ಬರ್ಲಿನ್: ಎನ್‌ಡಿಎ, ಯುಪಿಎ, ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟಗಳ ಬಗ್ಗೆ ಕೇಳಿದ್ದೇವೆ. ಆದರೆ, ಟ್ರಾಫಿಕ್ ಲೈಟ್ ಕೊಯಲೇಷನ್ ಗೊತ್ತಿದೆಯೇ? ಇದನ್ನು ಓದಿ ನಕ್ಕು ಬಿಡಬೇಡಿ.
ಜರ್ಮನಿಯಲ್ಲಿ ಶೀಘ್ರದಲ್ಲಿಯೇ ಅಧಿಕಾರಕ್ಕೆ ಬರಲಿರುವ ಮೈತ್ರಿಕೂಟದ ಹೆಸರೇ ಟ್ರಾಫಿಕ್ ಲೈಟ್ ಕೊಯಲೇಷನ್. ಅಲ್ಲಿನ ಪ್ರಮುಖ ಪಕ್ಷಗಳಾಗಿರುವ ಜರ್ಮನಿ ಸೋಶಿಯಲ್ ಡೆಮಾಕ್ರಾಟ್, ಫ್ರೀ ಡೆಮಾಕ್ರಾಟ್ಸ್ ಮತ್ತು ಎನ್ವಿರಾನ್‌ಮೆಂಟಲ್ ಗ್ರೀನ್ಸ್ ಪಕ್ಷಗಳು ಒಟ್ಟುಗೂಡಿ ರಚಿಸಿರುವ ಮೈತ್ರಿಕೂಟದ ಹೆಸರೇ ಇದು.
ಜರ್ಮನಿ ಸೋಶಿಯಲ್ ಡೆಮಾಕ್ರಾಟ್ ಪಕ್ಷದ ಮುಖಂಡ ಒಲಾಫ್ ಶೋಲ್ಸ್ ಅವರು ಮುಂದಿನ ಚಾನ್ಸಲರ್ ಆಗಲಿದ್ದಾರೆ. ಈ ಮೂಲಕ 16 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಹಾಲಿ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ ಅಧಿಕಾರದ ಅವಧಿ ಅಧಿಕೃತವಾಗಿ ಮುಕ್ತಾಯವಾಗಿದೆ. ಸೆಪ್ಟೆಂಬರ್‌ನಲ್ಲಿ ಚುನಾವಣೆ ನಡೆದಿದ್ದರೂ, ಯಾವುದೇ ಪಕ್ಷಕ್ಕೆ ಬಹುಮತ ಬರದೇ ಇದ್ದ ಕಾರಣ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು.
ಹೀಗಾಗಿ, ಜಮನ್ ಸೋಶಿಯಲ್ ಡೆಮಾಕ್ರಾಟಿಕ್ ಪಕ್ಷ ನೇತೃತ್ವದ ಮೈತ್ರಿಕೂಟ, ಟ್ರಾಫಿಕ್ ಲೈಟ್ ಕೊಯಲೇಷನ್ ಅಧಿಕಾರಕ್ಕೆ ಬರಲಿದೆ. ಮೂರು ಪಕ್ಷಗಳು ಹೊಂದಿರುವ ಬಣ್ಣಗಳನ್ನು ಆಧಾರಿಸಿ ಮೈತ್ರಿಕೂಟಕ್ಕೆ ಈ ಹೆಸರು ನೀಡಿವೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಲಾಫ್ ಶೋಲ್ಸ್ ನಮ್ಮ ಮೈತ್ರಿಕೂಟ ಜರ್ಮನಿಗೆ ಹೆಚ್ಚಿನ ಬಲಿಷ್ಠತೆಯನ್ನು ತಂದುಕೊಡಲಿದೆ. ಮುಂದಿನ ತಿಂಗಳ ಮೊದಲ ವಾರದಲ್ಲಿ ಸರ್ಕಾರ ಪ್ರಮಾಣ ವಚನ ಸ್ವೀಕರಿಸಲಿದೆ ಎಂದು ಹೇಳಿದ್ದಾರೆ.