Advertisement

ಜಂಟಲ್‌ ರಿಮೈಂಡರ್‌

10:11 AM Feb 08, 2020 | Lakshmi GovindaRaj |

ಎಲ್ಲವೂ ಅಂದುಕೊಂಡಂತೆ ನಡೆದರೆ ಈ ವರ್ಷ ಒಂದಲ್ಲ, ಎರಡಲ್ಲ, ಮೂರಲ್ಲ ಬರೋಬರಿ ಏಳು ಚಿತ್ರಗಳು ಬಿಡುಗಡೆಯಾಗುಮದು ಖಚಿತ…! ಈ ಮಾತು ನಟ ಪ್ರಜ್ವಲ್‌ ದೇವರಾಜ್‌ ಅವರಿಗೆ ಅನ್ವಯ. ಹೌದು, ಹೀಗೆ ಹೇಳೋಕೆ ಕಾರಣ. ಅವರ ಅಭಿನಯದ ಏಳು ಚಿತ್ರಗಳು ಈ ವರ್ಷವೇ ತೆರೆಗೆ ಬಂದರೂ ಅಚ್ಚರಿ ಇಲ್ಲ. ಈ ವಾರ “ಜಂಟಲ್‌ಮೆನ್‌’ ಬಿಡುಗಡೆಯಾಗುತ್ತಿದೆ. ಅದರ ಬೆನ್ನ ಹಿಂದೆಯೇ, “ಇನ್ಸ್‌ಪೆಕ್ಟರ್‌ ವಿಕ್ರಂ’, “ಅರ್ಜುನ್‌ ಗೌಡ’, ಇನ್ನೂ ಹೆಸರಿಡದ ಪಿ.ಸಿ.ಶೇಖರ್‌ ನಿರ್ದೇಶನದ ಹೊಸ ಚಿತ್ರ ಹಾಗು ರಾಮ್‌ನಾರಾಯಣ್‌ ನಿರ್ದೇಶನದ ಮತ್ತೂಂದು ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಯೂ ಇದೆ.

Advertisement

ಇನ್ನು, “ವೀರಂ’ ಕೂಡ ಇದೆ. ಜೊತೆಗೆ “ದಿಲ್‌ಕಾ ರಾಜ’ ಬಂದರೂ ಅನುಮಾನವಿಲ್ಲ. ಅಲ್ಲಿಗೆ ಈ ವರ್ಷ ಪ್ರಜ್ವಲ್‌ಗೆ ಅದೃಷ್ಟದ ವರ್ಷ ಅಂದರೂ ತಪ್ಪಿಲ್ಲ. ಅದೇ ಭರವಸೆಯಲ್ಲಿರುವ ಪ್ರಜ್ವಲ್‌ ಇದೀಗ “ಜಂಟಲ್‌ಮೆನ್’ ಜಪ ಮಾಡುತ್ತಿದ್ದಾರೆ. ಆ ಚಿತ್ರದ ಮೇಲೆ ಇನ್ನಿಲ್ಲದ ಕನಸು ಕಟ್ಟಿಕೊಂಡಿದ್ದಾರೆ. ಅವರ ಕನಸಿಗೆ ಕಾರಣ, ಚಿತ್ರದಲ್ಲಿರುವ ಕಥೆ ಮತ್ತು ಪಾತ್ರ. ಆ ಕುರಿತು ಒಂದಷ್ಟು. ಸದ್ಯಕ್ಕೆ ಪ್ರಜ್ವಲ್‌ ಅಭಿನಯದ ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಮೊದಲು “ಜಂಟಲ್‌ಮೆನ್‌’ ದರ್ಶನ ಕೊಡಲಿದೆ. ಈ ಚಿತ್ರ ಶುರುವಿನಿಂದ ಇಲ್ಲಿಯವರೆಗೂ ಸಾಕಷ್ಟು ಕುತೂಹಲ ಮೂಡಿಸಿದೆ.

ಅದಕ್ಕೆ ಕಾರಣ, ಚಿತ್ರದ ಗಟ್ಟಿ ಕಥೆ. ಈಗಾಗಲೇ “ಜಂಟಲ್‌ಮೆನ್‌’ನ ಮೊದಲ ಲಿರಿಕಲ್‌ ವಿಡಿಯೋ, ಟೀಸರ್‌ ಹಾಗು ಸಾಂಗು ಚಿತ್ರದ ಮೇಲಿನ ಕುತೂಹಲ ಹೆಚ್ಚಿಸಿದೆ. ತಮ್ಮ “ಜಂಟಲ್‌ಮೆನ್‌’ ಮೇಲೆ ಅತೀವ ಭರವಸೆ ಇಟ್ಟುಕೊಂಡಿರುವ ಪ್ರಜ್ವಲ್‌ ಹೇಳುಮದಿಷ್ಟು. “ನಾನು ಇಲ್ಲಿಯವರೆಗೆ ನನ್ನ ಸಿನಿಮಾ ಕೆರಿಯರ್‌ನಲ್ಲಿ ಮಾಡಿರುವ ಪಾತ್ರಗಳಲ್ಲೇ ಅತ್ಯಂತ ವಿಭಿನ್ನ ಪಾತ್ರ ಈ ಚಿತ್ರದಲ್ಲಿದೆ. ಅಷ್ಟೇ ಅಲ್ಲ, ನನಗಿದು ತುಂಬಾನೇ ತೃಪ್ತಿ ಕೊಟ್ಟಂತಹ ಸಿನಿಮಾ. ಈ ರೀತಿಯ ಚಿತ್ರ ಮಾಡೋಕೂ ತಾಳ್ಮೆ ಇರಬೇಕು.

ಮೊದಲು ಅಂಥದ್ದೊಂದು ಕಥೆ ಒಪ್ಪಿ, ಹೊಸ ನಿರ್ದೇಶಕರನ್ನು ನಂಬಿ ಸಿನಿಮಾ ನಿರ್ಮಿಸಿದ ಗುರುದೇಶಪಾಂಡೆ ಅವರ ಧೈರ್ಯ ಮೆಚ್ಚಬೇಕು. ಅಂದಹಾಗೆ, “ಜಂಟಲ್‌ಮೆನ್‌’ ಇಷ್ಟ ಆಗೋಕೆ ಕಾರಣ, ಮತ್ತದೇ ಕಥೆ ಮತ್ತು ಪಾತ್ರ. ಇನ್ನು, ಇದೊಂದು ಸ್ಲಿಪಿಂಗ್‌ ಸಿಂಡ್ರೋಮ್‌ ಇರುವ ಕಥೆ. ಇದರೊಂದಿಗೆ ಇನ್ನೊಂದು ಎಪಿಸೋಡ್‌ ಕೂಡ ಇದೆ. ಅದು ಸಸ್ಪೆನ್ಸ್‌. ಈ ಎರಡರ ಸುತ್ತ ನಡೆಯೋ ಸ್ಕ್ರೀನ್‌ ಪ್ಲೇ ಫ್ರೆಶ್‌ ಆಗಿದೆ. ಕಾಮಿಡಿ, ಎಮೋಷನ್ಸ್‌ ಇದ್ದರೂ, ಹೊಸದೇನೋ ಎನಿಸುವಷ್ಟರ ಮಟ್ಟಿಗೆ ಸ್ಟೋರಿ ಟ್ರಾವೆಲ್‌ ಆಗುತ್ತೆ.

ನಿಜ ಹೇಳುಮದಾದರೆ, ಒಬ್ಬ ನಟನಾಗಿ ತುಂಬಾ ತೃಪ್ತಿ ಕೊಟ್ಟಂತಹ ಪಾತ್ರವಿದು. ಕೆಲಮ ಪಾತ್ರಗಳು ತುಂಬಾ ಕಾಡುತ್ತವೆ, ಹಿಂಡುತ್ತವೆ. ಆ ಸಾಲಿಗೆ ಸೇರುವ ಪಾತ್ರವಿದು. ಕೆಲಸ ಮುಗಿಸಿ ಮನೆಗೆ ಬಂದಾಗ, ನೆಮ್ಮದಿ ನಿದ್ದೆ ಬರುತ್ತಿತ್ತು. ಪಾತ್ರವನ್ನು ಬೆಂಡ್‌ ಎತ್ತಿ ಮಾಡಿಸಿದರೂ, ಅಂತಹ ಲೊಕೇಷನ್‌ನಲ್ಲಿ ಶೂಟ್‌ ಮಾಡಿದರೂ ಕೊಂಚವೂ ಬೇಸರವಾಗದೆ, ಖುಷಿಯಿಂದಲೇ ಬಂದು ಮಲಗುತ್ತಿದ್ದೆ. ಸಾಮಾನ್ಯವಾಗಿ ಬೇರೆ ಸಿನಿಮಾ ಪಾತ್ರಗಳಿಗೆ ಹೀಗೆ ಮಾಡೋಣ, ಗೆಟಪ್‌ ಹಾಗೆ ಇರಲಿ ಎಂಬ ಬಗ್ಗೆ ಚರ್ಚಿಸುತ್ತಿದ್ದೆ. ಅಲ್ಲಿ ಆಯ್ಕೆಗಳಿರುತ್ತಿದ್ದಮ.

Advertisement

ಆದರೆ, ಈ ಚಿತ್ರದ ಪಾತ್ರಕ್ಕಾಗಿ ಸಾಕಷ್ಟು ರೀಸರ್ಚ್‌ ಮಾಡಿದೆ. ಸ್ಲಿಪಿಂಗ್‌ ಸಿಂಡ್ರೋಮ್‌ ಇರುವ ವ್ಯಕ್ತಿಯ ನಡವಳಿಕೆ ಹೇಗಿರುತ್ತೆ, ಅವನಿಗೆ ಕೋಪ ಬರುತ್ತಾ, ಎನರ್ಜಿ ಲೆವೆಲ್‌ ಹೇಗೆ ಇರುತ್ತೆ. ಅವನು ಹೇಗೆಲ್ಲಾ ವರ್ತಿಸುತ್ತಾನೆ ಎಂಬ ಬಗ್ಗೆ ತಿಳಿದೆ. ಅಂತಹ ವ್ಯಕ್ತಿಗಳು ಜಾಸ್ತಿ ಸಮಯ ಮಲಗಿದರೆ, ಎನರ್ಜಿ ಲೆವೆಲ್‌ ಜಾಸ್ತಿ ಇರುತ್ತೆ. ಸಾಮಾನ್ಯವಾಗಿ ನಾಮ ಒಂದಷ್ಟು ಸಮಯ ಸಿಕ್ಕರೆ, ತುಂಬಾ ಜನರನ್ನು ಭೇಟಿ ಮಾಡ್ತೀವಿ. ಮಾತಾಡ್ತೀವಿ. ಆದರೆ, ಆ ವಿಷಯಗಳು ಹೆಚ್ಚು ನೆನಪಿರೋದಿಲ್ಲ. ಆದರೆ, ಸ್ಲಿಪಿಂಗ್‌ ಸಿಂಡ್ರೋಮ್‌ ಇರುವ ವ್ಯಕ್ತಿಗಳಿಗೆ ಸಿಕ್ಕ ಅಲ್ಪ ಸಮಯದಲ್ಲಿ ಏನೆಲ್ಲ ಆಗುತ್ತೆ, ಏನೆಲ್ಲಾ ಮಿಸ್‌ ಮಾಡಿಕೊಂಡಿದ್ದೇವೆ.

