Advertisement

ಗೆಜ್ಜೆಗಿರಿ ಕ್ಷೇತ್ರ: “ದಾಖಲೆ’ಯಾಯಿತು ಭಕ್ತ ಸಾಗರ

11:53 PM Mar 02, 2020 | mahesh |

ಪುತ್ತೂರು: ತುಳುನಾಡಿನ ಅವಳಿ ವೀರರಾದ ಕೋಟಿ -ಚೆನ್ನಯರು ಹಾಗೂ ಮಾತೆ ದೇಯಿ ಬೈದ್ಯೆತಿ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತ್ಲ್‌ ಪುನರ್‌ ಚೈತನ್ಯಗೊಂಡು ಎಂಟು ದಿನಗಳ ಕಾಲ ನಡೆದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮ ತುಳುನಾಡಿನ ಧಾರ್ಮಿಕ ಇತಿಹಾಸದಲ್ಲಿ ಹಲವು ಹೆಗ್ಗಳಿಕೆಗಳ ಹೆಜ್ಜೆ ಗುರುತು ಮೂಡಿಸಿ ಸೋಮವಾರ ಸಮಾಪನಗೊಂಡಿದೆ.

Advertisement

ಐತಿಹಾಸಿಕ ಪುನಶ್ಚೇತನ
ಐನೂರು ವರ್ಷಗಳ ಹಿಂದೆ ಈ ಕ್ಷೇತ್ರಾದ್ಯಂತ ಬದುಕಿ, ಬಾಳಿದ ಹಾಗೂ ಸಮಾಜಕ್ಕೆ ಸತ್ಯ, ಧರ್ಮ, ನ್ಯಾಯದ ಸಂದೇಶ ನೀಡಿದ ಕೋಟಿ -ಚೆನ್ನಯರ ಇತಿಹಾಸ ಮರುಕಳಿಸಿದ ವಾತಾವರಣವನ್ನು ಕ್ಷೇತ್ರದ ಬ್ರಹ್ಮಕಲಶೋತ್ಸವ ಮೂಡಿಸಿದೆ. ಜಿಲ್ಲೆ, ರಾಜ್ಯ, ದೇಶವನ್ನೂ ಮೀರಿಸಿ ಲಕ್ಷಾಂತರ ಭಕ್ತ ಸಮುದಾಯವನ್ನು ಸೆಳೆದಿದೆ. ಬಡಗನ್ನೂರು ಗ್ರಾಮದ ಚಿಕ್ಕ ಊರು ಗೆಜ್ಜೆಗಿರಿಯಲ್ಲಿ ಐತಿಹಾಸಿಕ ಪುನಶ್ಚೇತನ ಗ್ರಾಮದ ಚಿತ್ರಣವನ್ನೇ ಬದಲಿಸಿದೆ.

10 ಕಿ.ಮೀ. ಕಾಲ್ನಡಿಗೆ
ಬ್ರಹ್ಮಕಲಶೋತ್ಸವದ ಮೂಲಕ ಪುನರ್‌ಚೇತನ ಪಡೆದ ಗೆಜ್ಜೆಗಿರಿ ಕ್ಷೇತ್ರಕ್ಕೆ ಒಟ್ಟು ದಿನಗಳಲ್ಲಿ 10 ಲಕ್ಷಕ್ಕೂ ಮಿಕ್ಕಿ ಭಕ್ತರು ಭೇಟಿ ನೀಡಿದ್ದಾರೆ. ಸಂಚಾರ ದಟ್ಟಣೆಯ ಕಾರಣಕ್ಕೆ ಕೌಡಿಚ್ಚಾರು, ಈಶ್ವರಮಂಗಲ, ಕಾವು ಮೊದಲಾದ ಕಡೆಗಳಲ್ಲಿ ವಾಹನಗಳನ್ನು ನಿಲ್ಲಿಸಿ ಸುಮಾರು 10 ಕಿ.ಮೀ. ಕಾಲ್ನಡಿಗೆಯಲ್ಲಿ ಬಂದು ಕ್ಷೇತ್ರದ ದರ್ಶನ ಪಡೆದವರು ಸಾವಿರಾರು ಮಂದಿ ಇದ್ದಾರೆ.

