Advertisement

ಪ್ರಮುಖ ರಾಜ್ಯಗಳಲ್ಲಿ ಲಿಂಗಾನುಪಾತ ಕುಸಿತ

01:24 AM Aug 13, 2019 | Lakshmi GovindaRaj |

ಬೆಂಗಳೂರು: ಲಿಂಗಾನುಪಾತವು ಸಮಾಜದಲ್ಲಿ ಮಹಿಳಾ ಸ್ಥಾನಮಾನದ ಪ್ರತೀಕವಾಗಿದ್ದು, ದೇಶದ ಪ್ರಮುಖ ರಾಜ್ಯಗಳಲ್ಲಿ ಅದರ ಪ್ರಮಾಣ ನಿರಂತರವಾಗಿ ಕುಸಿಯುತ್ತಲೇ ಸಾಗಿದೆ ಎಂದು ಹಿರಿಯ ಪತ್ರಕರ್ತೆ ಪಾರ್ವತಿ ಮೆನನ್‌ ತಿಳಿಸಿದರು.

Advertisement

ಅಖೀಲ ಭಾರತ ಜೀವವಿಮಾ ನೌಕರರ ಸಂಘಟನೆಯು ಲಾಲ್‌ಬಾಗ್‌ ರಸ್ತೆಯ ಗೊಡ್ವಾಡ್‌ ಭವನದಲ್ಲಿ ಹಮ್ಮಿಕೊಂಡಿದ್ದ “4ನೇ ಮಹಿಳಾ ಸಮಾವೇಶ’ದಲ್ಲಿ ಮಾತನಾಡಿದ ಅವರು, ನೀತಿ ಆಯೋಗದ ವರದಿ ಪ್ರಕಾರ 2011ರಲ್ಲಿ ಭಾರತದಲ್ಲಿ ಲಿಂತಾನುಪಾತವು 1000 ಪುರುಷರಿಗೆ 909 ಸ್ತ್ರೀನಷ್ಟು ಇತ್ತು. ಇದರ ಪ್ರಮಾಣ 2015ರಲ್ಲಿ 900ಕ್ಕೆ ಇಳಿದಿದೆ.

ದೇಶದ ಪ್ರಮುಖ ರಾಜ್ಯಗಳಲ್ಲಿಯೇ ಲಿಂಗಾನುಪಾತ ಪ್ರಮಾಣ ಸಾಕಷ್ಟು ಇಳಿಕೆಯಾಗುತ್ತಿದ್ದು, ಪ್ರಧಾನಿ ಪ್ರತಿನಿಧಿಸುವ ಗುಜರಾತ್‌ನಲ್ಲಿಯೇ ಹೀನಾಯವಾಗಿದೆ. ಗುಜರಾತ್‌ನಲ್ಲಿ 2011ರಲ್ಲಿ 911 ಇತ್ತು, 2015ರಲ್ಲಿ 854ಕ್ಕೆ ಇಳಿಕೆಯಾಗಿದೆ. ಉಳಿದಂತೆ ಕರ್ನಾಟಕ, ಮಹಾರಾಷ್ಟ್ರ, ಹರಿಯಾಣ, ರಾಜಸ್ಥಾನದಲ್ಲಿ ಕೆಳಮಟ್ಟದಲ್ಲಿದ್ದು, ಇನ್ನಷ್ಟು ಇಳಿಮುಖವಾಗುತ್ತಿದೆ. ಇನ್ನು ಮುಂದಿನ ಎರಡು ವರ್ಷಗಳಲ್ಲಿ ಜನಗಣತಿ ನಡೆಯಲಿದ್ದು, ಲಿಂಗಾನುಪಾತ ಪ್ರಮಾಣ ಸ್ಥಿತಿ ಇನ್ನಷ್ಟು ಚಿಂತಾಜನಕವಾಗಲಿದೆ ಎಂದರು.

