Advertisement
ದ. ಕನ್ನಡ ಜಿ.ಪಂ.ನ ಸಾಮಾನ್ಯ ಸಭೆಯಲ್ಲಿ ಆಯುಷ್ಮಾನ್ ಭಾರತ್ -ಆರೋಗ್ಯ ಕರ್ನಾಟಕ ಯೋಜನೆಯ ಬಗ್ಗೆ ಮಾಹಿತಿ ಸಂದರ್ಭದಲ್ಲಿ ಯೋಜನೆಯ ಲೋಪಗಳು ಮತ್ತು ಸಾರ್ವಜನಿಕ ರಿಂದ ವ್ಯಕ್ತವಾಗುತ್ತಿರುವ ದೂರುಗಳನ್ನು ಜಿ.ಪಂ. ಸದಸ್ಯರು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಚಿಕಿತ್ಸೆಗೆ ದಾಖಲಾಗುವ ಸಂದರ್ಭದಲ್ಲಿ ರೋಗಿಗಳು ಎದುರಿಸುತ್ತಿರುವ ಸಮಸ್ಯೆಗಳು ನನ್ನ ಗಮನಕ್ಕೂ ಬಂದಿವೆ. ಯೋಜನೆಯ ಅನುಷ್ಠಾನದ ಸಮಸ್ಯೆ ಗಳಿಗೆ ಜಿಲ್ಲಾಮಟ್ಟದಲ್ಲೇ ಪರಿಹಾರ ಕಂಡುಕೊಳ್ಳ ಲಾಗುವುದು. ಯೋಜನೆಯ ಸ್ವರೂಪದಲ್ಲಿ ಸಮಸ್ಯೆ ಗಳಿದ್ದರೆ ಆರೋಗ್ಯ ಸಚಿವರ ಗಮನಕ್ಕೆ ತಂದು ಪರಿ ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಯೋಜನೆಯಡಿಯ ತುರ್ತು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗುವ ಬಡ ರೋಗಿಗಳಿಗೆ ವೆನ್ಲ್ಯಾಕ್ ಆಸ್ಪತ್ರೆಯಿಂದ ಶಿಫಾರಸು ಪತ್ರಕ್ಕಾಗಿ ರೋಗಿಗಳನ್ನು ಅಥವಾ ಅವರ ಕುಟುಂಬವನ್ನು ಅಲೆದಾಡಿಸಬಾರದು. ಶಿಫಾರಸಿನ ಅಗತ್ಯವಿದ್ದಲ್ಲಿ ವೆನ್ಲ್ಯಾಕ್ ಆಸ್ಪತ್ರೆಯ ಅಧೀಕ್ಷರು ಅಥವಾ ಯೋಜನೆಯ ಕೊ-ಆರ್ಡಿನೇಟರ್ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು. ಆರೋಗ್ಯಮಿತ್ರರು ಪೂರಕವಾಗಿ ಕಾರ್ಯನಿರ್ವಹಿಸಬೇಕು. ಆಯ್ಕೆ ಪಟ್ಟಿ ಯಲ್ಲಿರುವ ಆಸ್ಪತ್ರೆಗೆ ರೋಗಿಯನ್ನು ಕಳುಹಿಸುವ ಸಂದರ್ಭದಲ್ಲಿ ಚಿಕಿತ್ಸೆ ಯಾವ ಆಸ್ಪತ್ರೆಯಲ್ಲಿ ಲಭ್ಯವಿದೆ ಎಂಬ ನಿಖರ ಮಾಹಿತಿಯನ್ನು ವೆನ್ಲ್ಯಾಕ್ ಆಸ್ಪತ್ರೆಯ ವೈದ್ಯರು ನೀಡಬೇಕು ಎಂದು ವೆನ್ಲ್ಯಾಕ್ ಆಸ್ಪತ್ರೆಯ ಅಧೀಕ್ಷಕಿ ಡಾ| ರಾಜೇಶ್ವರಿ ದೇವಿಯವರಿಗೆ ನಿರ್ದೇಶನ ನೀಡಿದರು. ಯೋಜನೆಗೆ ಒಳಪಟ್ಟ ಆಸ್ಪತ್ರೆಗಳಲ್ಲಿ ಲಭ್ಯವಿರುವ ಚಿಕಿತ್ಸೆಗಳು ಮತ್ತು ಆರೋಗ್ಯ ಮಿತ್ರರ ವಿವರಗಳನ್ನು ಒಳಗೊಂಡ ಕೈಪಿಡಿಯನ್ನು ತಯಾರಿಸಿ ಎಲ್ಲ ಜಿ.ಪಂ ಸದಸ್ಯರು ಮತ್ತು ತಾ.ಪಂ. ಅಧ್ಯಕ್ಷರಿಗೆ ಒದಗಿಸು ವಂತೆ ಸಚಿವರು ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್ ಅವರಿಗೆ ಸೂಚಿಸಿದರು.
