Advertisement

ಸಮರ್ಥ ಸೇನಾ ಸನ್ನದ್ಧತೆಯೇ ನನ್ನ ಆದ್ಯತೆ

07:43 PM May 01, 2022 | Team Udayavani |

ನವದೆಹಲಿ: ವರ್ತಮಾನದ, ಸಾಂಪ್ರದಾಯಿಕ ಮತ್ತು ಭವಿಷ್ಯದ ಭದ್ರತಾ ಸವಾಲುಗಳನ್ನು ಎದುರಿಸಲು ಅತ್ಯುನ್ನದ ಮಟ್ಟದ ಸನ್ನದ್ಧತೆಯನ್ನು ಸಾಧಿಸುವುದೇ ನನ್ನ ಮೊದಲ ಆದ್ಯತೆಯಾಗಿದೆ.’

Advertisement

ಹೀಗೆಂದು ಹೇಳಿರುವುದು ಭೂಸೇನೆಯ 29ನೇ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಜನರಲ್‌ ಮನೋಜ್‌ ಪಾಂಡೆ. ಪದಗ್ರಹಣದ ಬೆನ್ನಲ್ಲೇ ವಿವಿಧ ಸುದ್ದಿವಾಹಿನಿಗಳಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. ಜಾಗತಿಕ ಪರಿಸ್ಥಿತಿಗಳು ಬದಲಾಗುತ್ತಿರುವಂತೆಯೇ ನಮ್ಮ ಮುಂದೆ ಸಾಕಷ್ಟು ಸವಾಲುಗಳು ಸೃಷ್ಟಿಯಾಗುತ್ತಿವೆ. ಭೂಸೇನೆಯು ಭಾರತೀಯ ವಾಯುಪಡೆ ಮತ್ತು ನೌಕಾಪಡೆಯೊಂದಿಗೆ ಸಹಕಾರ ಮತ್ತು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ, ಒಗ್ಗಟ್ಟಾಗಿ ಯಾವುದೇ ಪರಿಸ್ಥಿತಿಯನ್ನೂ ಸಮರ್ಥವಾಗಿ ಎದುರಿಸಲಿದೆ ಎಂದೂ ಅವರು ಹೇಳಿದ್ದಾರೆ.

ಯಥಾಸ್ಥಿತಿ ಬದಲಿಸಲು ಬಿಡಲ್ಲ:
ಜಮ್ಮು ಮತ್ತು ಕಾಶ್ಮೀರದ ಗಡಿಗಳಲ್ಲಿ ಡ್ರಗ್‌ಗಳು ಹಾಗೂ ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯು ಈಗಲೂ ಅವ್ಯಾಹತವಾಗಿ ಸಾಗಿದೆ. ಭಯೋತ್ಪಾದಕರ ತರಬೇತಿ ಶಿಬಿರಗಳು ಹಾಗೂ ಉಗ್ರ ಮೂಲಸೌಕರ್ಯಗಳ ಸಂಖ್ಯೆ ತಗ್ಗಿದೆ ಎಂದು ಹೇಳುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೆ, ಯಥಾಸ್ಥಿತಿಯನ್ನು ಬದಲಾಯಿಸಲು ಮತ್ತು ನಮ್ಮ ಭೂಪ್ರದೇಶಕ್ಕೆ ಯಾವುದೇ ನಷ್ಟ ಉಂಟಾಗಲು ಭಾರತ ಎಂದಿಗೂ ಬಿಡುವುದಿಲ್ಲ ಎಂದೂ ಜ. ಪಾಂಡೆ ಹೇಳಿದ್ದಾರೆ.

ಗಡಿ ನಿಯಂತ್ರಣ ರೇಖೆ ಮತ್ತು ವಾಸ್ತವಿಕ ಗಡಿ ರೇಖೆಯಲ್ಲಿ ಪರಿಸ್ಥಿತಿ ಸಹಜವಾಗಿದೆ. ಇಲ್ಲಿನ ಯಥಾಸ್ಥಿತಿಯನ್ನು ಬಲವಂತವಾಗಿ ಬದಲಾಯಿಸುವ ಉದ್ದೇಶದಿಂದ ಶತ್ರುರಾಷ್ಟ್ರಗಳು ಮಾಡಿರುವ ಏಕಪಕ್ಷೀಯ ಹಾಗೂ ಪ್ರಚೋದನಾತ್ಮಕ ಕ್ರಮಗಳಿಗೆ ಭಾರತವು ಸರಿಯಾಗಿಯೇ ಪ್ರತಿಕ್ರಿಯಿಸಿದೆ. ಭಾರತ ಮತ್ತು ಚೀನ ನಡುವೆ ಮಾತುಕತೆ ಪ್ರಕ್ರಿಯೆಯು ನಡೆಯುತ್ತಿದೆ. ಮಾತುಕತೆಯನ್ನು ಹೀಗೆಯೇ ಮುಂದುವರಿಸಿದರೆ ಮುಂದೊಂದು ದಿನ ಖಂಡಿತಾ ವಿವಾದಕ್ಕೊಂದು ಪರಿಹಾರ ಸಿಕ್ಕೇ ಸಿಗುತ್ತದೆ ಎಂದೂ ಅವರು ನುಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next