ಕಠಿಣ ಕಾನೂನು ಹಾಗೂ ವಿವಿಧ ಕಾಯ್ದೆಗಳಿದ್ದರೂ ಲೈಂಗಿಕ ದೌರ್ಜನ್ಯ ನಿರಂತರವಾಗಿ ಹೆಚ್ಚುತ್ತಿವೆ. ಮಹಿಳೆಯರು ದೌರ್ಜನ್ಯದ ವಿರುದ್ಧ ಪ್ರತಿಭಟಿಸದಿರುವುದು, ಜತೆಗೆ ಕಾನೂನು, ಕಾಯ್ದೆಗಳ ಮಾಹಿತಿ ಕೊರತೆ ಇದಕ್ಕೆ ಕಾರಣ. ನೌಕರಿ ಸ್ಥಳಗಳಲ್ಲಿ ಬಹುತೇಕ ಮಹಿಳೆಯರು ತಮ್ಮ ವ್ಯಕ್ತಿತ್ವಕ್ಕೆ ಕಳಂಕ ಬರುತ್ತದೆ ಎಂದು ಸಮಾನ ಹಕ್ಕು ಪಡೆಯಲು ಹಾಗೂ ದೌರ್ಜನ್ಯ ವಿರೋಧಿಸಲು ಹಿಂದೇಟು ಹಾಕುತ್ತಿದ್ದು, ಈ ಮನಸ್ಥಿತಿಯಿಂದ ಹೊರಬರಬೇಕಿದೆ. ಈ ನಿಟ್ಟಿನಲ್ಲಿ ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ಆಯಾ ಹಂತಗಳಲ್ಲಿ ಮಹಿಳಾ ಸಮಿತಿಗಳು ನಿರ್ಮಾಣವಾಗಿ ಹಕ್ಕುಗಳು, ದೌರ್ಜನ್ಯ ವಿರೋಧಿ ಕಾನೂನುಗಳ ಮಾಹಿತಿ, ಮಹಿಳಾ ಸೌಲಭ್ಯಗಳನ್ನು ತಿಳಿಸುವ ಕಾರ್ಯವಾಗಬೇಕಿದೆ ಎಂದು ಸಲಹೆ ನೀಡಿದರು.

ಅಖೀಲ ಭಾರತ ಜೀವವಿಮಾ ನೌಕರರ ಸಂಘಟನೆ ಜಂಟಿ ಕಾರ್ಯದರ್ಶಿ ಎಂ.ಗಿರಿಜಾ ಮಾತನಾಡಿ, ಸಮಾಜದ ಎಲ್ಲಾ ವಲಯಗಳಲ್ಲೂ ಮಹಿಳಾ ಶೋಷಣೆ ನಡೆಯುತ್ತಿದೆ. ಒಂದು ಕಡೆ ಪ್ರಧಾನಿಗಳು “ಬೇಟಿ ಬಜಾವೊ’ ಎಂದು ಹೇಳುತ್ತಿದ್ದರೆ, ಇನ್ನೊಂದೆಡೆ ಮಹಿಳಾ ಶೋಷಣೆ ಹೆಚ್ಚಾಗಿ ಸ್ತ್ರೀ ಸ್ಥಾನಮಾನ ಕುಸಿತುತ್ತಿದೆ. ಇದಕ್ಕೆ ಸಮಾಜದ ಹೀನ ಮನಸ್ಥಿತಿಯೇ ಕಾರಣ ಎಂದರು.

Advertisement

ಸ್ತ್ರೀಯರು ಶಬರಿಮಲೆ ದೇಗುಲ ಪ್ರವೇಶಿಸುವ ವಿಚಾರದಲ್ಲಿ ಸರ್ವೋತ್ಛ ನ್ಯಾಯಾಲಯ ಮಹಿಳೆಯರ ಪರ ನಿಂತಿತು. ಆದರೆ, ಕೆಲ ಸಂಪ್ರದಾಯವಾದಿಗಳು ಪುರಾತನ ಸಂಸ್ಕೃತಿಯ ಹೆಸರಿನಲ್ಲಿ ಇಂದಿಗೂ ಸ್ತ್ರೀಯರ ಪ್ರವೇಶವನ್ನು ವಿರೋಧಿಸುತ್ತಿದ್ದಾರೆ. ಒಂದು ಕಾಲದಲ್ಲಿ ಸಾವಿತ್ರಿಬಾಯಿ ಪುಲೆ ಪುರಾತನ ಸಂಸ್ಕೃತಿ ಮುರಿದು, ಅವಮಾನ ಎದುರಿಸಿ ಮಹಿಳಾ ಶಿಕ್ಷಣಕ್ಕೆ ಆದ್ಯತೆ ನೀಡದಿದ್ದರೆ ಅಂದಿನ ಕಾಲದಲ್ಲಿ ಮಹಿಳಾ ಶಿಕ್ಷಣ ಅಸಾಧ್ಯವಾಗಿಯೇ ಉಳಿಯುತ್ತಿತ್ತು.

ಹೀಗಾಗಿ, ಮಹಿಳೆಯರು ದೌರ್ಜನ್ಯವನ್ನು ಪ್ರತಿಭಟಿಸಬೇಕು. ತಮ್ಮ ಹಕ್ಕುಗಳನ್ನು ಕೇಳಿ ಪಡೆಯಬೇಕು ಎಂದು ಸಲಹೆ ನೀಡಿದರು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಮಹಿಳಾ ನೌಕರರು ಮಹಿಳಾ ಸಬಲೀಕರಣ ಕುರಿತು ವಿಚಾರ ಮಂಡಿಸಿದರು. ಅಖಿಲ ಭಾರತ ಜೀವವಿಮಾ ನೌಕರರ ಸಂಘಟನೆಯ ಅಧ್ಯಕ್ಷ ಅಮಾನುಲ್ಲಾ ಖಾನ್‌, ಕಾರ್ಯದರ್ಶಿ ವಿ.ರಮೇಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next