ಮಣಿಪಾಲ: ಇಂದಿನ ದಿನಗಳಲ್ಲಿ ಜನರಲ್ಲಿ ಮಾನವೀಯ ಸ್ಪಂದನೆಯೇ ಇಲ್ಲವಾಗುತ್ತಿದೆ. ಯಾರಿಗೆ ಏನಾದರಾಗಲಿ ತಮ್ಮ ಪಾಡಿಗೆ ತಾವಿದ್ದು ಬಿಡುತ್ತಾರೆ. ಹೊರ ಪ್ರಪಂಚದಲ್ಲೇ ಹೀಗಿರುವಾಗ ಮಾನವೀಯ ಸ್ಪಂದನೆ ಜೈಲಿನಲ್ಲಿ ಸಿಗುತ್ತದೆ ಎಂದರೆ ಯಾರೂ ನಿರೀಕ್ಷೆಯೂ ಮಾಡಲಿಕ್ಕೆ ಸಾಧ್ಯವಿಲ್ಲ. ಆದರೆ ಜಾರ್ಜಿಯಾದ ಗ್ವಿನೆಟ್ ಕಂಟ್ರಿ ಜೈಲಿನ ಮೂವರು ಕೈದಿಗಳು ಮಾನವೀಯ ಸ್ಪಂದನೆ ನೀಡಿ ಜೈಲಿನ ಅಧಿಕಾರಿಯ ಜೀವ ಉಳಿಸಿ ಎಲ್ಲೆಡೆ ಪ್ರಶಂಸೆಗೆ ಒಳಗಾಗಿದ್ದಾರೆ.
ಜೈಲಿನ ಅಧಿಕಾರಿನ್ನೇ ಹಿಂಸೆ ನೀಡಿ ತನ್ನ ಕೋಪ ತೀರಿಸಿಕೊಂಡ ಎಷ್ಟೋ ಕೈದಿಗಳಿದ್ದಾರೆ. ಆದರೆ ಜಾರ್ಜಿಯಾದ ಈ ಮೂವರು ಕೈದಿಗಳು ತಮ್ಮ ಸಮಯಪ್ರಜ್ಞೆಯಿಂದ ಭದ್ರತಾ ವಸತಿ ಘಟಕದ ಅಧಿಕಾರಿಯ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಮೂವರು ಕೈದಿಗಳು ಪ್ರದರ್ಶಿಸಿದ ಧೈರ್ಯ, ದೃಢ ನಿಶ್ಚಯ ಮತ್ತು ದಯೆಗಾಗಿ ನಾವು ಬಹಳವಾಗಿ ಪ್ರಶಂಸಿಸುತ್ತೇವೆ ಎಂದು ಗ್ವಿನೆಟ್ ಕಂಟ್ರಿ ಶೆರಿಫ್ ಕಚೇರಿ ಮಂಗಳವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದೆ.
ಜೈಲಿನ ಅಧಿಕಾರಿಯು ವಸತಿ ಘಟಕದಲ್ಲಿ ತನ್ನ ಭದ್ರತಾ ಕಾರ್ಯಗಳನ್ನು ನಿರ್ವಹಿಸುವಾಗ ಅವರು ಆರೋಗ್ಯ ಸಂಬಂಧಿ ಸಮಸ್ಯೆಯಲ್ಲಿ ಸಿಲುಕಿವುದನ್ನು ಕೈದಿಗಳು ಗಮನಿಸಿದರು. ಆ ಅಧಿಕಾರಿ ತಮ್ಮ ಆಸನಕ್ಕೆ ಬರುವಾಗ ಪ್ರಜ್ಞೆ ತಪ್ಪಿ ಕಾಂಕ್ರೀಟ್ ನೆಲಕ್ಕೆ ಬಿದ್ದರು. ಆ ರಭಸಕ್ಕೆ ತಲೆಯ ಹಿಂಬದಿಗೆ ಏಟು ಬಿದ್ದಿತ್ತು. ಇದನ್ನು ಹತ್ತಿರದ ಜೈಲುಕೋಣೆಯಲ್ಲಿದ್ದ ಖೈದಿಗಳು ಜೋರಾಗಿ ಬಾಗಿಲ ಮೇಲೆ ಬಡಿದು ಸದ್ದು ಮಾಡಲಾರಂಭಿಸಿದರು. ಆಗ ಅಧಿಕಾರಿ ನಿಧಾನವಾಗಿ ಅವರ ಬಾಗಿಲು ತೆರೆದು ಮತ್ತೆ ಮೂರ್ಛೆ ಹೋದರು. ಆಗ ತುರ್ತು ಸಹಾಯದ ಅಗತ್ಯವನ್ನರಿತ ಕೈದಿಗಳು ಸಮಯಪ್ರಜ್ಞೆ ಮೆರೆದು ಅಧಿಕಾರಿಯ ಜೀವ ಉಳಿಸುವಲ್ಲಿ ಸಹಕರಿಸಿದರು.
ಈಗ ಆ ಅಧಿಕಾರಿ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಕೈದಿಗಳ ನೆರವನ್ನು ಮನಸಾರೆ ಪ್ರಶಂಸಿದ್ದಾರೆ. ಕೈದಿಗಳಿಗೆ ಅಧಿಕಾರಿಗೆ ಸಹಾಯ ಮಾಡುವ ಯಾವುದೇ ಅಗತ್ಯವಿರಲಿಲ್ಲ, ಆದರೆ ಅವರು ಯಾವುದಕ್ಕೂ ಹಿಂಜರಿಯದೆ ಮಾನವೀಯತೆಯೇ ಮೊದಲು ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.