ನವದೆಹಲಿ: ಹಿಂದಿ ಲೇಖಕಿ ಗೀತಾಂಜಲಿ ಶ್ರೀ ಅವರ “ಟೂಮ್ ಆಫ್ ಸ್ಯಾಂಡ್” ಕಾದಂಬರಿ ಗುರುವಾರ (ಮೇ 26) ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗುವ ಮೂಲಕ ಇತಿಹಾಸ ಸೃಷ್ಟಿಸಿದೆ. ಇದರೊಂದಿಗೆ ಟೂಮ್ ಆಫ್ ಸ್ಯಾಂಡ್ ಪ್ರತಿಷ್ಠಿತ ಬೂಕರ್ ಪ್ರಶಸ್ತಿಗೆ ಆಯ್ಕೆಯಾದ ಮೊದಲ ಕಾದಂಬರಿ ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ.
ಇದನ್ನೂ ಓದಿ:ಮೊಮ್ಮಗಳಿಗೆ ಲೈಂಗಿಕ ಕಿರುಕುಳ; ಸೊಸೆ ಆರೋಪ- ಗುಂಡು ಹೊಡೆದುಕೊಂಡು ಮಾಜಿ ಸಚಿವ ಆತ್ಮಹತ್ಯೆ
“ಇದೊಂದು ಸರಳ, ಸಮ್ಮೋಹಕ ಶೈಲಿಯ ಕಾದಂಬರಿಯಾಗಿದೆ ಎಂದು ಬೂಕರ್ ಪ್ರಶಸ್ತಿ ತೀರ್ಪುಗಾರರು ಬಣ್ಣಿಸಿದ್ದು, ಜಗತ್ತಿನ ಇತರ ಐದು ಕಾದಂಬರಿ ಜತೆ ಸ್ಪರ್ಧೆಗಿಳಿದಿದ್ದ ಟೂಮ್ ಆಫ್ ಸ್ಯಾಂಡ್ ಪ್ರತಿಷ್ಠಿತ 50,000 ಪೌಂಡ್ಸ್ (ಅಂದಾಜು 50 ಲಕ್ಷ ರೂಪಾಯಿ) ಪ್ರಶಸ್ತಿಯನ್ನು ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದೆ” ಎಂದು ವರದಿ ತಿಳಿಸಿದೆ.
ಗುರುವಾರ ಲಂಡನ್ ನಲ್ಲಿ ನಡೆದ ಸಮಾರಂಭದಲ್ಲಿ ಲೇಖಕಿ ಗೀತಾಂಜಲಿ ಶ್ರೀ ಅವರು ಟೂಮ್ ಆಫ್ ಸ್ಯಾಂಡ್ ಹಿಂದಿ ಕಾದಂಬರಿಯನ್ನು ಇಂಗ್ಲಿಷ್ ಗೆ ಭಾಷಾಂತರಿಸಿದ್ದ ಡೈಸಿ ರಾಕ್ ವೆಲ್ ಜತೆ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ಗೀತಾಂಜಲಿ ಶ್ರೀ ಅವರು ಉತ್ತರಪ್ರದೇಶದ ಮೈನ್ ಪುರಿಯಲ್ಲಿ ಜನಿಸಿದ್ದು, ನವದೆಹಲಿಯಲ್ಲಿ ವಾಸವಾಗಿದ್ದಾರೆ. ಗೀತಾಂಜಲಿ (64ವರ್ಷ) ಅವರು ಮೂರು ಕಾದಂಬರಿ ಹಾಗೂ ಹಲವಾರು ಕಥೆಗಳನ್ನು ಬರೆದಿದ್ದಾರೆ.
ಗೀತಾಂಜಲಿ ಶ್ರೀ ಅವರ ಟೂಮ್ ಆಮ್ ಸ್ಯಾಂಡ್ ಯುನೈಟೆಡ್ ಕಿಂಗ್ ಡಮ್ ನಲ್ಲಿ ಪ್ರಕಟಗೊಂಡ ಮೊದಲ ಪುಸ್ತಕವಾಗಿದೆ. ಗೀತಾಂಜಲಿ ಶ್ರೀ ಅವರು ಬೂಕರ್ ಪ್ರಶಸ್ತಿ ಸಾಧನೆಗೆ ಪಾತ್ರರಾದ ಮೊದಲ ಹಿಂದಿ ಕಾದಂಬರಿಗಾರ್ತಿ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ.