ಮಡಿಕೇರಿ: ದೇಶ ಕಂಡ ಅಪ್ರತಿಮ ವೀರ ಸೇನಾನಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ವಿಚಾರಧಾರೆ ಹಾಗೂ ಆದರ್ಶಗಳನ್ನು ತಿಳಿದುಕೊಳ್ಳುವಂತಾಗಬೇಕು ಎಂದು ವಿರಾಜಪೇಟೆ ತಾಲೂಕು ಕಸಾಪ ಅಧ್ಯಕ್ಷ ಮಧೂಶ್ ಪೂವಯ್ಯ ಅವರು ತಿಳಿಸಿದ್ದಾರೆ.
ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಆವರಣದಲ್ಲಿ ನಡೆದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪನವರ 121 ನೇ ಜನ್ಮದಿನ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅವರಂತೆ ಉನ್ನತ ಹುದ್ದೆಯನ್ನ ಸೇನೆಯಲ್ಲಿ ಪಡೆದ ಮತ್ತೂಬ್ಬ ಭಾರತೀಯನನ್ನು ನಾವು ಕಾಣುವುದು ತೀರ ವಿರಳ. ಈ ಸಾಧನೆ ಕೊಡಗಿನ ಪರಂಪರೆಗೆ ಮತ್ತೂಂದು ಹೆಮ್ಮೆ. ಆ ದಿನವನ್ನೇ ಸೇನಾ ದಿನಾಚರಣೆ ಎಂದು ಪ್ರತೀ ವರ್ಷವೂ ಆಚರಿಸಲಾಗುತ್ತಿದೆ ಎಂದರು.
ಕಾರ್ಯಪ್ಪ ಅವರ ಕೀರ್ತಿ ಎಂತಹುದು ಎಂದರೆ, ಖುದ್ದು ಅಂದಿನ ಪ್ರಧಾನಮಂತ್ರಿಗಳಾದ ರಾಜೀವ್ ಗಾಂಧೀಜಿಯವರು ಕಾರ್ಯಪ್ಪ ಅವರ ಮನೆಗೆ ಭೇಟಿ ನೀಡಿದ್ದರು. 17ನೇ ವಯಸ್ಸಿನಲ್ಲಿ ಸೈನ್ಯಕ್ಕೆ ಸೇರಿದ ಅವರು ಬ್ರಿಟನ್, ಕೆನಡಾ, ಅಮೆರಿಕ, ಚೀನ ದೇಶಗಳಲ್ಲಿ ಉನ್ನತ ತರಬೇತಿಯನ್ನು ಪಡೆಯುತ್ತಾರೆ. ಭಾರತ ಪಾಕಿಸ್ಥಾನ ಆರ್ಮಿ ವಿಭಜನೆ ಸಂಧರ್ಭ ಅತ್ಯಂತ ನಿಷ್ಪಕ್ಷಪಾತವಾಗಿ ಸೈನ್ಯ ವಿಭಜಿಸಿದ ಕೀರ್ತಿ ಕಾರ್ಯಪ್ಪನವರದು, ಈ ವಿಚಾರವನ್ನು ಹಲವು ಬಾರಿ ಅಂದಿನ ಪಾಕಿಸ್ಥಾನದ ಸೇನಾ ಮುಖ್ಯಸ್ಥರಾದ ಅಯೂಬ್ ಖಾನ್ ಅವರೇ ಹೇಳಿದ್ದಾರೆ ಎಂದು ತಿಳಿಸಿದರು.
ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಪಾರ್ವತಿ ಅಪ್ಪಯ್ಯ, ವ್ಯಾಂಡಮ್ ಎಂಟರ್‌ಪ್ರೈಸಸ್‌ನ ಮಾಲಕ ದಾಮೋದರ್, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಕಾರ್ಯಾಧ್ಯಕ್ಷ ಸಿ.ಡಿ ಕಾಳಪ್ಪ, ಪ್ರಾಂಶುಪಾಲೆ ಸರಸ್ವತಿ ಬಿ.ಎಂ, ಆಡಳಿತಾಧಿಕಾರಿ ಎನ್.ಎ.ಪೊನ್ನಮ್ಮ ಮತ್ತು ಕೆ.ಟಿ ಮುತ್ತಪ್ಪ ಉಪಸ್ಥಿತರಿದ್ದರು.