Advertisement

ಜಾರ್ಜ್‌ ಫೆರ್ನಾಂಡಿಸ್‌ ಶ್ರದ್ಧಾಂಜಲಿ ಸಭೆ

05:10 PM Feb 07, 2019 | |

ಮುಂಬಯಿ: ಸಾಮಾನ್ಯ ಜನರ ಹಕ್ಕಿಗಾಗಿ ಹೋರಾಟ ಮಾಡುತ್ತ ದೇಶಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿರಿಸಿದ ಕಾರ್ಮಿಕ ನೇತಾರನಾಗಿ ಮಂತ್ರಿಯಾಗಿ ದೇಶದ ಅಭಿವೃದ್ಧಿಗೆ ಶ್ರಮಿಸಿದ ಜನ ನಾಯಕ ಜಾರ್ಜ್‌ ಫೆರ್ನಾಂಡಿಸ್‌ ಅವರು ಜಯಕೃಷ್ಣ ಪರಿಸರ ಪ್ರೇಮಿಯ ಮಾರ್ಗದರ್ಶಕರಾಗಿದ್ದು ಸಮಿತಿಯ ಹಲವಾರು ಯೋಜನೆಗಳಿಗೆ ಸಹಕರಿಸಿದಂತಹ ಧೀಮಂತ ವ್ಯಕ್ತಿ. ಬಜ್ಪೆ ವಿಮಾನ ನಿಲ್ದಾಣದಲ್ಲಿ ನೈಟ್‌ ಲ್ಯಾಂಡಿಂಗ್‌ ಪ್ರಾರಂಭಿಸಲು ಸಹಕರಿಸಿದರು. ಬೆಂಗಳೂರು -ಮಂಗಳೂರು ರೈಲ್ವೇಯನ್ನು ಪ್ರಾರಂಭಿಸುವಲ್ಲಿ ಜಾರ್ಜ್‌ ಅವರ ಸೇವೆ ಮರೆಯುವಂಥದ್ದಲ್ಲ. ದಕ್ಷಿಣ ಕನ್ನಡದ ಅಭಿವೃದ್ಧಿಗಾಗಿ ಅವರು ಅನೇಕ ಯೋಜನೆಗಳಿಗೆ ಸಹಕಾರವನ್ನು ನೀಡಿರುವರು. ಸಮಿತಿಯ ಕೆಲಸ ಕಾರ್ಯಗಳಿಗೆ ಎಷ್ಟೇ ಕಾರ್ಯಮಗ್ನರಾಗಿದ್ದರೂ ಸಮಯವನ್ನು ನೀಡುತ್ತಿದ್ದ ಅವರು ಓರ್ವ ಪುಣ್ಯ ಜೀವಿ. ಅವರ ಸ್ಮರಣಾರ್ಥ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾರ್ಜ್‌ ಅವರ ಹೆಸರು ಚಿರಸ್ಥಾಯಿ ಆಗಿರಬೇಕು ಎಂದು ಜಯಶ್ರೀಕೃಷ್ಣ ಪರಿಸÃ ಪ್ರೇಮಿ ಸಮಿತಿಯ ಸ್ಥಾಪಕ ಹಾಗೂ ಅಧ್ಯಕ್ಷರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅವರು ನುಡಿದರು.

Advertisement

ಅವರು ಫೆ. 4ರಂದು ಕುರ್ಲಾ ಪೂರ್ವದ ಬಂಟರ ಭವನದ ಎನೆಕ್ಸ್‌ ಸಂಕೀರ್ಣದಲ್ಲಿ ಜರಗಿದ ಕಾರ್ಮಿಕ ನೇತಾರ, ಮಾಜಿ ಕೇಂದ್ರ ಸಚಿವ ಜಾರ್ಜ್‌ ಫೆರ್ನಾಂಡಿಸ್‌ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡುತ್ತಿದ್ದರು.