ಅಚ್ಚುಕಟ್ಟಿನ ವ್ಯವಸ್ಥೆ
ಗೆಜ್ಜೆಗಿರಿ ಕ್ಷೇತ್ರಕ್ಕೆ ಆರಂಭದಿಂದಲೂ ನಿರೀಕ್ಷೆಗೂ ಮೀರಿ ಭಕ್ತ ಸಮೂಹ ಆಗಮಿಸಿದರೂ ಕ್ಷೇತ್ರದ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಚ್ಯುತಿ ಉಂಟಾಗದಂತೆ ಸಾವಿರಾರು ಮಂದಿ ಸ್ವಯಂ ಸೇವಕರು, ವಿವಿಧ ಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರು, ಕ್ಷೇತ್ರದ ಮುಖಂಡರು ಕಾರ್ಯನಿರ್ವಹಿಸಿದ್ದಾರೆ. ಮುಖ್ಯವಾಗಿ ಲಕ್ಷಾಂತರ ಮಂದಿಗೆ ಅನ್ನಪ್ರಸಾದ ನೀಡುವಲ್ಲಿ ಭೋಜನೆ ಶಾಲೆಯ ಸ್ವಯಂ ಸೇವಕರು ದಿನದ 24 ಗಂಟೆಯೂ ಕಾರ್ಯತತ್ಪರಾಗಿದ್ದಾರೆ. ಕ್ಷೇತ್ರದಲ್ಲಿ ಪಾರ್ಕಿಂಗ್‌, ಕಾರ್ಯಾಲಯ, ಪ್ರಸಾದ ವಿತರಣೆ, ಸ್ವಚ್ಛತೆ, ಸಭಾ ಸಿದ್ಧತೆ ಎಲ್ಲವೂ ಅಚ್ಚುಕಟ್ಟಿನಿಂದ ನಡೆಯುವ ಮೂಲಕ ಭಕ್ತ ಸಮೂಹದ ಮೆಚ್ಚುಗೆಗೆ ಪಾತ್ರವಾಗಿದೆ.

 ಮಹಾತ್ಮರ ಹೆಜ್ಜೆಗುರುತು
“ಗೆಜ್ಜೆಗಿರಿಯ ಹೆಜ್ಜೆಗುರುತು’ ಪುಸ್ತಕ ಬಿಡುಗಡೆಯಾದಂತೆ ಸಾಕ್ಷಿಯಾಗಿ ಕ್ಷೇತ್ರದ ಬ್ರಹ್ಮಕಲಶೋತ್ಸವ ನಡೆದಿದೆ. ಕ್ಷೇತ್ರದಲ್ಲಿ ಮಹಾತ್ಮರ ಹೆಜ್ಜೆಗುರುತೂ ಮೂಡಿದೆ. ಹೊರೆಕಾಣಿಕೆ, ಜನಸಂಖ್ಯೆ ದಾಖಲೆ ನಿರ್ಮಿಸಿದೆ. ಹಗಲಿರುಳು ದುಡಿದ ಸ್ವಯಂಸೇವಕರ ಸೇವೆ ಸಾರ್ಥಕತೆಯನ್ನು ಪಡೆದಿದೆ. ಭಕ್ತ ಜನರ ಸಹಕಾರದಿಂದ ಅಚ್ಚುಕಟ್ಟಿನ ವ್ಯವಸ್ಥೆ ಮೆಚ್ಚುಗೆ ಗಳಿಸಿದೆ. ಎಲ್ಲರಿಗೂ ದೇಯಿ -ಬೈದ್ಯೆತಿ, ಕೋಟಿ ಚೆನ್ನಯರ ಅನುಗ್ರಹ ಆಗಿದೆ.
 - ಪೀತಾಂಬರ ಹೆರಾಜೆ , ಅಧ್ಯಕ್ಷರು, ಬ್ರಹ್ಮಕಲಶೋತ್ಸವ ಸಮಿತಿ

Advertisement

ಹತ್ತು ಪಟ್ಟು ಯಶಸ್ಸು
ನಾವು ಯೋಚಿಸಿದ್ದಕ್ಕಿಂತ ಹತ್ತು ಪಟ್ಟು ವಿಜೃಂಭಣೆಯಿಂದ, ಯಶಸ್ವಿಯಾಗಿ ಒಟ್ಟು ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ನಡೆದಿವೆ. ಹೊರೆಕಾಣಿಕೆ, ಭೋಜನದ ವ್ಯವಸ್ಥೆಯಿಂದ ಹಿಡಿದು ಎಲ್ಲವೂ ಸ್ಮರಣೀಯವಾಗಿ ಜನಮಾನಸದಲ್ಲಿ ಗುರುತಿಸಿಕೊಳ್ಳುವಂತೆ ಆಗಿದೆ. ಸುಮಾರು 8 ಲಕ್ಷ ಮಂದಿ ಅನ್ನಪ್ರಸಾದ ಸ್ವೀಕರಿಸಿರುವುದು ಕ್ಷೇತ್ರದ ಹೆಗ್ಗಳಿಕೆಗೆ ಸಾಕ್ಷಿಯಾಗಿದೆ. ದಿನದಿಂದ ದಿನಕ್ಕೆ, ನಿರಂತರವಾಗಿ ಭಕ್ತ ಸಮೂಹ ಕ್ಷೇತ್ರಕ್ಕೆ ಬರುತ್ತಿರುವುದರಿಂದ ಭೋಜನ ಹಾಗೂ ಉಪಾಹಾರದ ವ್ಯವಸ್ಥೆಯನ್ನು ಮುಂದುವರೆಸಲು ತೀರ್ಮಾನಿಸಿದ್ದೇವೆ.
 - ಜಯಂತ ನಡುಬೈಲು, ಅಧ್ಯಕ್ಷರು, ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next