Related Articles
Advertisement
ಸಮಸ್ಯೆ ಆಲಿಸಿದ ಸಚಿವರುಜಿಲ್ಲೆಯ ಸಮಸ್ಯೆಗಳ ಕುರಿತು ಜಿ.ಪಂ. ಸದಸ್ಯರಿಂದ ನನಗೆ ಯಾವುದೇ ಅಹವಾಲು ಬಾರದ ಕಾರಣ ಖುದ್ದಾಗಿ ಸಭೆಗೆ ಬಂದಿದ್ದೇನೆ ಎಂದು ಸಚಿವರು ಹೇಳಿದರು. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆ ವಹಿಸಿದ್ದರು. ಐವನ್ ಡಿ’ಸೋಜಾ, ಕಸ್ತೂರಿ ಪಂಜ, ಅನಿತಾ ಹೇಮನಾಥ್, ಯು.ಪಿ. ಇಬ್ರಾಹಿಂ, ಡಾ| ಆರ್. ಸೆಲ್ವಮಣಿ ಉಪಸ್ಥಿತರಿದ್ದರು. ಆಯುಷ್ಮಾನ್ ಭಾರತ್: 4,000 ಮಂದಿಗೆ ಚಿಕಿತ್ಸೆ
ಆಯುಷ್ಮಾನ್ ಭಾರತ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಲ್ಲಿ 2018- 2019ನೇ ಸಾಲಿನಲ್ಲಿ 4,000 ಮಂದಿ ಜಿಲ್ಲಾ ವೆನ್ಲ್ಯಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಮತ್ತು 4,497 ಮಂದಿ ವಿವಿಧ ಆಸ್ಪತ್ರೆಗಳಿಗೆ ಶಿಫಾರಸು ಪಡೆದುಕೊಂಡು ಹೋಗಿದ್ದಾರೆ. 2019ರ ಎಪ್ರಿಲ್‌ನಿಂದ ಜೂನ್ ತಿಂಗಳ ವರೆಗೆ 1,285 ಮಂದಿ ಯೋಜನೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ವೆನ್ಲ್ಯಾಕ್ ಆಸ್ಪತ್ರೆಯ ಅಧೀಕ್ಷಕಿ ಡಾ| ರಾಜೇಶ್ವರಿ ದೇವಿ ತಿಳಿಸಿದ್ದಾರೆ. ಹೋಬಳಿ ಮಟ್ಟದಲ್ಲಿ ಪಾಕ್ಷಿಕ ಜನ ಸಂಪರ್ಕ ಸಭೆ
ಜಿಲ್ಲೆಯ ವ್ಯಾಪ್ತಿಯ ಹೋಬಳಿಗಳಲ್ಲಿ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಪ್ರತಿ 15 ದಿನಗಳಿ ಗೊಮ್ಮೆ ಜನ ಸಂಪರ್ಕ ಸಭೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಖಾದರ್ ಇದೇವೇಳೆ ತಿಳಿಸಿದರು.
ಚರ್ಚೆಯಾದ ಮುಖ್ಯಾಂಶಗಳು
* 94 ಸಿಸಿಯಡಿ ಹಕ್ಕುಪತ್ರಕ್ಕೆ ಮೂಡಾದಿಂದ ಎನ್‌ಒಸಿ ಕೇಳಲಾಗುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದ ಜನರು ಮೂಡಾಕ್ಕೆ ಅಲೆದಾಡುವಂತಾಗಿದೆ.
– ಎನ್‌ಒಸಿ ಅಗತ್ಯವಿಲ್ಲ ಎಂದು ಮೂಡಾ ತಿಳಿಸಿದ್ದು, ಲಿಖೀತ ಪತ್ರ ಕೇಳಲಾಗಿದೆ.
* ಶಾಲೆಗಳಲ್ಲಿ ಮಳೆನೀರು ಸೋರಿಕೆಯಾಗಿ ತೊಂದರೆಯಾಗುತ್ತಿದೆ, ದುರಸ್ತಿಗೆ ಅನುದಾನ ಬೇಕು.
– ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಡಿ ಶಾಸಕರಿಗೆ ಕಳೆದ ವರ್ಷ ನೀಡಿರುವ ತಲಾ 6 ಕೋ.ರೂ.ಗಳಲ್ಲಿ ಶಾಲೆಗಳ ಮಳೆ ಹಾನಿ ದುರಸ್ತಿಗೆ ಅವಕಾಶವಿದೆ.
* ಜಿ.ಪಂ. ಸಾಮಾನ್ಯ ಸಭೆಗೆ ಭೂ ಮತ್ತು ಗಣಿ ಇಲಾಖೆ ಅಧಿಕಾರಿಯವರು ಗೈರುಹಾಜರಾಗು ತ್ತಿರುವುದಕ್ಕೆ ಅಸಮಾಧಾನ.
-ಜಿ.ಪಂ. ಸಾಮಾನ್ಯ ಸಭೆ ಮತ್ತು ಕೆಡಿಪಿ ಸಭೆಗೆ ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳ ಹಾಜರಿ ಕಡ್ಡಾಯ. ಗೈರುಹಾಜ ರಾದ ಇಲಾಖೆಯ ಅಧಿಕಾರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿ- ಸಚಿವ ಖಾದರ್.
* ನದಿ, ತೋಡುಗಳಲ್ಲಿ ಮರಳು, ಮಣ್ಣು ತುಂಬಿಸಿ ಮಳೆಗಾಲದಲ್ಲಿ ನೆರೆ ಸಮಸ್ಯೆ ಉದ್ಭವಿಸುತ್ತಿದೆ.
– ಜಲಮೂಲಗಳು ರಾಷ್ಟ್ರೀಯ ಸಂಪತ್ತು. ಡಿಸಿ ಮೂಲಕ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿ ಪರಿಹಾರಕ್ಕೆ ಪ್ರಯತ್ನ ನಡೆಸಲಾಗುವುದು- ಸಚಿವ ಯು.ಟಿ. ಖಾದರ್ ಉತ್ತರ.