ಜಾರ್ಜ್‌ ಫೆರ್ನಾಂಡಿಸ್‌ ಅವರ ನಿಕಟವರ್ತಿ ಕಾರ್ಮಿಕ ಹೋರಾಟಗಾರ ನ್ಯಾಯವಾದಿ ಪದ್ಮನಾಭ ಶೆಟ್ಟಿ ಅವರು ನುಡಿ ನಮನ ಸಲ್ಲಿಸುತ್ತ, ಜಾರ್ಜ್‌ ಅವರ ಬಾಲ್ಯ ಅನಂತರ ಬದುಕು ಹಾಗೂ ರಾಜಕೀಯ ಜೀವನದ ಏಳು-ಬೀಳುಗಳನ್ನು, ಅವರು ಮಾಡಿದ ದೇಶ ಸೇವೆ ಮತ್ತು ಸಾಧನೆಗಳ ಬಗ್ಗೆ ಮಾತನಾಡುತ್ತ ನಮ್ಮ ದೇಶ ಕಂಡ ಓರ್ವ ಅಪರೂಪದ ಶ್ರೇಷ್ಠ ರಾಜಕಾರಣಿ ಜಾರ್ಜ್‌ ಫೆರ್ನಾಂಡಿಸ್‌ ಅವರು ಮುಂಬಯಿಯಲ್ಲಿ ಕಾರ್ಪೊರೇಟರ್‌ ಆಗಿದ್ದಾಗ ನಗರ ಸಭೆಯ ಕಾರ್ಯಕಲಾಪಗಳನ್ನು ಮರಾಠಿಯಲ್ಲಿ ನಡೆಯಬೇಕೆಂದು ಮೊದಲು ಧ್ವನಿ ಎತ್ತಿದವರು. ಅವರು ಮಂತ್ರಿ ಯಾಗಿದ್ದರೂ ಪೊಲೀಸ್‌ ರಕ್ಷಣೆಯನ್ನು ತೆಗೆದು
ಕೊಂಡಿರಲಿಲ್ಲ, ಅವರ ಮನೆಗೆ ಗೇಟು ಕೂಡ ಇರಲಿಲ್ಲ. ಯಾರೂ ಯಾವಾಗ ಬೇಕಾದರೂ ಅಡೆತಡೆ ಇಲ್ಲದೆ ಅವರನ್ನು ಭೇಟಿ ಯಾಗಬಹುದಿತ್ತು. ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಅಹಿಂಸಾತ್ಮಕವಾಗಿ ಹರತಾಳ ಮಾಡಿ
ಸಿದ ಜಾರ್ಜ್‌ ಒಬ್ಬ ಜೈಂಟ್‌ ಕಿಲ್ಲರ್‌ ಎಂದರು.

ಮುಂಬಯಿಯ ಹಿರಿಯ ಹೊಟೇಲ್‌ ಉದ್ಯಮಿ ಎಂ.ಡಿ. ಶೆಟ್ಟಿ ಅವರು ಮಾತನಾಡುತ್ತ, ನನ್ನ ಹೊಟೇಲ್‌ ಕಾರ್ಮಿಕರು ಮುಷ್ಕರಕ್ಕೆ ಇಳಿದಾಗ ಜಾರ್ಜ್‌ ಅವರು ನನಗೆ ಸಹಾಯ ಮಾಡಿದ್ದರು ಎಂದು ತನ್ನ ಅನುಭವವನ್ನು ನೆನಪಿಸಿಕೊಂಡರು.

ಕ್ರಿಮಿನಲ್‌ ನ್ಯಾಯವಾದಿ ಮಹೇಶ್‌ ಕರ್ಕೇರ ಅವರು ನುಡಿ ನಮನ ಸಲ್ಲಿಸುತ್ತ, ಜಾರ್ಜ್‌ ಓರ್ವ ಛಲವಾದಿ. ದೂರದೃಷ್ಟಿವುಳ್ಳ ರಾಜಕಾರಣಿಯಾಗಿ ಜನಸಾಮಾನ್ಯರ ಪ್ರಾಮಾಣಿಕ ನಾಯಕನಾಗಿ ಕರಾವಳಿ ಜಿಲ್ಲೆಯಿಂದ ಹುಟ್ಟಿ ಬಿಹಾರದಲ್ಲಿ ರಾಜಕೀಯ ಪಕ್ಷವನ್ನು ಸ್ಥಾಪಿಸಿ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಮಂತ್ರಿಯಾಗಿ ಜನಸೇವೆಗೈದ ಜನನಾಯಕರಾಗಿದ್ದಾರೆ ಎಂದರು.

