ಚಿತ್ರದುರ್ಗ: ಕೋವಿಡ್ ಸಂಕಷ್ಟಕ್ಕೆ ಸಿಲುಕಿ ಜೀವನ ನಿರ್ವಹಣೆಗೆ ಕಷ್ಟಪಡುತ್ತಿರುವ ವಾದ್ಯಗೋಷ್ಠಿ ಕಲಾವಿದರನ್ನು ಗುರುತಿಸಿ ಪರಿಹಾರ ಒದಗಿಸುವಂತೆ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಜಿಲ್ಲಾ ಆರ್ಕೆಸ್ಟ್ರಾ ಸಾಂಸ್ಕೃತಿಕ ಕಲಾವಿದರ ಸಂಘ ಹಾಗೂ ಅಖೀಲ ಕರ್ನಾಟಕ ವಾದ್ಯಗೋಷ್ಠಿ ಕಲಾವಿದರ ಮಹಾ ಸಂಘದ ಜಿಲ್ಲಾ ಘಟಕದಿಂದ ಕನ್ನಡ ರಾಜ್ಯೋತ್ಸವ, ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಸಂಗೀತ ದಿಗ್ಗಜ ರಾಜನ್ ಹಮ್ಮಿಕೊಂಡಿದ್ದ ಅವರಿಗೆ ಗೀತ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಗೀತಕ್ಕೆ ಕಷ್ಟ, ಸುಖ, ದಣಿವು ಎಲ್ಲವನ್ನೂ ಮರೆಸುವ ಶಕ್ತಿಯಿದೆ. ಅಂತಹ ಕಲೆಯನ್ನು ಮೈಗೂಡಿಸಿಕೊಂಡಿರುವ ಸಾಕಷ್ಟು ಕಲಾವಿದರು ಪ್ರೋತ್ಸಾಹ, ಅವಕಾಶ ಸಿಗದೇ ತಮ್ಮ ಕಲೆಯನ್ನೇ ನಿಲ್ಲಿಸಿರುವ ಸಾಕಷ್ಟು ಉದಾಹರಣೆಗಳಿವೆ. ಚಿತ್ರದುರ್ಗದಲ್ಲಿ ಹಿಂದೆ ಕೆಲಆರ್ಕೆಸ್ಟ್ರಾ ಸಂಘಗಳಿದ್ದವು. ಆರ್ಥಿಕ ಮುಗ್ಗಟ್ಟಿನಿಂದ ಅವರು ಬೇರೆ ವೃತ್ತಿ ನೋಡಿಕೊಳ್ಳಬೇಕಾಯಿತು. ಈಗ ಹೊಸ ಸಂಘ ಹುಟ್ಟಿಕೊಂಡಿರುವುದು ಒಳ್ಳೆಯ ಬೆಳವಣಿಗೆ. ಇದು ಅಭಿವೃದ್ಧಿ ಆಗಬೇಕು, ಕಲಾವಿದರು ಆರ್ಥಿಕವಾಗಿ ಬೆಳೆಯಬೇಕು ಎಂದು ಆಶಿಸಿದರು. ಸಂಗೀತ ಕ್ಷೇತ್ರದಲ್ಲಿ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ, ಲತಾ ಮಂಗೇಶ್ವರ್, ಕಿಶೋರ್ ಕುಮಾರ್, ಮಹಮ್ಮದ್ ರಫಿ ಸೇರಿದಂತೆ ಮತ್ತಿತರರು ಸಾಕಷ್ಟು ಹೆಸರು ಮಾಡಿದ್ದಾರೆ. ಪ್ರೋತ್ಸಾಹ, ಉತ್ತೇಜನ ಸಿಕ್ಕರೆ ನಿಮ್ಮಲ್ಲಿರುವ ಕೆಲವರು ಕೂಡ ಉತ್ತಮ ಹೆಸರು ಮಾಡಬಹುದು. ಉತ್ತಮ ಸಾಹಿತ್ಯ, ಅಭಿರುಚಿ ಇರುವ ಹಾಗೂ ಎಪ್ಪತ್ತರ ದಶಕದವರೆಗಿನ ಹಾಡುಗಳನ್ನು ಇಂದಿಗೂ ಕೇಳುತ್ತೇನೆ ಎಂದರು.
ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷೆ ಎನ್.ಸುಧಾ ಮಾತನಾಡಿ, ಸಂಗೀತ ಕ್ಷೇತ್ರದಲ್ಲಿ ಹವ್ಯಾಸಿ ಹಾಗೂ ವೃತ್ತಿ ಕಲಾವಿದರು ಇದ್ದಾರೆ. ಕೊರೊನಾದಿಂದ ಬಹುತೇಕ ಎಲ್ಲಾ ಕ್ಷೇತ್ರಗಳು ನಲುಗಿ ಹೋಗಿದ್ದು ವೃತ್ತಿ ಕಲಾವಿದರಿಗೆ ನೆಲೆ ಇಲ್ಲದಂತಾಗಿದೆ. ಈಗ ಅಸ್ಥಿತ್ವಕ್ಕೆ ಬಂದಿರುವ ಹೊಸ ಸಂಘದ ಮೂಲಕ ಎಲ್ಲರೂಒಗ್ಗಟ್ಟು ಪ್ರದರ್ಶಿಸಿ ಸರಕಾರದಿಂದ ನಿಮಗೆ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದರು.
ಸಾನ್ನಿಧ್ಯ ವಹಿಸಿದ್ದ ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ಸಂಗೀತ ನಮ್ಮ ಮನಃಸ್ಥಿತಿಯನ್ನು ಶಾಂತಗೊಳಿಸುತ್ತದೆ. ಏಕಾಗ್ರತೆಯತ್ತ ಕರೆದುಕೊಂಡು ಹೋಗುತ್ತದೆ. ಅಂತಹ ಸಂಗೀತಕ್ಕೆ ಇನ್ನಷ್ಟು ಪುಷ್ಟಿ ನೀಡುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ. ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ. ಕೊರೊನಾದಿಂದ ಆರ್ಥಿಕ ಸಂಕಷ್ಟದಲ್ಲಿರುವ ವಾದ್ಯಗೋಷ್ಟಿ ಕಲಾವಿದರಿಗೆ ಸರಕಾರ ನೆರವು ನೀಡಬೇಕು ಎಂದು ಮನವಿ ಮಾಡಿದರು.
ಅಖೀಲ ಕರ್ನಾಟಕ ವಾದ್ಯಗೋಷ್ಠಿ ಕಲಾವಿದರ ಮಹಾ ಸಂಘದ ರಾಜ್ಯಾಧ್ಯಕ್ಷ ಡಾ.ಆರ್.ಶಂಕರ್, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಸದಸ್ಯರಾದ ವೆಂಕಟೇಶ್, ಜೆ.ಶಶಿಧರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ. ತಾಜ್ ಪೀರ್, ತಾಪಂ ಸದಸ್ಯೆ ಶಿಲ್ಪ ಹುಲುಗಪ್ಪ, ಅಖೀಲ ಕರ್ನಾಟಕ ವಾದ್ಯಗೋಷ್ಠಿ ಕಲಾವಿದರ ಮಹಾ ಸಂಘದ ಅರುಣ್‌ಕುಮಾರ್, ಘನಶ್ಯಾಮ್, ಗುರು, ಜಿಲ್ಲಾಧ್ಯಕ್ಷ ಎಂ.ಮಹೇಂದ್ರ, ಕರಿಯಪ್ಪ ಮತ್ತಿತರರಿದ್ದರು.