Advertisement

ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಸಿಗಲಿ

04:45 PM Jul 18, 2021 | Team Udayavani |

ಪ್ರಾಥಮಿಕ ಶಿಕ್ಷಣವೂ ವಿದ್ಯಾರ್ಥಿ ಜೀವನದ ಮೊದಲ ಹಂತ. ಈ ಹಂತದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗಬೇಕಿದೆ. ಈ ವಿಚಾರವಾಗಿ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ದೊರೆಯಬೇಕು ಎಂಬ ವಾದದ ಮಧ್ಯೆ, ಕೆಲವರು ಈ ಸ್ಪರ್ಧಾತ್ಮಕ ಜಗತ್ತಿಗೆ ಹೊಂದಿಕೊಳ್ಳಬೇಕಾದರೆ ಆಂಗ್ಲ ಮಾಧ್ಯಮ ಶಿಕ್ಷಣ ಅಗತ್ಯ ಎಂದು ವಾದಿಸುತ್ತಾರೆ. ಈ ಹಿನ್ನೆಲೆಯಲ್ಲಿ ಯುವಿ ಫ್ಯೂಷನ್‌ನ “ಫೈರ್‌ವುಡ್‌’ ಚರ್ಚೆ ಅಂಕಣಕ್ಕೆ ಮಾತೃಭಾಷೆ ಮತ್ತು ಆಂಗ್ಲ ಮಾಧ್ಯಮ ಶಿಕ್ಷಣದ ಕುರಿತು ಅಭಿಪ್ರಾಯಗಳನ್ನು ಆಹ್ವಾನಿಸಲಾಗಿತ್ತು. ಅಂತೆಯೇ ರಾಜ್ಯದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

Advertisement

ಮಾತೃಭಾಷೆ ಶಿಕ್ಷಣ ಪರಿಣಾಮಕಾರಿ:

ಪ್ರಾಥಮಿಕ ಶಿಕ್ಷಣವು ಮಾತೃಭಾಷೆಯಲ್ಲಿದ್ದರೆ ಮಕ್ಕಳಿಗೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಇದು ಮನೆ ಹಾಗೂ ಶಾಲೆಯ ನಡುವಿನ ಭಾಷೆ ನಿರಂತರತೆಯನ್ನು ಕಾಪಾಡುತ್ತದೆ. ಇಂಗ್ಲಿಷ್‌ನಂತಹ ಪರಿಚಯವಿಲ್ಲದ ಭಾಷೆಯಲ್ಲಿ ಕಲಿಯಲು ಒತ್ತಾಯಿಸಬಾರದು. ಗ್ರಾಮೀಣ ಪ್ರದೇಶಗಳಲ್ಲಿರುವ ಹೆತ್ತವರು ಇಂಗ್ಲಿಷ್‌ ಭಾಷೆಯಲ್ಲಿ ಅಸಮರ್ಥರಾಗಿದ್ದರೆ. ತಮ್ಮ ಮಕ್ಕಳಿಗೆ ಮನೆಯಲ್ಲಿ ಪಾಠ ಕಲಿಸಲು ಕಷ್ಟಪಡಬೇಕಾಗುತ್ತದೆ. ಹಾಗಾಗಿ ಮಾತೃಭಾಷೆಯನ್ನು ಬೋಧನೆ ಮಾಧ್ಯಮವಾಗಿ ಹೊಂದುವಲ್ಲಿ ಹೆಚ್ಚಿನ ಮೌಲ್ಯವಿದೆ. ಪ್ರಾಥಮಿಕ ಶಿಕ್ಷಣದ ಬಳಿಕ ಮಗು ಬಯಸಿದ್ದಲ್ಲಿ ಇಂಗ್ಲಿಷ್‌ ಮಾಧ್ಯಮ ವ್ಯವಸ್ಥೆಗೆ ಹೋಗಬಹುದು. ಶ್ರೀಲಕ್ಷ್ಮೀ, ಅಂಬಿಕಾ ಕಾಲೇಜು, ಪುತ್ತೂರು

ಶಿಕ್ಷಣ ಕಾಲಕ್ಕೆ ತಕ್ಕಂತೆ ಬದಲಾಗಲಿ:

ಹುಟ್ಟಿದ ಪುಟ್ಟ ಮಗುವಿಗೆ ಯಾವುದೇ ವಿಷಯ ಅರ್ಧವಾಗುವುದು, ನೋಡುವುದರಿಂದ, ನೋಡಿದ್ದನ್ನು ಕೇಳುವುದರಿಂದ – ಕೇಳಿದ್ದನ್ನು ಅನುಕರಿಸುತ್ತಾರೆ. ಹೀಗಾಗಿ ದಿನನಿತ್ಯ ತಾನು ಕೇಳುವ ಮಾತೃಭಾಷೆಯ ಮೂಲಕ ಸುತ್ತ ಮತ್ತಲಿನ ಪ್ರಪಂಚವನ್ನು ಮಗು ಅರ್ಥೈಸಿಕೊಳ್ಳುತ್ತದೆ. ಮಕ್ಕಳಿಗೆ ಪ್ರಪಂಚದ ಪರಿಚಯ ಬಾಲ್ಯದಲ್ಲಿ ಆಗುವುದು ಅದರ ಮಾತೃಭಾಷೆಯಲ್ಲಿ ಹೀಗಾಗಿ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡುವುದು ಉತ್ತಮ.  ಮಾತೃಭಾಷೆ ಶಿಕ್ಷಣ ಗ್ರಹಿಕೆಯ ಶಕ್ತಿ ಹೆಚ್ಚಿಸುವ ಜತೆಗೆ ವ್ಯಕ್ತಿತ್ವದ ವಿಕಸನಕ್ಕೆ ಸಹಕಾರಿಯಾಗಿದೆ. ಈ ಸ್ಪರ್ಧಾತ್ಮಕ ಯುಗದಲ್ಲಿಯೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾತೃಭಾಷೆಯಲ್ಲಿಯೂ ಬರೆಯಲು ಅವಕಾಶ ನೀಡಿರುವುದರಿಂದ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡಿ. ಆದರೆ ಮಾತೃಭಾಷೆಯನ್ನು ಮರೆಯಬಾರದು.  ನಿಖೀಲಾ, ಸಂತ ಫಿಲೋಮಿನಾ ಕಾಲೇಜು, ಮೈಸೂರು

Advertisement

ಮಾತೃಭಾಷೆ ಬೇಕು:

ಪಾಲಕರಲ್ಲಿ ನಾಡು ನುಡಿಯ ದೇಶದ ಬಗ್ಗೆ ಅಭಿಮಾನ ಪ್ರೀತಿ, ಗೌರವ ಇರಬೇಕು. ನಮ್ಮಲ್ಲೇ ಕಿತ್ತಾಡುತ ಕುಳಿತರೇ ಇಬ್ಬರ ನಡುವೆ 3ನೇಯವರಿಗೆ ಲಾಭವಾಗುತ್ತದೆ. ಈ ವಿಚಾರವಾಗಿ ನಾವು ಶಿಕ್ಷಣದಲ್ಲಿ ಪರಿಣಾಮಕಾರಿಯಾಗಿ ಮಾತೃಭಾಷೆಯನ್ನು ಕಲಿಸ ಬೇಕಿದೆ. ಮಾತೃಭಾಷೆ ನಮ್ಮನ್ನು ಭಾವನಾತ್ಮಕವಾಗಿ ಒಗ್ಗೂಡಿಸುತ್ತದೆ. ಆಂಗ್ಲ ಭಾಷೆ ಕೇವಲ ಬಸ್‌ನ ಕಿಟಕಿ ಯಂತೆ, ಆದರೆ ಮಾತೃಭಾಷೆ ಎನ್ನುವುದು ಬಸ್‌ನ ಬಾಗಿಲಿದ್ದಂತೆ. ಹಾಗೆ ನಾವು ಬಸ್‌ನ ಬಾಗಿಲಿನಿಂದ ಇಳಿಯುವುದೇ ವಿನಾಃ ಕಿಟಕಿಯಿಂದಲ್ಲ. ಹಾಗಾಗಿ ಮಾತೃಭಾಷೆ ಬೇಕು.ಸಂಪತ್‌ ಕುಮಾರ್‌ ಕಿಚಡಿ,  ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಮಹಾವಿದ್ಯಾಲಯ, ಧಾರವಾಡ 

 ಆರಂಭಿಕ ಕಲಿಕೆಗೆ ಮಾತೃಭಾಷೆಯೇ ಉತ್ತಮ:

ಮಕ್ಕಳು ಮಾತೃಭಾಷೆಯಲ್ಲಿ ತಮ್ಮ ಶಿಕ್ಷಣವನ್ನು ಪ್ರಾರಂಭಿಸುವುದು ಸೂಕ್ತ. ಯೋಚನಾಶಕ್ತಿ ಅಭಿವೃದ್ಧಿಗೆ ಮಾತೃಭಾಷೆಯೇ ಸೂಕ್ತವಾಗಿದೆ. ವಿಷಯವನ್ನು ಬೇಗ ಅರಿಯುವುದರಲ್ಲಿ ಮಾತ್ರಭಾಷೆ ಹೆಚ್ಚು ಸಹಾಯಕಾರಿ. ಕೇವಲ ಆಂಗ್ಲ ಭಾಷೆಯಿಂದಲೇ ಮಕ್ಕಳು ಒಳ್ಳೆಯ ಶಿಕ್ಷಣ ಪಡೆದುಕೊಳ್ಳಬಹುದು ಎಂಬ ಅಭಿಪ್ರಾಯ ತಪ್ಪು. ಉನ್ನತ ಶಿಕ್ಷಣ ಕಲಿಕೆಗೆ ಆಂಗ್ಲಭಾಷೆ ಅನಿವಾರ್ಯವಾದರೂ ಪ್ರಾಥಮಿಕ ಹಂತದಲ್ಲಿ ಮಾತೃಭಾಷಾ ಶಿಕ್ಷಣ ಅವಶ್ಯವಾಗಿದೆ. ತಮ್ಮ ಭಾಷೆಯಲ್ಲೇ ವಿಷಯಗಳನ್ನು ಕಲಿಯುವುದರಿಂದ ಗ್ರಹಿಕೆ ಸಾಮರ್ಥ್ಯ ಹೆಚ್ಚುತ್ತದೆ. ಹಾಗೆಯೇ ಶಿಕ್ಷಣವು ಭಾರವೆನಿಸದೇ ಸರಳವಾಗಿ, ಅರ್ಥವತ್ತಾಗಿಯೂ ಇರುತ್ತದೆ.ನಾಗರತ್ನಾ ಭಟ್‌, ಎಸ್‌ಡಿಎಂ ಕಾಲೇಜು, ಹೊನ್ನಾವರ

ಮಾತೃಭಾಷೆ ಶಿಕ್ಷಣ ಅಗತ್ಯ :

ನಾನು  ಮಾತೃ ಭಾಷೆಯಲ್ಲಿಯೇ  ಶಿಕ್ಷಣ ಪಡೆಯಲು ಇಷ್ಟಪಡುತ್ತೇನೆ. ಏಕೆಂದರೆ ಆ ಹೆಸರೇ ಸೂಚಿಸುವಂತೆ ಮಾತೃಭಾಷೆಯು ನನ್ನ ಮಾತೃನಷ್ಟೇ  ಪ್ರಾಮುಖ್ಯ ಪಡೆದಿರುತ್ತದೆ.  ಒಂದು  ಮಗುವು ತಾನು ಕನಸನ್ನು ಯಾವ ಭಾಷೆಯಲ್ಲಿ  ಕಾಣುತ್ತದೆಯೋ  ಅದೇ ಭಾಷೆಯಲ್ಲಿ  ಅವನಿಗೆ ಶಿಕ್ಷಣ ನೀಡಬೇಕು. ನಮ್ಮಿಂದ ಮಾತೃಭಾಷೆಯನ್ನು ದೂರ   ಮಾಡುವುದು ಒಂದೇ  ನಮ್ಮ  ತಾಯಿಯಿಂದ ನಮ್ಮನ್ನು ದೂರ ಮಾಡುವುದು ಒಂದೇ. ಈ ವಿಚಾರವಾಗಿ ಪ್ರಾಥಮಿಕ ಶಿಕ್ಷಣ ಪ್ರಥಮ ಹಂತವಾಗಿದ್ದು, ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡಿದಾಗ  ಮಾತ್ರ ಮಾನಸಿಕ, ಬೌದ್ಧಿಕ ಬೆಳವಣಿಗೆ ಸಾಧ್ಯ. ರಂಜಿತ್‌ ಶೆಟ್ಟಿ, ಎಫ್ಎಂಕೆಎಂಸಿ ಮಡಿಕೇರಿ

ಮಕ್ಕಳಿಗೆ ಒತ್ತಡವಿಲ್ಲದ ಶಿಕ್ಷಣ ಸಿಗಲಿ:

ಪ್ರತಿಯೊಂದು ಮಗು ಸಹ ತನ್ನ ಬಾಲ್ಯದಿಂದಲೇ, ಮಾತೃ ಭಾಷೆ ಹಾಗೂ ಅನಂತರ ಪ್ರಾದೇಶಿಕ ಭಾಷೆಯ ಮೂಲಕ,  ತನ್ನ ಸುತ್ತಮುತ್ತಲಿನ ಪ್ರಪಂಚವನ್ನು ಅರ್ಥೈಸಿಕೊಂಡು ಬೆಳೆದು ಬಂದಿರುತ್ತದೆ. ಹೀಗಿರುವಾಗ ಒಮ್ಮಿಂದೊಮ್ಮೆಗೆ, ತನ್ನ ಮನೆಯಲ್ಲಿಯೂ ಊರಿನಲ್ಲೂ ಮಾತನಾಡದ ಯಾವುದೋ ಮೂರನೇ ಭಾಷೆಯಲ್ಲಿ ಮಕ್ಕಳಿಗೆ ಹೇಗೆ ವಿಷಯ ಕಲಿಸಲು ಸಾಧ್ಯ? ಭಾಷೆಯನ್ನೇ ಕಲಿಯುವುದಕ್ಕೆ ಬಹಳಷ್ಟು ಸಮಯ ತಗಲುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಪ್ರಾಥಮಿಕ ಹಂತದಲ್ಲಿ ಮಾತೃ ಭಾಷೆಯಲ್ಲೇ ಶಿಕ್ಷಣ ಸಿಕ್ಕರೆ ಪ್ರತೀ ಮಗುವಿಗೂ, ವಿಷಯವನ್ನು ಕಲಿಯಲು, ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ.  ಯಾವುದೇ ಒತ್ತಡವಿಲ್ಲದೆ ಶಿಕ್ಷಣ ಪಡೆಯಬಹುದು. ಇದರರ್ಥ, ಇಂಗ್ಲಿಷ್‌ ಮುಖ್ಯವಿಲ್ಲ ಅಂದಲ್ಲ. ಎಲ್ಲ ಭಾಷಿಕರನ್ನು ಒಗ್ಗೂಡಿಸುವ ಭಾಷೆಯೇ ಇಂಗ್ಲಿಷ್‌. ಹಾಗಾಗಿ, ಅನಂತರದ ದಿನಗಳಲ್ಲಿ ಹಂತಹಂತವಾಗಿ ಇಂಗ್ಲಿಷ್‌ ಭಾಷೆಯ ಅಳವಡಿಕೆ ಹಾಗೂ ಅದರಲ್ಲಿ ಶಿಕ್ಷಣ ನೀಡುವುದು ಉತ್ತಮ ಆಯ್ಕೆ. ಕೀರ್ತನಾ ಶೆಟ್ಟಿ, ಆಳ್ವಾಸ್‌ ಕಾಲೇಜು, ಮೂಡುಬಿದಿರೆ

ಜೀವನ ಕಟ್ಟಿಕೊಳ್ಳಲು ಅನ್ಯಭಾಷೆ ಅಗತ್ಯ:

ಮಾತೃ ಭಾಷೆ ಹೆತ್ತ ತಾಯಿಯಾದರೆ, ಆಂಗ್ಲಭಾಷೆ ಆತ್ಮೀಯ ಸ್ನೇಹಿತನ ಹಾಗೆ, ತಾಯಿಯಿಂದನ್ನೇ ಜೀವನ ಎಂಬುದು ಮರೆಯಬಾರದು ಸ್ನೇಹಿತನಿಂದ ಜೀವನಕ್ಕೆ ಆದರ್ಶ ಎಂದು ದೂರ ತಳ್ಳಬಾರದು. ಹೀಗಾಗಿ ನಾವು ಮೊದಲು ಮಾತೃಭಾಷೆಗೆ ಹೆಚ್ಚಿನ ಆದ್ಯತೆ  ಕೊಡಬೇಕು. ಹಾಗೆ ಅನ್ಯ ಭಾಷೆಯನ್ನು ಜೀವನದ ಮೌಲ್ಯಕ್ಕೆ ಆಧಾರವಾಗಿಟ್ಟುಬೇಕು, ಮಾತೃಭಾಷೆ ಮತ್ತು ಆಂಗ್ಲ ಭಾಷೆ ಒಂದೇ ನಾಣ್ಯದ ಎರೆಡು ಮುಖಗಳ ಹಾಗೆ ಯಾವ ಕಡೆ ಬಿದ್ದರೂ. ಜೀವನದ ಹಾದಿ ಭಾಷೆಗಳ ಮಧ್ಯೆ ಸಾಗಬೇಕು. ಇಲ್ಲಿ ಭಾಷೆಯ ಆದ್ಯತೆಗಿಂತ  ನಾವು ಭಾಷೆಯನ್ನು ಅನುಸರಿಸುವ ವಿಧಾನ ಮುಖ್ಯ .  ಜೀವನ ಕಟ್ಟಿಕೊಳ್ಳಲು ಅನ್ಯ ಭಾಷೆಯನ್ನು ತಲೆಮೇಲೆ ಹೊತ್ತುಕೊಂಡರೆ, ಹೃದಯ ಶ್ರೀಮಂತಿಕೆಯಿಂದ ಬಾಳಲು  ಮನದಲ್ಲಿ ಮಾತೃಭಾಷೆಯನ್ನು ಪೂಜಿಸಬೇಕು. ನಾಗರತ್ನ ಅಕ್ಕರಿಕಿ, ಧಾರವಾಡ ವಿ.ವಿ.

