Advertisement
ಬಡಗಿಯ ಹೆಂಡತಿ ಗಂಡನನ್ನು ಬಳಿಗೆ ಕರೆದು ತೋಟವನ್ನು ತೋರಿಸಿ ತರಕಾರಿಗಳನ್ನು ತರಲು ಹೇಳಿದಳು. ಅವಳ ಬಯಕೆ ಕೇಳಿ ಅವನು ಹೌಹಾರಿದ. “”ಅದು ಒಬ್ಬ ಮಾಟಗಾತಿಯ ತೋಟ. ಅಲ್ಲಿಂದ ತರಕಾರಿ ತಂದರೆ ಅವಳು ಕೋಪಗೊಂಡು ಶಿಕ್ಷಿಸುತ್ತಾಳೆ” ಎಂದು ಹೇಳಿದ. ಆದರೆ ಅವಳು ಕೇಳಲಿಲ್ಲ. ತರಕಾರಿ ತಂದು ಕೊಡದಿದ್ದರೆ ಸತ್ತು ಹೋಗುವುದಾಗಿ ಹಟ ಹಿಡಿದಳು. ವಿಧಿಯಿಲ್ಲದೆ ಬಡಗಿ ಮಾಟಗಾತಿಯ ತೋಟಕ್ಕೆ ಹೋಗಿ ತರಕಾರಿ ಕದಿಯುವಾಗ ಸಿಕ್ಕಿಬಿದ್ದ. “”ನಿನಗೆ ಶಿಕ್ಷೆ ವಿಧಿಸುತ್ತೇನೆ” ಎಂದು ಅವಳು ದಂಡಿಸಲು ಮುಂದಾದಾಗ ಕೈ ಜೋಡಿಸಿ, “”ದಯವಿಟ್ಟು ಕ್ಷಮಿಸಿ. ನನ್ನ ಹೆಂಡತಿ ತುಂಬು ಗರ್ಭಿಣಿ. ಅವಳಿಗೆ ತರಕಾರಿಗಳನ್ನು ಬೇಯಿಸಿ ತಿನ್ನಬೇಕೆಂಬ ಬಯಕೆ ತಾಳಲಾಗಲಿಲ್ಲ. ಹೀಗಾಗಿ ಈ ತಪ್ಪು$ಕೆಲಸ ಮಾಡಿದೆ” ಎಂದು ಕೇಳಿಕೊಂಡ.
Related Articles
Advertisement
ಒಂದು ದಿನ ಒಬ್ಬ ರಾಜಕುಮಾರನು ದೇಶ ಸಂಚಾರ ಮಾಡುತ್ತ ಮಾಟಗಾತಿಯ ಮನೆಯಿರುವ ಪ್ರದೇಶಕ್ಕೆ ಬಂದಿದ್ದ. ಆಗ ಅವಳ ಮನೆಯ ಹೊರಭಾಗದಲ್ಲಿ ಬಿದ್ದಿರುವ ಬಂಗಾರ ವರ್ಣದ ಕೂದಲುಗಳನ್ನು ನೋಡಿದ. ಇಷ್ಟು ಬೆಲೆಬಾಳುವ ಕೂದಲಿರುವ ಸುಂದರಿ ಯಾರು ಎಂದು ತಿಳಿಯಲು ಅವನಿಗೆ ಕುತೂಹಲವಾಯಿತು. ಮರೆಯಲ್ಲಿ ಅಡಗಿ ನಿಂತ. ಕಿಟಕಿಯಿಂದ ಇಳಿಬೀಳುವ ಜಡೆಯಲ್ಲಿ ಮಾಟಗಾತಿ ಕೆಳಗಿಳಿಯುವುದು, ಮತ್ತೆ ಅವಳನ್ನು ಕರೆದು ಅದೇ ಜಡೆಯಲ್ಲಿ ಮೇಲೇರುವುದನ್ನು ನೋಡಿದ. ಮಾಟಗಾತಿ ಹೊರಗೆ ಹೋದ ಮೇಲೆ ಅವಳ ಧ್ವನಿಯನ್ನು ಅನುಕರಿಸಿ ಕರೆದ. ಆಗ ಮಹಡಿಯಿಂದ ಜಡೆ ಕೆಳಗಿಳಿದು ಬಂತು. ಅದನ್ನು ಹಿಡಿದುಕೊಂಡು ಮೇಲೆ ಹತ್ತಿದ.
