ಜರ್ಮನಿ ಸತತ 2ನೇ ವಿಶ್ವಕಪ್ ಪಂದ್ಯಾ ವಳಿಯಲ್ಲೂ ನಾಕೌಟ್ ಪ್ರವೇಶಿಸಲು ವಿಫಲ ವಾದುದೊಂದು ವಿಪರ್ಯಾಸ. ವಿಶ್ವಕಪ್ ಚರಿತ್ರೆಯಲ್ಲಿ ಇದೇ ಮೊದಲ ಸಲ ಗ್ರೂಪ್ ಹಂತದ ಮೊದಲ 2 ಪಂದ್ಯಗಳನ್ನು ಗೆಲ್ಲಲು ವಿಫಲವಾದಾಗಲೇ ಜರ್ಮನಿಯ ಹಾದಿ ದುರ್ಗಮಗೊಂಡಿತ್ತು. ಜಪಾನ್ ವಿರುದ್ಧ ಸೋತ ಜರ್ಮನಿ, ಬಳಿಕ ಸ್ಪೇನ್ ವಿರುದ್ಧ ಡ್ರಾ ಮಾಡಿಕೊಂಡಿತ್ತು.
ಹೀಗಾಗಿ ಕೋಸ್ಟರಿಕ ವಿರುದ್ಧ ಇನ್ನೂ ದೊಡ್ಡ ಅಂತರದ ಗೆಲುವು ದಾಖಲಿಸಬೇಕಿತ್ತು. ಜತೆಗೆ ಜಪಾನ್ ವಿರುದ್ಧ ಸ್ಪೇನ್ ಗೆಲುವನ್ನು ಹಾರೈಸಬೇಕಿತ್ತು. ಆದರೆ ಯಾವುದೂ ಫಲಿಸಲಿಲ್ಲ.
7 ಮಂದಿ ಬೇಯರ್ನ್ ಮ್ಯೂನಿಚ್ ತಂಡದ ಆಟಗಾರರನ್ನು ಹೊಂದಿದ್ದ ಜರ್ಮನಿ 10ನೇ ನಿಮಿಷದಲ್ಲೇ ಗೋಲಿನ ಖಾತೆ ತೆರೆಯಿತು. ಸರ್ಗೆ ಗ್ನಾಬ್ರಿ ಹೆಡ್ ಗೋಲ್ ಮೂಲಕ ಜರ್ಮನಿಗೆ ಮುನ್ನಡೆ ತಂದಿತ್ತರು.
ದ್ವಿತೀಯಾರ್ಧದ ಆರಂಭದಲ್ಲಿ ಕೋಸ್ಟರೀಕ ಮೇಲುಗೈ ಸಾಧಿಸಿತು. ಯೆಲ್ಸಿನ್ ತೆಜೇದ ಮತ್ತು ಮ್ಯಾನ್ಯುವಲ್ ನ್ಯೂಯರ್ ಕ್ರಮವಾಗಿ 58ನೇ ಹಾಗೂ 70ನೇ ನಿಮಿಷದಲ್ಲಿ ಗೋಲು ಬಾರಿಸಿದಾಗ ಜರ್ಮನ್ ಪಡೆ ಆತಂಕಕ್ಕೆ ಸಿಲುಕಿತು. ಗೆಲುವಿನ ಮುಖ ಕಾಣದೆ ಕೂಟದಿಂದ ನಿರ್ಗಮಿಸುವ ಅತಂಕದಲ್ಲಿತ್ತು. ಆದರೆ ಕೊನೆಯ 16 ನಿಮಿಷಗಳ ಅವಧಿಯಲ್ಲಿ 3 ಗೋಲು ಬಾರಿಸಿ ಪರಾಕ್ರಮ ಮೆರೆಯಿತು.
ಬದಲಿ ಆಟಗಾರ ಕೈ ಹಾವಟ್ಜ್ ಅವಳಿ ಗೋಲು ಸಿಡಿಸಿದರು (73ನೇ ಹಾಗೂ 85ನೇ ನಿಮಿಷ). 89ನೇ ನಿಮಿಷದಲ್ಲಿ ನಿಕ್ಲಾಸ್ ಫುಲ್ಕ್ರಗ್ ಜರ್ಮನಿಯ 4ನೇ ಗೋಲನ್ನು ಬಾರಿಸಿದರು. ಆದರೆ ಇವರ ಯಾವ ಸಾಹಸವೂ ಜರ್ಮನಿಯ ನಿರ್ಗಮನವನ್ನು ತಡೆಯಲಿಲ್ಲ.