Advertisement

ಕನ್ನಡಾಭಿಮಾನದ ಆರಾಧನೆಯಲ್ಲಿ “ಗೀತಾ’ಮನಮೋಹಕ

10:00 AM Sep 29, 2019 | Lakshmi GovindaRaju |

“ದುಡ್ಡು ಕೊಟ್ಟು ಕನ್ನಡ ಬಾವುಟ ಕೊಂಡ್ಕೊಬಹುದು. ಆದರೆ, ಕನ್ನಡಿಗರ ಸ್ವಾಭಿಮಾನ ಕೊಂಡ್ಕೊಳ್ಳಕ್ಕಾಗಲ್ಲ..’, “ಗಡಿಯಲ್ಲಿ ಗನ್‌ ಹಿಡಿಯೋನು ಸೈನಿಕ, ಎದೆಯಲ್ಲಿ ಕನ್ನಡ ಹಿಡ್ಕೊಂಡೋನೂ ಸೈನಿಕ ಕಣೋ…’, “ಭಾಷೆನಾ ನಾವು ಬೆಳೆಸೋಕ್ಕಾಗಲ್ಲ. ನಮ್ಮ ಭಾಷೆ ನಮ್ಮನ್ನ ಬೆಳೆಸುತ್ತೆ…’ ಹೀಗೆ ಒಂದಾ ಎರಡಾ ಚಿತ್ರದುದ್ದಕ್ಕೂ ಕನ್ನಡಿಗನನ್ನು ಹುರಿದುಂಬಿಸುವ, ಕಿಚ್ಚೆಬ್ಬಿಸುವ,ಅಭಿಮಾನ ಮೂಡಿಸುವ ಡೈಲಾಗ್‌ಗಳು ಹರಿದಾಡುವ ಮೂಲಕ ಅದೊಂದು ಅಪ್ಪಟ ಕನ್ನಡ ಪರ ಹೋರಾಟದ ಚಿತ್ರ ಎಂಬ ಕೂಗಿಗೆ ಪಾತ್ರವಾಗುತ್ತೆ. ಹೌದು, ಗಣೇಶ್‌ ಅಭಿನಯದ “ಗೀತಾ’ ಒಂದು ಅಪ್ಪಟ ಕನ್ನಡಾಭಿಮಾನದ ಜೊತೆಗೆ ಪ್ರೀತಿ, ವಾತ್ಸಲ್ಯ, ಸಂಬಂಧ ಮೌಲ್ಯಗಳನ್ನು ಸಾರುವ ಚಿತ್ರ ಎಂಬುದನ್ನು ಮುಲಾಜಿಲ್ಲದೆ ಹೇಳಬಹುದು.

Advertisement

ಸಿನಿಮಾ ನೋಡಿ ಹೊರಬಂದವರಿಗೆ, ಹೊಸದೇನನ್ನೋ ಕಂಡ ಖುಷಿ, ಗೊತ್ತಿರದ ವಿಷಯವನ್ನು ತಿಳಿದುಕೊಂಡ ಸಂಭ್ರಮ, ನಮ್ಮತನವನ್ನು ಕಂಡುಕೊಂಡ ತೃಪ್ತ ಭಾವ. ಚಿತ್ರದ ಬಗ್ಗೆ ಒಂದೇ ಮಾತಲ್ಲಿ ಹೇಳುವುದಾದರೆ, ನಯನ ಸೆಳೆಯವ ಗೀತಾ. ಸಾಮಾನ್ಯವಾಗಿ ಸಿನಿಮಾದಲ್ಲಿ ಕಥೆ ಇಲ್ಲ, ಒಂದಷ್ಟು ಅನಗತ್ಯ ದೃಶ್ಯಗಳಿವೆ. ಲ್ಯಾಗ್‌ ಇದೆ, ಅದು ಬೇಕಿರಲಿಲ್ಲ, ಹಾಗೆ ಹೀಗೆ ಎಂಬ ಮಾತುಗಳು ಸಹಜವಾಗಿ ಕೇಳಿಬರುತ್ತದೆ. ಆದರೆ, “ಗೀತಾ’ ಆ ಎಲ್ಲಾ ಮಾತುಗಳಿಂದ ದೂರ. ಇಲ್ಲಿ ಎಲ್ಲವೂ ಫ್ರೆಶ್‌. ಇಲ್ಲಿ ಚೆಂದದ ಕಥೆ ಇದೆ. ಚೌಕಟ್ಟು ಮೀರದ ಪಾತ್ರಗಳಿವೆ, ಗೊಂದಲವಿರದ ಚಿತ್ರಕಥೆಯುಂಟು.

