Advertisement

ಜಾರ್ಜ್‌-ಪಟೇಲರದ್ದು ವೈಚಾರಿಕಾ ಬಂಧುತ್ವ

05:29 AM Jan 30, 2019 | |

ದಾವಣಗೆರೆ: ಸಮಾಜವಾದಿ ನೆಲೆಗಟ್ಟಿನ ಕೇಂದ್ರದ ಮಾಜಿ ಸಚಿವ ಜಾರ್ಜ್‌ ಫರ್ನಾಂಡಿಸ್‌ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್. ಪಟೇಲ್‌ ಮಧ್ಯೆ ಇದ್ದದ್ದು ವೈಚಾರಿಕಾ ಬಂಧುತ್ವ. ಅವರಿಬ್ಬರೂ ರಾಜಕೀಯದಲ್ಲಿ ಸ್ಥಾನಮಾನ, ಅಧಿಕಾರ ನಷ್ಟಕ್ಕೆ ಎಂದೂ ಹೊಂದಾಣಿಕೆ ಮಾಡಿಕೊಂಡವರಲ್ಲ ಎಂದು ಜಿಲ್ಲಾ ಪಂಚಾಯತ್‌ ಸದಸ್ಯ ತೇಜಸ್ವಿ ಪಟೇಲ್‌ ಹೇಳಿದ್ದಾರೆ.

Advertisement

ಜಾರ್ಜ್‌ ಫರ್ನಾಂಡಿಸ್‌-ಪಟೇಲ್‌ ನಡುವೆ ಇದ್ದ ಒಡನಾಟದ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಸಮಾಜವಾದಿ ಲೋಹಿಯಾ ಅವರ ವಿಚಾರಧಾರೆ ಒಬ್ಬರನ್ನೊಬ್ಬರನ್ನು ಸೆಳೆದಿತ್ತು. ತಮ್ಮ ರಾಜಕೀಯ ಹಾದಿಯಲ್ಲಿ ಸ್ಥಾನ-ಅಧಿಕಾರಕ್ಕಾಗಿ ಹೊಂದಾಣಿಕೆ ಮಾಡಿಕೊಳ್ಳಲಿಲ್ಲ. ಅವರಿಬ್ಬರ ಮಧ್ಯೆ ಬಹಳ ಸಾಮ್ಯತೆ ಇತ್ತು ಎಂದು ಸ್ಮರಿಸಿದರು. ಈ ಹಿಂದೆ ಜಾರ್ಜ್‌ ಫರ್ನಾಂಡಿಸ್‌ ಕಾರಿಗನೂರಿಗೆ ಹಲವಾರು ಬಾರಿ ಬಂದಿದ್ದರು. ಜೆ.ಎಚ್.ಪಟೇಲ್‌ರೊಂದಿಗೆ ಅವರು ಹೊಂದಿದ್ದ ಆತ್ಮೀಯತೆಯಿಂದಾಗಿ ಕಾರವಾರಕ್ಕೆ ಸೀ ಬರ್ಡ್‌ ಬರುವಂತಾಯಿತು. ಜಾರ್ಜ್‌ ಪ್ರಧಾನಿ ಆಗಲಿದ್ದಾರೆಂಬ ನಿರೀಕ್ಷೆಯಿಂದಲೇ 1999ರಲ್ಲಿ ಜೆ.ಎಚ್.ಪಟೇಲ್‌ ಎನ್‌ಡಿಎ ಬೆಂಬಲಿಸಿದ್ದರು. ಅಲ್ಲದೆ, ತುರ್ತು ಪರಿಸ್ಥಿತಿ ಕಾಲದಲ್ಲಿ ಜಾರ್ಜ್‌ ಫರ್ನಾಂಡಿಸ್‌ ಬೆಂಗಳೂರಲ್ಲಿ ಜೆ.ಎಚ್.ಪಟೇಲ್‌ ಸಹೋದರಿ ಮನೆಯಲ್ಲೇ ಕೆಲ ಕಾಲ ವಾಸ್ತವ್ಯ ಹೂಡಿದ್ದರು ಎಂದು ಹೇಳಿದರು.

ಜೆ.ಎಚ್.ಪಟೇಲ್‌ ಸಂಸದರಾಗಿದ್ದಾಗ ಲೋಕಸಭೆಯಲ್ಲಿ ಕನ್ನಡ ಭಾಷೆಯಲ್ಲಿ ಮಾತನಾಡಿದ್ದಾಗ ಅವರಿಗೆ ಬೆಂಬಲ ನೀಡಿದ್ದವರು ಜಾರ್ಜ್‌ ಫರ್ನಾಂಡಿಸ್‌. ಮೂಲತಃ ಕನ್ನಡಿಗರಾಗಿದ್ದ ಅವರು ಜೆ.ಎಚ್. ಪಟೇಲರ ಕನ್ನಡ ಭಾಷಣ ಕೇಳಿ ಸಂತಸ ವ್ಯಕ್ತಪಡಿಸಿದ್ದರು ಎಂದು ಹಳೆಯ ಘಟನೆಗಳನ್ನು ತೇಜಸ್ವಿ ವಿ.ಪಟೇಲ್‌ ಸ್ಮರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next