ಒಳಗಿರುವ ಸುಂದರಿಯನ್ನು ಕಂಡು ರಾಜಕುಮಾರನಿಗೆ ತುಂಬ ಆಶ್ಚರ್ಯ ವಾಯಿತು. ಆದರೆ ಸುಂದರಿಗೆ ಮಾಟಗಾತಿಯನ್ನು ಬಿಟ್ಟರೆ ಬೇರೆಯವರು ಹೇಗಿದ್ದಾರೆ, ಮನೆಯಿಂದ ಹೊರಗೆ ಬೇರೆ ಏನಿದೆ ಎಂಬುದು ಒಂದೂ ಗೊತ್ತೇ ಇರಲಿಲ್ಲ. ಅವಳು ಗಾಬರಿಯಿಂದ, “”ಯಾರು ನೀನು, ನನಗೇನು ಕೆಟ್ಟದು ಮಾಡಲು ಬಂದಿರುವೆ?” ಎಂದು ಕೂಗಿಕೊಂಡಳು. ರಾಜಕುವರನು, “”ನಾನು ನಿನ್ನಂತೆಯೇ ಮನುಷ್ಯ. ನಿನಗೆ ಕೆಟ್ಟದು ಮಾಡಲು ಬಂದಿಲ್ಲ. ನೀನು ಒಬ್ಬ ದುಷ್ಟ ಹೆಂಗಸಿನ ಕೈಗೆ ಸಿಲುಕಿ ಕಷ್ಟ ಪಡುತ್ತಿದ್ದೀಯಾ” ಎಂದು ಸವಿಮಾತಿನಿಂದ ಹೇಳಿ ಅವಳ ಗೆಳೆತನವನ್ನು ಸಂಪಾದಿಸಿದ.
ಆಮೇಲೆ ಮಾಟಗಾತಿ ಇಲ್ಲದ ಸಮಯ ನೋಡಿ ರಾಜಕುಮಾರ ದಿನವೂ ಸುಂದರಿಯ ಬಳಿಗೆ ಬರಲಾರಂಭಿಸಿದ. ಅವಳಿಗೆ ಬಗೆಬಗೆಯ ಹಣ್ಣುಗಳನ್ನು, ತಿಂಡಿಗಳನ್ನು ತಂದು ಕೊಡುತ್ತಿದ್ದ. ಹಾಡುಗಳನ್ನು ಕಲಿಸುತ್ತಿದ್ದ. ಹೀಗೆ ಬಹು ಸಮಯ ಕಳೆದಾಗ ಒಂದು ದಿನ ಮಾಟಗಾತಿಗೆ ಏನೋ ಅನುಮಾನ ಬಂದಿತು. ತಾನು ಇಲ್ಲದ ಸಮಯದಲ್ಲಿ ಯಾರೋ ಸುಂದರಿಯ ಬಳಿಗೆ ಬರುತ್ತಿದ್ದಾರೆ, ಇದನ್ನು ಕಂಡು ಹಿಡಿಯಬೇಕು ಎಂದು ನಿರ್ಧರಿಸಿ ಅಡಗಿ ಕುಳಿತಳು. ಈ ವಿಷಯ ತಿಳಿಯದೆ ರಾಜಕುವರ ಎಂದಿನಂತೆಯೇ ಸುಂದರಿಯ ಬಳಿಗೆ ಬಂದ. ಅವನನ್ನು ನೋಡಿ ಸುಂದರಿಯು ಸುಶ್ರಾವ್ಯವಾಗಿ ಹಾಡುವುದಕ್ಕೆ ಆರಂಭಿಸಿದಳು.
ಇದನ್ನು ಕಂಡು ಮಾಟಗಾತಿಗೆ ಅಸಾಧಾರಣವಾದ ಕೋಪ ಬಂದಿತು. ಸುಂದರಿಯನ್ನು ಕೈಯಲ್ಲಿ ಹಿಡಿದುಕೊಂಡಳು. “”ನನ್ನ ಹೊರತು ಹೊರಗಿನ ಯಾರ ಬಳಿಯೂ ಮಾತನಾಡಬಾರದು, ಯಾರನ್ನೂ ನೋಡಬಾರದು ಎಂದು ಎಚ್ಚರಿಸಿದ್ದೆ. ಆದರೆ ನೀನು ನನ್ನ ಮಾತನ್ನು ಮೀರಿದೆ. ಇವನೊಂದಿಗೆ ಸ್ನೇಹ ಬೆಳೆಸಿ ಹಾಡಲೂ ಆರಂಭಿಸಿದೆ. ನಿನ್ನನ್ನು ಒಂದು ಹಕ್ಕಿಯನ್ನಾಗಿ ಮಾಡಿ ಹಾರಲು ಬಿಡುತ್ತೇನೆ. ಬೇಕಾದಷ್ಟು ಹಾಡುತ್ತ ಹಾರಾಡಿಕೊಂಡಿರು” ಎಂದು ಹೇಳಿದಳು. ಅವಳ ಮಂತ್ರದಿಂದ ಸುಂದರಿ ಹಕ್ಕಿಯಾಗಿ ಬದಲಾಯಿಸಿ ಫುರ್ರನೆ ಹಾರಿಕೊಂಡು ಹೋದಳು.