ಆ ಅವಧಿಯಲ್ಲೇ ಏನೇನು ಮಾಡಬೇಕೆಂಬ ಕ್ಲಾರಿಟಿ ಇರುತ್ತೆ. ಅಂಥದ್ದೊಂದು ಪಾತ್ರ ಮಾಡುವಾಗ, ಫಿಜಿಕಲಿ, ಮೆಂಟಲಿ ಎಫ‌ರ್ಟ್‌ ಹಾಕಿದ್ದು ನಿಜ’ ಎನ್ನುತ್ತಾರೆ. ಚಿತ್ರದ ಬಗ್ಗೆ ಮಾತನಾಡುವ ಪ್ರಜ್ವಲ್‌, “ಅರ್ಜುನ’ ಸಿನಿಮಾ ಬಿಟ್ಟರೆ, ಇದಕ್ಕೆ ತುಂಬಾ ಸ್ಟ್ರೇನ್‌ ಆಗಿದ್ದು ನಿಜ’ ಸ್ಲಿಪಿಂಗ್‌ ಸಿಂಡ್ರೋಮ್‌ ಎನ್ನುವ ಅಪರೂಪದ ಕಾಯಿಲೆಯಿಂದ ಬಳಲುವ ವಿಶೇಷ ಪಾತ್ರ. ಪ್ರತಿ ದಿನ ಬರೋಬ್ಬರಿ 18 ತಾಸುಗಳ ಕಾಲ ನಿದ್ದೆ ಮಾಡುವ ವ್ಯಕ್ತಿಯ ಪಾತ್ರ ಮಾಡಿರುಮದು ವಿಶೇಷತೆಗಳಲ್ಲೊಂದು. ಆ ವ್ಯಕ್ತಿ ರಾತ್ರಿ 10 ಗಂಟೆಗೆ ಮಲಗಿದರೆ ಮತ್ತೆ ಮರುದಿನ ಸಂಜೆ 4 ಗಂಟೆಗೆ ಏಳುತ್ತಾನೆ.

ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಮಾತ್ರ ಎಚ್ಚರವಿರುವಂತಹ ಪಾತ್ರವದು. ದಿನದ ಮುಕ್ಕಾಲು ಭಾಗವನ್ನು ನಿದ್ದೆಯಲ್ಲೇ ಕಳೆಯುವ ಆ ವ್ಯಕ್ತಿ ಎಚ್ಚರವಿರುವ ಬೆರಳೆಣಿಕೆ ಗಂಟೆಗಳಲ್ಲಿ ಅವನ ದಿನಚರಿಗಳು ಶುರುವಾಗುತ್ತಾವೆ. ಅಂದರೆ, ತಿಂಡಿ-ತಿನಿಸು, ಕುಟುಂಬದವರ ಜೊತೆಗಿನ ಓಡಾಟ, ಪ್ರೀತಿಸೋ ಹುಡುಗಿಯ ಹಿಂದೆ ಸುತ್ತಾಟ, ಜೊತೆಗೊಂದಷ್ಟು ಹೊಡೆದಾಟ… ಹೀಗೆ ಆ ಪಾತ್ರ ವಿಶೇಷವಾಗಿ ಕಾಣಿಸುತ್ತಾ ಹೋಗುತ್ತದೆ. ಕೆಲವೇ ಗಂಟೆಗಳ ಕಾಲ ಎಚ್ಚರವಿರುವ ಆ ವ್ಯಕ್ತಿಯ ಮುಂದೆ ಅನೇಕ ಸವಾಲುಗಳು ಎದುರಾಗುತ್ತವೆ.

ಆ ಸವಾಲುಗಳು ಯಾಕೆ ಬರುತ್ತವೆ, ಆ ಸವಾಲನ್ನು ಅವನು ಹೇಗೆ ಎದುರಿಸುತ್ತಾನೆ ಅನ್ನೋದೆ ಚಿತ್ರದ ಇಂಟ್ರೆಸ್ಟಿಂಗ್‌ ಸ್ಟೋರಿ. ಅದರಲ್ಲೂ ಆ ವ್ಯಕ್ತಿ ಎಚ್ಚರವಿದ್ದಾಗ, ಅವನು ಮಾಡುವ ಕೆಲಸಗಳೇ ಒಂಥರಾ ಮಜ ಕೊಡುತ್ತವೆ. ಅದೇ ಸಿನಿಮಾದ ಥ್ರಿಲ್ಲಿಂಗ್‌ ಅಂಶಗಳು. ಇಲ್ಲಿ ಭರ್ಜರಿ ಆ್ಯಕ್ಷನ್‌ ಇದೆ. ಭರಪೂರ ಮನರಂಜನೆಯೂ ಇದೆ. ಥ್ರಿಲ್‌ ಎನಿಸುವ ಜರ್ನಿಯೂ ಚಿತ್ರದ ವಿಶೇಷ’ ಎಂದು ವಿವರ ಕೊಡುತ್ತಾರೆ ಪ್ರಜ್ವಲ್‌. “ಜಂಟಲ್‌ಮೆನ್‌’ ಎಂಬ ಶೀರ್ಷಿಕೆ ಯಾಕೆ ಎಂಬ ಪ್ರಶ್ನೆ ಬಂದರೆ, ಅದಕ್ಕೆ ಉತ್ತರ ಚಿತ್ರ ನೋಡಿದರೆ ಸಿಗುತ್ತದೆ ಎನ್ನುವ ಪ್ರಜ್ವಲ್‌,

