ಬೆಂಗಳೂರು: ಪುಲಿಕೇಶಿನಗರ ವಿಧಾನಸಭೆ ಕ್ಷೇತ್ರದಲ್ಲಿ ಆರಂಭಿಸಿರುವ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಪುಲಿಕೇಶಿನಗರ ವಿಧಾನಸಭೆ ಕ್ಷೇತ್ರದಲ್ಲಿನ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಬುಧವಾರ ಸಚಿವರು ಪರಿಶೀಲಿಸಿದರು. ಬಾಣಸವಾಡಿ ಮೇಲ್ಸೇತುವೆ ಸಮೀಪದ ಕೋಮಲ ಹೋಟೆಲ್ ಜಂಕ್ಷನ್ ಬಳಿಯ ಬೃಹತ್ ನೀರುಗಾಲುವೆ ಪರಿಶೀಲನೆ ವೇಳೆ, ಮಳೆಗಾಲದಲ್ಲಿ ಕಾಲುವೆಯ ಉಕ್ಕಿ ನೀರು ರಸ್ತೆ ಹಾಗೂ ಮನೆಗಳಿಗೆ ನುಗ್ಗುತ್ತಿರುವ ಬಗ್ಗೆ ಸಚಿವರಿಗೆ ಸಾರ್ವಜನಿಕರು ದೂರು ನೀಡಿದರು.
ಇದಕ್ಕೆ ಸ್ಪಂದಿಸಿದ ಜಾರ್ಜ್, ಸಚಿವರ ನಿಧಿಯಿಂದ ಮಳೆ ನೀರು ಕಾಲುವೆ ಅಭಿವೃದ್ಧಿಗೆ 3 ಕೋಟಿ ರೂ. ಅನುದಾನ ನೀಡುವುದಾಗಿ ತಿಳಿಸಿದರು. ಜತೆಗೆ ಕೂಡಲೇ ವಿಸ್ತೃತ ಯೋಜನಾ ವರದಿ ಸಿದ್ಧ ಪಡಿಸಿ ಟೆಂಡರ್ ಕರೆಯುವಂತೆಯೂ ಬೃಹತ್ ಮಳೆನೀರು ಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಬೆಟ್ಟೇಗೌಡ ಅವರಿಗೆ ಸೂಚಿಸಿದರು.
ಆನಂತರ ನಿರ್ಮಲಾ ಚಿತ್ರಮಂದಿರ ಬಳಿ ಆರು ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಪಾದಚಾರಿ ಮಾರ್ಗ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಮತ್ತು ಜಲಮಂಡಳಿಯಿಂದ 8 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಒಳಚರಂಡಿ ಕಾಮಗಾರಿಯನ್ನೂ ಆದಷ್ಟು ಬೇಗ ಮುಗಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತೀವ್ರ ಸಂಚಾರ ದಟ್ಟಣೆ ಎದುರಿಸುತ್ತಿರುವ ಟ್ಯಾನರಿ ರಸ್ತೆ ಅಗಲೀಕರಣಕ್ಕಾಗಿ ಸ್ಥಳೀಯ ನಿವಾಸಿಗಳಿಗ ಟಿಡಿಆರ್ ನೀಡಿ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ ಅವರು, ಪಾಲಿಕೆಯಿಂದ ನಡೆಸಲಾಗುತ್ತಿರುವ ಡಾಂಬರೀಕರಣ ಕಾಮಗಾರಿಯ ಗುಣಮಟ್ಟ ಪರಿಶೀಲಿಸುವಂತೆಯೂ ಸೂಚನೆ ನೀಡಿದರು.
ಮೇಯರ್ ಆರ್.ಸಂಪತ್‌ರಾಜ್, ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಸ್ಥಳೀಯ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಸೇರಿದಂತೆ ಪ್ರಮುಖರು ಹಾಜರಿದ್ದರು.
ಉನ್ನತ ಮಟ್ಟದ ಸಭೆ: ನಗರದಲ್ಲಿನ ವಿವಿಧ ಸಮಸ್ಯೆಗಳ ಪರಿಹಾರಿಸುವ ಸಲುವಾಗಿ ಗುರುವಾರ ಜಲಮಂಡಳಿಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ಜಾರ್ಜ್ ಅವರು ತಿಳಿಸಿದ್ದಾರೆ. ಸಭೆಯಲ್ಲಿ ಇತ್ತೀಚೆಗೆ 50 ಮನೆಗಳಿರುವ ಅಪಾರ್ಟ್‌ಮೆಂಟ್‌ಗಳಿಗೆ ಎಸ್‌ಟಿಪಿ ಕಡ್ಡಾಯಗೊಳಿಸಿ ಆದೇಶ ಹೊರಡಿಸಿರುವ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.