ಬೆಂಗಳೂರು: ದೇಶ ಹಾಳಾಗಲು ಸಜ್ಜನರ ಮೌನ ಕಾರಣ. ಗೋ ಸಂರಕ್ಷಣೆಗೆ ಈ ಮೌನ ಮುರಿಯಬೇಕಿದೆ ಎಂದು ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ.
ಮಠದ ವತಿಯಿಂದ ಆರಂಭಿಸಿರುವ ಗೋ “ಅಭಯಾಕ್ಷರ’ ಅಭಿಯಾನದ ಅಂಗವಾಗಿ ಭಾನುವಾರ ರಾಜಾಜಿನಗರದ ರಾಮಮಂದಿರಲ್ಲಿ ನಡೆದ “ಅಭಯಾಕ್ಷರ – ಹಾಲು ಹಬ್ಬ’ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ದೇಶದ ಶೇ. 99 ಮಂದಿ ಗೋ ಸಂತತಿ ಉಳಿಯಬೇಕು ಎಂಬ ಅಭಿಪ್ರಾಯ ಹೊಂದಿದ್ದಾರೆ. ಆದರೆ, ಆ ಕುರಿತು ಜನಾಭಿಪ್ರಾಯ ರೂಪುಗೊಳ್ಳುತ್ತಿಲ್ಲ. ಹೀಗಾಗಿ ಗೋ ಉಳಿಯುವಿಕೆಯ ಜನರ ಭಾವನೆಗಳನ್ನು ದಾಖಲೆಯ ರೂಪದಲ್ಲಿ ಸಂಗ್ರಹಿಸಲು “ಅಭಯಾಕ್ಷರ’ ಆಂದೋಲನ ನಡೆಸಲಾಗುತ್ತಿದೆ ಎಂದರು.
ಬೇಲಿಮಠದ ಶಿವರುದ್ರ ಮಹಾಸ್ವಾಮೀಜಿ ಮಾತನಾಡಿ, ಗೋವಿನ ಸಗಣಿ ಹಾಗೂ ಗಂಜಲ ಅತ್ಯಂತ ಮಹತ್ವ ಪೂರ್ಣವಾಗಿದೆ. ಬ್ರಿಟೀಷರ ಆಳ್ವಿಕೆಯಲ್ಲಿ ನಾಡಿನಾದ್ಯಂತ ಪ್ಲೇಗ್ ಉಲ್ಬಣಗೊಂಡಿದ್ದಾಗ, ನಡೆಸಿದ ಸಮೀಕ್ಷೆಯಲ್ಲಿ ಗೋವುಗಳಿದ್ದ ಮನೆಗಳಲ್ಲಿ ಪ್ಲೇಗ್ ಇಲ್ಲದಿರುವ ಸಂಗತಿ ಬೆಳಕಿಗೆ ಬಂದಿತ್ತು. ಗೋವಿನಲ್ಲಿ ಎಲ್ಲಾ ಸಮಸ್ಯೆಗೂ ಪರಿಹಾರವಿದೆ ಎಂಬುದು ಇದರಿಂದ ಸಾಬೀತಾಗುತ್ತದೆ. ಈ ನಿಟ್ಟಿನಲ್ಲಿ ಅಭಯಾಕ್ಷರ ಅಭಿಯಾನ ಉತ್ತಮ ಪ್ರತಿಫಲ ನೀಡಲಿ ಎಂದು ಹಾರೈಸಿದರು.
