Advertisement
ನನ್ನ ತಂದೆಯಿಂದಾಗಿಯೇ ನಾನು ಕ್ರಿಕೆಟಿಗಳಾದೆ. ಅವರು ವಾಯುಸೇನೆಯಲ್ಲಿದ್ದವರು, ಅಲ್ಲಿಂದ ನಿವೃತ್ತಿಯಾದ ಬಳಿಕ ಬ್ಯಾಂಕೊಂದರಲ್ಲಿ ಕೆಲಸ ಮಾಡಿದರು. ಆರಂಭದಲ್ಲಿ ನನ್ನ ಸಹೋದರ ಕ್ರಿಕೆಟ್ ಆಟದಲ್ಲಿ ತೊಡಗಿಸಿಕೊಂಡ, ಆಮೇಲೆ ನಾನು. ಅಣ್ಣ ಬೆಳ್ಳಂಬೆಳಗ್ಗೆ ಎದ್ದು ಆಟವಾಡುತ್ತಿದ್ದಾಗ ನಾನು ಅವನಿಗೆ ಕಂಪೆನಿ ಕೊಡುತ್ತಿದ್ದೆ. ಅಪ್ಪ ಸೇನೆಯಲ್ಲಿದ್ದವರಾದ ಕಾರಣ ಮಹಾನ್ ಶಿಸ್ತಿನ ಮನುಷ್ಯ, ಅಮ್ಮನೂ ಹಾಗೆಯೇ. ಮನೆಗೆ ಮನೆಯೇ ನಸುಕಿನಲ್ಲೇ ಎದ್ದುಬಿಡುತ್ತಿತ್ತು. ಲೇಟಾಗಿ ಏಳುತ್ತಿದ್ದವಳೆಂದರೆ ನಾನು ಮಾತ್ರ. ಬೇಗ ಏಳುವುದನ್ನು ಅಭ್ಯಾಸ ಮಾಡಿಸಲೆಂದು ಅಪ್ಪ ನನ್ನಲ್ಲಿ ಕ್ರಿಕೆಟ್ ಆಟದ ಹುಚ್ಚು ಹತ್ತಿಸಿದರು. ಅಣ್ಣ ಬೆಳಗ್ಗೆ ಆರು ಗಂಟೆಗೆ ಕ್ರಿಕೆಟ್ ಕ್ಯಾಂಪಿಗೆ ಹೊರಡುತ್ತಿದ್ದ, ನಾನು ಅವನನ್ನು ಹಿಂಬಾಲಿಸುತ್ತಿದ್ದೆ. ಕ್ರಿಕೆಟ್ ಆಟ ಮತ್ತು ನಾನು ಜತೆಗೂಡಿದ್ದು ಹೀಗೆ.
Related Articles
ವಿರೋಧವಿತ್ತು!
ಆಗಲೂ ಈಗಲೂ ಕ್ರಿಕೆಟ್ ಪುರುಷ ಪ್ರಧಾನ ಆಟ. ಪುರುಷ ಪ್ರಾಧಾನ್ಯ ಇದ್ದ ಆಟದಲ್ಲಿ ಮಗಳನ್ನು ತೊಡಗಿಸುವ ಅಪ್ಪನ ನಿರ್ಧಾರಕ್ಕೆ ಮನೆಯಲ್ಲಿ ವಿರೋಧ ಇದ್ದೇ ಇತ್ತು. ಆರಂಭದಲ್ಲಿ ನನಗದರ ಬಗ್ಗೆ ಗೊತ್ತಿರಲಿಲ್ಲ. ಅಲ್ಲದೆ, ಕ್ರಿಕೆಟ್ ಅಷ್ಟು ಸುಲಭವಾದ ಆಟವೂ ಅಲ್ಲ. ದೈಹಿಕ ಫಿಟ್‌ನೆಸ್ ಕಾಪಾಡಿಕೊಳ್ಳಬೇಕು, ಬಿಸಿಲಿನಲ್ಲಿ ದಿನವಿಡೀ ಆಡಬೇಕು, ಓಡಬೇಕು ಅಂದರೆ ಸುಮ್ಮನೆಯೇ?! ಅದರಲ್ಲೂ ನಮ್ಮದು ತಮಿಳು ಕುಟುಂಬ, ಆಚಾರ ವಿಚಾರಗಳಲ್ಲಿ ಕೊಂಚ ಸಂಪ್ರದಾಯಸ್ಥರು ಎನ್ನಲಡ್ಡಿಯಿಲ್ಲ. ಅಜ್ಜ – ಅಜ್ಜಿ, ಚಿಕ್ಕಪ್ಪ – ಚಿಕ್ಕಮ್ಮಂದಿರು, ಬಂಧುಗಳು ಎಲ್ಲರೂ ಅಪ್ಪನನ್ನು “ನೀನ್ಯಾಕೆ ಆಕೆಯನ್ನು ಕ್ರಿಕೆಟ್ ಆಟಕ್ಕೆ ತಳ್ಳುತ್ತಿದ್ದೀ’ ಎಂದು ಕೇಳುವವರೇ. “ಹುಡುಗರ ಜತೆಗೆ ಆಡಿ ಗಂಡುಬೀರಿಯಾಗುತ್ತಾಳೆ’, “ಬಿಸಿಲಿನಲ್ಲಿ ಆಡಿ ಕಪ್ಪಾಗುತ್ತಾಳೆ’ ಅನ್ನುವ ಕ್ಷುಲ್ಲಕ ಟೀಕೆಗಳನ್ನೂ ಮಾಡುತ್ತಿದ್ದರು. ಜತೆಗೆ ದಿನಗಟ್ಟಲೆ ಆಟವಾಡುತ್ತಿದ್ದ ಕಾರಣ ಮನೆಯಲ್ಲಿ ನಡೆಯುತ್ತಿದ್ದ ಅನೇಕ ಕೌಟುಂಬಿಕ ಸಮಾರಂಭಗಳನ್ನೂ ತಪ್ಪಿಸಿಕೊಳ್ಳುತ್ತಿದ್ದೆ. ನಾನು ಕ್ರಿಕೆಟ್ ಆಡುವುದು ನನ್ನ ಕುಟುಂಬದಲ್ಲಿ ಯಾರಿಗೂ ಇಷ್ಟ ಇರಲಿಲ್ಲ. ಆದರೆ ಈ ಟೀಕೆ, ವಿರೋಧಗಳನ್ನೆಲ್ಲ ನನ್ನ ಅಪ್ಪ – ಅಮ್ಮ ಜೀರ್ಣಿಸಿಕೊಂಡು ನನ್ನನ್ನು ದೃಢವಾಗಿ ಬೆಂಬಲಿಸಿದರು. ಹೀಗಾಗಿ ಈ ವಿರೋಧಗಳೆಲ್ಲ ನನ್ನ ಎದುರಿಗೆ ಬಂದದ್ದೇ ಇಲ್ಲ.
Advertisement
ನನ್ನ ಮೊದಲ ಟೂರ್ನಮೆಂಟ್‌ನಿಂದ ಆರಂಭಿಸಿ ಅಪ್ಪನೇ ನನ್ನನ್ನು ಕ್ರೀಡಾಂಗಣಕ್ಕೆ ಕರೆತರುವುದು, ಮರಳಿ ಕರೆದೊಯ್ಯುವುದು ಒಂದು ಸಂಪ್ರದಾಯ ಆಗಿಬಿಟ್ಟಿದೆ. ಈಗಲೂ ಅಪ್ಪ ಊರಿನಲ್ಲಿದ್ದರೆ ನಾನು ಅಂತಾರಾಷ್ಟ್ರೀಯ ಟೂರ್‌ಗೆ ಹೋಗುವಾಗ ಅವರೇ ನನ್ನನ್ನು ಏರ್‌ಪೋರ್ಟ್‌ಗೆ ಡ್ರಾಪ್ ಮಾಡುತ್ತಾರೆ. ನನ್ನ ಕ್ರಿಕೆಟ್ ಬದುಕಿನುದ್ದಕ್ಕೂ ಬದಲಾಗದೆ ಇರುವುದು ಇದು!
