Advertisement

ಬಾರದೂರಿಗೆ ಜೆಂಟಲ್‌ ರಂಗ: ಅಭಿಮಾನಿಗಳಲ್ಲಿ ಶೋಕ

12:19 PM Oct 09, 2018 | Team Udayavani |

ಆನೇಕಲ್‌: ಬನ್ನೇರುಘಟ್ಟ ಪ್ರವಾಸಿಗರ ಪ್ರೀತಿಯ “ಜೆಂಟಲ್‌ ರಂಗ’ “ದೂರದೂರಿಗೆ ಪ್ರಯಾಣ ಬೆಳೆಸಿ’ ಅಭಿಮಾನಿಗಳ ಕಣ್ಣುಗಳಲ್ಲಿ ನೀರು ತರಿಸಿದ್ದಾನೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ನಾಗರಹೊಳೆ ಸಮೀಪದ ಮತ್ತಿಗೂಡು ಆನೆ ಶಿಬಿರದಲ್ಲಿ ಮಾವುತನ ಆಜ್ಞೆ ಕಡ್ಡಾಯವಾಗಿ ಪಾಲಿಸುತ್ತಿದ್ದ. ಆದರೆ, ವಿಧಿಯಾಟ.

Advertisement

ರಸ್ತೆ ಅಪಘಾತವೊಂದರಲ್ಲಿ ಬೆನ್ನುಹುರಿ ಮೂಳೆ ಮುರಿದು ನೋವಿನಿಂದಲೇ ಪ್ರಾಣ ತ್ಯಜಿಸಿದ್ದು ದುರಂತ. ಕಳೆದ ಒಂದು ವರ್ಷದ ಹಿಂದೆ ಬನ್ನೇರುಘಟ್ಟ ಆನೆ ಶಿಬಿರದಲ್ಲಿನ ಕ್ರಾಲ್‌ನಲ್ಲಿ ಬಂಧಿಯಾಗಿದ್ದ 2 ಒಂಟಿ ಸಲಗಗಳನ್ನು ಪಳಗಿಸಿ ನಾಗರಹೊಳೆ ಮತ್ತಿಗೂಡು ಆನೆ ಶಿಬಿರಕ್ಕೆ ಸ್ಥಳಾಂತರಿಸಿದ್ದರು.

ಅದರಲ್ಲಿನ ಒಂದು ಸಲಗ ಜೆಂಟಲ್‌ ರಂಗ. ಬನ್ನೇರುಘಟ್ಟ ಸುತ್ತಮುತ್ತಲ ಹಳ್ಳಿ ಸೇರಿದಂತೆ ಬೆಂಗಳೂರು ನಗರ, ಮಾಗಡಿ, ನೆಲಮಂಗಲ, ತುಮಕೂರು ಸುತ್ತಮುತ್ತಲ ಹಳ್ಳಿಗಳಲ್ಲಿ ಖ್ಯಾತಿ-ಕುಖ್ಯಾತಿ ಗಳಿಸಿ ತನ್ನದೇಯಾದ ಅಭಿಮಾನಿ ಬಳಗ ಕಟ್ಟಿಕೊಂಡಿದ್ದ. ಬನ್ನೇರುಘಟ್ಟದಲ್ಲಿ ಒಂಟಿ ಸಲಗ ರಂಗ ಎಂಬ ಹೆಸರು ಮನೆ ಮನೆಯಲ್ಲಿ ಪರಿಚಯ. ಅಷ್ಟೇ ಪ್ರೀತಿ ಬೆಳೆಸಿಕೊಂಡಿದ್ದ ರಂಗನ ಸಾವು ಈ ಭಾಗದ ಜನರಲ್ಲಿ ನೋವು ತರಿಸಿದೆ.