ಸುಲಭವಾಗಿ ನಾಟುವ ನಿರೂಪಣೆಯೂ ಇದೆ. ಭಾಷಾಭಿಮಾನ, ಪ್ರೀತಿ, ಬೇಸರ, ನೋವು-ನಲಿವು ಇತ್ಯಾದಿ ಅಂಶಗಳು ಚಿತ್ರದ ವೇಗವನ್ನು ಎತ್ತಿಹಿಡಿದಿವೆ. ಗಣೇಶ್‌ ಸಿನಿಮಾದಲ್ಲಿ ಸಾಮಾನ್ಯವಾಗಿ ಲವ್‌ಸ್ಟೋರಿಗಷ್ಟೇ ಜಾಗ ಇರುತ್ತಿತ್ತು. ಅವರಿಲ್ಲಿ ಕನ್ನಡದ ಕಟ್ಟಾಳು. ಅಷ್ಟೇ ಅಲ್ಲ, ಕನ್ನಡಕ್ಕಾಗಿ ಜೈಲು ಸೇರುವ, ಪ್ರೀತಿಗಾಗಿ ಹಪಹಪಿಸುವ, ಕನ್ನಡ ಭಾಷೆಗೆ ಧಕ್ಕೆಯಾದರೆ, ಹೆಣ್ಣು ಮಕ್ಕಳಿಗೆ ಗೌರವ ಕೊಡದಿದ್ದವರಿಗೆ ಸಿಡಿದೆದ್ದು, ದಂಡಂ ದಶಗುಣಂ ಎನ್ನುವ ಪಾತ್ರದಲ್ಲಿ ಗಮನಸೆಳೆಯುತ್ತಾರೆ.

ಮೊದಲರ್ಧ ಗೋಕಾಕ್‌ ಚಳವಳಿ ನೆನಪಿನ ಜೊತೆಗೆ ಇಂದಿನ ವಾಸ್ತವತೆಯ ಸ್ಥಿತಿಗತಿಯನ್ನು ಬಿಂಬಿಸುವುದರ ಜೊತೆಗೆ ಅನ್ಯ ಭಾಷೆ ಮೇಲಿರುವ ಗೌರವ, ಪರಭಾಷೆ ಹುಡುಗಿ ಜೊತೆಗಿನ ನಿಷ್ಕಲ್ಮಷ ಪ್ರೀತಿ ಇತ್ಯಾದಿ ವಿಷಯಗಳು ನೋಡುಗರ ಗಮನ ಬೇರೆಡೆ ಹರಿಸದಷ್ಟು ಸಕ್ರಿಯವಾಗಿ ಕೆಲಸ ಮಾಡುತ್ತವೆ. ದ್ವಿತಿಯಾರ್ಧದಲ್ಲೊಂದು ಲವ್‌ಸ್ಟೋರಿ ಹುಟ್ಟಿಕೊಂಡು ಮತ್ತಷ್ಟು ಹೊಸತನ್ನು ಹೇಳುವ ಪ್ರಯತ್ನ ಎದ್ದು ಕಾಣುತ್ತದೆ. ಇಲ್ಲಿ ಎಲ್ಲವನ್ನೂ ಮುಕ್ತವಾಗಿ ಹೊಗಳುವುದಾದರೆ ಅದಕ್ಕೆ ಕಾರಣ, ಕಥೆ ಮತ್ತು ನಿರ್ದೇಶಕರ ಜಾಣ್ಮೆಯ ನಿರೂಪಣೆ. ಕಥೆಯೇ ಇಲ್ಲಿ ಜೀವಾಳ. ಅದನ್ನು ಅಷ್ಟೇ ಎಚ್ಚರಿಕೆಯಿಂದ ಎಲ್ಲೂ ಗೊಂದಲ ಇರದಂತೆ ಮಾಡಿರುವ ಪಾತ್ರಗಳ ಪೋಷಣೆ ಚಿತ್ರಕ್ಕೊಂದು ಹೊಸ ಅರ್ಥ ಕಲ್ಪಿಸಿದೆ.

