ಮಂಗಳೂರು: ಭಾರತ ಸಾಂಸ್ಕೃತಿಕ ವೈಭವದಿಂದ ಕೂಡಿದ ದೇಶ. ಇಲ್ಲಿನ ಸಂಸ್ಕೃತಿಗೆ ವಿದೇಶಿಗರೂ ಮನಸೋಲುತ್ತಾರೆ. ವಿವಿಧ ದೇಶಗಳ ಸಂಸ್ಕೃತಿಯನ್ನು ಅರಿಯುವ ಉದ್ದೇಶದಿಂದ ಜರ್ಮನಿಯ ದಂಪತಿ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ವಿಶ್ವಪರ್ಯಟನೆ ಆರಂಭಿಸಿದ್ದು, ಕೆಲವು ದಿನಗಳಿಂದ ಮಂಗಳೂರಿನಲ್ಲಿ ವಾಸವಿದ್ದಾರೆ.
ವಿಶ್ವದ ವಿವಿಧ ರಾಷ್ಟ್ರಗಳ ಜನಜೀವನ, ವೈವಿಧ್ಯಗಳನ್ನು ತಿಳಿಯುತ್ತ ಸಾಗುತ್ತಿರುವ ಇವರು ಜರ್ಮನಿಯ ಉದ್ಯಮಿ ಪೀಟರ್ ಮತ್ತು ಮೂಳೆ ಶಾಸ್ತ್ರಜ್ಞೆಯಾಗಿರುವ ಅಲೋನಾ ದಂಪತಿ. ವಿವಿಧ ದೇಶಗಳಲ್ಲಿ ಜನರ ಜೀವನಶೈಲಿಯನ್ನು ಅರ್ಥಮಾಡಿ ಕೊಳ್ಳುವುದು ಇವರ ಪ್ರಮುಖ ಉದ್ದೇಶ. ಈ ದಂಪತಿ 2019ರ ಮೇ 1ರಂದು ವಿಶ್ವಯಾತ್ರೆಯನ್ನು ಆರಂಭಿಸಿದ್ದು, ಈಗ ಮಂಗಳೂರಿಗೆ ಬಂದಿದ್ದಾರೆ.
ದಂಪತಿ ಈಗಾಗಲೇ ಪೋಲೆಂಡ್, ಐಸ್‌ಲ್ಯಾಂಡ್, ರಷ್ಯಾ, ಮಂಗೋಲಿಯ, ಕಜಕಿಸ್ಥಾನ, ಉಜ್ಬೆಕಿಸ್ಥಾನ, ಕಿರ್ಗಿಸ್ಥಾನ, ತಜಕಿಸ್ಥಾನ, ಇರಾನ್, ಬಲೂಚಿಸ್ಥಾನ, ಪಾಕಿಸ್ಥಾನಗಳಿಗೆ ಭೇಟಿ ನೀಡಿದ್ದಾರೆ.
ಕಳೆದ ನವೆಂಬರ್ ತಿಂಗಳಿನಲ್ಲಿ ಭಾರತಕ್ಕೆ ಆಗಮಿಸಿದ್ದು, ಹೊಸದಿಲ್ಲಿ, ಆಗ್ರಾ, ತಾಜ್‌ಮಹಲ್, ಎಲ್ಲೋರಗಳಿಗೆ ಭೇಟಿ ನೀಡಿದ್ದಾರೆ. ಮೂರು ವಾರಗಳ ಹಿಂದೆ ಮಂಗಳೂರಿಗೆ ಆಗಮಿಸಿದ್ದು, ಕಾರಿನಲ್ಲಿ ಸಣ್ಣ ದೋಷ ಕಾಣಿಸಿಕೊಂಡಿದೆ. ಮರ್ಸಿಡಿಸ್ ಕಾರು ಶೋರೂಂನಲ್ಲಿ ಬಿಡಿ ಭಾಗ ಖರೀದಿ ಮಾಡಲಿದ್ದು, ಅದು ಸಿಕ್ಕ ಕೂಡಲೇ ದುರಸ್ತಿಪಡಿಸಿ ಕೇರಳ, ಗೋವಾ ಕಡೆಗೆ ಪ್ರಯಾಣ ಮುಂದುವರಿಸಲಿದ್ದಾರೆ.
ಕಾರಿನಲ್ಲೇ ಪುಟ್ಟ ಮನೆ
ಪೀಟರ್ ಮತ್ತು ಅಲೋನಾ ದಂಪತಿ ತಮ್ಮ ಬೆಂಜ್ ವಾಹನವನ್ನು ಪುಟ್ಟ ಮನೆಯನ್ನಾಗಿ ಮಾರ್ಪಡಿಸಿದ್ದಾರೆ. ಕೈ ತೊಳೆಯಲು ಸಿಂಕ್ ಇದ್ದು, ಕಾರಿನ ಮೇಲ್ಭಾಗವನ್ನು ತೆರೆದು ವಿಶ್ರಾಂತಿ ಪಡೆಯುತ್ತಾರೆ. ವಿವಿಧ ರಾಷ್ಟ್ರಗಳಿಗೆ ಭೇಟಿ ನೀಡುತ್ತಿರುವ ಸಂದರ್ಭ ಆಯಾ ಪ್ರದೇಶದ ಪ್ರಮುಖ ವ್ಯಕ್ತಿಗಳ ಸಹಿಯನ್ನು ಕೂಡ ಕಾರಿನ ಮೇಲೆ ಹಾಕಿಸಿಕೊಳ್ಳುತ್ತಿದ್ದಾರೆ.