ಪುಂಡಾಟವೇ ಮುಳುವಾಯಿತು: ಕಾಡಿನ ಸಲಗ ವಯೋ ಸಹಜವಾಗಿ ವರ್ತಿಸುತ್ತಿದ್ದ. ಇದರಿಂದ ದಿನ ಬೆಳಗಾಗುತ್ತಲೇ ಖ್ಯಾತಿ ಗಳಿಸುತ್ತ ಕೆಲವರ ಕೆಂಗಣ್ಣಿಗೆ ಗುರಿಯಾಗಿ ಕುಖ್ಯಾತಿ ಕಳಂಕ ಹೊರ ಬೇಕಾಯಿತು. ಹೀಗೆ ವರ್ಷಗಳು ಉರುಳುತ್ತಿದ್ದಂತೆ ಬನ್ನೇರುಘಟ್ಟ, ನೆಲಮಂಗಲ, ಮಾಗಡಿ ಸೇರಿದಂತೆ ತುಮಕೂರು ಭಾಗಗಲ್ಲಿ ಹೆಚ್ಚು ಸುತ್ತಾಡುತ್ತಿದ್ದ. ನಂತರದ ದಿನಗಳಲ್ಲಿ ರಾಜಕೀಯ ಒತ್ತಡಕ್ಕೆ ಮಣಿದ ಅರಣ್ಯ ಇಲಾಖೆ ಬಂಧಿಸಲು ನಿರ್ಧರಿಸಿತ್ತು.  

ಸಾಮಾಜಿಕ ಜಾಲ ತಾಣದಲ್ಲಿ ಮಿಡಿತ: ಸಾಮಾಜಿಕ ಜಾಲತಾಣ ರಂಗನ ಸಾವಿನ ಸುದ್ದಿಗೆ ಸಾವಿರಾರು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಜೆಂಟಲ್‌ ರಂಗನ ಫೋಟೋಗಳನ್ನು ಶೇರ್‌ ಮಾಡಿ ಮತ್ತೆ ಹುಟ್ಟಿ ಬಾ ರಂಗ ಎಂಬ ಸ್ಲೋಗನ್‌ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.  

Advertisement

ಕಳೆದ 2 ವರ್ಷಗಳ ಹಿಂದೆ ಬನ್ನೇರುಘಟ್ಟ, ಮಾಗಡಿ , ನೆಲಮಂಗಲ, ತುಮಕೂರು ಭಾಗಗಲ್ಲಿ ಮನಸೋ ಇಚ್ಚೆ ಅಲೆಯುತ್ತಿದ್ದ ಕಾಡಿನ ಒಂಟಿ ಸಲಗ ಜೆಂಟಲ್‌ ರಂಗ. ಸುಮಾರು 35-40 ವರ್ಷ ವಯಸ್ಸಿನ ಸಲಗ ಬನ್ನೇರುಘಟ್ಟ ಅರಣ್ಯವೇ ರಂಗನ ಹುಟ್ಟು ಮತ್ತು ಬೆಳೆವಣಿಗೆ. ವಯಸ್ಸು ಏರುತ್ತಿದ್ದಂತೆ ಬನ್ನೇರುಘಟ್ಟ ಬಿಟ್ಟು ದೂರದ ತುಮಕೂರು ಅರಣ್ಯ ಭಾಗದ ವರೆಗೂ ಹೋಗುತ್ತಿದ್ದ ಇಂತಹ ರಂಗ ತನ್ನದೆಯಾದ ವರ್ತನೆಗಳಿಂದ ಹೆಚ್ಚು ಹೆಸರು ಮಾಡಿದ್ದ. ಈ ಹೆಸರೇ ರಂಗನ ಬದುಕು ಕೊನೆಗೊಳ್ಳುವಂತಾಯಿತು ಅನಿಸುತ್ತಿದೆ.

