Advertisement

ಮಹನೀಯರು ಎಲ್ಲಾ ವರ್ಗಕ್ಕೂ ಸೀಮಿತ

08:20 PM Feb 02, 2020 | Lakshmi GovindaRaj |

ಶಿಡ್ಲಘಟ್ಟ: ಮಹನೀಯರನ್ನು ಅವರ ಸಾಧನೆ, ಸಮಾಜಕ್ಕೆ ಕೊಟ್ಟ ಕೊಡುಗೆ ಮೇಲೆ ಗುರುತಿಸಬೇಕೆ ಹೊರತು ಜಾತಿ ಧರ್ಮದಿಂದ ಅಲ್ಲ ಎಂದು ಶಾಸಕ ವಿ.ಮುನಿಯಪ್ಪ ಹೇಳಿದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಗರದ ಕಂದಾಯ ಭವನದ ಆವರಣದಲ್ಲಿ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ಮಹನೀಯರನ್ನು ಅವರ ಜಾತಿ ಧರ್ಮದ ಆಧಾರದಲ್ಲಿ ನೋಡುವಂತ ಕೆಟ್ಟ ಸಂಪ್ರದಾಯ ಶುರುವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸಮಾಜಕ್ಕೆ ಕೊಟ್ಟ ಕೊಡುಗೆ ಸಾಧನೆಯ ಮೇಲೆ ಮಹನೀಯರನ್ನು ಗುರುತಿಸಬೇಕು ಎಂದರು.

ತಹಶೀಲ್ದಾರ್‌ ಎಂ.ದಯಾನಂದ ಮಾತನಾಡಿ, ಸಮಾದಲ್ಲಿರುವ ಎಲ್ಲಾ ವರ್ಗಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ದೃಷ್ಟಿಯಿಂದ ಸರ್ಕಾರ ಅನೇಕ ಯೋಜನೆಗಳನ್ನೂ ಜಾರಿಗೊಳಿಸಿದರೂ ಸಹ ಹಿಂದುಳಿದ ವರ್ಗಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಸೌಲಭ್ಯಗಳು ಲಭಿಸಿಲ್ಲವೆಂಬ ಕೊರಗಿದೆ ಎಂದ ಅವರು, ಮಾಚಿದೇವರ ಜೀವನಾದರ್ಶ ಎಲ್ಲರಿಗೂ ದಾರಿದೀಪವಾಗಬೇಕು ಎಂದರು.

ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಎಂ.ದೇವರಾಜ್‌ ಮಡಿವಾಳರ ಸಂಸ್ಕೃತಿ ಆಚಾರ ವಿಚಾರ ಕುರಿತು ಪ್ರಧಾನ ಭಾಷಣ ಮಾಡಿ, ಪ್ರಾಚೀನ ಕಾಲದಿಂದಲೂ ಮಡಿವಾಳರಿಗೆ ತನ್ನದೇ ಆದ ಗೌರವವಿದೆ. ಸವಿತಾ ಸಮಾಜ ಮತ್ತು ಮಡಿವಾಳರು ಸಹೋದರು ಇದ್ದಂತೆ ಎಂದರು.

ಮಡಿವಾಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್‌.ಎನ್‌.ಮುರಳೀಧರ್‌ ಮಾತನಾಡಿ, ಮಡಿವಾಳ ಸಮುದಾಯ ಭವನ ನಿರ್ಮಿಸಲು ಅಗತ್ಯ ನಿವೇಶನ ಒದಗಿಸಿ ಸಮುದಾಯದ ಮಕ್ಕಳಿಗೆ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಒದಗಿಸಲು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

Advertisement

ನಿವೃತ್ತ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಎಸ್‌.ಎಂ.ಕೃಷ್ಣಪ್ಪ ಮಾತನಾಡಿದರು. ಸಮುದಾಯದಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಹಿರಿಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ನಗರದಲ್ಲಿ ಜನಾಕರ್ಷಕ ಪಲ್ಲಕ್ಕಿ ಮೆರವಣಿಗೆ ನಡೆಸಲಾಯಿತು. ಕಲಾವಿದರು ಕಲೆ ಪ್ರದರ್ಶಿಸಿ ಗಮನ ಸೆಳೆದರು.

ರಾಜ್ಯ ಮಡಿವಾಳರ ಸಂಘದ ಉಪಾಧ್ಯಕ್ಷ ಆರ್‌.ವಿ.ರಾಜಣ್ಣ, ಮಡಿವಾಳ ಯುವಕರ ಸಂಘದ ಅಧ್ಯಕ್ಷ ಡಿ.ವಿ.ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಮುನಿರಾಜು, ಕಂದಾಯ ನಿರೀಕ್ಷಕ ವಿಶ್ವನಾಥ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next