Advertisement

ಮೀಯಾಂವ್‌ ಎನ್ನುವ ಚಿರತೆ

07:09 PM Jul 24, 2019 | mahesh |

ಮಾಂಸಾಹಾರಿಗಳಾದರೂ ಇವುಗಳು ಅಪರೂಪಕ್ಕೆಂಬಂತೆ ಹಣ್ಣು ಮತ್ತು ಹುಲ್ಲನ್ನೂ ಸೇವಿಸುವುದೂ ಉಂಟು!

Advertisement

ಜೆನೆಟ್‌ ನಮ್ಮ ಪುನುಗು ಬೆಕ್ಕು ಅಥವಾ ಮುಂಗುಸಿಗಳ ವರ್ಗಕ್ಕೆ ಸೇರುವ ಪ್ರಾಣಿ. ಇದರ ದೇಹ ರಚನೆ, ಆಕಾರ ಮತ್ತು ಬಣ್ಣವು ಚಿರತೆಗಳಿಗೆ ಹೋಲುವುದರಿಂದ ಇದನ್ನು “ಚಿರತೆ ಬೆಕ್ಕು’ ಎಂದೂ ಕರೆಯುತ್ತಾರೆ. ಇವು ಹೆಚ್ಚಾಗಿ ದಕ್ಷಿಣ ಅಮೆರಿಕ, ಉತ್ತರ ಅಮೇರಿಕ, ಬ್ರೆಜಿಲ್‌, ಫ್ರಾನ್ಸ್‌, ಸ್ಪೇನ್‌, ಎಬ್ಸಿನಿಯಾ ಮತ್ತು ಆಫ್ರಿಕಾದಲ್ಲಿ ಕಂಡುಬರುತ್ತವೆ.

ಘರ್ಜನೆಯಲ್ಲ ಮೀಯಾಂವ್‌ ಎನ್ನುತ್ತೆ!
ಚಿರತೆಗಳಿಗಿರುವಂತೆ ಕಪ್ಪು ಇಲ್ಲವೇ ಕಂದು ಬಣ್ಣದ ಚುಕ್ಕೆಗಳಿರುತ್ತವೆ. ಕಿವಿ ಹಾಗೂ ಕಣ್ಣುಗಳು ಅಗಲವಾಗಿದ್ದು, ಕೈಕಾಲುಗಳು ತುಸು ಗಿಡ್ಡಕ್ಕಿರುತ್ತವೆ. ಅವುಗಳ ಬಾಲ ಶರೀರದಷ್ಟೇ ಉದ್ದವಿರುತ್ತದೆ. ಜೆನೆಟ್‌ಗಳ ಗಾತ್ರವು ಚಿರತೆಯಂತಿದ್ದರೂ ಅವು ಘರ್ಜಿಸುವುದಿಲ್ಲ, ಬದಲಿಗೆ ಬೆಕ್ಕಿನಂತೆ ಮೀಯಾಂವ್‌ ಮೀಯಾಂವ್‌’ಎಂದು ಅರಚುತ್ತದೆ. ಆದರೆ ನೆನಪಿಡಿ, ಮೀಯಾಂವ್‌ ಎಂದರೂ ಇದು ಬೆಕ್ಕಲ್ಲ!

ಗೋಚರಿಸುವುದು ಅಪರೂಪ
ಇವು ಸರಿಸುಮಾರು 8ರಿಂದ 13 ವರ್ಷಗಳಷ್ಟು ಜೀವಿತಾವಧಿಯನ್ನು ಹೊಂದಿವೆಯಾದರೂ ರಕ್ಷಿತಾರಣ್ಯಗಳಲ್ಲಿ ಕಂಡುಬರುವ ಕೆಲವು ಜೆನೆಟ್‌ಗಳು 22 ವರ್ಷಗಳವರೆಗೂ ಬದುಕಿದ ಉದಾಹರಣೆಯಿದೆ. ನಮ್ಮ ದೇಶದ ಕಾಡುಗಳಲ್ಲಿಯೂ ಚಿರತೆ ಬೆಕ್ಕುಗಳಿದ್ದು ಇವುಗಳನ್ನು ಮರಿಯಾಗಿದ್ದಾಗಲೇ ಹಿಡಿದು ಪಳಗಿಸಿ ಬಳಸಿಕೊಳ್ಳುವವರೂ ಇದ್ದಾರೆ. ನಿಶಾಚರಿಗಳಾಗಿರುವುದರಿಂದ ಇವು ಮಾನವನ ಕಣ್ಣಿಗೆ ಗೋಚರಿಸುವುದು ತೀರಾ ಅಪರೂಪ. ಅಲ್ಲದೆ ಅರಣ್ಯನಾಶದಿಂದಾಗಿ ಅವುಗಳ ಸಂತತಿ ಕ್ಷೀಣಿಸುತ್ತಿರುವುದು ಕೂಡಾ ಅವುಗಳು ಕಾಣಿಸಿಕೊಳ್ಳದಿರುವುದಕ್ಕೆ ಕಾರಣವಾಗಿದೆ.

ಮರವೇರುವುದರಲ್ಲಿ ಎಕ್ಸ್‌ಪರ್ಟ್‌
ಮಾಂಸಾಹಾರಿಗಳಾದ ಇವುಗಳು ಇಲಿ, ಬಾವಲಿ, ಮೊಲ, ಪಕ್ಷಿಗಳು, ಸರೀಸೃಪಗಳು, ಸಸ್ತನಿಗಳು ಹಾಗೂ ಕೀಟಗಳನ್ನು ಬೇಟೆಯಾಡಿ ತಿನ್ನುತ್ತವೆ. ಮಾಂಸಾಹಾರಿಗಳಾದರೂ ಇವುಗಳು ಅಪರೂಪಕ್ಕೆಂಬಂತೆ ಹಣ್ಣು ಮತ್ತು ಹುಲ್ಲನ್ನೂ ಸೇವಿಸುವುದೂ ಉಂಟು. ಹಗಲಿನಲ್ಲಿ ಪೊದೆ ಹಾಗೂ ಬಿಲಗಳಲ್ಲಿ ಓಡಾಡಿಕೊಂಡಿರುವ ಇವುಗಳು ರಾತ್ರಿಯಾಗುತ್ತಲೇ ಮರಗಳ ಮೇಲೇರಿ ವಿರಮಿಸುತ್ತವೆ. ಚಿರತೆಗಳಂತೆಯೇ ಜೆನೆಟ್‌ ಬೆಕ್ಕುಗಳು ಕೂಡಾ ಮರ ಏರುವುದರಲ್ಲಿ ಎತ್ತಿದ ಕೈ.

Advertisement

– ಪ. ನಾ. ಹಳ್ಳಿ ಹರೀಶ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next