ಜೆಂಟಲ್‌ ರಂಗ ಮೃತಪಟ್ಟ ಸುದ್ದಿ ತಿಳಿದ ಬನ್ನೇರುಘಟ್ಟ ಸುತ್ತಮುತ್ತಲಿನ ಅಭಿಮಾನಿಗಳ ಕಣ್ಣಲ್ಲಿ ಕಂಬಿನ ಸುರಿದಿದೆ. ಬನ್ನೇರುಘಟ್ಟ, ಸಂಪಿಗೆಹಳ್ಳಿ, ಬೈರಪ್ಪನಹಳ್ಳಿ ಯ ಹಲವು ಯುವಕರ ಮನೆಗಳಲ್ಲಿ ಸೂತಕದ ಛಾಯೆ ಆವರಿಸಿತ್ತು.  ಹಾಗೆಯೇ ಆನೇಕಲ್‌ನಲ್ಲಿ ಪರಿಸರ ಮತ್ತು ವನ್ಯಜೀವಿ ಹಿತರಕ್ಷಣಾ ಸಮಿತಿ ತನ್ನ ಕಚೇರಿಯಲ್ಲಿ ಜೆಂಟಲ್‌ ರಂಗನ ಫೋಟೋ ಇಟ್ಟು, ಹೂ ಹಾಕಿ ಪೂಜೆ ಸಲ್ಲಿಸಿ ಭಾವಪೂರ್ವ ಶ್ರದ್ಧಾಂಜಲಿ ಅರ್ಪಿಸಿದರು.

ಸಾವು-ಬದುಕಿನ ನಡುವೆ ಹೋರಾಟ: ಕಳೆದ 2 ವರ್ಷಗಳ ಹಿಂದೆ ಬೆಂಗಳೂರು ಹೊರವಲಯದ ಮಾಗಡಿ , ನೆಲಮಂಗಲ ಅರಣ್ಯ ಪ್ರದೇಶದಲ್ಲಿ ಕಾಡಾನೆ ಹಿಡಿಯುವ ನುರಿತ ಸಾಕಾನೆಗಳ ತಂಡ 2 ಸಲಗಗಳನ್ನು ಸೆರೆಡಿದು ಬನ್ನೇರುಘಟ್ಟ ಆನೆ ಶಿಬಿರದ ಕ್ರಾಲ್‌ನಲ್ಲಿಟ್ಟಿತ್ತು. 8 ತಿಂಗಳು ಕ್ರಾಲ್‌ ನಲ್ಲಿ ಮಾವುತರ ಪಾಠ ಕಲಿತು ನಾಗರಹೊಳೆ ಸಮೀಪದ ಮತ್ತಿಗೂಡು ಆನೆ ಶಿಬಿರಕ್ಕೆ ಸ್ಥಳಾಂತರಗೊಂಡಿದ್ದ.

ಅಂದು ರಂಗ ನೊಂದಿಗೆ ಐರಾವತ ಆನೆಯನ್ನೂ ಕಳುಹಿಸಿದ್ದರು. ದುರಂತ ಎಂದರೆ ಶಿಬಿರಕ್ಕೆ ಹೋದ ಆರೇಳು ತಿಂಗಳಲ್ಲಿ ಐರಾವತ ಆನೆ ಮೃತಪಟ್ಟಿತ್ತು. ಅದಾಗಿ 8 ತಿಂಗಳಿಗೆ ಜೆಂಟಲ್‌ ರಂಗನೂ ಮೃತಪಟ್ಟಿದ್ದಾನೆ. ಸೋಮವಾರ ಮುಂಜಾನೆ ರಸ್ತೆ ಪಕ್ಕದಲ್ಲೇ ನಡೆದು ಹೋಗುತ್ತಿದ್ದ ರಂಗನಿಗೆ ಹಿಂದಿನಿಂದ ಬಂದ ಖಾಸಗಿ ಬಸ್‌ ಡಿಕ್ಕಿ ಹೊಡೆದಿದೆ. ಡಿಕ್ಕಿ ಪರಿಣಾಮ ಬೆನ್ನು ಮೂಳೆ ಮುರಿದು ಕೆಳಕ್ಕೆ ಬಿದ್ದಿದೆ. ಸುಮಾರು 4 ಗಂಟೆಗಳ ಕಾಲ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿ ಕೊನೆಗೆ ಇಹಲೋಕ ತ್ಯಜಿಸಿದೆ. 