“ಗೀತಾ’ ಅನ್ನುವ ಹೆಸರಲ್ಲೇ ಸ್ಪಾರ್ಕ್‌ ಇದೆ. ಈಗಾಗಲೇ ಹಿಟ್‌ ಸಿನಿಮಾ ಎನಿಸಿಕೊಂಡಿರುವ “ಗೀತಾ’ ಶೀರ್ಷಿಕೆಯನ್ನೇ ಇಲ್ಲೂ ಇಟ್ಟುಕೊಂಡಿರುವುದರಿಂದ ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲವಿತ್ತು. ಆ ಕುತೂಹಲ, ನಿರೀಕ್ಷೆ ಸುಳ್ಳಾಗದಷ್ಟರ ಮಟ್ಟಿಗೆ ಚಿತ್ರತಂಡ ಗೀತಾಳ ಭಾವಸಾರವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ. ಮುಖ್ಯವಾಗಿ ಇಲ್ಲಿ ಸಂಭಾಷಣೆ ಕೂಡ “ಗೀತಾ’ಳ ಚೆಲುವನ್ನು ಇನ್ನಷ್ಟು ಅರಳಿಸಲು ಕಾರಣವಾಗಿದೆ. ಅದಕ್ಕೆ ಪೂರಕವಾಗಿ, ಛಾಯಾಗ್ರಹಣದ ಕೆಲಸವೂ ಸಾಥ್‌ ಕೊಟ್ಟಿದೆ. ಹೊಸ ತಾಣಗಳು, ಹೊಸತೆನಿಸುವ ಸನ್ನಿವೇಶಗಳು ಗೀತಾಳನ್ನು ಇಷ್ಟಪಡುವಷ್ಟರಮಟ್ಟಿಗೆ ಕಾರ್ಯನಿರ್ವಹಿಸಿವೆ.

Advertisement

ಹಾಗಾಗಿ ಗೀತಾ ಕೇವಲ ಗೋಕಾಕ್‌ ಚಳವಳಿ ಹಿನ್ನೆಲೆಯನ್ನಷ್ಟೇ ಇಷ್ಟಪಡುವ ಮಂದಿಗಾಗಲಿ, ಈಗಿನ ಯುವಕರಿಗಾಗಲಿ ಸೀಮಿತವಲ್ಲ. ಗೀತಾ ಒಂದು ಕುಟುಂಬದ ಅಕ್ಕನಾಗಿಯೋ, ಅಮ್ಮನಾಗಿಯೋ, ಸ್ನೇಹಿತೆಯಾಗಿಯೋ ಗಮನಸೆಳೆಯುತ್ತಾಳೆ. ಇಲ್ಲಿ ಫ್ಲ್ಯಾಶ್‌ಬ್ಯಾಕ್‌ ಸ್ಟೋರಿಗಳಿವೆ. ಆ ಸ್ಟೋರಿಯೇ ಇಲ್ಲಿ ಹೈಲೈಟ್‌. ಆ ಹಳೆಯ ಕಥೆ, ವಾಸ್ತವ ಕಥೆಗೂ ಕನೆಕ್ಟ್ ಆಗುತ್ತೆ ಅನ್ನುವುದನ್ನು ಹೇಳಿರುವ ಮತ್ತು ತೋರಿಸಿರುವ ರೀತಿಗೆ ಗೀತಾ ಹತ್ತಿರವಾಗುತ್ತಾಳೆ. ಶಂಕರ್‌ ಒಬ್ಬ ಕನ್ನಡಪರ ಹೋರಾಟಗಾರ. ಕನ್ನಡಕ್ಕಾಗಿ ಹೋರಾಡುವ ಅಪ್ಪಟ ಪ್ರೇಮಿ.

ಕಾಲೇಜು ದಿನದಲ್ಲೇ ಗೀತಾ ಎಂಬ ಪರಭಾಷೆ ಹುಡುಗಿಯೊಬ್ಬಳ ಪ್ರೀತಿಗೆ ಬಿದ್ದು, ಅವಳನ್ನು ಸಂಗಾತಿಯನ್ನಾಗಿಸಿಕೊಳ್ಳಬೇಕೆಂಬ ಸಮಯದಲ್ಲೇ, ವಿಲನ್‌ ಆಗಿ ಬರುವ ಆಕೆಯ ತಂದೆ, ಆ ಊರನ್ನೇ ಬಿಡಿಸಿ ಕರದೊಯ್ಯುತ್ತಾನೆ. ಅತ್ತ ಶಂಕರ್‌ ಜೊತೆಗಿದ್ದ ಗೆಳತಿಯನ್ನೇ ಬಾಳಸಂಗಾತಿಯನ್ನಾಗಿ ಪಡೆಯುತ್ತಾನೆ. ಪ್ರೀತಿಸಿದ್ದ ಪರಭಾಷೆ ಹುಡುಗಿ ಹಿಂದಿರುಗಿ ಬಂದಾಗ, ಶಂಕರ್‌ ಮದ್ವೆ ವಿಷಯ ಗೊತ್ತಾಗುತ್ತೆ. ಆಮೇಲೆ ಆಕೆ ದೂರದ ಕೊಲ್ಕತ್ತಾ ಸೇರುತ್ತಾಳೆ. ವರ್ಷಗಳು ಕಳೆದಂತೆ ಶಂಕರ್‌ ದಂಪತಿಗಳು ಬೇರೆಯಾಗಿರುತ್ತಾರೆ. ಅತ್ತ ಅವರಿಗೊಬ್ಬ ಆಕಾಶ್‌ ಎಂಬ ಮಗ ಬೆಳೆದು ನಿಂತಿರುತ್ತಾನೆ. ಆದರೆ, ಅಪ್ಪ, ಅಮ್ಮನ ಪ್ರೀತಿ ಕಾಣದ, ಅವನೂ ಗೀತಾ ಎಂಬ ಹುಡುಗಿಯನ್ನು ಪ್ರೀತಿಸ್ತಾನೆ.