ಭಾಷೆಯಾಗಿ ಆಂಗ್ಲ ಭಾಷೆಯನ್ನು ಕಲಿಸಲಿ:

ಆಂಗ್ಲಭಾಷೆಯಲ್ಲಿ ಕಲಿತು ಪರಿಕಲ್ಪನೆಗಳನ್ನು ಬಾಯಿಯಲ್ಲಿ ಹೇಳಿದರೂ, ಅದನ್ನು ಸರಿಯಾಗಿ ಪ್ರಯೋಗಿಸುವುದು ಕಷ್ಟವಾಗಿದೆ. ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣದ ಕಡ್ಡಾಯಗೊಳಿಸುವಿಕೆಯಲ್ಲಿ ಶಿಕ್ಷಣ ಕ್ಷೇತ್ರ ಅವಶ್ಯವಾಗಿ ಮಾಡಬೇಕಾದ ಕಾರ್ಯ. ಆಂಗ್ಲಭಾಷೆಯನ್ನು ಒಂದು “ಭಾಷೆ’ಯಾಗಿ ಕಲಿಸಬಹುದು. ನಮ್ಮೆಲ್ಲರ ಇಂಗ್ಲಿಷ್‌ ವ್ಯಾಮೋಹವು ಇಂದು ಮಕ್ಕಳು ಒಳ್ಳೆಯ ಇಂಗ್ಲಿಷನ್ನೂ ಮಾತಾಡದ, ಸ್ವತ್ಛ ತಿಳಿಗನ್ನಡವನ್ನೂ ಉಪಯೋಗಿಸಲು ಕಷ್ಟವಾದ ಅರ್ಧಂಬರ್ಧದ ಕಂಗ್ಲಿಷ್‌ ಆಗಿದೆ. ಹಾಗಿದ್ದರೆ ಇಂಗ್ಲಿಷ್‌ ಬೇಡವೆ? ಸದ್ಯಕ್ಕೆ ಇರುವ ಶಿಕ್ಷಣ ಕ್ರಮದಲ್ಲಿ, ಕನ್ನಡ ಪ್ರಾಥಮಿಕ ಶಿಕ್ಷಣದ ಕಡ್ಡಾಯಗೊಳಿಸುವಿಕೆ  ಒಂದು ಬಹುದೊಡ್ಡ ಕನಸೇ. ಆದರೆ ವೈಜ್ಞಾನಿಕವಾಗಿ ಉತ್ತಮ ಗುಣಮಟ್ಟದ ಪ್ರಾಥಮಿಕ ಶಿಕ್ಷಣಕ್ಕೆ ಮಾತೃಭಾಷೆ ಶಿಕ್ಷಣ ಮುಖ್ಯವಾದದ್ದು. ಮಾತೃಭಾಷೆಯ ಪಾತ್ರ ಅತ್ಯಂತ ಮಹತ್ವದ್ದು. ಮಕ್ಕಳು ಮನೆಯಲ್ಲಿ, ಸಾಮಾಜಿಕವಾಗಿ ಮಾತನಾಡುವ ಭಾಷೆಯಲ್ಲಿ ಕಲಿಸುವುದು ಉತ್ತಮ.ನಾಗರತ್ನಾ, ಸರಕಾರಿ ಪದವಿ ಪೂರ್ವ ಕಾಲೇಜು ಬಾರ್ಕೂರು

Advertisement

Udayavani is now on Telegram. Click here to join our channel and stay updated with the latest news.

Next