ಶಾಸಕ ಎಸ್.ಸುರೇಶ್ ಕುಮಾರ್ ಮಾತನಾಡಿ, ಗೋಸಂರಕ್ಷಣೆಗಾಗಿ “ಅಭಯಾಕ್ಷರ’ ಅಭಿಯಾನದ ಮೂಲಕ ಮೌನಕ್ರಾಂತಿ ಆರಂಭವಾಗಿದೆ. ಗೋವನ್ನು ಕೇವಲ ಪೂಜಿಸುವುದಲ್ಲ, ಸಂರಕ್ಷಣೆಗೂ ನಾವು ಬದ್ಧರಾಗಬೇಕು. ಗೋಮಾಂಸ ಭಕ್ಷಣೆಯನ್ನು ವೈಭವೀಕರಿಸುವ ವಿಕೃತ ಮನಸ್ಸುಗಳಿಗೆ ಸಮರ್ಪಕ ಸಾತ್ವಿಕ ಉತ್ತರ ಈ ಹಾಲುಹಬ್ಬವಾಗಿದೆ. ಈ ಅಭಿಯಾನಕ್ಕೆ ರಾಜಾಜಿನಗರ ವ್ಯಾಪ್ತಿಯಲ್ಲಿ ನಾವೆಲ್ಲ ಸೇರಿ ಕನಿಷ್ಠ 3 ಲಕ್ಷ ಅಭಯಾಕ್ಷರವನ್ನು ಸಂಗ್ರಹಿಸುವ ಗುರಿ ಹೊಂದಿದ್ದೇವೆ ಎಂದರು.
ಸಿದ್ಧಾರೂಢ ಮಿಷನ್ನಿನ ಶ್ರೀ ಆರೂಢಭಾರತೀ ಸ್ವಾಮಿಜಿ, ಶ್ರೀಘನಲಿಂಗ ಸ್ವಾಮಿಜಿ, ಸಿದ್ಧಾರೂಢ ಮಠ ಹಾಗೂ ವನಸಿರಿ ಆಶ್ರಮದ ಶಂಕರಗುರೂಜಿ, ಪಾಲಿಕೆ ಸದಸ್ಯೆ ರೂಪಾ ನಾಗೇಶ್, ಸಾಮಾಜಿಕ ಕಾರ್ಯಕರ್ತರಾದ ಲಕ್ಷಿನಾರಾಯಣ, ನಟರಾದ ರೇಣುಕಾ ಸೇರಿದಂತೆ ಅನೇಕ ಗಣ್ಯರು, ಸಾರ್ವಜನಿಕರು ಅಭಯಾಕ್ಷರ ಅಭಿಯಾನಕ್ಕೆ ಬೆಂಬಲ ಸೂಚಿಸಿದರು.
ಗೋ ಸಂರಕ್ಷಣೆಗೆ ಬಿಬಿಎಂಪಿಯಿಂದ ಬೆಂಬಲ
ಗೋ ಪೂಜೆ ಮಾಡುವ ಮೂಲಕ ಅಭಯಾಕ್ಷರಕ್ಕೆ ಚಾಲನೆ ನೀಡಿದ ಬಿಬಿಎಂಪಿ ಮೇಯರ್ ಜಿ.ಪದ್ಮಾವತಿ ಮಾತನಾಡಿ, “ಗೋ ಸಂರಕ್ಷಣೆಗೆ ಜನಾಭಿಪ್ರಾಯ ರೂಪಿಸಲು ರಾಮಚಂದ್ರಾಪುರ ಮಠ ನಡೆಸುತ್ತಿರುವ ಗೋ “ಅಭಯಾಕ್ಷರ’ ಅಭಿಯಾನಕ್ಕೆ ಬಿಬಿಎಂಪಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ತಿಳಿಸಿದರು.
ಗೋವು ಹಾಲನ್ನು ಕೊಡುವಾಗ ಯಾವ ಜಾತಿ, ಯಾವ ಪಕ್ಷ ಎಂದು ನೋಡುವುದಿಲ್ಲ. ಗೋವು ಪಕ್ಷ – ಪಂಗಡಗಳನ್ನು ಮೀರಿದ್ದಾಗಿದೆ. ಹೀಗಾಗಿ ರಾಘವೇಶ್ವರ ಸ್ವಾಮೀಜಿಯವರು ಗೋವಿನ ವಿಷಯದಲ್ಲಿ ಮಾಡುತ್ತಿರುವ ಅಭಿಯಾನ ನಿಜಕ್ಕೂ ಶ್ಲಾಘನೀಯ. ಗೋಸೇವೆಯ ಈ ಅಭಿಯಾನಕ್ಕೆ ಬಿಬಿಎಂಪಿಯ 198 ಸದಸ್ಯರು ಕೈಜೋಡಿಸಲಿದ್ದೇವೆ ಎಂದರು.