ಕಣ್ಣೀರು ಹಾಕಿದ ಅಭಿಮಾನಿಗಳು
ನಾವು ರಂಗನನ್ನು 15 ವರ್ಷಗಳಿಂದ ನೋಡಿದ್ದೆವು. ರಂಗ ಮತ್ತು ನಮ್ಮ ಸಂಬಂಧ ಹೇಗೆತ್ತು ಎಂದರೆ ಸೆರೆ ಹಿಡಿದು ಬನ್ನೇರುಘಟ್ಟದಲ್ಲಿ ಬಂಧಿಯಾಗಿದ್ದ ಅಷ್ಟೂ ದಿನ ರಂಗನ್ನು ನೋಡಿದವರು ನಾವು, ಮಾವುತರ ಮಾತು ಕೇಳುತ್ತಿದ್ದಂತೆ ನಾವೂ ಅದಕ್ಕೆ ಹುಲ್ಲು, ಕಬ್ಬು ನೀಡಿದ್ದೆವು, ಅಷ್ಟೇ ಏಕೆ ರಂಗನ್ನು ಬನ್ನೇರುಘಟ್ಟದಿಂದ ಮತ್ತಿಗೋಡು ಆನೆ ಶಿಬಿರಕ್ಕೆ ಸ್ಥಳಾಂತರಿಸಿದಾಗ ಅದರೊಟ್ಟಿಗೆ ನಾವು ಹೋಗಿ ಬಂದಿದ್ದೆವು. ಆದರೆ, ರಂಗನ ಸಾವು ಕಣ್ಣಲ್ಲಿ ನೀರು ತರಿಸಿದೆ.
-ಹರೀಶ್‌ಗೌಡ, ಬೈರಪ್ಪನಹಳ್ಳಿ 

ರಂಗನಂತಹ ಮತ್ತೂಂದು ಆನೆಯನ್ನು ನಾವು ನೋಡಲು ಆಗುವುದಿಲ್ಲ. ನೋಡಲು ಎಷ್ಟು ದೈತ್ಯನಾಗಿದ್ದನೋ ಅವನ ಮನಸ್ಸು ಅಷ್ಟೇ ಶಾಂತವಾಗಿತ್ತು. ಎಂದೂ ತಾನಾಗೆ ಯಾರ ಮೇಲೂ ದಾಳಿ ಮಾಡಿದ್ದಿಲ್ಲ. ರಂಗ ಅಷ್ಟೂ ಕ್ರೂರಿಯಾಗಿದ್ದಿದ್ದರೆ ರಂಗನನ್ನು ಪ್ರೀತಿಸುವ ಜನರೇ ಇರುತ್ತಿರಲಿಲ್ಲ.
-ಜಯಣ್ಣ, ಜೆ.ಪಿ.ನಗರ

ಆನೆ ಮಾನವರ ಸಂಘರ್ಷಕ್ಕೆ ಆನೆಗಳನ್ನು ಸೆರೆಹಿಡಿಯುವುದೊಂದೇ ಪರಿಹಾರವಲ್ಲ. ಇರುವ ಎಲ್ಲಾ ಆನೆಗಳನ್ನು ಸೆರೆ ಹಿಡಿದರೆ, ಮುಂದೊಂದು ದಿನ ಆನೆಗಳು ಇಲ್ಲವಾದ ಮೇಲೆ ಅರಣ್ಯ ಇಲಾಖೆ , ಅಧಿಕಾರಿಗಳು ಏಕೆ ಬೇಕು ಎಂಬಂತಾಗುತ್ತದೆ. ಹೀಗಾಗಿ ಮುಂದಾದರೂ ಆನೆಗಳನ್ನು ಸೆರೆ ಹಿಡಿಯುವ ಕಾರ್ಯಚರಣೆ ಮಾಡ ಬೇಕಾದಾಗ ರಂಗನ ಸಾವು ನೆನಪಾಗಬೇಕು.
-ನಳಿನಿ ಬಿ.ಗೌಡ, ಪರಿಸರ ಮತ್ತು ವನ್ಯಜೀವಿ ಹಿತರಕ್ಷಣಾ ಸಮಿತಿ ವ್ಯವಸ್ಥಾಪಕ ನಿರ್ದೇಶಕಿ
 
* ಮಂಜುನಾಥ್‌ ಎನ್‌.ಬನ್ನೇರುಘಟ್ಟ

Advertisement

Udayavani is now on Telegram. Click here to join our channel and stay updated with the latest news.

Next