ಕಾರವಾರ: ನಗರದ ಸರ್ವೋದಯ ನಗರದ ಬಾಣಂತಿ ನಿವಾಸಿ ಗೀತಾ ಶಿವನಾಥ ಬಾನಾವಳಿ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ವೇಳೆ ಸಾವನ್ನಪ್ಪಿದ್ದು, ಸಾವಿಗೆ ನಿಖರ ಕಾರಣ ತಳಿಸಿ ಎಂದು ಗೀತಾ ಸಾವಿನ ತನಿಖಾ ಹೋರಾಟ ಸಮಿತಿ ಡಿಸಿ ಕಚೇರಿ ಬಳಿ ಧರಣಿ ಆರಂಭಿಸಿದ್ದು, ಮೂರನೇ ದಿನಕ್ಕೆ ಕಾಲಿಟ್ಟಿದೆ.
ಧರಣಿ ನಿರತರು ಮಂಗಳವಾರ ಸ್ಥಳದಲ್ಲೇ ಅಡುಗೆ ಮಾಡಿ ಮಧ್ಯಾಹ್ನದ ಊಟ ಮಾಡಿ ಸಂಜೆತನಕ ಧರಣಿ ಮುಂದುವರಿಸಿದರು. ಗೀತಾ ಸಾವಿನ ತನಿಖಾ ಸಮಿತಿ ವರದಿ ಬಹಿರಂಗಪಡಿಸಿ, ಪೋಸ್ಟ್‌ಮಾರ್ಟಂ ರಿಪೋರ್ಟ್ ಬಹಿರಂಗ ಮಾಡಿ ಎಂದು ಆಗ್ರಹಿಸುತ್ತಿದ್ದಾರೆ.
ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಮತ್ತೂಮ್ಮೆ ಮನವಿ ಮಾಡುತ್ತಿದ್ದೇವೆ. ಹೋರಾಟವನ್ನು ಹಗುರವಾಗಿ ಪರಿಗಣಿಸಬೇಡಿ. ತಪ್ಪಿತಸ್ಥ ವೈದ್ಯರನ್ನು ರಕ್ಷಿಸಬೇಡಿ.ಆಡಳಿತ ಮಾಡುವವರು ಜನರ ಪರ ಇರಬೇಕು.ಇಲ್ಲದೇ ಹೋದರೆ ಮುಂದಿನ ಚುನಾವಣೆಯಲ್ಲಿ ತಕ್ಕಪಾಠ ಕಲಿಸುವುದಾಗಿ ಧರಣಿ ನಿರತರು ಎಚ್ಚರಿಸಿದ್ದಾರೆ. ಗೀತಾ ಬಾನಾವಳಿ ಸಾವಿಗೆ ಕಾರಣ ಎಂದು ಶಂಕಿಸಲಾದ ವೈದ್ಯರ ಅಮಾನತು ಆಗಿಲ್ಲ. ವರ್ಗಾವಣೆಆಗಿಲ್ಲ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಪೋಸ್ಟ್‌ಮಾರ್ಟಂ ರಿಪೋರ್ಟ್ ಬಹಿರಂಗ ಮಾಡಿಲ್ಲ ಎಂಬುದು ಧರಣಿ ನಿರತರು ಇಂದು ಸಹ ಆಪರೇಶನ್ ಥೇಟರ್‌ನಲ್ಲಿದ್ದ ವೈದ್ಯರಿಗೆ ಧಿಕ್ಕಾರ ಕೂಗಿದರು. ಇದೇ ತಿಂಗಳ ಆರಂಭದಲ್ಲಿ ಜಿಲ್ಲಾಡಳಿತಕ್ಕೆ ಸಾವಿಗೆ ನಿಖರ ಕಾರಣ ತಿಳಿಸಿ ಎಂದು ಹೋರಾಟಗಾರರು ಆಗ್ರಹಿಸಿ ಮನವಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.ಸರ್ಕಾರಕ್ಕಿಂತ ವೈದ್ಯರು ಪ್ರಬಲ ಎಂಬುದು ಈಪ್ರಕರಣದಲ್ಲಿ ಸಾಬೀತಾಗಿದೆ. ಯಾವ ಕಾರಣಕ್ಕೂಜನಪ್ರತಿನಿಧಿಗಳು, ವೈದ್ಯಕೀಯ ಮಂತ್ರಿಗಳು, ಜಿಲ್ಲಾಉಸ್ತುವಾರಿ ಸಚಿವರು ಮೌನ ವಹಿಸಿದ್ದಾರೆಂದು ಅರ್ಥವಾಗುತ್ತಿಲ್ಲ. ಆದರೆ ಹೋರಾಟದ ಬಿಸಿ ತಟ್ಟಿಸಿದೇ ಬಿಡುವುದಿಲ್ಲ ಎಂದು ಹೋರಾಟದ ನೇತೃತ್ವ ವಹಿಸಿದವರು ಹೇಳುತ್ತಿದ್ದಾರೆ. ಗೀತಾ ಸಾವಿನ ಪ್ರಕರಣ ಮಾತ್ರ ದಿನದಿಂದ ದಿನಕ್ಕೆ ಕಠೋರ ಹಾದಿ ಹಿಡಿದಿದೆ.
ನ್ಯಾಯ ಸಿಗುವವರೆಗೆ ಧರಣಿ ನಡೆಯಲಿದೆ. ಸರ್ಕಾರ, ಮೆಡಿಕಲ್ ಕಾಲೇಜು ನಮ್ಮಹೋರಾಟಕ್ಕೆ ಮಣಿಯದಿದ್ದರೆ, ಕಾರವಾರಬಂದ್ ಮಾಡಿ ಬೃಹತ್ ಪ್ರಮಾಣದಲ್ಲಿ ಹೋರಾಟ ರೂಪಿಸುತ್ತೇವೆ.
–ರಾಜು ತಾಂಡೇಲ. ಮೀನುಗಾರರ ಧುರೀಣ. ಉತ್ತರ ಕನ್ನಡ.