ಭಾರತೀಯ ಕ್ರಿಕೆಟ್ ಬದಲಾಗಿದೆಭಾರತೀಯ ಕ್ರಿಕೆಟ್ ಬದಲಾಗಿದೆ, ಅಷ್ಟು ಮಾತ್ರ ಅಲ್ಲ; ಒಳ್ಳೆಯದರತ್ತ ಬದಲಾಗಿದೆ. ನಾವು ಆಟವಾಡಲು ಆರಂಭಿಸಿದ ದಿನಗಳಲ್ಲಿ ನಾವು ಮ್ಯಾಟ್ ಮೇಲೆ ಅಥವಾ ಸಿಮೆಂಟ್ ವಿಕೆಟ್ ಮೇಲೆ ಆಡುತ್ತಿದ್ದೆವು. ಅಂಗಣ ಹರಳು ಕಲ್ಲುಗಳಿಂದ ತುಂಬಿರುತ್ತಿತ್ತು, ಒರಟಾಗಿರುತ್ತಿತ್ತು. ಟಫ್ì ವಿಕೆಟ್ ಎಂಬುದು ಆ ದಿನಗಳಲ್ಲಿ ಒಂದು ಐಶಾರಾಮ, ಅತ್ಯುನ್ನತ ಮಟ್ಟದ ಆಟಗಾರರು, ಟೂರ್ನಿಗಳಿಗೆ ಮೀಸಲಾದದ್ದು. 90ರ ದಶಕಗಳಲ್ಲಿ ಕ್ರಿಕೆಟ್ ಸ್ಟೇಡಿಯಂ ಪ್ರವೇಶಿಸುವುದು ಅಂದರೇನೇ ಬಹಳ ದೊಡ್ಡ ಸಂಗತಿ. ಹಾಗಾಗಿ ಯಾವುದೇ ಟೂರ್ನಿಯಲ್ಲಿ ಭಾಗವಹಿಸಬೇಕಾದರೆ ಸ್ವಂತ ಜೇಬಿನಿಂದ ತುಂಬಾ ಹಣ ಖರ್ಚಾಗುತ್ತಿತ್ತು. ಅಸೋಸಿಯೇಶನ್ ಯಾರನ್ನೂ ಸ್ಪಾನ್ಸರ್ ಮಾಡುತ್ತಿರಲಿಲ್ಲ. ಆದರೆ ಈಗ? ಅಸೋಸಿಯೇಶನ್ ಕ್ರಿಕೆಟಿಗರನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ, ಪ್ರಾಯೋಜಕರು ಹುಡುಕಿಕೊಂಡು ಬರುತ್ತಾರೆ. ನಮ್ಮೆಲ್ಲರನ್ನೂ ಬಿಸಿಸಿಐ ಒಂದೇ ಕಾಂಟ್ರಾಕ್ಟ್ ಮಾಡಿಕೊಳ್ಳುತ್ತದೆ. ಇದೆಲ್ಲ ಕ್ರಿಕೆಟ್‌ನಲ್ಲಿ ತೊಡಗಿಕೊಳ್ಳುತ್ತಿರುವ ಇಂದಿನ ಪೀಳಿಗೆಯವರ ಅನುಕೂಲಗಳು. ಕರೀಯರ್ ಆರಂಭದಲ್ಲಿಯೇ ಅತ್ಯುತ್ತಮ ಸೌಲಭ್ಯಗಳನ್ನು ಪಡೆಯುತ್ತಿರುವ ಭಾಗ್ಯಶಾಲಿಗಳು ಅವರು. ವನಿತಾ ಕ್ರಿಕೆಟಿಗರ ವಿಚಾರದಲ್ಲೂ ಹಾಗೆಯೇ. ಆ ದಿನಗಳಲ್ಲಿ ಹುಡುಗಿಯರಿಗಾಗಿ ಪ್ರತ್ಯೇಕ ಕ್ರಿಕೆಟ್ ಶಿಬಿರವಿರುತ್ತಿತ್ತು. ಒಳ್ಳೆಯ ಕೋಚ್, ಅಸೋಸಿಯೇಶನ್ ಹುಡುಕಿಕೊಂಡು ಪಟ್ಟಣ ಅಥವಾ ನಗರಕ್ಕೆ ವಲಸೆ ಹೋಗುವ ಧೈರ್ಯ ಯಾರಲ್ಲೂ ಇರಲಿಲ್ಲ. ಈಗೆಲ್ಲ ಹುಡುಗರ ಶಿಬಿರದಲ್ಲೇ ಹುಡುಗಿಯರೂ ಆಡುತ್ತಾರೆ. ಯಾವುದೇ ಪಟ್ಟಣಕ್ಕೆ ಹೋಗಿ ನೋಡಿ, ಪ್ರತೀ ಶಿಬಿರದಲ್ಲೂ ನಾಲ್ಕಾರು ಮಂದಿ ಕ್ರಿಕೆಟ್ ಆಸಕ್ತ ಹುಡುಗಿಯರಿರುತ್ತಾರೆ.
