತ ನಡೆದ ಧರ್ಮಸಭೆಯಲ್ಲಿ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಎಲ್ಲರೂ ಸುಖವಾಗಿರಬೇಕು ಎನ್ನುವ ಭಾವ ನಮ್ಮಲ್ಲಿರಬೇಕು. ಸರ್ವೇ ಜನ ಸುಖೀನೋ ಭವಂತು ಎನ್ನುವ ನಾಣ್ನುಡಿಯಂತೆ ಎಲ್ಲರೂ ಸುಖವಾಗಿದ್ದರೆ ಸುಂದರ ಜೀವನ ನಡೆಸಲು ಸಾಧ್ಯ. ಮನೆಯಲ್ಲಿರುವ ಎಲ್ಲರೂ ಸುಖವಾಗಿರುವಂತೆ ನಾವು ನೋಡಿಕೊಳ್ಳಬೇಕು. ಸದಾ ದೇವರ ಧ್ಯಾನ ಮಾಡುತ್ತ ಕಾಲ ಕಳೆಯಬೇಕು. ಧ್ಯಾನದಲ್ಲಿ ನಾವು ಬೇಡಿಕೊಂಡ ಎಲ್ಲವನ್ನೂ ದೇವನು ನಮಗೆ ಕೊಡುವನು. ಶುದ್ಧ ಮನಸ್ಸಿನಿಂದ, ಸ್ವತ್ಛವಾದ ದೇಹದೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ದೇವರ ದಯೆ, ಕರುಣೆಗೆ ಪಾತ್ರರಾಗಬೇಕು ಎಂದರು.
ಧರ್ಮಸಭೆ ಪ್ರವಚನದ ನಂತರ ಶ್ರೀಕಾಂತ ದಾಬಶೆಟ್ಟಿ ದಂಪತಿಯಿಂದ ಪಾದಪೂಜೆ ನಡೆಸಲಾಯಿತು. ಈ ವೇಳೆ ಪ್ರಮುಖರಾದ ಪೊಲೀಸ್ ಪೇದೆ ಭಾಗವತ, ದೇವಸ್ಥಾನದ ರೇವಣಯ್ನಾಸ್ವಾಮಿ, ಗ್ರಾಪಂ ಸದಸ್ಯ ರಾಜಶೇಖರ ಬಿರಾದಾರ, ರಾಜಕುಮಾರ ಗುಂಡಯ್ನಾ ಸ್ವಾಮಿ, ಭಾಗಮ್ಮಾ ವೀರಪ್ಪ ಬಿರಾದಾರ, ಮಲ್ಲಿಕಾರ್ಜುನ ಶೇರಿಕಾರ, ಪ್ರದೀಪ ನಾಗಶೆಟ್ಟಿ ಪಾಟೀಲ, ಮಲ್ಲಿಕಾರ್ಜುನ ಕನಕಟ್ಟೆ, ಚಂದ್ರಕಾಂತ ಗೌಡಪ್ಪ ಬಿರಾದಾರ ಇದ್ದರು. ಹಾವಯ್ನಾಸ್ವಾಮಿ ಸ್ವಾಗತಿಸಿದರು. ಶಾಂತವೀರಸ್ವಾಮಿ ನಿರೂಪಿಸಿದರು. ಪ್ರಭುಲಿಂಗಸ್ವಾಮಿ ವಂದಿಸಿದರು.