ಮಾಟಗಾತಿ ಸುಮ್ಮನಿರಲಿಲ್ಲ. ಮೋಸದಿಂದ ತನ್ನ ಮನೆಯ ಮಹಡಿಯನ್ನೇರುತ್ತಿದ್ದ ರಾಜಕುಮಾರನನ್ನು ಬೆರಳಿನಿಂದ ಎತ್ತಿದಳು. ಗಿರಗಿರನೆ ತಿರುಗಿಸಿ ಬಹು ದೂರಕ್ಕೆ ಬೀಳುವಂತೆ ಎಸೆದುಬಿಟ್ಟಳು. ಅವನು ಗಾಳಿಗೆ ಸಿಲುಕಿದ ತರಗೆಲೆಯಂತೆ ಸುತ್ತುತ್ತ ಒಂದು ಮುಳ್ಳುಗಳಿರುವ ಪೊದೆಯೊಳಗೆ ಬಂದುಬಿದ್ದ. ಮುಳ್ಳುಗಳು ಅವನ ಮೈತುಂಬ ಚುಚ್ಚಿ ಕೊಂಡವು. ಅವನು ಮುಂದೆ ಯಾರನ್ನೂ ನೋಡಬಾರದೆಂದು ಅವನ ಎರಡು ಕಣ್ಣುಗಳನ್ನು ಚುಚ್ಚಿ ಕುರುಡನಾಗಿ ಮಾಡಿದವು.
ಮುಂದೆ ಹೋಗಲು ದಾರಿ ಕಾಣದೆ ರಾಜಕುಮಾರ ದುಃಖೀಸುತ್ತ ಕುಳಿತಾಗ ದೂರದಿಂದ ಸುಶ್ರಾವ್ಯವಾದ ಕಂಠದಲ್ಲಿ ಹಕ್ಕಿಯೊಂದು ಹಾಡು ವುದು ಕೇಳಿಸಿತು. ಇದು ತಾನೇ ಕಲಿಸಿದ ಹಾಡು ಎಂಬುದು ಅವನಿಗೆ ಗೊತ್ತಾಯಿತು. ಹಕ್ಕಿಯಾದರೂ ಸುಂದರ ಹುಡುಗಿ ಹಾಡನ್ನು ಮರೆಯದೆ ಹಾಡುತ್ತ ತನ್ನನ್ನು ಕರೆಯುತ್ತಿದ್ದಾಳೆ ಎಂದು ಅವನು ತಿಳಿದುಕೊಂಡ. ಹಾಡನ್ನೇ ಆಲಿಸುತ್ತ ತೆವಳಿಕೊಂಡು ಮುಂದೆ ಸಾಗಿ ಹಕ್ಕಿ ಕುಳಿತಿದ್ದ ಮರದ ಬಳಿಗೆ ತಲುಪಿದ.
ಹಾಡುತ್ತಿದ್ದ ಹಕ್ಕಿ ರಾಜಕುಮಾರನನ್ನು ಗುರುತಿಸಿ ಬಳಿಗೆ ಬಂದಿತು. ಅವನು ಅದನ್ನು ಹಿಡಿದುಕೊಂಡ. ಹಕ್ಕಿ ಪ್ರೀತಿಯಿಂದ ಅವನ ರೆಪ್ಪೆಗಳಿಗೆ ಮುತ್ತಿಕ್ಕಿತು. ಅದರಿಂದ ಅವನು ಕಳೆದುಕೊಂಡಿದ್ದ ಕಣ್ಣುಗಳು ಮತ್ತೆ ಬಂದವು. ಅವನಿಗೆ ಆದ ಸಂತೋಷ ಅಷ್ಟಿಷ್ಟಲ್ಲ. “”ನೀನು ಹುಡುಗಿಯಾಗಿ ದ್ದರೂ ಹಕ್ಕಿಯಾಗಿದ್ದರೂ ನನ್ನ ಬಾಳಸಂಗಾತಿ ನೀನೇ ಎಂದು ನಿರ್ಧರಿಸಿದ್ದೇನೆ. ಬಾ, ನನ್ನ ಅರಮನೆಗೆ” ಎಂದು ಹಕ್ಕಿಯನ್ನು ಎದೆಗವಚಿಕೊಂಡ.
ರಾಜಕುಮಾರನ ಪ್ರೀತಿಯನ್ನು ಆಕಾಶದಲ್ಲಿ ಹಾರುತ್ತಿದ್ದ ಒಬ್ಬ ಯಕ್ಷಿಣಿಯು ನೋಡಿದಳು. ಅವಳಿಗೆ ಅವನ ಮೇಲೆ ಕರುಣೆ ಉಕ್ಕಿ ಹರಿಯಿತು. ಕೆಳಗಿಳಿದು ಬಂದು ತನ್ನ ಮಂತ್ರದಂಡದಿಂದ ಹಕ್ಕಿಯನ್ನು ಸ್ಪರ್ಶಿಸಿದಳು. ಅದರಿಂದ ಹಕ್ಕಿ ಮಾಯವಾಗಿ ಅಲ್ಲಿ ಸುಂದರಿಯಾದ ಹುಡುಗಿ ನಿಂತುಕೊಂಡಿದ್ದಳು. ರಾಜಕುಮಾರ ಅವಳನ್ನು ಅರಮನೆಗೆ ಕರೆತಂದು ಮದುವೆಯಾಗಿ ಸುಖವಾಗಿದ್ದ.
ಪ. ರಾಮಕೃಷ್ಣ ಶಾಸ್ತ್ರಿ