“ನನ್ನ ಹಿಂದಿನ ಎಲ್ಲಾ ಚಿತ್ರಗಳಿಗೆ ಹೋಲಿಸಿದರೆ, “ಜಂಟಲ್‌ಮೆನ್‌’ ಒಂದು ಹೊಸ ಬಗೆಯ ಜರ್ನಿ. ಇದು ಪಕ್ಕಾ ಸ್ವಮೇಕ್‌ ಚಿತ್ರ. ಸಿನಿಮಾ ನೋಡುವ ಪ್ರತಿಯೊಬ್ಬರಿಗೂ ಹೊಸ ಅನುಭವ ಕಟ್ಟಿಕೊಡುತ್ತದೆ ಎಂಬ ಗ್ಯಾರಂಟಿ ಕೊಡುತ್ತೇನೆ ಎನ್ನುತ್ತಾರೆ ಪ್ರಜ್ವಲ್‌. ಸದ್ಯಕ್ಕೆ “ಜಂಟಲ್‌ಮೆನ್‌’ ಜಪದಲ್ಲಿರುವ ಪ್ರಜ್ವಲ್‌, “ಇನ್ಸ್‌ಪೆಕ್ಟರ್‌ ವಿಕ್ರಂ’ ಮೇಲೂ ವಿಶ್ವಾಸ ಇಟ್ಟಿದ್ದಾರೆ. ಅದು ಅವರ 30 ನೇ ಸಿನಿಮಾ.

ಅದೊಂದು ಫ‌ನ್ನಿ ಕಾಪ್‌ ಕಥೆಯಾಗಿದ್ದು, ಹೊಸಬಗೆಯ ಪಾತ್ರದಲ್ಲಿ ಪ್ರಜ್ವಲ್‌ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು, ರಾಮ್‌ನಾರಾಯಣ್‌ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದ ಕಥೆ ಬಗ್ಗೆಯೂ ಪ್ರಜ್ವಲ್‌ಗೆ ನಂಬಿಕೆ ಇದೆ. ಪಿ.ಸಿ.ಶೇಖರ್‌ ನಿರ್ದೇಶನದ ಹೊಸ ಚಿತ್ರದಲ್ಲೂ ಅವರು ಮೊದಲ ಸಲ ಗ್ಯಾಂಗ್‌ಸ್ಟರ್‌ ಕಥೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೇನೆ ಇರಲಿ, ಪ್ರಜ್ವಲ್‌ ಈಗ ಭವ್ಯ ಭರವಸೆಯಲ್ಲಿರುಮದಂತೂ ನಿಜ. “ಜಂಟಲ್‌ಮೆನ್‌’ ಮೂಲಕ ಬೆಸ್ಟ್‌ ಮನ್‌ ಎನಿಸಿಕೊಳ್ಳುವ ವಿಶ್ವಾಸ ಅವರಿಗೆ ಹೆಚ್ಚಿದೆ.

ಜಂಟಲ್‌ಮೆನ್ಗೆ ದರ್ಶನ್‌ ಸಾಥ್‌: ಇನ್ನು “ಜಂಟಲ್‌ಮೆನ್‌’ ಚಿತ್ರದ ಆರಂಭದಿಂದಲೂ ನಟ ದರ್ಶನ್‌ ಚಿತ್ರತಂಡಕ್ಕೆ ಸಾಥ್‌ ಕೊಡುತ್ತಲೇ ಬಂದಿದ್ದಾರೆ. ಟೀಸರ್‌ ಬಿಡುಗಡೆ, ಸಾಂಗ್‌ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಇತ್ತೀಚೆಗೆ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ ದರ್ಶನ್‌, ಚಿತ್ರದ ಲಿರಿಕಲ್‌ ವಿಡಿಯೋ, ಟ್ರೇಲರ್‌ ನೋಡಿ, “ಪ್ರಜ್ಜು ಚಿತ್ರ ನೋಡಬೇಕೆಂಬ ಕುತೂಹಲ ಹೆಚ್ಚಿದ್ದು, ಶ್ರಮಪಟ್ಟು ಸಿನಿಮಾ ಮಾಡಿದ ಚಿತ್ರತಂಡಕ್ಕೆ ಶುಭವಾಗಲಿ’ ಎಂದು ಹರಸಿದ್ದಾರೆ.