Advertisement

ಸಭೆಯಲ್ಲಿ ಉಪಸ್ಥಿತರಿದ್ದ ಸಮಿತಿಯ ಮಾಜಿ ಅಧ್ಯಕ್ಷ ವಿಶ್ವನಾಥ ಮಾಡ, ಜಾರ್ಜ್‌ ಅವರ ನಿಕಟವರ್ತಿ, ಸಮಿತಿ ಉಪಾಧ್ಯಕ್ಷ ಫೆಲಿಕ್ಸ್‌ ಡಿ’ಸೋಜಾ, ಸಾಂತಾಕ್ರೂಜ್‌ ಕನ್ನಡ  ಸಂಘದ ಅಧ್ಯಕ್ಷ ಎಲ್‌. ವಿ. ಅಮೀನ್‌, ಬಿಲ್ಲವರ ಅಸೋಸಿಯೇಶನ್‌ ಉಪಾಧ್ಯಕ್ಷ ಶ್ರೀನಿವಾಸ್‌ ಕರ್ಕೇರ, ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಕೆ. ಎಲ್‌. ಬಂಗೇರ, ದೇವಾಡಿಗ ಸಂಘದ ಅಧ್ಯಕ್ಷ ರವಿ ಎಸ್‌. ದೇವಾಡಿಗ, ಕುಲಾಲ ಸಂಘದ ಅಧ್ಯಕ್ಷ ಪಿ. ದೇವದಾಸ್‌ ಎಲ್‌. ಕುಲಾಲ್‌, ಭಂಡಾರಿ ಸೇವಾ ಸಂಘದ ಅಧ್ಯಕ್ಷ ನ್ಯಾಯವಾದಿ ಆರ್‌.ಎಂ. ಭಂಡಾರಿ, ಅಖೀಲ ಕರ್ನಾಟಕ ಜೈನ ಸಂಘದ ಅಧ್ಯಕ್ಷ ಮುನಿರಾಜ್‌ ಜೈನ್‌, ಕಲಾಜಗತ್ತಿನ ತೋನ್ಸೆ ವಿಜಯಕುಮಾರ್‌ ಶೆಟ್ಟಿ, ಮಹಾರಾಷ್ಟ್ರ ಕನ್ನಡಿಗ ಕಲಾವಿದರ ಪರಿಷತ್ತು ಅಧ್ಯಕ್ಷ ಡಾ| ಸುರೇಂದ್ರ ಕುಮಾರ್‌ ಹೆಗ್ಡೆ, ಬಂಟರ ಸಂಘದ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಆರ್‌. ಕೆ. ಶೆಟ್ಟಿ, ಬಾಂಬೆ ಬಂಟ್ಸ್‌ ಅಸೋಸಿ
ಯೇಶನ್‌ನ ಮಾಜಿ ಅಧ್ಯಕ್ಷ ಶ್ಯಾಮ ಎನ್‌. ಶೆಟ್ಟಿ, ಪದ್ಮಶಾಲಿ ಸೇವಾ ಸಂಘದ ಅಧ್ಯಕ್ಷ  ಉತ್ತಮ್‌ ಶೆಟ್ಟಿಗಾರ್‌, ಖಾರ್‌ ಶನೀಶ್ವರ ಮಂದಿರದ ಗೌರವ ಅಧ್ಯಕ್ಷ ಶಂಕರ್‌ ಸುವರ್ಣ, ಗಾಣಿಗ ಸಮಾಜದ ಅಧ್ಯಕ್ಷ ರಾಮಚಂದ್ರ ಗಾ ಣಿಗ, ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಸಾಫಲ್ಯ, ಹೆಜಮಾಡಿ ಮೊಗವೀರ ಯುವಕ ಸಂಘದ ಅಧ್ಯಕ್ಷ ಕರುಣಾಕರ್‌ ಹೆಜಮಾಡಿ, ಅಂಧೇರಿ ಕರ್ನಾಟಕ ಸಂಘದ ಗೌರವಾಧ್ಯಕ್ಷ ಪಿ.ಡಿ. ಶೆಟ್ಟಿ, ವಿದ್ಯಾದಾಯಿನಿ ಸಭಾದ ಗೌರವ ಕಾರ್ಯದರ್ಶಿ ಚಿತ್ರಾಪು ಕೆ. ಎಂ. ಕೋಟ್ಯಾನ್‌, ಜಾರ್ಜ್‌ ಅವರ ಅಭಿಮಾನಿ ದಯಾನಂದ ಶೆಟ್ಟಿ ಮೊದಲಾದವರು ನುಡಿ ನಮನಗಳನ್ನು ಸಲ್ಲಿಸಿ ಜಾರ್ಜ್‌ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಸಮಿತಿಯ ಗೌರವ ಕಾರ್ಯದರ್ಶಿ ಎಚ್‌. ಮೋಹನ್‌ದಾಸ್‌ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜಾರ್ಜ್‌ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕೊನೆಯಲ್ಲಿ ಒಂದು ನಿಮಿಷದ ಮೌನ ಪ್ರಾರ್ಥನೆಯೊಂದಿಗೆ ಸರ್ವರೂ ಶ್ರದ್ಧಾಂಜಲಿ ಅರ್ಪಿಸಿದರು.

  ಚಿತ್ರ-ವರದಿ: ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next