ಆ ಗೀತಾ ಅವಳಿಗೆ ಸಿಗುತ್ತಾಳಾ, ತಂದೆ ಶಂಕರ್‌ ಪೀತಿಸಿದ ಗೀತಾ ಪುನಃ ಕನೆಕ್ಟ್ ಆಗುತ್ತಾಳಾ ಇಲ್ಲವಾ ಅನ್ನೋದು ಕಥೆ. ಈ ಕುತೂಹವಿದ್ದರೆ, “ಗೀತಾ’ ನೋಡಲು ಅಡ್ಡಿಯಿಲ್ಲ. ಗೋಕಾಕ್‌ ಚಳವಳಿ ಹಿನ್ನೆಲೆಯಲ್ಲಿ ಕಾಣುವ ಗಣೇಶ್‌ ತುಂಬಾ ಗಮನಸೆಳೆಯುತ್ತಾರೆ, ಹರಿಬಿಡುವ ಡೈಲಾಗ್‌ ಮೂಲಕ ಒಂದಷ್ಟು ಕಿಚ್ಚೆಬ್ಬಿಸುತ್ತಾರೆ, ಅತ್ತ ಇನ್ನೊಂದು ಶೇಡ್‌ನ‌ಲ್ಲಿ ಕಾಣುವ ಅವರು, ಹುಡುಗಿಯರಿಗಷ್ಟೇ ಅಲ್ಲ, ಹುಡುಗರಿಗೂ ಇಷ್ಟವಾಗುವಂತಹ ನಟನೆಯಲ್ಲಿ ಸೈ ಎನಿಸಿಕೊಳ್ಳುತ್ತಾರೆ. ಸಾನ್ವಿ, ಪ್ರಯಾಗ್‌, ಪಾರ್ವತಿ ಪಾತ್ರಗಳಿಗೆ ಜೀವ ತುಂಬಿದ್ದಾರೆ. ದೇವರಾಜ್‌, ಸ್ವಾತಿ, ಸುಧಾರಾಣಿ, ರವಿಶಂಕರ್‌ಗೌಡ, ಅಚ್ಯುತಕುಮಾರ್‌ ಎಲ್ಲರೂ “ಗೀತಾ’ಳ ವೇಗಕ್ಕೆ ಸಾಕ್ಷಿಯಾಗಿದ್ದಾರೆ. ಅನೂಪ್‌ ರುಬೆನ್ಸ್‌ ಸಂಗೀತದಲ್ಲಿ ಎರಡು ಹಾಡು ಇಷ್ಟವಾಗುತ್ತವೆ. ಶ್ರೀಶ ಕೂದುವಳ್ಳಿ ಛಾಯಾಗ್ರಹಣದಲ್ಲಿ “ಗೀತಾ’ಳ ಸೊಬಗಿದೆ.

ಚಿತ್ರ: ಗೀತಾ
ನಿರ್ಮಾಣ: ಸೈಯದ್‌ ಸಲಾಂ, ಶಿಲ್ಪಾ ಗಣೇಶ್‌
ನಿರ್ದೇಶನ: ವಿಜಯ್‌ ನಾಗೇಂದ್ರ
ತಾರಾಗಣ: ಗಣೇಶ್‌, ಸಾನ್ವಿ, ಪ್ರಯಾಗ್‌, ಪಾರ್ವತಿ, ದೇವರಾಜ್‌, ಸುಧಾರಾಣಿ, ಸ್ವಾತಿ, ರವಿಶಂಕರ್‌ಗೌಡ ಇತರರು.

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next