ನಿರ್ಮಾಪಕ ಗುರುದೇಶಪಾಂಡೆ ಅವರಿಗೂ ಈ ಚಿತ್ರ ಮಾಡಿದ್ದು ತೃಪ್ತಿ ಕೊಟ್ಟಿದೆ. ಕಾರಣ, ನಿರ್ದೇಶಕ ಜಡೇಶ್‌ ಹೆಣೆದ ಕಥೆ ಕೇಳಿ, ಹಲಮ ನಿರ್ಮಾಪಕರ ಬಳಿ ಅವರೇ ಕಳಿಸಿದ್ದರಂತೆ. ಆದರೆ, ಕಥೆ ಸ್ವಲ್ಪ ಸ್ಟ್ರಾಂಗ್‌ ಆಗಿದ್ದರಿಂದ ಗೊಂದಲವೂ ಇದ್ದುದರಿಂದ ಯಾರೂ ಮುಂದಾಗದನ್ನು ಗಮನಿಸಿ, ತಾವೇ ಈ ಚಿತ್ರ ನಿರ್ಮಿಸಲು ಮುಂದಾದರಂತೆ. ಹಾಗಾಗಿ , “ಠಾಕ್ರೆ’ ಸಿನಿಮಾ ಅನೌನ್ಸ್‌ ಮಾಡಿದ್ದನ್ನು ಮುಂದಕ್ಕೆ ಹಾಕಿ, ಪ್ರಜ್ವಲ್‌ಗೆ “ಜಂಟಲ್‌ಮೆನ್’ ಮಾಡಿದ ಬಗೆ ವಿವರಿಸಿದರು. ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ದರ್ಶನ್‌ ಕೊಟ್ಟ ಸಾಥ್‌ನಿಂದಾಗಿ ನಮಗೆ ಮತ್ತಷ್ಟು ಬಲ ಬಂದಂತಾಗಿದೆ’ ಎಂಬುದು ಗುರುದೇಶಪಾಂಡೆ ಮಾತು.

ಚಿತ್ರದಲ್ಲಿ ಕೆಲಸ ಮಾಡಿದ ಅರ್ಜುನ್‌, ಪ್ರಶಾಂತ್‌ ರೆಡ್ಡಿ ಅಂದು ತಮ್ಮ ಅನುಭವ ಹಂಚಿಕೊಂಡರು. ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌, ನಾಯಕಿ ನಿಶ್ವಿ‌ಕಾ ನಾಯ್ಡು “ಜಂಟಲ್‌ಮೆನ್’ನನ್ನು ಕೊಂಡಾಡಿದರು. ಅಂದು ದೇವರಾಜ್‌ ದಂಪತಿ, ಸಂಚಾರಿ ವಿಜಯ್‌, ಬೇಬಿ ಆರಾಧ್ಯ ಇತರರು ಮಾತನಾಡಿದರು. ಚಿತ್ರದಲ್ಲಿ ಅಚ್ಯುತಕುಮಾರ್‌, ಆರತಿ, ಅರವಿಂದ ರಾವ್‌ ಇತರರು ನಟಿಸಿದ್ದಾರೆ. ಈ ವಾರ ಚಿತ್ರಮಂದಿರಕ್ಕೆ ಎಂಟ್ರಿಯಾಗುತ್ತಿರುವ “ಜಂಟಲ್‌ಮೆನ್‌’ ಸದ್ಯಕ್ಕಂತೂ ಹವಾ ಎಬ್ಬಿಸಿರೋದು ನಿಜ.

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next