ವಿಶ್ವಕಪ್ ತಯಾರಿ
ವಿಶ್ವಕಪ್‌ಗೆ ಅರ್ಹತೆ ಗಳಿಸಿರುವ ಭಾರತೀಯ ವನಿತಾ ತಂಡ ಮಾನಸಿಕವಾಗಿ ಸಿದ್ಧರಾಗುವುದಕ್ಕೆ ಹೆಚ್ಚು ಪ್ರಾಮುಖ್ಯ ಕೊಡಬೇಕಿದೆ. ಅಲ್ಲದೆ ದೈಹಿಕ ಫಿಟ್‌ನೆಸ್ ಕೂಡ ಕಾಪಾಡಿಕೊಳ್ಳಬೇಕಿದೆ. ಯಾಕೆಂದರೆ, ಇನ್ನು ಕೆಲವು ತಿಂಗಳು ಮೇಲಿಂದ ಮೇಲೆ ಮ್ಯಾಚುಗಳಿವೆ, ಪೂರ್ವಸಿದ್ಧತಾ ಶಿಬಿರಗಳಿವೆ. ಹಾಗಾಗಿ ಮುಂದಿನ ಕೆಲವು ತಿಂಗಳುಗಳು ತುಂಬಾ ಕಠಿನ ಮತ್ತು ಸವಾಲಿನವು. ತಂಡ ಹೊಂದಾಣಿಕೆಯಿಂದ, ಸಮರಸದಿಂದ ಆಟವಾಡುವ ಕಲೆಯನ್ನು ಹರಿತಗೊಳಿಸಿಕೊಳ್ಳಬೇಕು. ಯಾವಾಗಲೂ ಗೆಲ್ಲುವುದಕ್ಕಾಗಿಯೇ ಆಟವಾಡಬೇಕು ಎಂಬುದಾಗಿ ನಾನು ನನ್ನ ತಂಡದ ಸಹ ಆಟಗಾರ್ತಿಯರಿಗೆ ಹೇಳುತ್ತಿರುತ್ತೇನೆ. ಎದುಧಿರಾಳಿ ತಂಡದ ಸಾಮರ್ಥ್ಯ ಏನೇ ಇರಲಿ; ಗೆಲ್ಲುವುಧಿದಷ್ಟೇ ನಮ್ಮ ಉದ್ದೇಶವಾಗಿರಬೇಕು. ಸಾಮಾನ್ಯವಾಗಿ ನಾವು ಬಲವಾದ ಎದುರಾಳಿ ಇದ್ದಾಗ ಕೊಂಚ ನರ್ವಸ್ ಆಗಿರುತ್ತೇವೆ, ಜಯದ ಬಗ್ಗೆ ಸಂದೇಹಗಳಿರುತ್ತವೆ. ಆಗ ನಮ್ಮ ಸಾಮರ್ಥ್ಯದ ಬಗ್ಗೆ ನಂಬಿಕೆ ಕಡಿಮೆಯಾಗುತ್ತದೆ. ದುರ್ಬಲ ತಂಡ ಎದುರಾದಾಗ ಸಾಮರ್ಥ್ಯದ ಬಗ್ಗೆ ಅತಿವಿಶ್ವಾಸ ತಾಳುತ್ತೇವೆ. ಇದಾಗಬಾರದು. ಎಲ್ಲ ಸಂದರ್ಭಗಳಲ್ಲಿಯೂ ಗೆಲುವೊಂದೇ ಗುರಿಯಾಗಬೇಕು. ಯಾರ ಎದುರು ಕೂಡ ಕುಗ್ಗದೆ, ಯಾರನ್ನೂ ಕೀಳಂದಾಜಿಸದೆ ಸ್ವಂತ ಸಾಮರ್ಥ್ಯದ ಮೇಲೆ ನಂಬಿಕೆಯಿರಿಸುವುದು ಕ್ರಿಕೆಟ್ ಮಾತ್ರ ಅಲ್ಲ; ನಿಜ ಜೀವನಕ್ಕೂ ಅನ್ವಯವಾಗುವ ತಣ್ತೀ.
