Advertisement

ರಂಗಸ್ಥಳದಲ್ಲೇ ಇಹಲೋಕ ತ್ಯಜಿಸಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿ

10:06 AM Mar 23, 2017 | |

ಮಂಗಳೂರು:  ಕಟೀಲು ಮೇಳದ ಮೇರು ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿ (63) ಅವರು ಪಾತ್ರ ನಿರ್ವಹಿಸುತ್ತಿರುವ ವೇಳೆಯಲ್ಲೇ  ವೇದಿಕೆಯಲ್ಲೇ ಕುಸಿದು ಇಹಲೋಕ ತ್ಯಜಿಸಿದ್ದಾರೆ. 

Advertisement

ಬುಧವಾರ ರಾತ್ರಿ ಎಕ್ಕಾರಿನ ದುರ್ಗಾನಗರದಲ್ಲಿ ನಡೆದ ಯಕ್ಷಗಾನ ಪ್ರದರ್ಶನ ಕಟೀಲು ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ  ಅರುಣಾಸುರ ಪಾತ್ರವನ್ನು ನಿರ್ವಹಿಸಿ ದುಂಬಿಯನ್ನು ಕೊಲ್ಲಲು ಬಂಡೆಯನ್ನು ಒಡೆಯುವ ದೃಶ್ಯದಲ್ಲಿ ಮನೋಜ್ಞ ಅಭಿನಯ ನೀಡುತ್ತಿದ್ದ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದರು.  ಕೂಡಲೇ ಅವರನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. 

ಕಟೀಲು ಮೇಳವೊಂದರಲ್ಲೇ ಸುದೀರ್ಘ‌ 47 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರಿಗೆ  ದೇವಿಮಹಾತ್ಮೆಯಲ್ಲಿನ ಮಹಿಷಾಸುರ ಪಾತ್ರ ಅಪಾರ ಖ್ಯಾತಿ ತಂದು ಕೊಟ್ಟಿತ್ತು. ದುರೃಷ್ಟವಷಾತ್‌ 15 ವರ್ಷಗಳ ಹಿಂದೆ ಹೃದಯಾಘಾತಕ್ಕೊಳಗಾದ ಬಳಿಕ ಅವರು ವೈದ್ಯರ ಸಲಹೆಯಂತೆ ಮಹಿಷಾಸುರನ ಪಾತ್ರವನ್ನು ನಿರ್ವಹಿಸುತ್ತಿರಲಿಲ್ಲ. 

ಬೆಳ್ತಂಗಡಿಯ ಗೆರುಕಟ್ಟೆಯಲ್ಲಿ ಅಮ್ಮು ಶೆಟ್ಟಿ  ಮತ್ತು ಕಮಲಾ ಶೆಟ್ಟಿ ದಂಪತಿಗಳ ಮಗನಾಗಿ ಜನಿಸಿದ ಗಂಗಯ್ಯ ಶೆಟ್ಟಿ ಅವರು 16 ನೇ ವಯಸ್ಸಿನಲ್ಲಿ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಧರ್ಮಸ್ಥಳ ಯಕ್ಷಗಾನ ಕೇಂದ್ರ ದಲ್ಲಿ ನಾಟ್ಯಾಭ್ಯಾಸ ಮಾಡಿದ ಅವರು ಹಂತ ಹಂತವಾಗಿ ವಿವಿಧ ಪಾತ್ರಗಳನ್ನು ನಿರ್ವಹಿಸಿ ಕಲಾ ರಸಿಕರ ಮನ ಗೆದ್ದಿದ್ದರು. 

ಬಣ್ಣದ ವೇಷಗಳಿಗೆ ವಿಶೇಷ ಜೀವ ತುಂಬುತ್ತಿದ್ದ ಗಂಗಯ್ಯ ಶೆಟ್ಟಿ ಅವರಿಗೆ ದುಷ್ಯಾಸನ ವಧೆಯ ರುದ್ರ ಭೀಮನ ಪಾತ್ರ ಅಪಾರ ಖ್ಯಾತಿ ತಂದುಕೊಟ್ಟಿತ್ತು. ರಕ್ತ ಬೀಜಾಸುರ ,ರಾವಣ, ಮಹಿರಾವಣ, ಕೌಂಡ್ಲಿಕ, ವಾಲಿ ಮುಂತಾದ ಪಾತ್ರಗಳು ಅಪಾರ ಖ್ಯಾತಿಯನ್ನು ತಂದುಕೊಟ್ಟಿದ್ದವು. 

Advertisement

ಗೇರುಕಟ್ಟೆಯವರ ಆಕಾಲಿಕ ನಿಧನ ತೆಂಕು ತಿಟ್ಟಿಗೆ ದೊಡ್ಡ ನಷ್ಟವೆನ್ನಬಹುದು. ಅಪಾರ ಯಕ್ಷಗಾನ ಅಭಿಮಾನಿಗಳು ಸೇರಿದಂತೆ ಗಣ್ಯರು  ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. 

ಗೇರು ಕಟ್ಟೆ ಶೆಟ್ಟರು ಪತ್ನಿ , ಮೂವರು ಪುತ್ರರು ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. 

ಈ ಹಿಂದೆ ಇದೇ ರೀತಿಯಲ್ಲಿ ಮೇರು ಶಿರಿಯಾರ ಮಂಜು ನಾಯ್ಕ, ಕೆರೆಮನೆ ಶಂಭುಹೆಗಡೆ , ದಾಮೋದರ ಮಂಡೆಚ್ಚ, ಚಿಪ್ಪಾರು ಕೃಷ್ಣಯ್ಯ ಬಳ್ಳಾಲ್‌, ಅರುವ ನಾರಾಯಣ ಶೆಟ್ಟಿ, ಅಶೋಕ ಕೊಲೆಕಾಡಿ ಅವರಂತಹ ದಿಗ್ಗಜ ಕಲಾವಿದರು  ಪಾತ್ರ ನಿರ್ವಹಿಸುತ್ತಿದ್ದ ವೇಳೆ ರಂಗದಲ್ಲೇ ಇಹಲೋಕ ತ್ಯಜಿಸಿದ್ದರು. 

ವಿಡಿಯೋ : ಗಂಗಯ್ಯ ಶೆಟ್ಟರ ದುಷ್ಯಾಸನ ವಧೆಯ ರುದ್ರ ಭೀಮನ ಪಾತ್ರ. ಭಾಗವತರಾಗಿ ಕುರಿಯ ಗಣಪತಿ ಶಾಸ್ತ್ರಿಗಳು, ದೂತನಾಗಿ ಪ್ರಸಿದ್ಧ ಹಾಸ್ಯ ಕಲಾವಿದ ಅರುಣ್‌ ಕುಮಾರ್‌ ಜಾರ್ಕಳ. ವಿಡಿಯೋ ಕೃಪೆ: ಕೆಆರ್‌ಕೆ ಭಟ್‌ ಚಿತ್ರಮೂಲ

Advertisement

Udayavani is now on Telegram. Click here to join our channel and stay updated with the latest news.

Next