Advertisement

ಉದ್ಧಾರಕ್ಕೆ ದಾರಿದೀಪ ಗೀತಾಸಾರ

10:48 AM Aug 15, 2017 | Team Udayavani |

ಕಲಬುರಗಿ: ಶ್ರೀಕೃಷ್ಣನು ಯುದ್ಧದ ಸಮಯದಲ್ಲಿ ಅರ್ಜುನನಿಗೆ ಬೋಧಿಸಿದ ಗೀತಾ ಸಾರವು ಮನುಕುಲದ ಉದ್ಧಾರಕ್ಕೆ ದಾರಿದೀಪವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.
ನಗರದ ಡಾ| ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲಬುರಗಿ ಮಹಾನಗರ ಪಾಲಿಕೆ ಹಾಗೂ ಶ್ರೀ ಕೃಷ್ಣ ಜಯಂತಿ ಉತ್ಸವ ಸಮಿತಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಅವತಾರ ಪುರುಷ ಹಾಗೂ ಗೀತ ಬೋಧಕ ಶ್ರೀಕೃಷ್ಣ ಜಯಂತಿ ಆಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ರಾಮಾಯಣ ಮತ್ತು ಮಹಾಭಾರತ ಇಡೀ ದೇಶದ ಜನರ ಆದರ್ಶವಾಗಿವೆ. ಮನುಷ್ಯನ ಒಳ್ಳೆಯದಕ್ಕೆ ಮಹಾನ್‌ ಪುರುಷರು ಆಯಾ ಕಾಲಕ್ಕೆ ತಕ್ಕಂತೆ ಹಲವಾರು ಬೋಧನೆ ಮಾಡಿದ್ದಾರೆ. ಅವುಗಳನ್ನು ಅಳವಡಿಸಿಕೊಂಡು ಸುಂದರ ಸಮಾಜ ನಿರ್ಮಿಸುವಂತಾಗಬೇಕು ಎಂದು ಹೇಳಿದರು. ನೂತನ ಪದವಿ ವಿದ್ಯಾಲಯದ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ| ಗುರುಮಧ್ವಾಚಾರ್ಯ ನವಲಿ ವಿಶೇಷ ಉಪನ್ಯಾಸ ನೀಡಿ, ಶ್ರೀಕೃಷ್ಣನು ಬಾಲಕನಾಗಿ ಗೋಕುಲದಲ್ಲಿ ಕಂಸನನ್ನು ಕೊಂದದ್ದು ಮತ್ತು ಪಾಂಡವರು ಸಾಮ್ರಾಜ್ಯ ಆಳುವಾಗ ರಾಜಕೀಯ ಚಾಣಾಕ್ಷತೆ ಹೇಳಿಕೊಟ್ಟದ್ದು ಹಾಗೂ ಯುದ್ಧದ ಸಂದರ್ಭದಲ್ಲಿ ಅರ್ಜುನನಿಗೆ ಮಾಡಿದ ಗೀತೋಪದೇಶ ಅತ್ಯಂತ ಪ್ರಚಲಿತದಲ್ಲಿವೆ. ಪ್ರಸ್ತುತ ಸಮಾಜದಲ್ಲಿ ಶ್ರೀಕೃಷ್ಣನ ಎರಡು ಅಂಶಗಳನ್ನು ಅನುರಿಸುವುದು ಅವಶ್ಯಕವಾಗಿದೆ. ಗೋಪಾಲ-ಜ್ಞಾನ ಪ್ರಸಾರ ಮಾಡುವುದು ಹಾಗೂ ಆಕಳನ್ನು ಪಾಲನೆ ಮಾಡಬೇಕೆನ್ನುವುದು. ಯೋಗ-ತಾವು ಮಾಡುವ ಕರ್ಮದಲ್ಲಿ ಯೋಗ ಅಳವಡಿಸಿಕೊಳ್ಳುವುದು ಎಂದರೆ ಕೆಲಸವನ್ನು ಅಚ್ಚುಕಟ್ಟಾಗಿ ಶ್ರದ್ಧೆಯಿಂದ ಮಾಡಬೇಕಾಗಿದೆ. ಗೋಪಾಲ ಮತ್ತು ಯೋಗವನ್ನು ಅನುಸರಿಸುವ ಮೂಲಕ ದೇಶದ ನಿರ್ಮಾಣದಲ್ಲಿ ತಮ್ಮದೇಯಾದ ವಿಶೇಷ ಕೊಡುಗೆ ನೀಡಬೇಕು ಎಂದು ಹೇಲಿದರು. ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಜಿಲ್ಲಾ ಯಾದವ ಸಂಘದ ಅಧ್ಯಕ್ಷ ರವೀಂದ್ರ ಉದನೂರ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಇದ್ದರು. ಇದೇ ಸಂದರ್ಭದಲ್ಲಿ ಸಮಾರಂಭದ ಅಂಗವಾಗಿ ಸಿದ್ರಾಮಪ್ಪ ಪೊಲೀಸ್‌ಪಾಟೀಲ ಮತ್ತು ತಂಡದವರಿಂದ ದಾಸವಾಣಿ ಕಾರ್ಯಕ್ರಮ ಜರುಗಿತು. ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಇದಕ್ಕೂ ಮುನ್ನ ಸರ್ದಾರ್‌ ವಲ್ಲಭಭಾಯಿ ವೃತ್ತದಿಂದ ಡಾ| ಎಸ್‌.ಎಂ. ಪಂಡಿತ ರಂಗಮಂದಿರದವರೆಗೆ ಶ್ರೀಕೃಷ್ಣ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರವಣಿಗೆಗೆ ವಿಶೇಷ ಮೆರಗು ತಂದುಕೊಟ್ಟವು.

Advertisement
Advertisement

Udayavani is now on Telegram. Click here to join our channel and stay updated with the latest news.

Next