ಗುರಿ, ಉದ್ದೇಶ ಸ್ಪಷ್ಟವಿರಲಿ
ಕ್ರಿಕೆಟಿಗರಾಗಲು ಬಯಸುವ ಹುಡುಗಿಯರಿಗೆ ನಾನು ಹೇಳುವುದಿಷ್ಟೇ. ಯಾವುದೇ ಆಟ ಶೋಕಿಯ ಸಂಗತಿಯಲ್ಲ. ಕಲೆಗಳು, ಸಂಗೀತ ಇತ್ಯಾದಿಗಳಂತೆ ಆಟಕ್ಕೂ ಗಂಟೆಗಳನ್ನು, ದಿನಗಳನ್ನು ಮೀಸಲಿಡಬೇಕು, ಕಠಿನವಾಗಿ ಪರಿಶ್ರಮ ಪಡಬೇಕು. ಪ್ರಸಿದ್ಧಿ, ಗ್ಲ್ಯಾಮರ್ ಇತ್ಯಾದಿಗಳೆಲ್ಲ ಬರುವುದು ಬೆವರು ಹರಿಸಿ ಸಿದ್ಧಿಯನ್ನು ಪಡೆದುಕೊಂಡ ಬಳಿಕವಷ್ಟೇ. ಅದು ಅಷ್ಟು ಸುಲಭವಲ್ಲ. ಕ್ರಿಕೆಟಿಗಳಾಗಿದ್ದುಕೊಂಡು ಮಾಡೆಲ್ ಆಗಲಾರಿರಿ. ದಿನಕ್ಕೆ ಆರೆಂಟು ತಾಸು ಬಿಸಿಲಲ್ಲಿ ನಿಂತಿದ್ದೂ ತ್ವಚೆ ಚಿನ್ನದ ಬಣ್ಣದಿಂದ ಹೊಳೆಯುತ್ತಿರಬೇಕು ಎಂದು ಬಯಸಲಾಗದು. ಚರ್ಮದ ಕಪ್ಪಾಗುತ್ತದೆ, ಯಾಕೆಂದರೆ ನಾನು ಕ್ರೀಡಾಳು. ಒಳ್ಳೆಯ ಆಟವಾಡುವುದು ನನ್ನ ಉದ್ದೇಶ ಮತ್ತು ಗುರಿ ಎರಡೂ. ನನ್ನ ಗುರಿ ಮಾಡೆಲ್ ಆಗುವುದಲ್ಲ. ಕ್ರಿಕೆಟ್ ಆಡಬಯಸುವ ಯುವತಿಯರು ಇದನ್ನು ತಿಳಿದುಕೊಂಡಿರಬೇಕು. ಹೀಗೆ ಉದ್ದೇಶ ಮತ್ತು ಗುರಿ ಸ್ಪಷ್ಟವಾಗಿದ್ದರೆ ಸಾಧನೆ ಮಾಡುವುದು ಸಾಧ್ಯವಾಗುತ್ತದೆ. – ಮಿಥಾಲಿ ರಾಜ್
ವನಿತಾ ಕ್ರಿಕೆಟ್ ತಂಡದ ನಾಯಕಿ